ಶುಕ್ರವಾರ, ನವೆಂಬರ್ 22, 2024

ನಿಸರ್ಗ

ನವೆಂಬರ್ ಡಿಸೆಂಬರ್ ತಿಂಗಳಿಡೀ ಚಳಿ ಒಂದೆಡೆ ಆದರೆ, ನಮ್ಮ ಕರಾವಳಿಯಲ್ಲಿ ಚಳಿ ಎಂಬುದು ಕಡಿಮೆ ಬಿಡಿ, ಆದರೆ ಈ ಸಮಯ ಇಷ್ಟವಾಗುವುದು ಎಲ್ಲಾ ಹೂವುಗಳಿಂದ. ಈಗ ಜೂನ್ ಜುಲೈನಲ್ಲಿದ್ದ ಹಸಿರು ಬರಿದಾಗಿ ಸ್ವಲ್ಪ ಒಣಗಿದ ಚಾಯೆಯ ಗಿಡ ಮರಗಳು. ಕೆಲವು ಎಲೆ ಉದುರಿಸಿ ಬೋಳಾದರೆ ಇನ್ನೂ ಕೆಲವು ಹೂವಿನಿಂದ ಬಣ್ಣ ಬಣ್ಣ. ಕ್ರಿಸ್ಮಸ್, ಹೊಸ ವರ್ಷಗಳ, ಜಾತ್ರೆ, ತೇರು, ನುಡಿ ತೇರಿನ ಅಬ್ಬರದ ಬಣ್ಣದ ಅಲಂಕಾರ ಒಂದೆಡೆಯಾದರೆ ಪ್ರಕೃತಿಯೇ ಈ ಸಮಯದಲ್ಲಿ ಬಣ್ಣ ಬಣ್ಣಗಳಿಂದ ಸಿಂಗರಿಸಿಕೊಳ್ಳುವುದನ್ನು ನೋಡಲು ಅದೇನು ಆನಂದ! ಪ್ರಕೃತಿ ಪ್ರೇಮಿಗಳಿಗಂತೂ ನಿಸರ್ಗ, ನೇಸರ ಎಂದಿಗೂ ಬೇಸರ ತಾರದು ಬಿಡಿ 
   ಇಂತಹ ಸಮಯದಲ್ಲಿ ನನ್ನ ಸೆಳೆದದ್ದು ಹುಲ್ಲಿನ ಹೂವು. ಮೈ ಬಣ್ಣ, ಕೆಂಪು, ತಿಳಿ ಹಳದಿ, ಕುಂಕುಮ ಬಣ್ಣ (ಮರೂನ್) ಹೀಗೆಲ್ಲಾ ಕಂಬಳಿ ಹುಳದ ಮೈಯ ಹಾಗೆ ಕಾಣುವ ಈ ಹೂವಿನ ಗುಂಪು ನೋಡಲು ಅದೇನೋ ಆನಂದ. ನಾನಂತೂ ನನ್ನೊಳಗೆ ಕಳೆದು ಹೋಗಿ ಬಿಡುತ್ತೇನೆ. ಪ್ರಕೃತಿಯೊಂದಿಗೆ ಒಂದಾಗಿ ಅದು ಯಾವುದೋ ಲೋಕಕ್ಕೆ ಜಾರಿ ಬಿಡುತ್ತೇನೆ. ಸಾಯಂಕಾಲದ ಸೂರ್ಯಾಸ್ತ, ಬೆಳಗ್ಗಿನ ಸೂರ್ಯೋದಯ, ಮಧ್ಯಾಹ್ನದ ಮಟಮಟ ಬಿಸಿಲಿಗೂ ಅದರ ಅಂದ ದುಪ್ಪಟ್ಟು ಹೆಚ್ಚಾಗುವುದೇ ವಿನಃ ಕಡಿಮೆಯಂತೂ ಆಗದು. ಗಾಳಿ ಬಂದರೆ ಸಾಕು ಚಿಕ್ಕ ಮಕ್ಕಳನ್ನು ಆಡಲು ಮೈದಾನಕ್ಕೆ ಬಿಟ್ಟ ಹಾಗೆ ಕುಣಿಯುವ e ಹೂವುಗಳ ಅಂದ ವರ್ಣಿಸಲು ಬಾರದು. 
    ನೀವೂ ಗಮನಿಸಿದ್ದೀರಾ? ಇನ್ನು ಸ್ವಲ್ಪ ದಿನ ಮಾತ್ರ ಈ ಅಂದ. ಮತ್ತೆ ತನ್ನಷ್ಟಕ್ಕೆ ತಾನೇ ಬಿಸಿಲಿಗೆ ಮಾಗಿ, ಒಣಗಿ ಕಾಯಾಗಿ ಮತ್ತೆ ಗಿಡವಾಗಿ ಹುಟ್ಟಲು ಜೂನ್ ಬರಬೇಕು. ಮಾರ್ಚ್ ಏಪ್ರಿಲ್ ಒಣ ಹುಲ್ಲೇ ನೋಡಬೇಕು ಅಷ್ಟೇ. Vidya Nayak ಮೇಡಂ ಮೊದಲೇ ಅದರ ಒಳಗೆ ಉಣ್ಣಿ ಇರುತ್ತದೆ. ಹೋಗುವಾಗ ಜೋಪಾನ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಅದನ್ನೂ ಪಾಲಿಸ ಬೇಕಾಗಿದೆ. ಆದರೂ ಅದು ಒಣಗುವ  ಮೊದಲೊಮ್ಮೆ ಇದರ ಅಂದವ ಕಣ್ಣಾರೆ ಕಂಡು ಮನಸಾರೆ ಸವಿದು ಖುಷಿ ಪಡೋಣ ಅಲ್ಲವೇ? ನೀವೇನಂತೀರಿ? 
ಹನಿ ಬಿಂದು #naturelovers

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ