ಹೆಣ್ಣಿನ ಸ್ವಗತ
"ಹೌದು, ನನಗವ ಯಾವ ಖುಷಿಯನ್ನೂ ಕೊಡಲಿಲ್ಲ, ನನ್ನ ಮದುವೆಯಾದ, ಕೊಳೆಯುವಷ್ಟು ದುಡ್ಡಿತ್ತು ಮನೆಯಲ್ಲಿ! ಬೇಕಾದ ಹಾಗೆ ಊರೂರು ಸುತ್ತಿಸಿದ. ನನ್ನ ನಾನು ಹೊಗಳುವುದಲ್ಲ, ನನ್ನ ಗೆಳತಿಯರೆಲ್ಲ ನನಗೆ 'ನೀ ಸೇಮ್ ಪ್ರೀತಿ ಝಿಂಟಾ ತರ ಇದ್ದೀಯ ಕಣೇ, ಅಂತ ಬ್ಯೂಟಿ ನಮ್ಗೆ ಬೇಕಾಗಿತ್ತು,ನಿನ್ನ ನೋಡಿದ್ರೆ ಹೊಟ್ಟೆ ಉರಿಯುತ್ತೆ'ಅಂತಿದ್ರು! ನನ್ನ ಆ ಗುಳಿ ಕೆನ್ನೆ, ಚರ್ಮದ ಬಿಳಿ ಬಣ್ಣವೇ ನನ್ನ ಜೀವನಕ್ಕೆ ಮುಳುವಾಗಿತ್ತು!
ಹತ್ತನೇ ತರಗತಿ ಓದುವ ಮೊದಲೇ 'ನನಗೇ ಮದುವೆ ಮಾಡಿಕೊಡಿ ನಿಮ್ಮ ಮಗಳನ್ನು' ಎಂದು ಹಲವಾರು ಜನ ಹುಡುಗರು, ಬಂಧುಗಳು, ಗೆಳೆಯರು ನನ್ನಪ್ಪನನ್ನು ಕೇಳಿ ರಿಸರ್ವ್ ಮಾಡಿಸಿ ಬಿಟ್ಟಿದ್ದರು! ನನ್ನಮ್ಮನ ಹಲವಾರು ಗೆಳತಿಯರೂ ನನ್ನನ್ನು ಅವರ ಸೊಸೆ ಮಾಡಿಕೊಳ್ಳಲು ಕಾತರದಿಂದ ಕಾಯ್ತಾ ಇದ್ರು. 'ನಮ್ಮ ಹೆಣ್ಣು ಮಕ್ಕಳು ಸುಂದರವಾಗಿಲ್ಲ, ನಿನ್ನ ಮಗಳು ಸಿನಿಮಾ ತಾರೆಯಂತಿದ್ದಾಳೆ, ಏನು ತಿನ್ನಿಸ್ತೀಯಾ ಅವ್ಳಿಗೆ?' ಅಂತ ಅಮ್ಮನ್ನ ಟೀಸ್ ಮಾಡೋರು!
ಅಪ್ಪ, ಅಮ್ಮನ ಮುದ್ದಿನ ಮಗಳಾಗಿ, ಪ್ರೀತಿಯ ಅಣ್ಣನ ಮುದ್ದು ತಂಗಿಯಾಗಿ ಬೆಳೆದ ನನಗೆ ಕಾಲೇಜಿಗೆ ಹೋಗುವಾಗ ಅಣ್ಣನ ಸೆಕ್ಯೂರಿಟಿ! ಅಲ್ಲೂ ನಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ ಬಿಡಿ! 'ನನ್ನ ಲವ್ ಮಾಡದಿದ್ರೆ ನೀನು ಬೇರೆ ಯಾರಿಗೂ ಸಿಗ್ಬಾರ್ದು, ಸಾಯಿಸಿ ಬಿಡ್ತೀನಿ' ಅಂದಿದ್ದ ಒಬ್ಬ ಸೀನಿಯರ್! ಹಂಗೂ ಹಿಂಗೂ ಕಷ್ಟಪಟ್ಟು ಕಾಲೇಜು ಮುಗಿಸಿದಾಗಲೇ ನಾನು ತುಂಬಾ ಪ್ರಖ್ಯಾತಳಾಗಿದ್ದೆ!
ನನ್ನ ಅಂದಕ್ಕಾಗಿ ಮಾತ್ರವಲ್ಲ, ನೃತ್ಯ, ಸಂಗೀತ, ಹಾಡು, ನಿರೂಪಣೆ, ಕವಿಯೂ ಆಗಿದ್ದೆ ನಾನು. ನನ್ನ ಕಲೆಗೆ ಅಲ್ಲಿ ಪ್ರೋತ್ಸಾಹ ಸಿಕ್ಕಿತ್ತು, ಅವಕಾಶಗಳ ಬಳಸಿಕೊಂಡೆ. ಹಾಡಿದೆ, ಕುಣಿದೆ, ಬರೆದೆ, ಗೀಚಿದೆ, ಇದ್ದೆಲ್ಲ ಬಹುಮಾನಗಳ ಬಾಚಿಕೊಂಡೆ!
ಕಾಲೇಜು ಮುಗಿದ ಕೂಡಲೇ ನಾನಿಷ್ಟ ಪಟ್ಟ ಹುಡುಗನೊಂದಿಗೆ ನನ್ನ ಮದುವೆಯಾಯ್ತು! ಅವನೇ ಧೀರ, ಶೂರ ವಿದ್ವತ್ ಪ್ರಕಾಶ್! ಹೆಸರಿನಂತೆಯೇ ಅವನು ವಿದ್ವತ್ ಇದ್ದವ. ಹ್ಯಾಂಡ್ ಸಮ್! ಲಕ್ಷ್ಮಿ ಪುತ್ರ! ಆದರೆ ಹೆಚ್ಚು ವಿದ್ಯಾವಂತನಲ್ಲ, ತುಂಬಾ ಮೆರೆದವ, ಹಾರಾಡಿದವ! ದುಡ್ಡನ್ನು ನೀರಿನಂತೆ ಖರ್ಚು ಮಾಡಿದವ!
ಆದರೆ ನನಗೆ ಅವನೊಂದಿಗಿನ ಜೀವನ ಖುಷಿಯಾಗಿದ್ದುದು ಮಾತ್ರ ಮದುವೆಯಾದ ಮೊದಲ ಎರಡು ವರುಷಗಳು!
ಎರಡೆ ವರುಷಗಳಲ್ಲಿ ನಾನು ಎರಡು ಮಕ್ಕಳ ತಾಯಿಯಾಗಿದ್ದೆ! ಸಣ್ಣ ವಯಸ್ಸಿಗೇ ನನಗೆ ದೊಡ್ಡ ಜವಾಬ್ದಾರಿ! ಜೊತೆಗೆ ಅಮ್ಮನಿರದಿದ್ದರೆ ನನ್ನ ಜೀವನವೇ ಇಲ್ಲ. ನಾ ಮಕ್ಕಳೊಂದಿಗೆ ಮಗುವಾಗಿ ಪೂರ್ತಿ ಬೆರೆತು ಹೋಗಿದ್ದೆ.
ಈ ನಡುವೆ ವಿದ್ವತ್ ನ ಗೆಳೆಯರ ಬಳಗ, ಕುಡಿತ ವಿಪರೀತವಾಗಿತ್ತು! ಹಣಕ್ಕಾಗಿ ತನ್ನ ತಂದೆಯೊಡನೆ ಜಗಳ, ವ್ಯವಹಾರಗಳ ಸರಿ ನೋಡಿಕೊಳ್ಳಲಾಗದೆ ದಿನದ ಇಪ್ಪತ್ತ ನಾಲ್ಕು ಗಂಟೆಯೂ ಕುಡಿತ! ಮನೆಯವರಾರೆಂದು ತಿಳಿಯದಷ್ಟು! ಗಲಾಟೆ!
ನಾ ಕುಗ್ಗಿ ಹೋದೆ. ತನ್ನ ಅಣ್ಣನೊಡನೆಯೂ ಜಗಳವಾಡಿ ಅವರ ಪಾಲಿನ ಆಸ್ತಿ ಪಡೆದು, ವ್ಯಾಪಾರ ನೋಡಲಾಗದೆ, ಲಾಸ್ ಆಗಿ ಎರಡು ಸಲ ಆತ್ಮಹತ್ಯೆಗೆ ಪ್ರಯತ್ನಿಸಿದರು! ನಾನೂ, ಮಕ್ಕಳೂ ಸೇರಿ ಬದುಕಿಸಿದೆವು!
ಮುಂದೆ ಅದು ಹಲವಾರು ಸಲವಾಯ್ತು. ನಮಗೆ ಇದು ಸಾಮಾನ್ಯ ಅನ್ನಿಸುವಷ್ಟು! ತನ್ನ ಅಂದದ ಎರಡು ಮುದ್ದು ಮಕ್ಕಳ ಗುರುತು ಸಿಗಲಾರದಷ್ಟು ಕುಡಿತ. ಹೊಟ್ಟೆ ನೋವೆಂದು ವೈದ್ಯರ ಬಳಿ ಹೋದಾಗ ತಿಳಿಯಿತು, ಜಠರ ಪೂರ್ತಿ ಸುಟ್ಟು ಹಾಕಿತ್ತು ಆಲ್ಕೋಹಾಲ್! ಊಟ ತಿನ್ನದೆ ನಶೆಯೇರಿಸಿದ ಪರಿಣಾಮವದು! ಖರ್ಚು ಮಾಡಿ ಯಾವ ರೀತಿಯಲ್ಲಿ ನೋಡಿಕೊಂಡರೂ ಜೀವ ಉಳಿಯಲಿಲ್ಲ!
ಕೊನೆಗೂ ನನ್ನ ಹಾಗೂ ನನ್ನೆರಡು ಮಕ್ಕಳನ್ನು ನಡು ಬೀದಿಯಲ್ಲಿ ಬಿಟ್ಟು ಹೊರಟು ಹೋದರು ಅವರು! ನನ್ನ ಹೆಸರಿನಲ್ಲಿ ಮಾವನಿರಿಸಿದ ಹಣವಿತ್ತು, ಮನೆಯಿತ್ತು, ಸ್ವಂತದ ಬರಿದಾದ ವ್ಯಾಪಾರವಿತ್ತು! ಆದರೆ ಅದರ ಚುಕ್ಕಾಣಿ ಹಿಡಿಯಲಾರೂ ಇರಲಿಲ್ಲ! ನಾನು ಮಕ್ಕಳು ಅಷ್ಟೆ! ಅಪ್ಪ ಅಮ್ಮ ನೆರವಿಗೆ ಬಂದರು, ಕೆಲಸಕ್ಕೆ ಸೇರಿದೆ, ಎದೆಗುಂದದೆ ನನ್ನ ಬಾಳು ಬೆಳಗಿಸಿಕೊಂಡೆ!ಮುಂದೆ ಓದಿದೆ. ಡಿಗ್ರಿ, ಎಂ. ಎ , ಬಿ. ಎಡ್, ಪಿ. ಹೆಚ್. ಡಿ. ಮಾಡಿಕೊಂಡೆ!
ಮಕ್ಕಳ ಓದಿಸಿ ಕೆಲಸಕ್ಕೆ ಸೇರಿಸಿ ಮದುವೆಯ ಮಾಡಿದೆ. ಒಂಟಿತನ ಕಾಡಿತು. ವರುಷ ಐವತ್ತಾಗಿತ್ತು!ನನ್ನಂತೆಯೇ ಒಂಟಿಯಾದ ನನಗಿಂತ ಹಿರಿಯರಾದ, ತಿಳುವಳಿಕೆಯುಳ್ಳ ನಿವೃತ್ತಿ ಪಡೆದ ಜಡ್ಜ್ ಒಬ್ಬರ ಭೇಟಿಯಾಯ್ತು. ಮಾತನಾಡುತ್ತಾ ಗೆಳೆಯರಾದೆವು. ಪ್ರೇಮಕ್ಕೆ ವಯಸ್ಸಿಲ್ಲ, ನಿನಗೆ ನಾನು, ನನಗೆ ನೀನು ಎನ್ನುವಂತಾದೆವು, ಮಕ್ಕಳ ಒಪ್ಪಿಗೆ ಪಡೆದು ದೇವಸ್ಥಾನದಲ್ಲಿ ಒಂದಾಗಿ ಒಟ್ಟಿಗೆ ಬಾಳುತ್ತಿದ್ದೇವೆ! ಆ ದೇವರಿಗೊಂದು ಸಲಾಮ್ ನನ್ನ ಒಂಟಿತನ ಹಾಗೂ ಕಷ್ಟವನ್ನು ದೂರ ಮಾಡಿದ ರೀತಿಗೆ!"
@ಪ್ರೇಮ್@
27.05.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ