ಗುರುವಾರ, ಮೇ 30, 2019

1022. ಅಜ್ಜಿಯ ಅಭ್ಯಂಜನ

ಅಜ್ಜಿಯ ಅಭ್ಯಂಜನ

ನನ್ನಯ ಮೆಚ್ಚಿನ ಬೊಜ್ಜಿನ ಅಜ್ಜಿಯ
ಅಭ್ಯಂಜನವದು ಸಜ್ಜಿನಲಿ..

ಸಣ್ಣದಾದ ಲೋಟದಿ ಎಣ್ಣೆಯ ತಂದು
ತಣ್ಣನೆ ಕಣ್ಣಿಗೂ ಸರಿ ಮಾಲೀಸು..
ಬೆನ್ನಿನ ಭಾಗಕೆ ತಿಕ್ಕಲು ಮೊಮ್ಮಕ್ಕಳು
ನಕ್ಕಳು ಅಜ್ಜಿ ಕಚಗುಳಿಯಾಗಲು..

ಎಣ್ಣೆಯ ಹಚ್ಚಿ, ಸುಣ್ಣವ ಹಾಕಿ
ಎಲೆ ಅಡಿಕೆಯ ರುಚಿ ನೋಡಲು ಬೇಕು..
ಅಜ್ಜಿಯ ಸ್ನಾನ ಮಕ್ಕಳಿಗೆಲ್ಲ ವ್ಯಂಗ್ಯದ ಮಾತು,
ಅಜ್ಜಿಯ ಕಡೆಗೇ ನೆಟ್ಟ ನೋಟವೇ ನೋಡು!

ಅರ್ಧ ಗಂಟೆಯಲಿ ಎಲೆ ಅಡಿಕೆಯು ಮಾಯ..
ಮತ್ತೆ ಸ್ವಲ್ಪ ದೂರ ನಡೆದಾಟ..
ನಂತರ ತಣ್ಣೀರು ಜೋಡಿಸಿಕೊಳ್ಳವ ಪರಿ..
ತದನಂತರ ಬಿಸಿ ನೀರಿಗೆ ತಣ್ಣೀರು ಬೆರೆಸುವ ಕಾರ್ಯದ ವೈಖರಿ!

ಇನ್ನೂ ಪ್ರಾರಂಭವಾಗದು ಸ್ನಾನದ ಕೆಲಸ!
ಮತ್ತೆ ನೊರೆಕಾಯ ತಂದು ಗುದ್ದಿ ಗುದ್ದಿ
ಬೀಜ ತೆಗೆದು ನೀರಿಗೆ ಹಾಕಿ ಕಿವುಚಲುಂಟು,
ತದನಂತರ ಕಡಲೆ ಹಿಟ್ಟಿನ ಪಾಕ ಮಾಡಲುಂಟು..

ಇದೀಗ ಪ್ರಾರಂಭ, ಹೊಟ್ಟೆಯಿಂದ ಕಾಲಿನವರೆಗೆ
ನಖ ಶಿಖಾಂತ ಶುದ್ಧೀಕರಣ ಕಾಯಕ!
ಕಲ್ಲು, ತೆಂಗಿನ ನಾರು, ಪ್ಲಾಸ್ಟಿಕ್ ಜುಂಗು
ಎಲ್ಲವುಗಳ ಬಳಕೆ, ಕಾಲು, ಕೈ, ಬೆನ್ನುಜ್ಜಲು!!
ಒಂದಲ್ಲ ಎರಡು ಜನ ಬೇಕು ಬೆನ್ನುಜ್ಜಲು!

ನಾಲ್ಕು ಬಕೀಟು ನೀರು ಮುಗಿದ ಬಳಿಕ
ಸಮಾಧಾನದ, ಶುಚಿಯಾದ ನಿಟ್ಟುಸಿರು!
ಬಟ್ಟೆ ಹಿಡಿದುಕೊಂಡು ಓಡಬೇಕು ಮೊಮ್ಮಕ್ಕಳು ಒಂದಾದ ಮೇಲೊಂದು!

ಅಜ್ಜಿಯ ಮಜ್ಜನ, ಅಜ್ಜ ಸಹಿಸುವ ಸಜ್ಜನ!
ಲಜ್ಜೆಯ ಅಜ್ಜಿಯ ಎಣ್ಣೆಯ ಅಭ್ಯಂಜನ!!
@ಪ್ರೇಮ್@
24.05.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ