ಬುಧವಾರ, ಮೇ 2, 2018

285. ಲಘುಬರಹ-2 ಪೆನ್ನೆಂಬ ಲೇಖನಿ

ಲಘುಬರಹ-2
ಪೆನ್ನೆಂಬ ಲೇಖನಿ

ಪೆನ್ನಿನ ಬಗ್ಗೆಯೂ ಲಘುಬರಹ ಬರೆಯಬಹುದೇ? ಖಂಡಿತಾ!ಆದರೆ ಪೆನ್ನಿನ ಬಗ್ಗೆ ನನಗೆ ತುಂಬಾ ಬೇಸರವಿದೆ. 'ಶಾಲೆ' ಎಂದಾಗ ನೆನಪಿಗೆ ಬರುವ ಅಗತ್ಯವಾದ 'ಪೆನ್ನು' ಅವಸಾನದಂಚಿಗೆ ತಲುಪುತ್ತಿದೆಯೇ? ಕ್ಯಾಶ್ಲೆಸ್, ಪೇಪರ್ಲೆಸ್ ಪದ್ಧತಿ, ಆಧುನಿಕ ತಂತ್ರಜ್ಞಾನ ಹೆಚ್ಚಿದಂತೆ, ಮಿನಿ,ಮೈಕ್ರೋ,ನ್ಯಾನೋ ಕಂಪ್ಯೂಟರ್ ಗಳು, ಮೊಬೈಲ್ ಗಳು ಪುಸ್ತಕ,ಪೆನ್ನಿನ ಸ್ಥಳವನ್ನು ವೇಗವಾಗಿಯೇ ಆಕ್ರಮಿಸತೊಡಗಿವೆ!
     ಬರಹಗಾರರು,ಲೇಖಕರು, ಕವಿಗಳು, ಮೊದಲಿನಂತೆ ಈಗ ಬರೆಯುವುದಿಲ್ಲ! ಬದಲಾಗಿ ಕಂಪ್ಯೂಟರ್, ಮೊಬೈಲ್ ಕೀಗಳನ್ನೊತ್ತಿ ಟೈಪಿಸುತ್ತಾರೆ!!
    ಶಾಯಿಯ ಬಾಟಲಿಯಿಂದ ನಿಧಾನವಾಗಿ ಕೊಳವೆಯಲ್ಲಿ ತೆಗೆದ ಶಾಯಿಯನ್ನು,ಅಷ್ಟೇ ನಿಧಾನವಾಗಿ ಪೆನ್ನಿಗೆ ತುಂಬಿ ಅದರ ನಾಲಗೆಯಿಂದ ಹೊರಬರುವ ಶಾಯಿಯನ್ನು ಪುಸ್ತಕದಲ್ಲಿ ಅಚ್ಚು ಹೊಡೆದಂತೆ ಬರೆಯುವ,ಅದನ್ನು ಓದುವ ಕಾಲವೆಲ್ಲೋ ಮೂಲೆಗೆ ಸರಿದಾಗಿದೆ. ಬದಲಾಗಿ www ಗೂಗಲಲ್ಲಿ ಕ್ಲಿಕ್ಕಿಸಿ, ತಮಗಿಷ್ಟ ಬಂದ ಭಾಷೆಯನ್ನು ನೋಡಿ ಅದಕ್ಕೆ ಭಾಷಾಂತರಿಸಿ ಓದುವುದು ಈಗಿನ ಕಾಲ!!!
      ಪೆನ್ನಿನ ಉಪಯೋಗಗಳ ತಿಳಿಯದವರುಂಟೆ? ಪೆನ್ನು ಖಡ್ಗಕ್ಕಿಂತ ಹರಿತ! ಬರಹಗಾರರಿಗೆ ಜೀವನದ ಆಯುಧವಾದರೆ ವಿದ್ಯಾರ್ಥಿಗಳ ಕಲಿಕಾ ಸಂಪತ್ತು! ದೊಡ್ಡ ದೊಡ್ಡ ಖ್ಯಾತನಾಮರಿಗೆ ಸಿಗ್ನೇಚರನ್ನು ಆಟೋಗ್ರಾಫ್ಗೆ ಹಾಕುವಂಥ ಸಾಧನ! ಖ್ಯಾತ ತಾರೆಯರಿಗೆ ಹಲವಾರು ಪೆನ್ನಿನ ಕಂಪನಿಯವರೇ 'ನಮ್ಮ ಪೆನ್ನಿನಲ್ಲೆ ಆಟೋಗ್ರಾಫ್ ಕೊಡಿ' ಎಂಬ ಆಫರ್ ಕೂಡಾ ಕೊಡುತ್ತಾರೆ!ಅವನ್ನವರು ಉಪಯೋಗಿಸುವುದರಿಂದ ಆ ಪೆನ್ ಕೂಡಾ ಫೇಮಸ್!! ಪೆನ್ನು ಮಾರುವವರಿಗೂ ಅದು ಒಂದು ಮಾರಾಟಕ್ಕೆ ಬದುಕಿನ ಸಾಧನ! ಬದುಕಿಗಾಗಿ ಪೆನ್ನು, ಬದುಕು ಕಟ್ಟಲು ಪೆನ್ನು, ಬದುಕು ನಡೆಸಲು ಪೆನ್ನು! ಅಂದರೆ ಪೆನ್ನು ಹಲವಾರು ಜನರಿಗೆ ಬದುಕನ್ನು ಒದಗಿಸಿ ಕೊಟ್ಟಿದೆ ಎಂದಾಯಿತಲ್ಲವೇ?
    ಪೆನ್ನು-ಹೊನ್ನನ್ನು ತಂದು ಕೊಡುತ್ತದೆ, ಅಂತೆಯೇ ಹೊನ್ನಿದ್ದರೆ ಪೆನ್ನು ಖರೀದಿಸಬಹುದು, ಹೆಚ್ಚು ಪೆನ್ನು ಖರೀದಿಸಿ ಮಾರಾಟ ಮಾಡಿ ಲಾಭಗಳಿಸಿ,ಒಳ್ಳೆಯ ಬದುಕನ್ನು ಸಾಗಿಸಬಹುದು. ಇದು ಪೆನ್ನು-ಹೊನ್ನಿನ ಸಂಬಂಧ ಅಷ್ಟೆ. ನೀವು ಮೊದಲು ಯಾವುದನ್ನು ಆರಿಸಿಕೊಳ್ಳುವಿರಿ ಅದು ನಿಮಗೇ ಬಿಟ್ಟಿದ್ದು!!
    ಕನ್ನಡದವರಾದರೂ ನಾವು ನಿತ್ಯ ಬಳಕೆಯ, ಅನಿವಾರ್ಯ ವಸ್ತುಗಳ ಕನ್ನಡ ಹೆಸರಿನ್ನೂ ನಮಗೆ ತಿಳಿದಿಲ್ಲ. ಉದಾಹರಣೆಗೆ ಪೇಸ್ಟು, ಬ್ರಶ್ಶು, ಪೆನ್ನು.. ಪೆನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಆಮದಾಗಿ ಬಂದು ಮಾರ್ಪಾಟಾದ ಹೆಸರು. ಇದರ ಕನ್ನಡ ಹೆಸರು ಶಾಯಿಕಡ್ಡಿ ಅಥವಾ ಲೇಖನಿ! ಹಲವಾರು ಜನರಿಗೆ ಈ ಹೆಸರೇ ತಿಳಿದಿಲ್ಲ! ಅಚ್ಚ ಕನ್ನಡದಲ್ಲಿ ಬಸ್ಸು ನಿರ್ವಾಹಕನೊಬ್ಬ  'ಚೀಟಿ, ಚೀಟಿ' ಎಂದರೆ ಅರ್ಥವಾಗದೆ ನಾವು ಮುಖ-ಮುಖ ನೋಡಿಕೊಳ್ಳುತ್ತೇವಲ್ಲ ಹಾಗೆ! 'ಟಿಕೆಟ್' ಎಂದರೆ ಮಾತ್ರ ತಿಳಿದಿರುವ ಹಲವು ಕನ್ನಡಿಗರಿಗೆ 'ಚೀಟಿ' ಎಂದರೆ ಅದೇ ಎಂದು ತಿಳಿದಿಲ್ಲ! ಹಾಗೆಯೇ ಲೇಖನಿ ಕೂಡಾ!!
       ಪೆನ್ನಿನ ಮೇಲೆ ಅತಿಯಾದ ವ್ಯಾಮೋಹ ಹೊಂದಿರುವ ಶಿಕ್ಷಕ ದಂಪತಿಗಳು ಅವರ ಮಗಳಿಗೆ 'ಲೇಖನಿ' ಅಂತಾನೇ ಹೆಸರಿಟ್ಟಿದ್ದಾರೆ! ನಿಜವಾಗಿಯೂ ಗ್ರೇಟ್! ಏಕೆಂದರೆ ಅಚ್ಚ ಕನ್ನಡದ ಹೆಸರನ್ನೇ ಆರಿಸಿಕೊಂಡಿರುವರು. 'ವಷ್ಯ,ಶಿಯಾ,ಕಿಯಾ,ರಿಯಾ ಮೊದಲಾದ ಅರ್ಥವಿಲ್ಲದ  ಹೆಸರಿಡುವ ಈ ಕಾಲದಲ್ಲಿ ಈ ಹೆಸರೊಂದು ಪ್ರಪಂಚದಾದ್ಯಂತ ಖ್ಯಾತವಾದರೆ.. ಹೆಸರಿನ ಬಗ್ಗೆಯೂ ಜೋಕೊಂದು ಕೇಳಿದೆ! ವಿಜ್ಞಾನ ಶಿಕ್ಷಕರು ತಮ್ಮ ಮಕ್ಕಳಿಗೆ ವೇಗ, ವಿಶ್ವ, ಗಗನ, ಆಕಾಶ, ನಕ್ಷತ್ರ, ಭೂಮಿ,ಮಂಗಳ, ಗುರು, ಚಂದ್ರ ಮೊದಲಾದ ಹೆಸರಿಟ್ಟರೆ, ಗಣಿತ ಶಿಕ್ಷಕರು ಬಿಂದು,ರೇಖಾ,ಕಿರಣ, ವೃತ್ತ,ಪರಿಧಿ ಮುಂತಾದ ಹೆಸರನ್ನೂ, ಕನ್ನಡ ಶಿಕ್ಷಕರು ಕ್ಷಿತಿಜ,ದಿಗಂತ, ಭ್ನು,ಭುವಿ, ಇಳಾ,ಪೃಥ್ವಿ,ಕವನ,ಲಿಖಿತ ಎಂದೂ, ಸಮಾಜ ಶಿಕ್ಷಕರು ಮೋಹನ್,ರಾಜ್,ವಿವೇಕ್, ಸುಭಾಷ್, ಅಕ್ಬರ್ ಅಂತ ಹೆಸರಿಡ್ತಾರಂತೆ! ಹಾಗೇ ಕನ್ನಡ ಪ್ರೇಮಿಗಳಿಗೂ ಕನ್ನಡ ಹೆಸರುಗಳು! ಅದರಲ್ಲಿ ಈ ಪೆನ್ನು ಕೂಡಾ ಹಿಂದೆ ಬಿದ್ದಿಲ್ಲ!
       ಆದರೆ ಪೆನ್ನು ಬ್ರಿಟಿಷರು ಬಂದ ಮೇಲೆ ಬಹುತೇಕ ಭಾರತೀಯರ ಹಾಗೇನೇ
ಬದಲಾಗಿದೆ. 'ಲೇಖನಿ' ಎಂಬ ಮೂರಕ್ಷರದ ಹೆಸರು ದೊಡ್ಡದಾಯಿತು.ಫಾರಿನ್ ಕಲ್ಚರ್ಗೆ ಸೂಟ್ ಆಗುವಂತೆ 'ಪೆನ್' ಎಂಬ ಶಾರ್ಟ್ ನೇಮ್ ಅನ್ನು ಆರಿಸಿಕೊಂಡಿದೆ. ಡಿಂಕು,ಚಿಂಟು,ಮಿಂಟು,ಟಿಂಟು,ಪಿಂಟು, ಬಂಟು ಇದ್ದ ಹಾಗೆ!!
       ಹೆಸರೊಳೇನಿದೆ ಅಲ್ಲವೇ? ಜಾತಕದ ಹೆಸರನ್ನು ನಾವು ಸೀಮಿತವಾಗಿ ದೇವಸ್ಥಾನಗಳಲ್ಲಿ ಪೂಜೆಗೆ ಮಾತ್ರ ಬಳಸುವಂತೆ ಪೆನ್ ಕೂಡಾ ಅಡ್ಡ ಹೆಸರಿಟ್ಟುಕೊಂಡಿದೆ ಎನ್ನಬಹುದು!  ಇರಲಿ ಬಿಡಿ, ನಮಗ್ಯಾಕೆ? ಇತರರ ಬಗ್ಗೆ ಟೆನ್ಶನ್! ಉಪಯೋಗಕ್ಕೊಂದು  ಚಂದದ ಪೆನ್ನು ಇದ್ದರಾಯಿತು ಅಲ್ಲವೇ? ಅಲ್ಲ, ಪೆನ್ನಿನ ಶಾಯಿಯ ಬಣ್ಣಗಳಲ್ಲೂ ಬದಲಾಗಿದೆ, ಕಾಲ, ಜನರಂತೆ! ಎಲ್ಲಾ ಬಣ್ಣದ ಶಾಯಿಯ ಪೆನ್ನುಗಳನ್ನು ಎಲ್ಲರೂ ಬಳಸುವಂತಿಲ್ಲ. ಹಸಿರು ಶಾಯಿ ಗೆಜೆಟೆಡ್ ಆಫೀಸರ್ ಗಳಿಗೆ ಮಾತ್ರ ಸೀಮಿತವಾದರೆ, ಕೆಂಪು ಪೆನ್ನು ಶಿಕ್ಷಕರಿಗೆ,ಬ್ಯಾಂಕ್ ಆಫೀಸರುಗಳಿಗೆ, ನೀಲಿ-ಕಪ್ಪು ಶಾಯಿ ಪೆನ್ನು ವಿದ್ಯಾರ್ಥಿಗಳಿಗೆ ಹಾಗೂ ದಿನನಿತ್ಯ ಕ್ಯಾಶುವಲ್ ಬಳಕೆಗೆ. ಉಳಿದ ಬಣ್ಣ ಡಿಸೈನ್ ಬರವಣಿಗೆಗೆ ಮಾತ್ರ! ಜೀವನದಲ್ಲಿ ಬಣ್ಣಕ್ಕೂ ತುಂಬಾ ಪ್ರಾಮುಖ್ಯತೆ ಇಲ್ಲದಿರುತ್ತಿದ್ದರೆ 'ಬಣ್ಣಾ ನನ್ನ ಒಲವಿನ ಬಣ್ಣ... ' ಎಂಬ ಹಾಡು ಪ್ರಖ್ಯಾತವಾಗುತ್ತಲೇ ಇರಲಿಲ್ಲವೇನೋ!!
          ಅದೇನೇ ಇರಲಿ, ಹಿಂದಿನಿಂದ ಇಂದಿನ ಕಾಲದವರೆಗೂ ಪ್ರತಿಯೊಬ್ಬರ ಆಲೋಚನೆಗಳು, ಇಚ್ಛೆ, ಅಭಿಪ್ರಾಯ, ಕಾಗದಗಳನ್ನು ಪೇಪರ್ನಲ್ಲಿ ಪದವಾಗಿಸಿದ್ದು ಪೆನ್ನು ತಾನೇ? ತಮ್ಮ ಜೀವನದ ಏರಿಳಿತಗಳ ಬಗ್ಗೆ ಡೈರಿ ಬರೆಯಲೂ ಪೆನ್ನು ಬೇಕು! ಡೆತ್ ನೋಟ್, ಲವ್ ಲೆಟರ್,ಲೀವ್ ನೋಟ್ ರೆಕಾರ್ಡ್ಸ್ ಬರೆಯಲೂ ಪೆನ್ನೇ ಬೇಕು! ಇವೆಲ್ಲವನ್ನೂ ಕಂಪ್ಯೂಟರ್ಗಳು ಇಂಚಿಂಚಾಗಿ ಆಕ್ರಮಿಸಿ ಕೊಳ್ಳುತ್ತಿವೆ! ಏನೇ ಇರಲಿ..ತಂತ್ರಜ್ಞಾನದ ಬಳಕೆಯಿಂದ ಪೆನ್ನು ಪಳಿಯುಳಿಕೆ ಸಾಧನಗಳ ಪಟ್ಟಿಯಲ್ಲಿ ಸೇರಿಹೋಗುವ ದಿನ ಬಹಳ ದೂರವಿಲ್ಲ! ಕ್ಯಾಸೆಟ್,ಟೇಪ್ ರೆಕಾರ್ಡರ್, ಅಲಾರಂ ಕ್ಲಾಕ್, ವಾಚ್ಗಳಂತೆ! ನಮ್ಮ ಮುಂದಿನ ಜನಾಂಗಕ್ಕೆ "20ನೇ ಶತಮಾನದವರೆಗೆ ಜನರು ಕಷ್ಟಪಟ್ಟು ಪೆನ್ನು ಎಂಬ ಸಾಧನದಲ್ಲಿ ಪುಸ್ತಕ ಎಂಬ ಸಾಧನಕ್ಕೆ ತಮ್ಮ ಕೈ ಬೆರಳುಗಳ ಸಹಾಯದಿಂದ ಬರೆದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು" ಎಂಬ ಇತಿಹಾಸವನ್ನು ಪರೀಕ್ಷೆಗಾಗಿ ಓದುವಾಗ ಮತ್ತು ಟೈಪಿಸುವಾಗಲಾದರೂ 'ಪೆನ್ನು' ಎಂಬ ಶಬ್ದ ಬಳಕೆಯಾಗಬಹುದು ಅಲ್ಲವೇ? ನೀವೇನಂತೀರಿ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ