ನೀನೆನಗೆ ನಾನಿನಗೆ
ಮುಸ್ಸಂಜೆಯ ಇಳಿ ಹೊತ್ತಿನಲಿ
ಸೂರ್ಯನೂ ಭೂಮಿಯೊಳಗೆ
ಜಾರಿ ಹೋಗಿ ಅವಿತು ಕೂರುವ!
ಇಳಿವಯಸ್ಸಿನ ಜೀವ ನಮ್ಮದು
ನಾವಿಬ್ಬರೊಂದೇ ಎಂದು ಸಾರುವ!
ಮಕ್ಕಳಿಹರು ಮೊಮ್ಮಕ್ಕಳಿಹರು,
ಅವರ ಕಾರ್ಯವು ಅವರವರಿಗೆ!
ಪ್ರೀತಿಯಿಂದಲಿ ಸಲಹಿ ಕಾಯಲು
ಬಾಳ ಸಂಗಾತಿಯು ಜೊತೆಜೊತೆಗೆ!
ನೋವಿನಲ್ಲೂ ನಲಿವಿನಲ್ಲೂ
ನಿನಗೆ ನಾನು ನನಗೆ ನೀನು!
ತಾಳಿ ಕಟ್ಟಿ ಭಾಷೆ ನೀಡಿದ
ಮಧುರ ಕ್ಷಣವದು ಮರೆವುದೇನು!?
ಊರು ಬಿಡಲಿದೆ ಕಾಡು ಕರೆದಿದೆ
ದೇವ ಲೋಕವು ನಮಗೆ ಕಾದಿದೆ!
ಪ್ರೀತಿಗಿಲ್ಲವು ವಯಸ್ಸ ಹಂಗದು,
ಜವಾಬ್ದಾರಿಯ ಜಾರ ಕೂಡದು!
ಉಸಿರಾಡುವವರೆಗೆ ನಾನಿರುವೆ ನಿನಗೆ
ಉಸಿರು ನಿಲ್ಲಲು ಭೇಟಿ ಕೊನೆಗೆ!
ಸ್ವರ್ಗ ನರಕವ ಕೂಡಿ ನೋಡಿ
ಬಿಡಲು ಬದುಕಿನ ತುಂಬಿದ ಗಾಡಿ!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ