ಗುರುವಾರ, ಮೇ 2, 2019

978. ಬಾಳು ಬೆಳಗಿತು

ಹತ್ತು ವರುಷಗಳ ಹಿಂದೆ ಶಿಕ್ಷಕಿಯರೆಲ್ಲ ಸೇರಿ ಸೆರಗಿನಲ್ಲೆಲ್ಲ  ಪೈಂಟ್ ಹಚ್ಚಿಸಿಕೊಂಡು ಬರೆದ ಬಣ್ಣ ಬಣ್ಣದ ರಂಗೋಲಿ ತನ್ನ ಬಣ್ಣ ಮಾಸಿ ಡಲ್ ಅನ್ನಿಸಿತು ಒಳಗಡಿಯಿಡುವಾಗ ರತ್ನಳಿಗೆ! ರತ್ನ ಈಗ ಬಂದು ಒಳ ಹೊಕ್ಕುತ್ತಿರುವ ವಿದ್ಯಾ  ವಿಕಾಸ ಖಾಸಗಿ ಪ್ರೌಢ ಶಾಲೆ ಮಹದಾಪುರ ಇಲ್ಲಿ ಮೊದಲ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ ಮೊದಲ ರ್ಯಾಂಕಿನ ಹುಡುಗಿಯಾಗಿದ್ದಳು.ಅದು ಹತ್ತು ವರುಷಗಳ ಹಿಂದಿನ ಮಾತು! ಇಂದು ಅದನ್ನು ಸಾರಲಿಕ್ಕಿರುವುದು ಶಾಲೆಯ ಹೊರಗೆ ಉದ್ದವಾಗಿ ನೇತು ಹಾಕಿದ ಪ್ರಥಮ ರ್ಯಾಂಕಿನ ವಿದ್ಯಾರ್ಥಿಗಳ ಪಟ್ಟಿ. ಅದರಲ್ಲಿ ರತ್ನನ ಹೆಸರೂ ಹತ್ತು ವರುಷಗಳ ಹಿಂದಿನ ವರುಷ ಬರೆದು ನೇತು ಹಾಕಲಾಗಿತ್ತು!

    "ಆಗ ಆ ಶಾಲೆಯಲ್ಲಿ ನಾನೇ ರಾಣಿ! ನನ್ನ ಮಾತೇ ಇಲ್ಲಿ ನಡೆಯುತ್ತಿತ್ತು! ಎಲ್ಲಾ ಶಿಕ್ಷಕರು ನನ್ನನ್ನು ಅದೆಷ್ಟು ಪ್ರೀತಿ, ವಾತ್ಸಲ್ಯದಿಂದ ಕಾಣುತ್ತಿದ್ದರು! ನಾವಿಲ್ಲದೆ ಯಾವ ಕಾರ್ಯಕ್ರಮವೂ ಇರಲಿಲ್ಲ ಇಲ್ಲಿ.." ರತ್ನಳ ಮನಸ್ಸು ಹತ್ತು ವರುಷ ಹಿಂದಕ್ಕೋಡಿ ಅವಳು ಚಿಕ್ಕ ಹುಡುಗಿಯೇ ಆಗಿದ್ದಳು!

       ಇಪ್ಪತ್ತಾರು ವರುಷದ ರತ್ನಕ್ಕಳಿಗೀಗ ಜೀವನ ಬೇಸರವಾಗಿದೆ. ಇಷ್ಟೇನಾ ಜೀವನ ಎನಿಸಿಬಿಟ್ಟಿದೆ! ಅಂದು ನಕ್ಕು ನಲಿದ, ಕುಣಿದು ಕಳೆದ ಸಂತಸದ ಕ್ಷಣಗಳು ಈಗಿಲ್ಲ, ಬದಲಾಗಿ ಅಂಕಗಳಿಂದ ಮಣ್ಣಾಂಗಟ್ಟಿ ಏನೂ ಸಾಧಿಸಲು ಸಾಧ್ಯವಿಲ್ಲವೆಂಬ ಕಟುಸತ್ಯದ ಅರಿವು ರತ್ನಕ್ಕನಿಗೀಗ ಆಗಿದೆ!

     ಹೌದು, 2007ನೇ ಇಸವಿ. ಸರಿಸುಮಾರು ಹತ್ತು ವರುಷಗಳ ಹಿಂದೆ! ಎಸ್. ಎಸ್. ಎಲ್.ಸಿ ಯ ಫಲಿತಾಂಶಕ್ಕಾಗಿ ಎಲ್ಲರೂ ಕಾಯುತ್ತಿದ್ದರು ಆ ದಿನ ಬಂತು! ಇದುವರೆಗೆ ಯಾರೂ ಪಡೆಯದ 625ರಲ್ಲಿ 621 ಅಂಕಗಳನ್ನು ಪಡೆದು ರಾಜ್ಯಕ್ಕೇ ಪ್ರಥಮ ರ್ಯಾಂಕ್ ಪಡೆದಿದ್ದ ರತ್ನಳ ಫೋಟೋ ಮರುದಿನದ ಎಲ್ಲಾ ದೈನಿಕಗಳಲ್ಲೆಲ್ಲ ರಾರಾಜಿಸುತ್ತಿತ್ತು. ರಾಜ್ಯಕ್ಕೆ ಮೊದಲ ರ್ಯಾಂಕ್! ಶಿಕ್ಷಕರು, ಪೋಷಕರು, ಗೆಳತಿಯರು ಹೊಗಳಿದ್ದೇ ಹೊಗಳಿದ್ದು! 

       ತದನಂತರ ರತ್ನಳ ಜೀವನದಲ್ಲಿ ನಡೆದುದೆಲ್ಲವೂ ಆಯೋಮಯ! ಆಶ್ರಮಕ್ಕೆ ಸೇರಿ ತನ್ನ ವಿದ್ಯಾಭ್ಯಾಸ ಮುಂದುವರೆಸಿ, ತನ್ನ ಕಾಲ ಮೇಲೆ ತಾನು ನಿಲ್ಲ ಬೇಕೆಂದಿದ್ದ ರತ್ನಳ ಬಾಳಲ್ಲಿ ಬಾಳು ಕೊಡುವೆನೆನುತ ರವಿಯ ಆಗಮನವಾಯ್ತು! ತನ್ನ ಬೆಳಕಿಲ್ಲದ ಬಾಳಲ್ಲಿ ರವಿಯುದಯವಾಯ್ತೇನೋ ಎಂದು ಸಂಭ್ರಮಿಸಿದ ರತ್ನಳಿಗೆ ಗೊತ್ತಿರಲಿಲ್ಲ, ತನ್ನ ಬಾಳಿನಲ್ಲೂ ಒಂದು ಗ್ರಹಣ ಬರಲಿದೆಯೆಂದು! ಪೋಷಕರ ಒಪ್ಪಿಗೆ ಪಡೆದು ಅಂದದ, ಬುದ್ಧಿವಂತ ರತ್ನನನ್ನು ಕಾಲೇಜು ವಿದ್ಯಾಭ್ಯಾಸ ಮುಗಿದ ಕೂಡಲೇ ಮದುವೆಯಾಗಿ ದೂರದ ಅಲಹಾಬಾದಿಗೆ ಕರೆದೊಯ್ದ ರವಿ!

       ಹೊಸ ಊರು, ಹೊಸ ಜನರ ನಡುವೆ ಅಪರಿಚಿತೆ ರತ್ನ ಕಾಲ ಕಳೆಯಲು ಅಡಿಯಿಟ್ಟಳು. ತನ್ನ ಕನಸನ್ನೆಲ್ಲ ಬದಿಗೊತ್ತಿ, ತನ್ನ ಗಂಡನ ಕೆಲಸಕ್ಕೆ ನೆರವಾಗುವಂತೆ, ಮನೆಯ ಜವಾಬ್ದಾರಿ ಹೊತ್ತಳು!

    ದೇವರು ದಯೆ ಕೊಟ್ಟಂತೆ ಪುನ: ಹಿಂದಕ್ಕೂ ಪಡೆಯುವನಂತೆ! ಮದುವೆಯಾಗಿ ಮೂರೇ ವರುಷದ ಬಳಿಕ ಕೆಲಸಕ್ಕೆ ಹೋದ ರವಿ ಹಾರ್ಟ್ ಅಟ್ಯಾಕ್ ನಿಂದ ಹಿಂದೆ ಬರಲೇ ಇಲ್ಲ! ಸುಂದರ ಕನಸುಗಳು ಸುಟ್ಟು ಹೋದಂತಾದ ರತ್ನಳ ಬಾಳಲ್ಲಿ ವಿದ್ಯೆಯೊಂದನ್ನು ಬಿಟ್ಟು ಉಳಿದುದು ರವಿಯ ನೆನಪುಗಳು ಮಾತ್ರ! ಅದಾಗಲೇ ಅವಳು ಹತ್ತನೇ ತರಗತಿ ಮುಗಿಸಿ ಆರೇಳು ವರುಷಗಳಾಗಿತ್ತು! ದುಡಿಯಲೇ ಬೇಕಾದ ಜೀವನ! 

   ರತ್ನ ಎದೆಗುಂದಲಿಲ್ಲ, ತನ್ನ ಜೀವನ ಸಾಗಿಸಲು ಮುಂದಾದಳು! ತನ್ನ ಕಾಲ ಮೇಲೆ ತಾನು ನಿಲ್ಲಲು ಪ್ರಯತ್ನಪಟ್ಟು ಅಲ್ಲಲ್ಲಿ ಕೆಲಸಕ್ಕೆ ಸೇರಿಕೊಂಡದ್ದಾಯ್ತು! ಆದರೆ ಹಲವಾರು ಅಡೆತಡೆಗಳು ಅಲ್ಲಿ! ಬೇರೆ ಕಡೆ ಪ್ರಯತ್ನಿಸೋಣವೆಂದು ತಾನು ಕಲಿತ ಶಾಲೆಗೆ ತನ್ನ ರೂರಲ್ ಹಾಗೂ ಕನ್ನಡ ಮಾಧ್ಯಮದ ಸರ್ಟಿಫಿಕೇಟ್ಗಾಗಿ ಬಂದಿದ್ದಳು ರತ್ನ!

     ಇನ್ನೇನು ಮುಂದಡಿಯಿಡಬೇಕು! ಏನು ಬೇಕು? ಕಂಚಿನ ಕಂಠ ಬಂದತ್ತ ತಿರುಗಿದಳು ರತ್ನ! ಹೌದು ,ಈ ಸೌಂಡು ನನಗೆ ಹೊಸತಲ್ಲ ಎನಿಸಿತವಳಿಗೆ! ತನಗೆ ನಾಲ್ಕು ವರುಷಗಳ ಹಿಂದೆ ನಿತ್ಯ ಫೋನ್ ಮಾಡಿ ನನ್ನನ್ನು ಮದುವೆಯಾಗು, ನಿನ್ನ ರಾಣಿ ತರಹ ನೋಡಿಕೊಳ್ಳುತ್ತೇನೆಂದು ಹೇಳುತ್ತಿದ್ದ ರಾಮಾಕಾಂತನದು! 

    ಮನೆಯವರ ಒತ್ತಾಯಕ್ಕೆ ಮಣಿದು, ರಾಮಾಕಾಂತನನ್ನು ಮರೆತು ರವಿಯನ್ನು ಮದುವೆಯಾಗಿ ಆಗಿತ್ತು! ರವಿ ಆ ಊರಿನ ಸಿರಿವಂತರೊಬ್ಬರ ಮಗನಾಗಿದ್ದು, ತಾನು ನಡುವೆ ಹೋದರೆ ಅನಾಹುತವಾಗಲಾರದೆಂದು  ಸುಮ್ಮನಿದ್ದು ತದನಂತರ ತಾನೊಪ್ಪಿದ ಅಂದದ ಹೆಣ್ಣನ್ನು ಮದುವೆಯಾದ. ರತ್ನಳ ಬ್ಯಾಡ್ ಲಕ್ ತನ್ನ ಜೀವನ ಬೇಗ ಬರಡುಗೊಳಿಸಿದಲ್ಲದೆ, ಯಾರನ್ನೋ ಮದುವೆಯಾಗಿ ಚೆನ್ನಾಗಿರಬೇಕು ಅಂದುಕೊಂಡ ಕನಸು ನನಸಾಗಲೇ ಇಲ್ಲ!

    ಇದೀಗ ಕನ್ನಡ ಮಾಧ್ಯಮ ಹಾಗೂ ರೂರಲ್ ಪ್ರಮಾಣ ಪತ್ರಕ್ಕೆ ಬಂದಾಗ ಅವಳನ್ನು ನೋಡಿದ ರಮಾಕಾಂತನಿಗಾದ ಸಂತಸ ಅಷ್ಟಿಷ್ಟಲ್ಲ! ತಂದೆ ತೀರಿದ ಬಳಿಕ ಡಿಪ್ಲಮೋ ಮುಗಿಸಿದ ಅವನಿಗೆ ತಂದೆಯ ಕೆಲಸ ಅವನನ್ನು ಹುಡುಕುತ್ತಾ ಬಂತು!

       ತನ್ನ ಹುಡುಗಿಯನ್ನು ಕಂಡ ಸಂತಸ ಹಾಗೂ ಬೇಸರ  ಅಲ್ಲೇ ಕುಳಿತುಬಿಟ್ಟ! ತನ್ನ ಕೈಲಿ ಅವಳ ಕೈ ಹಿಡಿದು ನೀ ಇಲ್ಲೇ ಇರುವೆಯಾ? ನಿನ್ನ ಜೀವನ ಮತ್ತು ನನ್ನ ಜೀವನ ಒಂದಾಗಲಿ ಎಂದಾಗ ಹೊಸ ಜೀವನದ ಹೊಸ್ತಿಲನ್ನು ತುಳಿಯುವ ಆನಂದದ ಹದವನನುಭವಿಸಿದಳು ರತ್ನ. 

ಪ್ರೇಮಾ ಉದಯ್ ಕುಮಾರ್

ಸ.ಪ.ಪೂ.ಕಾಲೇಜು ಐವರ್ನಾಡು

ಸುಳ್ಯ, ದ.ಕ

574245

9901327499

      

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ