ಗಝಲ್
ಅಪ್ಪ ಅಮ್ಮನಿಗೆ ಬೈತಾ ಇರುವಾಗ ಮನಸಾಗಿತ್ತು ಮಸಣ
ಅಜ್ಜಿ,ಅತ್ತೆಯರೂ ಅಮ್ಮನನ್ನೆ ತೆಗಳಿದಾಗ ಮನಸಾಗಿತ್ತು ಮಸಣ.
ಮನೆಯಲೆಲ್ಲ ಕೆಲಸ ಮಾಡಿ ಮುಗಿಸದ ಅಮ್ಮ
ಹೊರಗೂ ದುಡಿದ ದಣಿವು ನೋಡಿದಾಗ ಮನಸಾಗಿತ್ತು ಮಸಣ.
ಬಟ್ಟೆ ಒಗೆದು ನೆಲಸಾರಿಸಿ ಪಾತ್ರೆ ತೊಳೆದರೂ
ಎಲ್ಲರಿಂದ ಕೀಳೆನಿಸಿದಾಗ ಮನಸಾಗಿತ್ತು ಮಸಣ.
ಹಗಲಿಡೀ ಬೆವರು ಸುರಿಸಿ ದುಡಿದರೂ
ಸಂಜೆ ಬರುವಾಗ ಕುಡುಕ ಅಪ್ಪನ ಸಂಶಯದ ದೃಷ್ಟಿ ನೋಡಿದಾಗ ಮನಸಾಗಿತ್ತು ಮಸಣ.
ಹರಿದ ಸೀರೆ ಹಳತಾದ ಕುಪ್ಪಸ ನೋಡಿ
ಏನೂ ಅರಿಯದವರಂತಿದ್ದವರ ಕಂಡಾಗ ಮನಸಾಗಿತ್ತು ಮಸಣ.
ಅಮ್ಮನಿಗೆ ಹೆಣ್ಣು ಮಗುವೆಂದು ನನ್ನ
ಜತೆಗೆ ಅಮ್ಮನ ಜರಿದವರ ನೆನೆದಾಗ ಮನಸಾಗಿತ್ತು ಮಸಣ.
ನನಗೂ ಮದುವೆಯಾಗಿ ಪ್ರೇಮ ಸಿಗದೇ ಇದೇ ಅನುಭವಕ್ಕೆ ಬಂದಾಗ
ಪೂರ್ತಿಯಾಗಿ ಅಮ್ಮನ ಪಾಡು ಮರುಕಳಿಸಿದ್ದು ಕಂಡಾಗ ಮನಸಾಗಿತ್ತು ಮಸಣ.
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ