ಶುಕ್ರವಾರ, ನವೆಂಬರ್ 3, 2023

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -208

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ - 208

      ಬದುಕಿನಲ್ಲಿ ಗಾಳಿ, ನೀರು, ಅಹಾರಕ್ಕಿಂತಲೂ ಮುಖ್ಯವಾದ ಒಂದು ಭಾವವಿದೆ. ಅದು ಪ್ರೀತಿ. ಮನುಷ್ಯನ ಬದುಕಿನ ಮೂಲ ಬೇರು. ಬಾಳ್ವೆಯ ಇತಿಹಾಸ, ವಿಜ್ಞಾನ, ಗಣಿತದ ಲೆಕ್ಕಾಚಾರ, ಭಾಷಾ ಬಳಕೆ ಎಲ್ಲವೂ. ಶಾಲೆಯಲ್ಲಿ ಮಕ್ಕಳು ನೋಡಿ, ಶಿಕ್ಷಕರು ಕಲಿಸಿದ ಪಾಠ ಬಾರದೆ ಹೋದರೂ, ಪರೀಕ್ಷೆಯಲ್ಲಿ ಒಂದು ಅಂಕವೂ ಬಾರದೆ ಇದ್ದರೂ ತನ್ನ ಪ್ರೀತಿಸುವ ಹುಡುಗಿ ಅಥವಾ ಹುಡುಗನಿಗೆ ಪತ್ರ ಬರೆಯಲು ಬರುತ್ತದೆ ಅವರಿಗೆ. ಅದು ಯಾವ ಯಾವುದಾದರೂ ಕೋಡ್ ಪದ ಬಳಸಿ, ಅದು ಯಾವ ಭಾಷೆಯದಾದರೂ ಅಕ್ಷರ ಬಳಸಿ ತಮ್ಮ ಮನದ ಭಾವನೆಗಳನ್ನು ಪದಗಳ ಅಥವಾ ಚಿತ್ರಗಳ ರೂಪದಲ್ಲಿ ಬಿಂಬಿಸಿ ತಾವು ಅವರ ಪ್ರೀತಿಯನ್ನು ಪಡೆಯಲು ಹಾತೊರೆಯುತ್ತಾರೆ ಅಲ್ಲವೇ? ಇದು ಜೀವಿಗಳಿಗೆ ಪ್ರಕೃತಿ ಸಹಜ ಕೊಡುಗೆ. ಕೋಗಿಲೆ ಹಾಡುವುದು, ನವಿಲು ನರ್ತಿಸುವುದು ಎಲ್ಲವೂ ಪ್ರೀತಿಗಾಗಿ ಅಲ್ಲವೇ? ದುಂಬಿ ಹಾರುವುದು, ಮೋಡಗಳು ಕೂಡುವುದು ಕೂಡ ಹಾಗೆಯೇ. ಇಲ್ಲದೆ ಹೋದರೆ ಮಳೆಯಿಲ್ಲ, ಬೆಳಕಿಲ್ಲ, ಹಸಿರಿಲ್ಲ. ಭೂಮಿ ಸೂರ್ಯನ ಸುತ್ತ ತಿರುಗದೆ ಇದ್ದರೆ, ದಿನಾ ಬೆಳಗ್ಗೆ ಸೂರ್ಯ ಉದಯಿಸಿ ಭೂಮಿಗೆ ಕಾಣಿಸಿ ಕೊಳ್ಳದೆ ಇದ್ದರೆ ಜಗ ಹಸಿರಿನಲ್ಲಿ ಝಗಮಗಿಸಲು ಸಾಧ್ಯವೇ?
         ನಮ್ಮನ್ನು ತುಂಬಾ ಪ್ರೀತಿಸುವವರಿಗೆ ನಾವು ಅವರ ಪರ್ಮಿಷನ್ ಕೇಳಿ ಪ್ರೀತಿ ಮಾಡಲ್ಲ, ಕರೆ ಮಾಡಲ್ಲ, ಕೇರ್ ಮಾಡಲ್ಲ ಅಲ್ವಾ? ನಮಗೆ ಅವರು ಸದಾ ಬೇಕು. ಹಾಗಾಗಿ ನಾವು ಅವರ ಪ್ರೀತಿಯನ್ನು ಯಾರ ಜೊತೆಗೂ ಹಂಚಿ ಕೊಳ್ಳಲು ಇಷ್ಟ ಪಡಲ್ಲ. ಅವರನ್ನು ಬಿಟ್ಟು ಇರುವ, ಬದುಕುವ ಮಾತೇ ಇಲ್ಲ. ಅದು ಬದುಕಿನ ಬಾಂಧವ್ಯ. ಪ್ರೀತಿ ಎಟರ್ನಲ್ ಅಂತಾರೆ ಆಂಗ್ಲರು. ಅದೊಂದು ದೇವ ಗುಣ. ಅದು ಹುಟ್ಟಿದರೆ ಸಾಯದು. ಪ್ರೀತಿ ಪರಿಶುದ್ಧ, ನಿಷ್ಕಲ್ಮಶ. ಭೂಮಿಯ ಮೇಲೆ ಬದುಕುವ ಕೆಲವು ಮಾನವನನ್ನು ಬಿಟ್ಟು ಇತರ ಪ್ರಾಣಿಗಳು ಅದನ್ನು ಅನುಭವಿಸಿ ಬದುಕುತ್ತವೆ. ಮೋಸ, ವಂಚನೆ, ದ್ರೋಹ ಇವೆಲ್ಲ ಮನುಷ್ಯ ಗುಣಗಳು. 
    ಪರಿಶುದ್ಧ ಪ್ರೀತಿಗೆ ಈ ಮನುಷ್ಯ ಗುಣಗಳು ಅಡ್ಡ ಬರಲು ಸಾಧ್ಯವೇ ಇಲ್ಲ. ಅದಕ್ಕೆ ಲೈಲಾ ಮಜ್ನು ಜೋಡಿ ಇಂದಿಗೂ ಪ್ರಖ್ಯಾತ. ಪರಿಶುದ್ಧ ಪ್ರೀತಿ ಒಟ್ಟಿಗೆ ಇರಲು ಬಯಸುತ್ತದೆ, ಮಾನಸಿಕವಾಗಿ. ಅಲ್ಲಿ ದೇಹ ಖಂಡಿತಾ ಮುಖ್ಯ ಅಲ್ಲ. ನಮ್ಮ ದೇಹ ಕೊಳೆತು ನಾರುವ ಮೂಳೆ ಮಾಂಸ ಅಷ್ಟೇ. ಹೆಚ್ಚೆಂದರೆ ನೂರು ವರ್ಷದ ಆಯುಷ್ಯ. ಆದರೆ ಪ್ರೀತಿ ಹಾಗಲ್ಲ. ಜನ್ಮ ಜನ್ಮಾಂತರದ ಬಂಧ . ಅದೊಂದು ನಂಬಿಕೆ, ಅದು ಭರವಸೆ. ಅದು ಒಂದೇ ಎನ್ನುವ ಭಾವ, ಸಮೀಕರಿಸಲು, ಸರಿದೂಗಿಸಲು, ಬಿಡಿಸಲು, ಮಂಡಿಸಲು ಆಗದ, ಇದುವರೆಗೆ ಪೂರ್ತಿಯಾಗಿ ಯಾರೂ ಪದಗಳಲ್ಲಿ ವಿವರಿಸಿ  ಹೇಳಲು ಆಗದ ಖುಷಿ, ನೋವು, ಕಣ್ಣೀರು, ಸುಖ. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ ವರ್ಗಗಳು ಅಲ್ಲಿ ಇರಲೇಬೇಕು. ಅದು ಅತ್ಯುನ್ನತ ಪ್ರೀತಿ. ಎಲ್ಲವನ್ನೂ ಮರೆತು ಮಗುವಿನ ಹಾಗೆ ಪ್ರೀತಿಸುತ್ತಾ, ಪ್ರೀತಿಯಿಂದ, ಖುಷಿ ಕೊಡುತ್ತಾ ಬಾಳುವುದು. ಈ ರೀತಿ ಬದುಕುವ ಮನುಷ್ಯರು ಸಾವಿರಕ್ಕೆ ಒಬ್ಬರು ಸಿಗಬಹುದು ಅಷ್ಟೇ. ಬದುಕಿನಲ್ಲಿ ಅವರು ಸದಾ ಸುಖಿಗಳು. 
 ಆದರೆ ಯಾರು ನಮ್ಮ ಕೇರಿಂಗ್ ಅನ್ನು ಇಷ್ಟ ಪಡಲ್ಲ, ಡಿಸ್ಟರ್ಬ್ ಅಂದುಕೊಳ್ತಾರೆ, ಇವರು ಯಾಕಾದ್ರೂ ಕರೆ ಮಾಡ್ತಾರೋ ಅನ್ನಿಸಿದರೆ, ಅವರಿಗೆ ನಮ್ಮ ಕಾಲ್, ಮೆಸ್ಸೇಜ್ ಕಿರಿ ಕಿರಿ ಅನ್ನಿಸುವುದೋ ಅವರು ನಮ್ಮವರಲ್ಲ. ಅವರು ನಮ್ಮನ್ನು ಮನಸಾರೆ ಪ್ರೀತಿಸುವವರು ಖಂಡಿತಾ ಅಲ್ಲ. ಇಷ್ಟನ್ನು ಮನದಟ್ಟು ಮಾಡಿಕೊಳ್ಳ ಬೇಕು. 
ನಿಜವಾದ ನಿಷ್ಕಲ್ಮಶ ಪ್ರೀತಿ ಬದುಕಿನಾದ್ಯಂತ ಎಲ್ಲವನ್ನೂ ಸಹಿಸುವ ಶಕ್ತಿ ನೀಡುತ್ತದೆ. ಕಾರಣ ನಮ್ಮ ಪಾಯಿಂಟ್ ಪ್ರೀತಿಸುವ ವ್ಯಕ್ತಿ. ಕಾರಣ ಅವರು ನಾಳೆ ನಮ್ಮೊಡನೆ ಇರಬಹುದು ಅಥವಾ ಇಲ್ಲದೆ ಇರಬಹುದು. ಇರುವಷ್ಟು ದಿನ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು, ಕೇರ್ ಮಾಡುವುದು ನಮ್ಮ ಕರ್ತವ್ಯ. ಅದೇ ನಿಜವಾದ ಪ್ರೀತಿ. ಆ ಪ್ರೀತಿ ಸಿಕ್ಕಿದ ಮನುಷ್ಯ ಮಾತ್ರ ಬದುಕನ್ನು ನಿಜವಾಗಿ ಎಂಜಾಯ್ ಮಾಡ್ತಾನೆ. ಇಲ್ಲ ಅಂದರೆ ಪರ್ವತದ ತುದಿಗೆ ಹತ್ತಿ ಎಣ್ಣೆ ಹೊಡೀತಾ, ಸಿಗರೇಟ್ ಸೇದುತ್ತಾ ಅದರಲ್ಲೇ ಖುಷಿ ಪಡ್ತಾ ಇರ್ತಾನೆ. ಹೆಂಗಸರು ಅದೇನೇನೋ ಸಂಘ, ಡಾನ್ಸ್, ಮಹಿಳಾ ಕ್ಲಬ್, ಟೂರ್  ಅಂತ  ಸುತ್ತುತ್ತಾ ಇರ್ತಾರೆ. ನಿಜವಾದ ಪ್ರೀತಿ ಇರುವವರು ನಾನು ಬ್ಯುಸಿ ಎಂದು ಎಂದಿಗೂ ಹೇಳಲಾರರು. ಅದೇ ಮಾತನ್ನು ಪ್ರೀತಿಯಿಂದ ಒಂದು ನಿಮಿಷದಲ್ಲಿ ಮನವರಿಕೆ ಮಾಡಿ ಕೊಡುತ್ತಾರೆ ಅಲ್ಲವೇ? ಬೈಗುಳವನ್ನೂ , ಬುದ್ದಿ ಮಾತುಗಳನ್ನೂ ಅಂದವಾದ ಪದಗಳಲ್ಲಿ ಹೇಳಿದರೆ, ನಿಧಾನವಾಗಿ ಹೇಳಿದರೆ, ಮನ ಮುಟ್ಟುವಂತೆ ಅರ್ಥ ಮಾಡಿಸಿದರೆ ಪ್ರೀತಿ ಕಡಿಮೆ ಆಗುವುದೇ? ಒಟ್ಟಿನಲ್ಲಿ ಮನುಷ್ಯನನ್ನು ನಿಜವಾದ ದಾರಿಯಲ್ಲಿ ಸರಿಯಾಗಿ ಕರೆದುಕೊಂಡು ಹೋಗುವುದು ನಿಷ್ಕಲ್ಮಶ ಪರಿಶುದ್ಧ ಪ್ರೀತಿ ಮಾತ್ರ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
02.10.2023

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ