ಶನಿವಾರ, ಸೆಪ್ಟೆಂಬರ್ 5, 2020

ಗಝಲ್-ಶಿಕ್ಷಕರಿಗಾಗಿ

ಗುರುವಿಗರ್ಪಿತವಾದ ಗಝಲ್

ವಿದ್ಯಾ ಬುದ್ಧಿಯ ಕಲಿಸುವ ಕಾಯಕ ನಡೆಸುವ ಗುರುವಿಗೆ ನಮನಗಳು..
ತನ್ನ ಕಲಿಕೆಯ ಪರರಿಗೆ ಹಂಚುತ ಸುಖವನು ಕಾಣುವ ಅರಿವಿಗೆ ನಮನಗಳು..

ಪರಿಸರದೆಲ್ಲೆಡೆ ಸರ್ವರಲ್ಲಿ ಬುದ್ಧಿವಂತನು ಎನಿಸಿಕೊಂಡಿಹ ಜೀವಿಯಿದು
ಸರಿ ತಪ್ಪುಗಳನು ತಿದ್ದಿ ತೀಡುವ ಕಾರ್ಯನಿರತರಿಗೆ ನಮನಗಳು..

ಸರ್ವರ ಕಂದರ ತನ್ನ ಕಂದರೆಂದೇ ಸಲಹುವ ಹೃದಯದ ವೈಶಾಲ್ಯ
ಮಗುವಿನ ಕಲಿಕೆಗೆ ತನ್ನ ಜೀವನವ ಒರೆ ಹಚ್ಚಿದ ತ್ಯಾಗಿಗೆ ನಮನಗಳು..

ಬಿಸಿಲು, ಮಳೆ, ಗಾಳಿಯ ಲೆಕ್ಕಿಸದೆ ಜ್ಞಾನವ ಹಂಚುವ ಕಾರ್ಯವದು
ಕಲ್ಲನು ಕೆತ್ತಿ  ಕೊರೆದು ಶಿಲೆಯಾಗಿಸೊ ಕೆಲಸದ ತ್ಯಾಗಿಗೆ ನಮನಗಳು.

ಜೀವನ ಬಹುಮಹಡಿ ಕಟ್ಟಡಕೆ ತಲಪಾಯ ಹಾಕುವ ಕೈಗಳು ನಮ್ಮದಲ್ಲವೇ?
ಜೇಬಲಿ ಹಣವಿಲ್ಲದೆಯೇ ತಿಳಿದುದ ಹೇಳುತ ಸರಿದಾರಿಯಲಿ ಶಿಷ್ಯರ ನಡೆಸುವಗೆ ನಮನಗಳು..

ಸಾಮಾನ್ಯ ಬಾಳುವೆ ನಡೆಸುತ ಪರರಿಗೆ ಮಾದರಿಯಾಗಿಹ ಜೀವಗಳು
ಉಪಕಾರಕೆ ಹೆಸರಾದ, ಹಲ ಮನಗಳಿಗೆ ಒಳಿತನು ಬಯಸುವ ಕರುಣಾ ಮೂರ್ತಿಗಳಿಗೆ ನಮನಗಳು.

ಬಡವ ಬಲ್ಲಿದರೆಂಬ ಬೇಧವಿಲ್ಲದೆಯೇ ಬೋಧಿಸೊ ಕಾಯಕೆ ಕರ ಮುಗಿವೆ
ಮೇಲು ಕೀಳೆನುವ ಭಾವವ ಬಿಸುಟು ಒಂದಾಗಿ ಕಾಣುವ ಕಣ್ಣಿಗೆ ನಮನಗಳು..

ನಲಿವಿನ ಕ್ಷಣಕೆ ಪ್ರಾರ್ಥನೆ ಹಾಡುತ ಹಲವು ಮನಕೆ ಖುಷಿ ಕೊಡುವಾಟವಿದು
ತಾಯಿಯ ಬಳಿಕ ಮಗುವನು ಬೆಳೆಸುವ ಧೀಮಂತ ಹೃದಯದ ನೆನಪಿಗೆ ನಮನಗಳು..

ಜಾತಿ ಮತದ ಬಿರುಕನು ತಡೆಯುವ ವೀಣಾಪಾಣಿಯ ಮಕ್ಕಳಿವರು.
ಕಲಾಂ, ಅಂಬೇಡ್ಕರ್, ಜಿನ, ಬುದ್ಧ ವಿವೇಕರ ನುಡಿಗಳ ನುಡಿಯುವ ನಾಲಗೆಗೆ ನಮನಗಳು.

ಕಿರಿಯರಿಗೆ ತಿಳಿ ಹೇಳುತ ಹಿರಿಯರ ಮಾರ್ಗದರ್ಶನ ಪಡೆಯುವ ಮಹಾನ್ ಚೇತನಗಳು
 ದೇಶೋದ್ಧಾರಕೆ ಭದ್ರ ಬುನಾದಿಯ ಪ್ರೇಮದಿ ಹಾಕುವ ಮನಗಳಿಗೆ ನಮನಗಳು!!
@ಪ್ರೇಮ್@
05.09.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ