ವಕ್ಕರಿಸಿಕೊಳ್ಳುವವರು
ಹಲವರಿಹರು ಹಿಂದೆ ಹಿಂದೆ ಬಂದು
ನಮ್ಮ ಜೀವನದಿ ವಕ್ಕರಿಸಿಕೊಳ್ಳು(ಲ್ಲು)ವವರು!
ನಮ್ಮಿಂದ ಸಹಾಯ ಪಡೆದು ಮೇಲೇರಿ,
ತಮ್ಮ ಕಾರ್ಯದ ಬಳಿಕ ಹತ್ತಿದ ಏಣಿ ಮುರಿಯುವವರು!
ತಾನೇ ಮೇಲೆಂಬ ಅಹಂಕಾರದ ಸ್ವಲ್ಪ ಅಮಲೇರಿಸಿಕೊಂಡವರು!
ತಲೆಯಲೆರಡು ತಾನೇ ದೊಡ್ಡದೆನುವ ಕೋಡು ಹೊತ್ತವರು!
ತನ್ನ ಕೋಳಿ ಕೂಗದೆ ಬೆಳಕಾಗದು ಎನುವ ಅಜ್ಜಿಯಂಥವರು!
ಮನ್ಸೂರನಂತೆ ನಂಬಿದವರಿಗೆ ದ್ರೋಹ ಬಗೆವವರು!
ಮುಂದೆ ನಗುತ್ತಲಿ ಹಿಂದೆ ಬರುತಲಿ ಚೂರಿ ಇರಿವವರು!
ತನ್ನತನವೇ ಇಲ್ಲದೆ ಇತರರ ಬಗೆಗೆ ಕ್ಷುಲ್ಲಕ ಮಾತನಾಡುವವರು..
ಈ ಕಡೆಯಿಂದ ಆ ಕಡೆ ಹೇಳುತ್ತಾ ನಾರದನ ರೂವಾರಿಗಳಾಗಿರುವವರು..
ಪ್ರತಿ ಮನೆಯ ವಿಷಯ ಹಂಚುವ ನಡೆವ ಅಂಚೆಯವರಿವರು!
ಇತರರ ಮನೆಯ ದೋಸೆ ತೂತೆನುವ ನಾಲಗೆ ಚಪಲದವರು!
ತನ್ನ ಬುಡವ ನೋಡದೆ ಪರರೆಡೆ ದೃಷ್ಟಿ ನೆಟ್ಟ ಉಗ್ರರಂತಿಹರು!
ಪ್ರತಿಮನೆಗೆ ಹೋಗಿ ವಿಷಯ ಸಂಗ್ರಹಿಸಿ, ಮಾತು ಬೀರುವ ಗುಣದವರು..
ಇತರರು ಜಗಳವಾಡುವಂತೆ ಮಾಡಿ ತಾವು ಅಂದ ನೋಡುವವರು!
ಮೇಲಿಂದ ಕೆಳಗೆ ಕಸವನು ಹಾಕಿ ಗುಡಿಸುವುದ ಕಾಯುವವರು!
ತಮ್ಮ ಮಕ್ಕಳೂ ತಮ್ಮ ವಕ್ರ ಬುದ್ಧಿಯ ಕಲಿವರೆನುವುದ ಮರೆತವರು!
ನಾಯಿ ಕೊಡೆಗಳಂತೆ ತಮ್ಮ ಮನದಲಿ ಬೇಡದ ತುಂಬಿಕೊಂಡವರು!
ತಾನು ಬಿದ್ದರೂ ಇತರರ ಏಳಿಗೆಯಾಗಲು ಬಿಡದವರು..
ದೇವರೆ ಸೃಷ್ಟಿಸಿಹ ಹಿಂದಿನ ಜನುಮದ ದ್ವೇಷಿಗಳಾ ಇಲ್ಲಿ!
ಈ ಜನುಮದಲಿ ನೆಮ್ಮದಿಯಾಗಿ ಬದುಕಲು ಬಿಡದ ಜನರ ನಡುವಲಿ,
ಹೋಗುವೆನೆಂದರೂ ಹೋಗಲು ಬಿಡದು ಜೀವನದುಯ್ಯಾಲೆ!
ಇಂಥ ಜನರ ನಡುವೆ ಬಾಳಲೆ ಬೇಕು, ಇದುವೆ ವಿಧಿಯ ಲೀಲೆ!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ