ಸೋಮವಾರ, ಮೇ 1, 2023

ಬಿತ್ತ ಬೇಕಿದೆ ಕಾಳು

ಬಿತ್ತ ಬೇಕಿದೆ ಕಾಳು 

ಆ ಮುಗುಳು ನಗೆಯ ಹಿಂದೆ
ಅದೆಷ್ಟು ನೋವುಗಳು ಮಡುಗಟ್ಟಿ ನಿಂತಿವೆ!
ಭೂಮಿಯ ಆಲದ ಕಲ್ಲಿದ್ದಲು, ಚಿನ್ನ ಕಬ್ಬಿಣದಂತೆ
ಬಹು ಗಟ್ಟಿ ಕಪ್ಪು ಮಣ್ಣು ಮಿಶ್ರಿತ!

ಆ ಅಂದದ ನಗೆಯ ಹಿಂದೆ
ಅದೆಷ್ಟು ಕಹಿ ನೆನಪುಗಳ ನರ್ತನ!
ನೋಡಿದ ಕೇಳಿದ ಘಟಿಸಿದ ಮೆರೆದ
ಮರೆತರೂ ಮರೆಯಲಾರದ ಕಥೆ
ಮತ್ತೆ ಜೀವ ಹಿಂಡುವ ವ್ಯಥೆ!

ಆ ದಾಳಿಂಬೆ  ದಂತಪಂಕ್ತಿ ಒಳಗೆ
ಅದೆಷ್ಟು ಉತ್ತಮ ನಾಲಿಗೆ
ಅದೆಷ್ಟು ಸಿಹಿ ಮಧುರ ಮಾತುಗಳು
ಆದರೂ ಅದೇಕೆ ಹೂವಿನ ಹಿಂದೆ ಮುಳ್ಳುಗಳು?

ಆ ರಮ್ಯ ನೋಟದ ಮುದ್ದು ಮುಖದ ಹೂವಿಗೆ
ಅದೇಕೆ ಸಿಗದು ಮಕರಂದ
ರವಿ ಕಿರಣದ ಸ್ಪರ್ಶ ಬೇಕಲ್ಲವೇ ಇಳೆಗೆ
ಮತ್ತೆ ಹೂವು ಕಾಯಾಗಿ ಮಾಗಿ ಹಣ್ಣಾಗಲು

ಆ ಹಾರದೆ ಕುಳಿತ ಮೌನ ಚಿಟ್ಟೆಗೆ
ತನ್ನ ರೆಕ್ಕೆಯ ಕುರಿತು ನೆನಪಿಸಬೇಕಿದೆ
ನಿಧಾನಕ್ಕೆ ಏರಲು ಎತ್ತರೆತ್ತರಕ್ಕೆ
ನೆಮ್ಮದಿ ಸಾಂತ್ವನದ ಕಡೆಗೆ
ಒಲವಿನ ಒರತೆಯ ಬದಿಗೆ

ಆ ಮುಗ್ದ ಮುಖದಲಿ ಕಾಣಬೇಕಿದೆ
ಸಂತಸದ ಎಳೆ ಚಿಗುರ ಹಸಿರು
ಎಳೆ ಎಳೆಯಾಗಿ ಕೊಂಚ ತಿಳಿಯಾಗಿ
ಬಿತ್ತ ಬೇಕಿದೆ ಮೊಳಕೆ ಕಾಳು
ಸುಖವಾಗಿ ಹಿತವಾಗಿ ಸಾಗಲು ಬಾಳು. 
@ಹನಿಬಿಂದು@
30.04.2023

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ