ಯಶೋಗಾಥೆ-1 ಡಾ. ಮರಿಯಾ ಪ್ರಮೀಳಾ ಡಿಸೋಜಾ

ಇದೊಂದು ಕಥೆಯಲ್ಲ, ಜೀವನ. ಬದುಕಲ್ಲಿ ಯಾರು ಏನು ಬೇಕಾದರೂ ಸಾಧಿಸಹುದು, ಸಾಧನೆಗೆ ಏನೂ ಅಡ್ಡಿ ಬರಲಾರದು ಎನ್ನುವ ಮಾತಿಗೆ ನೈಜ ಉದಾಹರಣೆ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಛಲ ಹಾಗೂ ಹಠ ಒಂದಿದ್ದರೆ ಸಾಕು, ಯಾರು ಏನು ಬೇಕಾದರೂ ಸಾಧಿಸಲು ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ ನನ್ನ ಗೆಳತಿಯ ಸಾಹಸಗಾಥೆ.
ಆಕೆಯ ಹೆಸರು ಮರಿಯಾ ಪ್ರಮೀಳಾ ಅಂತ. ಹುಟ್ಟಿದ್ದು ನಮ್ಮ ನಿಮ್ಮ ಹಾಗೆ ಸಾಧಾರಣ ಕುಟುಂಬದಲ್ಲಿ. ಓದಿದ್ದೂ ಕನ್ನಡ ಮಾಧ್ಯಮ ಶಾಲೆಯಲ್ಲೇ. ಹಳ್ಳಿಯ ಶಾಲೆಯಲ್ಲೇ ಕಲಿತ ಮರಿಯಾ ಇಂದು ಡಾಕ್ಟರ್ ಮರಿಯಾ ಪ್ರಮೀಳಾ ಡಿಸೋಜ. ಡಾಕ್ಟರೇಟ್ ಪಡೆದು ತನ್ನಿಂದ ಒಂದು ಮಿಲಿಯ ಜನರಿಗೆ ಯಾವುದೇ ಹಣವಿಲ್ಲದೆ ತನ್ನ ಜ್ಞಾನ ಹಬ್ಬಿಸಬೇಕು ಎಂದು ಹೊರಟ ಛಲಗಾತಿ, ಗಟ್ಟಿಗಿತ್ತಿ.
ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಎಂಬ ಸ್ಥಳದ ಬಗ್ಗೆ ಗೊತ್ತಿಲ್ಲದವರು ಯಾರೂ ಇಲ್ಲ ಎಂಬುದು ನನ್ನ ಅನಿಸಿಕೆ. ಅಲ್ಲಿ ಹುಟ್ಟಿ ಬೆಳೆದವರು ಪ್ರಮೀಳಾ. ತಂದೆ ಮಾರ್ಷಲ್ ಡಿಸೋಜ, ತಾಯಿ ಫ್ಲೋರಿನ್ ಡಿಸೋಜರವರ ಮೂವರು ಮಕ್ಕಳಲ್ಲಿ ಎರಡನೆಯವರಾಗಿ ಬೆಳೆದವರು. ಮೊದಲು ತಂದೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ತಂದೆಯ ದುಡಿತ ಮನೆಯಲ್ಲಿನ ಖರ್ಚಿಗೆ ಹಾಗೂ ಮಕ್ಕಳ ಓದಿಗೆ ಸಾಲದ ಕಾರಣ ಪೊಲಿಯೋ ಪೀಡಿತರಾದ ತಾಯಿಗೂ ದುಡಿಯದೆ ಬೇರೆ ವಿಧಿ ಇರಲಿಲ್ಲ. ಅಲ್ಲದೆ ಆಗ ಈಗಿನಂತೆ ಕೂಲಿ ಕೆಲಸ ಎಲ್ಲಾ ದಿನಗಳಲ್ಲೂ ಇರುತ್ತಿರಲಿಲ್ಲ ಅಲ್ಲವೇ?
ತಾಯಿ ಫ್ಲೋರಿನ್ ಅವರೂ ಕೆಲಸಕ್ಕೆ ಸೇರಲೇಬೇಕಾದ ಅನಿವಾರ್ಯತೆ ಬಂದಾಗ ಅಲ್ಲೇ ಪಕ್ಕದ ಅಂಗನವಾಡಿಯಲ್ಲಿ ಕೇವಲ ಏಳುನೂರು ರೂಪಾಯಿಗಳ ಸಂಬಳಕ್ಕೆ ಅಂಗನವಾಡಿ ಕಾರ್ಯಕರ್ತೆಯಾಗಿ ಸೇರಿಕೊಂಡು ಸಂಸಾರ ನಡೆಸಲು ನೆರವಾದರು. ಅಲ್ಲೇ ಇದ್ದ ಕಾನ್ವೆಂಟ್ ಶಾಲೆಯೊಂದಕ್ಕೆ ಸೇರಿದ್ದ ಪ್ರಮೀಳಾ ಅವರಿಗೆ ಶಾಲೆಯ ಫೀಸ್ ಕಟ್ಟಲು ಹಣದ ಕೊರತೆ ಇದ್ದಾಗ ಅವರ ಕಷ್ಟ ಅರಿತ ಕಾನ್ವೆಂಟ್ ನಲ್ಲಿದ್ದ ಡಾ. ಸಿಸ್ಟರ್ ಲಿಯಾನ್ ಅವರು ಕಲಿಕೆಯಲ್ಲಿ ಮುಂದಿದ್ದ ಪ್ರಮೀಳಾ ಅವರ ಮೂರು ವರುಷಗಳ ಫೀಸ್ ಅನ್ನು ಸ್ವತಃ ತಾವೇ ಕಟ್ಟಿ ಬಿಟ್ಟರು!
ಕಲಿಕೆಯಲ್ಲಿ ಎಂದೂ ಹಿಂದೆ ನೋಡಿದವರೇ ಅಲ್ಲ ಪ್ರಮೀಳಾ ಎಂಬ ಸಾಧಕಿ! ಎಲ್ಲರಿಗೂ ಕಬ್ಬಿಣದ ಕಡಲೆ ಆಗಿರುವ ಗಣಿತ ಅವರ ನೆಚ್ಚಿನ ವಿಷಯ. ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ಹತ್ತನೇ ತರಗತಿಯಲ್ಲಿ ಗಣಿತದಲ್ಲಿ ತೊಂಭತ್ತೆರಡು ಅಂಕಗಳನ್ನು ಗಳಿಸಿ ಶಾಲೆಯಲ್ಲೇ ಅತಿ ಹೆಚ್ಚು ಅಂಕ ಗಳಿಸಿದ ಕೀರ್ತಿಯನ್ನು ಪಡೆದರು. ಹಲವು ಮಕ್ಕಳಿಗೆ ಮಾದರಿಯೂ ಆದರು.
ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರಮೀಳಾಗೆ ತುಂಬಾ ಸಂತಸವಾದರೆ ಆ ಸಂತಸವನ್ನು ಹಂಚಿಕೊಳ್ಳುವ ಬದಲು ದುಃಖದ ಪರಿಸ್ಥಿತಿ ಎದುರಾಗಿತ್ತು. ಮುಂದೆ ಓದಲೇ ಬೇಕೆಂಬ ಆಸೆ ಅವರದಾಗಿದ್ದರೂ ಮನೆಯ ಕಷ್ಟದ ಕಾರಣ ಅವರ ಅಮ್ಮ ಅವರ ಮುಂಬೈಯಲ್ಲಿರುವ ಅಣ್ಣನ ಬಳಿ ಮಾತನಾಡಿ ಅಲ್ಲೇ ಮನೆ ಕೆಲಸಕ್ಕೆ ತನ್ನ ಮಗಳನ್ನು ಸೇರಿಸುವ ಯೋಜನೆಯಲ್ಲಿ ಇದ್ದರು. ಕಾರಣ
ತಮ್ಮ ಕುಟುಂಬದ ಕಷ್ಟ ಸ್ವಲ್ಪ ಕಡಿಮೆ ಆಗಬಹುದೇನೋ ಎಂಬ ಮತ್ತು ಮುಂದೆ ಓದಿಸಲು ಹಣಕಾಸಿನ ಸಮಸ್ಯೆ ಇನ್ನೊಂದೆಡೆ! ದೃತಿಗೆಡಲಿಲ್ಲ ಬಾಲೆ! ಅದನ್ನು ಮೊದಲೇ ಯೋಚಿಸಿತ್ತು ಪ್ರೌಢ ಮನ! ಅಮ್ಮನಿಗೆ ಧೈರ್ಯ ಹೇಳಿ ತಾನು ದುಡಿದು ತನ್ನ ಶಾಲಾ ಹಣ ಹೊಂದಿಸುವ ಕಾರ್ಯ ಪ್ರಾರಂಭವಾಯಿತು.
ಅಂದಿನಿಂದ ಪ್ರತಿ ಗಿಡದಿಂದ ಅಬ್ಬಲಿಗೆ ಅಥವಾ ಕನಕಾಂಬರ ಹೂವುಗಳನ್ನೆಲ್ಲ ಕಿತ್ತು ಅದನ್ನು ಕಟ್ಟಿ ಮಾಲೆ ಮಾಡಿ ಮಾರುವ ಕಾರ್ಯ ಪ್ರವೃತ್ತರಾದರು. ಮಾಲೆಯನ್ನು ಕಟ್ಟಿ ರಸ್ತೆ ಬದಿಯಲ್ಲಿ ನಿಂತು, ಹೋಗುವ ಎಲ್ಲ ವಾಹನಗಳ ಬಳಿ ಕೇಳಿ ಅವರಿಗೆ ತನ್ನದೇ ಬೆಲೆಯಲ್ಲಿ ಮಾರುವ ಕಾಯಕ. ಹಾಗೆಯೇ ಪಕ್ಕದ ಅಂಗಡಿಗೂ ಹೂ ಕಟ್ಟಿ ಮಾರುವ ಕೆಲಸ. ಶಾಲೆಗೆ ಹೋಗುವಾಗಲೂ ಈ ಕಾರ್ಯ ನಡೆದೇ ಇತ್ತು. ಶಾಲೆಯಿಂದ ಬಂದು ಹೂವಿನ ಗಿಡಗಳಿಗೆ ನೀರು ಹಾಕಿ ಬೆಳೆಸುವುದು, ರಾತ್ರಿ ಓದುವುದು, ಬೆಳಿಗ್ಗೆ ಹೂವು ಕೊಯ್ದು ಕಟ್ಟಿ ಮಾರುವುದು! ಮತ್ತೆ ಕಾಲೇಜಿಗೆ ಹೋಗಿ ತನ್ನ ವಿದ್ಯೆಯನ್ನು ಮುಂದುವರೆಸುವುದು! ಹೀಗಿತ್ತು ಬದುಕು!
ಅದರ ನಂತರ ಆ ದುಡ್ಡಿನಿಂದ ಪಿಯುಸಿಗೆ ಸೇರಿದ್ದಾಯ್ತು. ಅಲ್ಲಿ ಇರುವಾಗ ರೋಟರಿ, ಬಂಟ್ಸ್ ಸಂಘ ಮೊದಲಾದ ಹಲವಾರು ಸಂಘ ಸಂಸ್ಥೆಗಳ ಬಗ್ಗೆ ದಿನ ಪತ್ರಿಕೆಗಳಲ್ಲಿ ಓದಿ ತಿಳಿದು ಅವುಗಳನ್ನು ಸಂಪರ್ಕಿಸಿ ವಿದ್ಯಾರ್ಥಿ ವೇತನಗಳನ್ನು ಪಡೆದುಕೊಂಡರು. ಈಗಿನಂತೆ ಮೊಬೈಲ್ ಎಂಬ ಸುಲಭದ ಸಾಧನ ಇರದ ಕಾಲವದು. ಹಸಿವು ಮತ್ತು ಬಡತನ ಎಲ್ಲವನ್ನೂ ಕಲಿಸಿ ಕೊಡುತ್ತದೆ ಅಲ್ಲವೇ?
ಹಲವಾರು ಸಂಘ ಸಂಸ್ಥೆಗಳು ಇವರ ಓದನ್ನು ನೋಡಿ ಹಾಗೂ ಇವರ ಕಷ್ಟಕ್ಕೆ ನೆರವಾದವು. ಇವರಿಗೆ ವಿದ್ಯಾರ್ಥಿವೇತನ ದೊರೆಯಿತು. ಅದನ್ನು ಕಲಿಕೆಗೆ ಸಂಪೂರ್ಣವಾಗಿ ಬಳಸಿ ತಮ್ಮ ವಿದ್ಯಾಭ್ಯಾಸವನ್ನು ಎಡೆಬಿಡದೆ ಮುಂದುವರಿಸಿದರು. ಸಿ ಓ ಡಿ ಪಿ. ಎಂಬ ಆರ್ಗನೈಜೇಷನ್ ಒಂದು ಮಂಗಳೂರಿನಲ್ಲಿ ಇದೆ. ಅವರು ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ ಕೊಡುತ್ತಾರೆ ಎಂಬ ಮಾಹಿತಿ ದೊರೆತ ಪ್ರಮೀಳಾ ಅಲ್ಲಿಂದ ನಾಲ್ಕು ವರುಷಗಳಿಗೆ ಶೈಕ್ಷಣಿಕ ಸಾಲ ಪಡೆದರು. ಇವರಿಗೆ ನಮ್ಮ ಹಾಗೆಯೇ ಬದುಕಲ್ಲಿ ಆಗ ಗಾಡ್ ಫಾದರ್ ಅಂತ ಯಾವುದೇ ವಿಷಯದ ಬಗ್ಗೆ ತಿಳುವಳಿಕೆ ಹೇಳಲು ಯಾರೂ ಇರಲಿಲ್ಲ. ಕಲಿತವರ, ತಿಳಿದವರ ಬಳಿ ಯಾವ ವಿಷಯದ ಬಗ್ಗೆ ಕಲಿತರೆ ಬೇಗ ಕೆಲಸ ಸಿಗಬಹುದು ಎಂದು ವಿಚಾರಿಸಿದಾಗ ಹಲವಾರು ಜನರು ಕೊಟ್ಟ ಐಡಿಯಾ "ನೀನು ಚೆನ್ನಾಗಿ ಓದುತ್ತೀಯಾ, ಹಾಗಾಗಿ ಟೀಚರ್ ಆಗು" ಎಂದು. ಇಂಜಿನಿಯರ್, ಡಾಕ್ಟರ್ ಆಗಲು ಎಲ್ಲಾ ಕಾಲಕ್ಕೂ ಹಣವೇ ಮುಖ್ಯ ತಾನೇ? ಅಲ್ಲದೆ ಬಡವಳಾದ ಹುಡುಗಿಗೆ ಇದು ಯಾಕೆ ಎಂದು ಇರಬಹುದು, ಅಥವಾ ಹಳ್ಳಿ ಆದ ಕಾರಣ ಯಾರಿಗೂ ತಿಳಿದಿಲ್ಲದ ಕಾರಣ ಇರಬಹುದು, ಯಾರೂ ಈ ಕೋರ್ಸ್ ಗಳ ಬಗ್ಗೆ ಹೇಳಿರಲಿಲ್ಲ. ಹಾಗಾಗಿ ಪ್ರಮೀಳಾ ವಿಜ್ಞಾನದ ವಿಷಯದಲ್ಲಿ ಪದವಿಯನ್ನು ಆಯ್ಕೆ ಮಾಡಿ ಕೊಂಡರು. ಮೊದಲ ವರ್ಷದ ಪದವಿಯಲ್ಲಿ ಹಲವು ವಿದ್ಯಾರ್ಥಿಗಳು ತಮಗೆ ಇಂಜಿನಿಯರಿಂಗ್ ಸೀಟು ಸಿಕ್ಕಿದೆ ಎಂದು ಬಿಟ್ಟು ಹೋದಾಗಲೇ ಅವರಿಗೆ ತಿಳಿದದ್ದು ಈ ರೀತಿಯ ಹೆಚ್ಚಿನ ಸಂಬಳ ತರುವ ಕೆಲಸಗಳು ಸಿಗುವ ಬೇರೆ ಕೋರ್ಸ್ ಗಳನ್ನೂ ನಾವು ಕಲಿಯಬಹುದು ಎಂದು! ನಾನೂ ಸೇರಬಹುದಿತ್ತು, ನನಗೂ ಮೊದಲು ಗೊತ್ತಿದ್ದಿದ್ದರೆ ಎಂದು ಅದೆಷ್ಟೋ ಬಾರಿ ಬೇಸರ ಪಟ್ಟದ್ದು ಕೂಡಾ ಇದೆ. ವಿಜ್ಞಾನದ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಮುಗಿಸಿದ ಪ್ರಮೀಳಾ. ಬಳಿಕ ಒಂದೇ ವರ್ಷ ಬಿ. ಎಡ್ ಕೋರ್ಸ್ ಮಾಡಿದರೆ ಸಾಕು ಕೆಲಸ ಸಿಗುವುದೆಂದು ಎಲ್ಲರ ಅಭಿಪ್ರಾಯ ಪಡೆದು ಬಿ. ಎಡ್ ಪದವಿಯನ್ನೂ ಪಡೆದರು. ತಕ್ಷಣವೇ ಮಂಗಳೂರಿನ ಒಂದು ಖಾಸಗಿ ಡಿ.ಎಡ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸಕ್ಕೆ ಸೇರಿದರು. ಏಕೆಂದರೆ ಹಣದ ಅವಶ್ಯಕತೆ ತುಂಬಾ ಇತ್ತು. ಎರಡು ವರುಷಗಳ ಕಾಲ ಸ್ವತಂತ್ರವಾಗಿ ಜವಾಬ್ದಾರಿಯುತ ಕಾರ್ಯ ಮಾಡುವ ಅಲ್ಲಿನ ಕೆಲಸ ಅವರಿಗೆ ಇಷ್ಟವಾಯ್ತು.
ಆದರೆ ಹಣದ ಹರಿವು ಸಾಲದೆ ಎರಡು ಮೂರು ಬಾರಿ ಸರಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಮೂರನೇ ಬಾರಿಗೆ ಸರಕಾರಿ ಪ್ರೌಢಶಾಲೆ ಕೋಡಪದವು ಬಂಟ್ವಾಳ ಇಲ್ಲಿ ಗಣಿತ ಶಿಕ್ಷಕಿಯಾಗಿ ನೇಮಕಗೊಂಡರು. ಅಲ್ಲಿ ಅವರಿಗೆ ಸಂಬಲವೇನೋ ಸಿಗುತ್ತಿತ್ತು ಆದರೆ ಮನದ ಹಸಿವು ತೀರಿರಲಿಲ್ಲ. ಒಂದು ತಾನು ಜನರಿಗೆ ಏನಾದರೂ ಸಹಾಯ ಮಾಡಬೇಕು ಎಂಬ ತುಡಿತ ಇನ್ನೊಂದೆಡೆ ಇನ್ನೂ ನನ್ನ ಸಂಬಳ ಜಾಸ್ತಿ ಆಗಬೇಕು ಎಂಬ ಮನದ ಇಂಗಿತ, ಮತ್ತೆ ನಾನು ಇನ್ನಷ್ಟು ಹೆಚ್ಚು ದುಡಿದು ಇನ್ನೂ ಏನಾದರೂ ಸಾಧಿಸಬೇಕು ಎಂಬ ಹಂಬಲ ಜಾಸ್ತಿಯಾಗಿ 2008ರಲ್ಲಿ ಒಂದು ಇನ್ಶುರೆನ್ಸ್ ಕಂಪನಿಗೆ ಸೇರಿದರು. ಅಲ್ಲಿ ಅವರಿಗೆ ಬಹಳಷ್ಟು ಹಣ ಗಳಿಸಲು ಸಾಧ್ಯವಾಯಿತು.
ಎರಡನೇ ಗಳಿಕೆ ಪ್ರಾರಂಭ ಆದ ಪ್ಯಾನ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯಲ್ಲಿ ಗಳಿಕೆಗೆ ಕಾಂಟೆಸ್ಟ್ ಇತ್ತು. ಅದರಲ್ಲಿ ಮೊದಲಿಗರಾಗಿ ಜಯ ಗಳಿಸಿದ ಕಾರಣ ಮೂರು ದೇಶಗಳಿಗೆ ಭೇಟಿ ನೀಡುವ ಅವಕಾಶ ಸಿಕ್ಕಿತು. ಯು. ಎ. ಇ , ದಕ್ಷಿಣ ಆಫ್ರಿಕಾ ಮತ್ತು ದುಬೈ ಪ್ರವಾಸಗಳನ್ನು ಮಾಡಿದರು. ಅಲ್ಲದೇ ನಾನು ದೊಡ್ಡ ಮ್ಯಾನೇಜರ್ ಆಗಬೇಕು ಎಂಬ ಬಾಲ್ಯದ ಕನಸು ನನಸಾಗಿಸುವ ತುಡಿತ ಇದ್ದೇ ಇತ್ತು. ಈ ಮಧ್ಯೆ ಅವರು ತಮ್ಮ ಎಂ. ಎಡ್ ವಿದ್ಯಾಭ್ಯಾಸ ಮುಗಿಸಿದರು. ಕೈಯಲ್ಲಿ ಸ್ವಲ್ಪ ಹಣ ಬಂದಾಗ ಮ್ಯಾನೇಜರ್ ಆಗಲು ಎಂ.ಬೀ.ಎ ಮಾಡಬೇಕು ಎಂದು ತಿಳಿದವರು ಸಲಹೆ ನೀಡಿದರು. ಆಗ ಇರುವ ರಜೆಗಳನ್ನು ಬಳಸಿ ಹಾಗೂ ಸಂಬಳ ಇಲ್ಲದ ರಜೆ ಪಡೆದು ಹೆಚ್ಚಿನ ಓದಿಗೆ ಬೆಂಗಳೂರಿಗೆ ಹೋದರು.
ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್ ಬೆಂಗಳೂರು ಇಲ್ಲಿ ಎಂ.ಬಿ.ಎ ಪದವಿಗೆ ಸೇರಿಕೊಂಡಾಗ ಬೆಂಗಳೂರು ಮಹಾನಗರ ಎಂದರೆ ಏನೆಂದು ಅರಿಯದ ಹಳ್ಳಿಯ ಹುಡುಗಿ ಒಂಟಿಯಾಗಿ ನಗರ ಸೇರಿದ್ದರು. ಅಲ್ಲಿ ಬಾಡಿಗೆಗೆ ಮನೆಯೊಂದನ್ನು ಪಡೆದು, ಮನೆ ಹಾಗೂ ಕಾಲೇಜಿನ ಫೀಸು ತಾನೇ ಭರಿಸಿಕೊಂಡು ಓದತೊಡಗಿದರು. ಎರಡು ವರುಷಗಳ ಕಾಲ ನಿರಂತರ ಕರ್ತವ್ಯಕ್ಕೆ ಹಾಜರಾಗದ ಕಾರಣ ಸರಕಾರಿ ಕೆಲಸ ಕೈತಪ್ಪಿತು. ಆದರೆ ಅವರು ಎದೆಗುಂದಲಿಲ್ಲ. ಕಾಲೇಜಿನಲ್ಲಿ ಉತ್ತಮ ಪ್ರಾಧ್ಯಾಪಕರ ತಂಡವಿತ್ತು. ಅವರ ಸಹಕಾರ ಚೆನ್ನಾಗಿತ್ತು. ಅವರು ತುಂಬಿದ ಮಾನಸಿಕ ಧೈರ್ಯದಿಂದ ಓದಲು ಪ್ರೇರಣೆ ದೊರೆಯಿತು.
ಮುಂದೆ ಅವರ ಪೀ.ಹೆಚ್.ಡಿ ಗುರುಗಳೂ ಆದ ಕಿರಣ್ ರೆಡ್ಡಿ ಮೇಡಂ ಅವರ ಬದುಕಿನ ರೂವಾರಿ ಗುರು ಎಂದರೆ ತಪ್ಪಾಗಲಾರದು. ಅವರಿಗೆ ಸ್ಪೂರ್ತಿಯುತ ಮಾತುಗಳನ್ನು ಹೇಳಿ ಅವರನ್ನು ಮುನ್ನಡೆಸಿದವರು ಕಿರಣ್ ರೆಡ್ಡಿಯವರು. ಅವರ ಮಾತುಗಳು ಪ್ರಮೀಳಾ ಅವರಿಗೆ ಬದುಕಿನ ವೇದವಾಕ್ಯಗಳದವು. ಅವರಿಂದ ಬಹಳಷ್ಟು ಕಲಿತರು ಮತ್ತು ಬೆಳೆದರು. ಅಲ್ಲಿನ ಸರ್ವ ಉಪನ್ಯಾಸಕರ ತಂಡ ಪ್ರಮೀಳಾ ಅವರನ್ನು ಬೆಂಬಲಿಸಿತು. ಅದು ಅವರ ಜೀವನಕ್ಕೆ ಹೊಸ ತಿರುವು ಕೊಟ್ಟಿತು.ತಾನು ಓದುವುದೇ ಅಲ್ಲದೆ ತನ್ನ ತಂಗಿಯನ್ನು ಕೂಡಾ ತನ್ನ ಜೊತೆಗೂ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲೇ ಓದಿಸಿದರು.
ಎಂ.ಬಿ.ಯೆ ಓದುತ್ತಿರುವಾಗ ಅವರಿಗೆ ಹಣಕ್ಕಾಗಿ ತಾನು ಏನಾದರೂ ಬ್ಯುಸಿನೆಸ್ ಮಾಡಬೇಕು ಅನಿಸಿತು. ಕುಶನ್ ಮೇಕಿಂಗ್ ಅಲ್ಲೇ ಕಲಿತಿದ್ದ ಕಾರಣ ಅದನ್ನೇ ಆರಂಭಿಸಿದರು. ಹಲವಾರು ಎಕ್ಸಿಬಿಷನ್ಗಳಲ್ಲಿ ತಾನೇ ತಯಾರಿಸಿದ ವಿವಿಧ ಆಕೃತಿಯ, ಬೇರೆ ಬೇರೆ ಬಣ್ಣಗಳ ನವ ನವೀನ ಮಾದರಿಯ ಕುಶನ್ ಗಳು ಅವರಿಗೆ ಲಾಭವನ್ನೇ ತಂದು ಕೊಟ್ಟವು.
ತನ್ನ ಇಪ್ಪತ್ತ ಒಂಭತ್ತನೆಯ ವಯಸ್ಸಿನಲ್ಲಿ ತನಗೆ ಇಷ್ಟವಾದ ವ್ಯಕ್ತಿ ರಾಕಿ ಲೋಬೋ ಎಂಬವರು ತನಗೆ ದೊರೆತಾಗ ಅವರನ್ನೇ ತನ್ನ ಬಾಳ ಸಂಗಾತಿಯಾಗಿ ಆರಿಸಲು ದೃಢ ಸಂಕಲ್ಪ ಮಾಡಿ ಅವರೊಡನೆ ಮದುವೆಯಾದರು. ಆದರೆ ತನ್ನ ಮದುವೆಗೆ ಅವರು ಯಾವುದೇ ರೀತಿಯಲ್ಲೂ ತಮ್ಮ ಪೋಷಕರ ಆರ್ಥಿಕ ನೆರವು ಪಡೆಯಲಿಲ್ಲ.ಬದಲಾಗಿ ತನ್ನ ಸ್ವಂತ ದುಡಿಮೆಯ ಹಣದಲ್ಲೇ ತಮ್ಮ ಮದುವೆಯ ಖರ್ಚು ನಿಭಾಯಿಸಿದರು.
ಮದುವೆಯ ಬಳಿಕ ಬೆಂಗಳೂರಿನಲ್ಲೇ ಇಬ್ಬರು ಬದುಕು ಕಳೆಯಲು ಪ್ರಾರಂಭಿಸಿದರು. ಒಂದೆರಡು ವರುಷಗಳ ಬಳಿಕ ಪಿಹೆಚ್ ಡಿ ಮಾಡಲು ತಯಾರಿ ಮಾಡಿಕೊಂಡರು ಪ್ರಮೀಳಾ. ಅದಕ್ಕಾಗಿ ಅವರಿಗೆ ಜಿ ಆರ್ ಎಫ್ ಅಂದರೆ ಜೂನಿಯರ್ ರೀಸರ್ಚ್ ಫೆಲೋಶಿಪ್ ಸಿಕ್ಕಿತು. ಅದರ ಜೊತೆಗೆ ಆಗ ಅವರು ಬೇರೆಯೇ ಎರಡು ರೀತಿಯ ವ್ಯಾಪಾರದಲ್ಲಿ ತೊಡಗಿದ್ದರು. ಒಂದು ಅವರದೇ ಆದ ಸ್ಟೇಷನರಿ ಅಂಗಡಿ ನಡೆಸುತ್ತಿದ್ದರು ಮತ್ತು ಅದರೊಡನೆ ಅವರು ಬಿಸ್ಲೇರಿ ನೀರಿನ ಡಿಸ್ಟ್ರಿಬ್ಯೂಟರ್ ಕೂಡಾ ಆಗಿದ್ದರು. ಆ ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿತ್ತು.
ತಾವು ವಾಸಿಸುತ್ತಿದ್ದ ತಮ್ಮ ಬಾಡಿಗೆ ಮನೆಯನ್ನು ತೊರೆದು ಫ್ಲಾಟ್ ಮನೆಗೆ ಹೋದರು. ಈ ಮನೆಗೆ ಮತ್ತು ಅಲ್ಲಿನ ಖರ್ಚಿಗೆ ಅವರ ಈ ಪ್ಯಾಸಿವ್ ಸೋರ್ಸ್ ತುಂಬಾ ಸಹಕರಿಸಿತು. ಈ ಮಧ್ಯೆ ಪಿ ಹೆಚ್ ಡಿ ಮಾಡುತ್ತ ಇರುವಾಗಲೇ ಅವರಿಗೆ ರಿಯಾನ್ ಹಾಗೂ ರಿಶನ್ ಎಂಬ ಇಬ್ಬರು ಮಕ್ಕಳಾದರು. ಅವರ ಲಾಲನೆ ಪಾಲನೆಗಳ ಜೊತೆಗೆ ತಮ್ಮ ವ್ಯವಹಾರ, ವ್ಯಾಪಾರ, ಒಂದೆರಡು ಕಾಲೇಜಿನಲ್ಲಿ ಗೆಸ್ಟ್ ಫ್ಯಾಕಲ್ಟಿ ಆಗಿ ಶಿಕ್ಷಣವನ್ನೂ ನೀಡುವ ಕಾರ್ಯ ಎಲ್ಲದರಲ್ಲೂ ನಿರತರಾಗಿದ್ದರು. ಇದೆಲ್ಲವನ್ನೂ ನಿಭಾಯಿಸಲು ಪತಿಯವರ ಸಹಕಾರವಿತ್ತು. ಅವರ ಸಹಕಾರದಿಂದಲೇ ಎಲ್ಲವನ್ನೂ ನಿಭಾಯಿಸಲು ಸಾಧ್ಯವಾಯಿತು ಎನ್ನುತ್ತಾರೆ ಪ್ರಮೀಳಾ. ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಸ್ತ್ರೀ ಇರುವಂತೆ ಹಲವು ಯಶಸ್ವಿ ಸ್ತ್ರೀಯರ ಬದುಕಿನ ಹಿಂದೆಯೂ ಅವಳ ಪತಿಯ ಸಹಕಾರ ಇರುತ್ತದೆ ಅಲ್ಲವೇ?
ಈಗ ಅವರು ಫೈನಾನ್ಸಿಯಲ್ ಪ್ಲಾನಿಂಗ್ ಮತ್ತು ಜನರಿಗೆ passive ಇನ್ಕಮ್ ನ ಬಗ್ಗೆ ತರಬೇತಿ ಕೊಡುವ ಒಳ್ಳೆಯ ಕಾರ್ಯವನ್ನೂ ಮಾಡುತ್ತಿದ್ದಾರೆ. ಇದರೊಂದಿಗೆ ನಾವು ದುಡಿದ ಹಣವನ್ನು ಸರಿಯಾಗಿ ಬಳಸಿಕೊಂಡು ನಮ್ಮ ಜೀವನವನ್ನು ನೆಮ್ಮದಿಯಿಂದ ಕಳೆಯುವುದು ಹೇಗೆ ಎಂಬುದರ ಬಗ್ಗೆ ಹೇಳಿಕೊಡುವ ಕಾರ್ಯವನ್ನೂ, ಅದಕ್ಕಾಗಿ ಹಲವು ವರ್ಕ್ ಶಾಪ್, ವೆಬಿನಾರ್ ಗಳನ್ನು ಕೂಡಾ ಮಾಡುತ್ತಾ ಇದ್ದಾರೆ. ಪ್ರತಿ ಶನಿವಾರ ಕನ್ನಡ/ ಕೊಂಕಣಿಯಲ್ಲಿ, ಪ್ರತಿ ಭಾನುವಾರ ಇಂಗ್ಲಿಷ್ ನಲ್ಲಿ ಒಂದು ಗಂಟೆ ಯಾವುದೇ ಫೀಸ್ ಪಡೆಯದೆ ಆನ್ಲೈನ್ ಮೂಲಕ ಜನರಿಗೆ ಗೈಡೆನ್ಸ್ ಕೊಡುತ್ತಾರೆ.
ತಿಂಗಳಿಗೆ ಲಕ್ಷಗಟ್ಟಲೆ ದುಡಿಯುವವರಿಗೂ ಕೂಡ ತಾವು ದುಡಿದ ಹಣವನ್ನು ಸರಿಯಾಗಿ ಬಳಸಿಕೊಳ್ಳುವುದು ಹೇಗೆ ಎಂಬ ಅರಿವಿರದೆ ಅವರು ತಮ್ಮ ಜೀವನದಲ್ಲಿ ಸಾಲದ ಮೊರೆ ಹೋಗಬೇಕಾದ ಪರಿಸ್ಥಿತಿ ಬರುತ್ತದೆ. ತಾವು ಎಷ್ಟೇ ದುಡಿದರೂ ದುಡಿಮೆಯ ಹಣ ಸಾಲದೆ ಪರರ ಮುಂದೆ ತಲೆ ತಗ್ಗಿಸುವ ಪ್ರಸಂಗ ಹಲವರಿಗಾದರೆ, ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಆಗದೇ ಬದುಕುತ್ತಿರುವ ಮತ್ತೊಂದು ಪಂಗಡವೆ ಇದೆ. ಇಂತಹ ಜನರಿಗೆ ತಾವೇ ದುಡಿದ ಹಣದ ಸರಿಯಾದ ಬಳಕೆಯನ್ನು ಹೇಗೆ ಮಾಡಬೇಕು, ನಾಳೆಗಾಗಿ ಹೇಗೆ ನಮ್ಮ ಹಣವನ್ನು ನಾವು ತೊಡಗಿಸಿ ಕೊಳ್ಳಬೇಕು, ತಮ್ಮ ಹಣ ಪೋಲಾಗದಂತೆ ಪ್ಲಾನ್ ಮಾಡುವುದು ಹೇಗೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಒಂದು ಮಿಲಿಯನ್ ಜನರಿಗೆ ಮಾಹಿತಿ ತಲುಪಿಸಬೇಕೆಂಬ ಒಂದು ಯೋಜನೆಯನ್ನು ಹಾಕಿಕೊಂಡು ಆ ದಿಸೆಯಲ್ಲಿ ಮುನ್ನಡೆಯುತ್ತಿದ್ದಾರೆ ಪ್ರಮೀಳಾ ಅವರು.
ಪಿ.ಹೆಚ್. ಡಿ. ಮುಗಿದ ಬಳಿಕ ಪಾರ್ಟ್ ಟೈಂ ಆಗಿ ತನ್ನದೇ ಆದ ಒಂದು ಎನ್ ಜಿ ಓ ನಲ್ಲಿ ದುಡಿಯುತ್ತಿರುವ ಇವರು ಒಂದು ಪ್ರೊಜೆಕ್ಟ್ ನಲ್ಲಿ ಕೆಲಸ ಮಾಡುತ್ತಿರುವವರು. ಆ ಪ್ರೊಜೆಕ್ಟ್ ಬಡವರಿಗೆ ಸಹಾಯ ಮಾಡುವ ಬೃಹತ್ತಾದ ಹಾಗೂ ಮಹತ್ವದ ಒಳ್ಳೆಯ ಕೆಲಸವನ್ನು ಮಾಡುತ್ತಿದೆ.ಆದರೆ ಕೊರೋನಾದಿಂದ ಲಾಕ್ ಡೌನ್ ಆದ ಕಾರಣ ಬಡವರನ್ನು ಸಂಪರ್ಕಿಸಲು ಆಗದ ಕಾರಣ ಝೂಮ್ ಮೀಟಿಂಗ್ ಅನಿವಾರ್ಯವಾಗಿ ಮಾಡಬೇಕಾಗಿದೆ. ತಂತ್ರಜ್ಞಾನ ಬಳಸಿ ತಮ್ಮ ಕಾರ್ಯವನ್ನು ಸಕ್ರಿಯಗೊಳಿಸಲು ಹೊರಟಿರುವ ಇವರ ಈ ಸಾಧನೆ ಮಹಾನ್ ಅಲ್ಲವೇ?
ಪ್ರತಿಯೊಬ್ಬರನ್ನೂ ಸಂಪರ್ಕಿಸಲು ಸಾಧ್ಯವಾಗದ ಕಾರಣ ಪ್ರಮೀಳಾ ಅವರು ಫೈನಾನ್ಸಿಯಲ್ ಎಜುಕೇಷನ್ ಸರ್ವರಿಗೆ ಕೊಡಲು ಡಿಜಿಟಲ್ ಕೋರ್ಸ್ ಗಳನ್ನೂ ಪ್ರಾರಂಭಿಸಿದರು. ಎಲ್ಲವನ್ನೂ ಜನರಿಗೆ ಫ್ರೀಯಾಗಿ ಕೊಟ್ಟರೆ ಅದಕ್ಕೆ ಬೆಲೆ ಇರುವುದಿಲ್ಲ. ಜನ ಫ್ರೀ ಆಗಿ ಸಿಕ್ಕಿದ ಯಾವುದನ್ನಾದರೂ ಕಡೆಗಣಿಸುವುದು ಹೆಚ್ಚು. ಆದ ಕಾರಣ, ಮತ್ತು ತಮ್ಮ ಬದುಕಿಗೂ ಸಹಾಯ ಆಗಲೆಂದು ಕಡಿಮೆ ಬೆಲೆಯಲ್ಲಿ ವಿವಿಧ ಬಗೆಯ ಹದಿನೈದು ಕೋರ್ಸ್ ಗಳನ್ನು ಡಿಜಿಟಲೀಕರಣ ಮಾಡಿ ಕಡಿಮೆ ಬೆಲೆಗೆ ಇವರ ಮೂಲಕ ನೀಡಲಾಗುತ್ತಿದೆ. ನಮ್ಮಲ್ಲಿರುವ ಹಣದ ಸದ್ಬಳಕೆ ಹೇಗೆ, ಆದಷ್ಟು ಬೇಗ ಹಣ ಮಾಡಿಕೊಂಡು ನಮಗೆ ನಾವೇ ಕೆಲಸದಿಂದ ರಿಟೈರ್ಮೆಂಟ್ ಪಡೆದು ಆರಾಮದ ಬದುಕು ನಡೆಸುವುದು ಹೇಗೆ, ಸಾಲಗಳಿಲ್ಲದೆ ಬದುಕುವುದು ಹೇಗೆ, ತಮ್ಮ ಕನಸುಗಳ ಸಾಕಾರಗೊಳಿಸುವ ಬಗೆ ಹೇಗೆ, ಕಡಿಮೆ ದುಡಿಯುವವರು ತಮ್ಮ ಜೀವನ ಕ್ರಮಗಳನ್ನು ಉತ್ತಮ ಪಡಿಸಿಕೊಳ್ಳುವುದು ಹೇಗೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಹೇಳಿ ಕೊಡುವ ಹಣದ ಬಗೆಗಿನ ಶಿಕ್ಷಣವನ್ನು ಶಾಲಾ ಕಾಲೇಜುಗಳಿಗಿಂತ ಭಿನ್ನವಾಗಿ ಹೇಳಿ ಕೊಡುವ ಕಾರ್ಯ ಇವರದು.
ತಮ್ಮ ದುಡಿತದ ಹಣವನ್ನು ಸರಿಯಾದ ರೀತಿಯಲ್ಲಿ ವ್ಯಯ ಮಾಡಿ ಜೀವನವನ್ನು ಸಂತಸದಿ ಕಳೆಯುವ ಈ ಯೋಜನೆಯನ್ನು ಶಾಲಾ ಕಾಲೇಜಿನ ಶಿಕ್ಷಕರಿಗೆ ಹೆಚ್ಚಾಗಿ ಹೇಳಿ ಕೊಡುವ ಕಾರ್ಯವನ್ನೂ ಇವರು ಮಾಡುತ್ತಿದ್ದಾರೆ. ಕಾರಣ ಶಿಕ್ಷಕರು ತಾವು ಕಲಿತು ತಮ್ಮ ವಿದ್ಯಾರ್ಥಿಗಳಿಗೂ ಕಲಿಸಿ ಕೊಟ್ಟಾಗ ಅವರ ಜೀವನದಲ್ಲೂ ಹಣದ ಸದ್ಬಳಕೆ ಮಾಡಿಕೊಂಡು ಅವರೂ ಕೂಡಾ ತಮ್ಮ ಜೀವನವನ್ನು ನೆಮ್ಮದಿಯಿಂದ ಉತ್ತಮವಾಗಿ ನಿರ್ವಹಿಸಲಿ ಎಂಬ ಸದುದ್ದೇಶ ಇವರದಾಗಿದೆ.
ಮರಿಯಾ ಪ್ರಮೀಳಾ ಅವರು ತಮ್ಮ ಒಂದು ಮಿಲಿಯನ್ ಜನರಿಗೆ ಸಹಾಯ ಮಾಡುವ ಯೋಜನೆಯನ್ನು ಬೇಗ ತಲುಪುವಂತಾಗಲಿ, ಅವರಿಂದ ಇನ್ನೂ ಹೆಚ್ಚು ಜನರಿಗೆ ಸಹಾಯ ಸಿಗಲಿ, ಬದುಕಲ್ಲಿ ನೋವು ಸಾಲ ಕಡಿಮೆ ಆಗುವಂತಾಗಲಿ, ಅವರ ಕಾರ್ಯ ಇನ್ನಷ್ಟು ಯಶಸ್ಸು ಪಡೆದು ಸರ್ವರಿಗೆ ಸಿಗುವ ಹಾಗಾಗಲಿ, ಅವರ ಜೀವನ ಸುಖಮಯವಾಗಿ ಸಾಗಲಿ, ಹಲವು ಜನರಿಗೆ, ಬಡವರಿಗೆ ಅವರಿಂದ ಸಹಾಯ ಸಿಗುವಂತಾಗಲಿ ಎನ್ನುವ ಆಶಯ ನಮ್ಮದು. ನೀವೇನಂತೀರಿ?
@ಪ್ರೇಮ್@
04.06.2021
(ನಿಮಗೂ ಫೈನಾನ್ಸಿಯಲ್ ಅಡ್ವೈಸ್ ಬೇಕೆಂದರೆ ಪ್ರಮಿಳರನ್ನು 89048 20166 ಈ ಮೊಬೈಲ್ ಸಂಖ್ಯೆಯ ಮೂಲಕ ಸಂಪರ್ಕಿಸಿ.)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ