ಶನಿವಾರ, ಮೇ 11, 2019

1007. ಭೀಮರಾವ್ ಅಂಬೇಡ್ಕರರಿಗೆ

ಭೀಮರಾವ್ ಅಂಬೇಡ್ಕರರಿಗೆ

ಓ ಬಲಭೀಮ, ಓದಿ ಓದಿ ಓದಿ
ಹಲವಾರು ದೇಶಗಳನೂ ಸುತ್ತಿ
ಕೋಶಗಳನೆಲ್ಲ ತಲೆಯೊಳಗೆ ತುಂಬಿ,
ಕಿತ್ತಾಡುವ ಭಾರತೀಯರಿಗೆ ಬರೆದೆಯಲ್ಲ ಸಂವಿಧಾನ!

ನೀನೇನೋ ಚೆನ್ನಾಗಿಯೇ ಬರೆದೆ,
ಆದರದನು ತಿದ್ದಿ ತಿದ್ದಿ ಬದಲಾಯಿಸಿದರು!
ತಿದ್ದುತ್ತಲೇ ಇರುವರು ತಮಗೆ ಬೇಕಾದಂತೆ!
"ಕಾಲ ಬದಲಾಗಿದೆ, ತಂತ್ರಜ್ಞಾನ ಬೆಳೆದಿದೆ
ಜಾತಿ ಪದ್ಧತಿ ನಿರ್ಮೂಲನವಾಗಿರಬಹುದು"
ಹೀಗೆಂದು ನೀ ಯೋಚಿಸಲೇ ಬೇಡ!

ಅಂದು ನಿನ್ನ ಜಾತಿಯವರಿಗಿದ್ದ ಹೀಯಾಳಿಕೆ ಇಂದಿಲ್ಲದಿರಬಹುದು!
ಆದರೆ ಗುಂಪು ಗುಂಪಾಗಿ ಜಾತಿಪದ್ಧತಿ ಇನ್ನೂ ಇದೆ!
ಮದುವೆ ಮುಂಜಿಗಾಗಿ ಅಲ್ಲದಿದ್ದರೂ
ರಾಜಕೀಯಕ್ಕಾಗಿ ಜಾತಿಯಿದೆ!

ನೀನಂದು ನಿಮ್ಮವರಿಗಾಗಿ ಕೊಟ್ಟ
ಹತ್ತು ಹಲವು ಸೌಕರ್ಯ ಪಡೆಯಲು
ಇಂದೂ ಹಲವಾರು ಜಾತಿಗಳು ಹೆಣಗುತ್ತಿವೆ!
ನ್ಯಾಯವಾಗಿ ಸಿಗಬೇಕಾದವರಿಗೆ ಸಿಗುತ್ತಿಲ್ಲ!
ಪಡೆಯಬೇಕಾದವರು ಪಡೆಯುತ್ತಿಲ್ಲ!
ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎನ್ನುವಂತಾಗಿದೆ!

ನಿನ್ನ ಕನಸುಗಳು ನನಸಾಗಿ ಜನ ಉದ್ಧಾರವಾಗಿದ್ದಾರೆ ಅಂದುಕೊಳ್ಳಬೇಡ!
ಜನರಿನ್ನೂ ಸರಾಯಿ ಕುಡಿಯುವುದ ಬಿಟ್ಟಿಲ್ಲ!
ಕುಡಿತಕ್ಕಾಗಿ ತಮ್ಮ ಓಟು ಮಾರುವುದನ್ನೂ ಬಿಟ್ಟಿಲ್ಲ!

ಕಾಲ ಮುಂದುವರೆದಿದೆ ಅಷ್ಟೆ!
ಜನರಿಗೆ ವಿದ್ಯಾಭ್ಯಾಸವಿದೆ, ಹಾಲಿನಂಥ ಬುದ್ಧಿ ಹಾಳಾಗಿದೆ!
ಹಿಂದು-ಮುಸ್ಲಿಂ ಎಂಬ ಗಲಾಟೆ,
ನೀರಿಗಾಗಿ, ಜಾಗಕ್ಕಾಗಿ, ಹೆಣ್ಣಿಗಾಗಿ,
ಅಷ್ಟೇ ಏಕೆ ಮಣ್ಣಿಗಾಗಿ,ಹೆಂಡಕ್ಕಾಗಿಯೂ ಗಲಾಟೆ!
ಓಟಿಗಾಗಿ, ನೋಟಿಗಾಗಿ, ಬಿಡು, ಅದು ಇದ್ದೇ ಇದೆ!

ಕುರ್ಚಿಯಾಸೆ ಯಾರನ್ನಾದರೂ ಬಿಡುವುದೇ?
ನೀ ಬಂದರೆ ಬೇಸತ್ತು ಸ್ವರ್ಗಕ್ಕೇ ಓಡುವೆ!
ಮುಂದುವರಿದ ಜನರ ಬದುಕ ಕಂಡು,
ನಿನ್ನ ಸಂವಿಧಾನದ ಹೀನಾಯ ಬಳಕೆ ಕಂಡು!
ಭಾ-ರತದ ಜಾತಿ ವ್ಯವಸ್ಥೆ ಕಂಡು!
@ಪ್ರೇಮ್@
11.05.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ