ಭಾನುವಾರ, ಡಿಸೆಂಬರ್ 15, 2024

ಬರಹ

ಬರಹ

ಬರೆದೆನೆನುತ ಮೆರೆಯದಿರು 
ತಲೆಬರಹವ ನೀ ಮರೆಯದಿರು
ಹಣೆಬರಹವ ನಾ ಓದಲಾರೆ 
ಭಾವಗಳ ತೊಳಲಾಟ ನೀಗಲಾರೆ

ಬರಹ ಓದುವಂತಿರಲಿ
ನಗೆಯ ಉಕ್ಕಿಸೋ ಶಕ್ತಿ ಇರಲಿ
ಕಹಿಯ ಮರೆಸೋ ಮೌನವಿರಲಿ
ಸಿಹಿಯ ಕೊಡುವ ಪದಗಳಿರಲಿ

ಭಯದ ಗುಣವು ಓಡುತಿರಲಿ 
ಬಡವರನ್ನು ಎತ್ತುವಂತಿರಲಿ
ಬಡತನವನ್ನು ಅಳಿಸಿ ಬಿಡುವ
ಬಡಬಾಗ್ನಿಯು ತುಂಬಿರಲಿ

ಕಡು ಕೆಲಸದ ಕೆತ್ತನೆಯ
ನಡು ಬಿಸಿಲಿನ ಬೆವರ ಹನಿಯ
ಬಿಡುವಿಲ್ಲದ ಬಿದಾರದೊಳಗೆ
ಬೀಡು ಬಿಟ್ಟ ಹಸಿದ ಉದರ 
ಇದರ ಕೆಲಸ ಅನುರಣಿಸಲಿ
ಬರೆದ ಬರಹ ಮಾಸದಿರಲಿ

ತನುಮನವ ಬೆಸೆದಿರಲಿ
ಕನಸ ಗೂಡು ಮುಟ್ಟುತ್ತಿರಲಿ 
ಚಟ ಪಟ ಸಿಡಿಸೋ ಮಾತಿದು
ದುಡ್ಡಿನ ಗುಣ ತಿಳಿದಿರಲಿ

ಪರರ ಮೇಲೆ ಕರುಣೆ ಬರಲಿ
ಜಾತಿ ಮಾತವ ಕಿತ್ತೊಗೆಯಲಿ
ಮೇಲು ಕೀಳು ಹೊಡೆದೋಡಿಸಿ
ಮಾನವತೆಯ ಬೆಳೆಸಿಕೊಳಲಿ

ತರ ತರದ ಮದ್ದು ಇರಲಿ
ಪರ ಪರ ಕೆರೆಯೋನಿಗೂ ಸುಖವಿರಲಿ
ವರವನು ಕೊಡೋ  ದೇವನಿಗೆ ಕೇಳಿಸಲಿ
ಬರಹದುಸಿರು ಶಾಶ್ವತ ಇರಲಿ
@ಹನಿಬಿಂದು@
15.12. 2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ