ಸೋಮವಾರ, ನವೆಂಬರ್ 29, 2021

ಬಾಳ ಕವನ

ಬಾಳ ಕವನ

ನಾವಿಷ್ಟ ಪಡೋರು ನಮ್ಗೆ ಸಿಗಲ್ಲ
ನಮ್ಮನ್ನು ಇಷ್ಟ ಪಡೋರಲ್ಲಿ ನಮ್ಗೆ ಪ್ರೀತಿ ಹುಟ್ಟೊಲ್ಲ
ಪ್ರೀತಿಸೋರು ಕೈಗೆ ಸಿಗಲ್ಲ
ಜೊತೇಲಿ ಇರೋರು ಪ್ರೀತಿ ಕೊಡಲ್ಲ
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
ಹತ್ತಿರ ಹೋದ ಮೇಲೆ ಎಲ್ಲವೂ ಕಷ್ಟವೇ!

ಬದುಕು ನಾಲ್ಕು ದಿನ
ಹೊಂದಾಣಿಕೆ ಮೂರು ದಿನ
ಅಡಿಗರೆಂದಂತೆ ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ
ಬದುಕ ದಿನವೆಲ್ಲಾ ಹೋರಾಟ ಕದನ
ನ್ಯಾಯಕ್ಕಾಗಿ ಸದಾ ಹಂಬಲ
ಸಿಗದಾಗ ಕಣ್ಣೀರ ಜಾಲ

ಹುಡುಕೋದು ಹೇಗೋ ನೆಮ್ಮದಿಯ ದಾರಿ
ಹುಡುಕಲು ಹೋದರೆ ತಪ್ಪುವೆವು ದಾರಿ!
ಸರಿಯಾಗದು ಸಾಗಲು ಅಡ್ಡ ದಾರಿ
ಸಿಗದು ಸಂತಸ ಹಿಡಿದರೆ ನೇರ ದಾರಿ!

ಬದುಕು ಇಷ್ಟೇ ದುಃಖ ಕಷ್ಟಗಳ ಸರಮಾಲೆ
ಅಲ್ಲಿ ಒಂದು ಹನಿ ಸಿಹಿ ಜೇನಿನ ಆಸೆ
ಅದೂ ಸಿಗದೆ ಸಾವನ್ನೂ ಲೆಕ್ಕಿಸದೆ
ಮತ್ತೊಂದು ಹನಿಗೆ ಮಾನವನ ದುರಾಸೆ!

ಬಾಳು ಸಾಗಬೇಕು ದೇವನ ಇಚ್ಛೆಯ ಹಾಗೆ
ಸೇರಿಸುವುದು ,ಅಗಲಿಸುವುದು !ಅವನ ಆಲೋಚನೆಯೇ ಹೀಗೆ
ತೃಣವೂ ಚಲಿಸದು ಅವನಾಜ್ಞೆ ಇಲ್ಲದೆ!
ಮಾಡಿದ ಪ್ರತಿ ಕರ್ಮಕ್ಕೆ ಫಲವೂ ಇಲ್ಲಿದೆ!

ಬೇಡವೆಂದರೆ ಬರುವುದು ಬೇಕೆಂದರೆ ಸಿಗದು
ನಾವು ಅಂದುಕೊಳ್ಳುವುದು ಒಂದು
ಅಲ್ಲಿ ಆಗುವುದು ಮತ್ತೊಂದು
ಬಾ ಎಂದರೆ ಹೋಗುವುದು ಬೇಡವೆಂದರೆ ಬಂದು ನಿಲ್ಲುವುದು
ಬೇಕು ಬೇಡಗಳ ನಡುವೆ ಜೀವನ ಸವೆಯುವುದು!

ದಾರಿಯುದ್ದಕ್ಕೂ ಕಲ್ಲು ಮುಳ್ಳುಗಳ ಕಾಟ
ನಡು ನಡುವೆ ರುಚಿಕರ ಸಿಹಿಯೂಟ
ನನ್ನದು ನಿನ್ನದೆನ್ನುವ ಸ್ವಾರ್ಥದ ಪಾಠ
ಇಬ್ಬರ ಜಗಳದಲಿ ಮೂರನೆಯವನ ನೋಟ!

ದೇವನ ಎಣಿಕೆಯೆ ಬೇರೊಂದು ರೀತಿ
ಕೊನೆಗೆ ಬಯಸುವುದು ನಾವೆಲ್ಲ ಶಾಂತಿ
ಸಿಗಲಿ ಸರ್ವರ ಆತ್ಮಗಳಿಗೂ ಸದ್ಗತಿ
ಹಬ್ಬಲಿ ಎಲ್ಲಾ ಕಡೆ ಸರ್ವರ ಕೀರ್ತಿ!
@ಪ್ರೇಮ್@
30.11.2021

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ