ಲೇಖನ
ವಿಷಯ-ಈಗಿನ ಶಿಕ್ಷಣದ ವ್ಯವಸ್ಥೆ
ಶಿಕ್ಷಣ ಎಂದಾಗ ಮೊದಲನೆಯದಾಗಿ ನೆನಪಿಗೆ ಬರುವುದು ಮನೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಆದರೆ ಕಾಲ ಬದಲಾಗಿದೆ. ಈಗ ಮೊಬೈಲೇ ಮೊದಲ ಗುರು.ಮಗುವಿಗೆ ಪ್ರಿ ಸ್ಕೂಲ್ ಮೊದಲ ಶಾಲೆ. ಈಗಿನ ಅಮ್ಮಂದಿರಿಗೆ ಸಮಯವಿಲ್ಲವಲ್ಲ! ತಾವು ದುಡಿದು ಕೆಲಸದವರಿಗೆ ಸಂಬಳ ಕೊಡಬೇಕು! ಪಾಪ ಮಕ್ಕಳ ಗತಿ! ಯಾವುದೋ ಕೆಲಸದವಳ ಜೊತೆಯೋ, ಸಂಬಂಧಿಕರ ಮನೆಯಲ್ಲೋ, ಸಂಬಂಧವೇ ಇಲ್ಲದವರ ಮನೆಯಲ್ಲೋ ಹುಟ್ಟಿದ ತಪ್ಪಿಗೆ ಬೆಳೆಯ ಬೇಕಾದ ಪರಿಸ್ಥಿತಿ ಬಂದೊದಗಿದೆ ಇಂದು!
ಅದೇನೇ ಇರಲಿ, ಮೂಲ ಹುಡುಕಲು ಹೋಗಬಾರದಂತೆ! ಮೊದಲು ಆರು ವರುಷವಿದ್ದ ಶಾಲಾ ವಯಸ್ಸೀಗ ಮೂರು ವರುಷಕ್ಕೆ ಇಳಿದಿದೆ. ಮೂರು ವರುಷ ಹತ್ತು ತಿಂಗಳಲ್ಲಿ ಶಾಲೆಗೆ ಸೇರಿಸುವ ನಿಯಮವಿದ್ದರೂ ಪೋಷಕರಿಗೆ ತಾಳ್ಮೆ ಎಂಬುದಿಲ್ಲ, ಅದಕ್ಕಿಂತ ಮೊದಲೇ ತಂದು ತುರುಕಿ ಬಿಡುತ್ತಾರೆ ಪ್ರಿ ಕೆಜಿ ತರಗತಿಗೆ!
ಹಲ ಶಾಲೆಗಳೂ ಪ್ರಿಕೆಜಿಗೇ ಲಕ್ಷಗಟ್ಟಲೆ ಪಡೆದು ತಮ್ಮ ಕಟ್ಟಡ ವೃದ್ಧಿಸುತ್ತಲೇ ಹೋಗುತ್ತಿವೆ. ಇಲ್ಲಿ ನಾವು ಮಾತನಾಡಬೇಕಾದುದು ಸರಕಾರಿ ಶಾಲೆ ಅಥವಾ ಖಾಸಗಿ ಶಾಲೆಯ ಶಿಕ್ಷಣ ವ್ಯವಸ್ಥೆಯ ಬಗ್ಗೆ.
ನಾನೊಬ್ಬ ಶಿಕ್ಷಕಿಯಾಗಿದ್ದು ಖಾಸಗಿ ಶಾಲೆಯಲ್ಲೂ, ಸರಕಾರಿ ಶಾಲೆಯಲ್ಲೂ ದುಡಿದ ಅನುಭವ ಇರುವ ಕಾರಣ ನಾನು ಹೇಳುವುದಿಷ್ಟೆ. ಸರಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯಂತೆಯೇ ಇದು ಕೂಡಾ. ಸರಕಾರವೂ ಶಾಲೆಗಳಿಗೆ ಬೇಕಾದ ಎಲ್ಲಾ ಅನುದಾನಗಳನ್ನು ಕೊಡುತ್ತದೆ. ಇಲ್ಲಿ ನಾವು ಭೌತಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಎಲ್ಲಾ ಕೋನಗಳಿಂದ ಹೇಳ ಹೊರಟರೆ ನಾನು ಎರಡೂ ಶಿಕ್ಷಣ ವ್ಯವಸ್ಥೆಗಳಲ್ಲೂ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳನ್ನು ಪಟ್ಟಿ ಮಾಡಬಲ್ಲೆ.
ಶಾಲಾಡಳಿತ ಬೇರೆ ಬೇರೆಯಾಗಿದ್ದರೂ ಸರಕಾರಿಯಾದರೂ, ಖಾಸಗಿಯಾದರೂ ಶಿಕ್ಷಕರು ಒಂದೇ. ಪ್ರತಿಯೊಬ್ಬರೂ ತನ್ನ ವಿದ್ಯಾರ್ಥಿ ಮೇಲೆ ಹೋಗಬೇಕೆಂದು ಬಯಸುವವರೇ. ಆದರೆ ಖಾಸಗಿ ಶಾಲೆಗೆ ಬರುವ ಮಕ್ಕಳು ೨ನೇ, ೩ನೆ ಕೆಲವು ೪ನೇ ಜನರೇಶನ್ ಕಲಿಕಾರ್ಥಿಗಳು! ಅದೇ ಸರಕಾರಿ ಶಾಲೆಗಳಲ್ಲಿ ಓದುತ್ತಿರವ ಹೆಚ್ಚಿನ ವಿದ್ಯಾರ್ಥಿಗಳು ಮೊದಲ ತಪ್ಪಿದರೆ ಎರಡನೆ ಜನರೇಶನ್ ವಿದ್ಯಾರ್ಥಿಗಳು! ಅವರಿಂದಲೇ ಮನೆ ಬೆಳಗಬೇಕು ಅಥವಾ ಅವರು ಕಲಿತು ತಮ್ಮ ಹಿರಿಯರಿಗೆ ಹೇಳಿ ಕೊಡಬೇಕಾದವರು. ಅವನಾದರೂ ಕಲಿತು ಏನಾದರೂ ಕೆಲಸಕ್ಕೆ ಸೇರಲಿ ನಮ್ಮಂತೆ ಕಷ್ಟ ಪಡೋದು ಬೇಡ ಎಂಬ ಯೋಚನೆ ಪೋಷಕರಿಗೆ! ಆದರೇನು! ಹೆಚ್ಚಿನ ಪೋಷಕರು ಕುಡುಕರು, ಕೆಲವು ತಾಯಿ ತಂದೆ ಇಬ್ಬರೂ ಸಂಜೆಯಾದರೆ ಟೈಟು! ಪಾಪ ಮಕ್ಕಳ ಅವಸ್ಥೆ ಯಾರು ಕೇಳಬೇಕೋ! ಬುದ್ಧಿ ಹೇಳಬೇಕಾದವರಿಗೆ ಮಕ್ಕಳೇ ಬುದ್ಧಿ ಕಲಿಸುವ ಕಾರ್ಯ ಮಾಡಬೇಕು. ಇನ್ನು ಕೆಲವರ ಮನೆಯಲ್ಲಿ ಕತ್ತಲಾದ ಕೂಡಲೇ ತಂದೆ ಅನ್ನಿಸಿಕೊಂಡ ಪ್ರಾಣಿಯ ಗಲಾಟೆ, ಪೆಟ್ಟು ಪ್ರಾರಂಭವಾಗಿ ಮನೆ ರಣರಂಗವಾಗಿರುವಾಗ ಮನೆ ಯಾವ ರೀತಿಯ ಪಾಠ ಶಾಲೆಯಾಗಬಹುದು ನೀವೇ ಯೋಚಿಸಿ. ಇನ್ನು ಕಲಿಕೆ, ಸರಕಾರ ಹೇಳುವ ಶೇಕಡಾ ನೂರರ ಫಲಿತಾಂಶ ಸಾಧ್ಯವೇ ಹೇಳಿ.
ಆದರೆ ಈ ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಲ್ಲಿಸಿ ಮಗುವನ್ನು ಮುಂದೆ ತರುವ ಗುರುತರ ಜವಾಬ್ದಾರಿ ಸರಕಾರಿ ಶಾಲೆಯ ಶಿಕ್ಷಕರ ಮೇಲಿದೆ. ಕೆಲವೊಂದು ಪ್ರಾಥಮಿಕ ಶಾಲೆಯ ಮಕ್ಕಳು ಅಮ್ಮನಿಗಿಂತ ತಮ್ಮ ಶಿಕ್ಷಕಿಯ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ. ಇನ್ನು ಕೆಲವು ಮಕ್ಕಳು ಶಾಲೆಯಲ್ಲಿ ಹೊಟ್ಟೆ ತುಂಬ ಸಿಗುವ ಊಟಕ್ಕಾಗಿ,ಹಾಲಿಗಾಗಿ ಶಾಲೆಗೆ ಈಗಲೂ ಬರುತ್ತಾರೆಂದರೆ ಅತಿಶಯೋಕ್ತಿಯಿಲ್ಲ. ಮತ್ತೆ ಕೆಲವು ವಿದ್ಯಾರ್ಥಿಗಳಿಗೆ ಶಾಲೆಗೆ ಬಂದರಷ್ಟೆ ನೆಮ್ಮದಿ. ಇನ್ನೂ ಕೆಲವು ವಿದ್ಯಾರ್ಥಿಗಳಿಗೆ ಯಾಕೆ ಬರುತ್ತೇವೆಂದೇ ಗೊತ್ತಿಲ್ಲ. ಹಲವು ವಿದ್ಯಾರ್ಥಿಗಳಿಗೆ ಶಾಲೆ, ಗಣಿತ, ಇಂಗ್ಲಿಷ್, ಹಿಂದಿ ಎಂದರಾಗದು. ಬದಲಾಗಿ ಮದುವೆ ಮನೆ, ಪೂಜೆ, ಬಂಧುಗಳ ಮನೆ, ಹಬ್ಬ, ಅಜ್ಜಿಯ ಮುದ್ದು, ತೋಟ-ಗದ್ದೆಯ ಕೆಲಸ ಇಷ್ಟ. ಇಂತಹ ವಿವಿಧ ಆಯಾಮದಲ್ಲಿ ಯೋಚಿಸುವ ಕಲಿಕೆಯ ಬೆಲೆಯೇ ಅರಿತಿರದ ಮಕ್ಕಳ ಜೀವನ ರೂಪಿಸುವ ಬಹುದೊಡ್ಡ ಸವಾಲು ಸರಕಾರಿ ಶಿಕ್ಷಕರದ್ದು.
ಅದರೊಂದಿಗೆ ತಮ್ಮದೇ ಮಕ್ಕಳೆಂಬ ಭಾವನೆಯಿಂದ ಅವರನ್ನು ನೋಡಬೇಕಿದೆ. ಅವರ ಜೀವನದ ರೂವಾರಿಗಳು ಶಿಕ್ಷಕರೇ. ಮುಂದೆ ಜೀವನದಲ್ಲಿ ಅವರು ಯಾವ ಕ್ಷೇತ್ರವನ್ನು ಆರಿಸಿಕೊಳ್ಳಬೇಕು, ಅವರಲ್ಲಿ ಹುದುಗಿರುವ ಸುಪ್ತವಾದ ಗುಣ, ಕಲೆಗಳನ್ನು ಹುಡುಕಿ ತೆಗೆದು ಅವರನ್ನು ಆ ದಿಸೆಯಲ್ಲಿ ಬೆಳೆಸುವವರು ಅವರೇ. ಎಷ್ಟೋ ಜನ ಶಿಕ್ಷಕರು ಉತ್ತಮ ಕಲಿಕೆಯ ಬಡ ವಿದ್ಯಾರ್ಥಿಗೆ ತಾವೇ ಬಟ್ಟೆ ಪುಸ್ತಕ ತೆಗೆದು ಕೊಟ್ಟರೆ, ಮತ್ತೆ ಕೆಲವು ಶಿಕ್ಷಕರು ತಮ್ಮ ಮನೆಯಲ್ಲೆ ತಮ್ಮ ಮಕ್ಕಳಂತೆ ಅವರನ್ನು ಸಾಕುವವರಿದ್ದಾರೆ! ತಮ್ಮ ಪಾಠದ ಅವಧಿಯಲ್ಲಿ ಪಾಠ ಪ್ರವಚನ ಬೋಧಿಸಲು ಸಾಧ್ಯವಾಗದೆ ಇರುವ ಘಟನೆಗಳು ಅನೇಕ ಇರುತ್ತವೆ ಈಗಿನ ಸರಕಾರಿ ಶಿಕ್ಷಣ ಪದ್ಧತಿಯಲ್ಲಿ. ಉದಾಹರಣೆಗೆ ಕಂಪ್ಯೂಟರ್, ಸ್ಕೌಟ್, ಗೈಡ್, ಸೇವಾದಳ, ವಿಷಯ ತರಬೇತಿಗಳು, ಮೀಟಿಂಗ್ ಗಳು, ವಿಸಿಟ್ ಗಳು, ದಾಖಲೆಗಳ ನಿರ್ವಹಣೆ.. ಖಾಸಗಿ ಶಾಲೆಗಳಲ್ಲಿ ಆಯಾ, ಪಿಓನ್, ಕ್ಲರ್ಕ್ ಗಳಿದ್ದಂತೆ ಸರಕಾರಿ ಶಾಲೆಗಳಲ್ಲಿ ಇರುವುದಿಲ್ಲ, ಇದ್ದರೂ ಬೆರಳೆಣಿಕೆಯ ಶಾಲೆಗಳಲ್ಲಿ ಮಾತ್ರ! ಉಳಿದ ಶಾಲೆಗಳಲ್ಲೆಲ್ಲ ಮಕ್ಕಳು, ಟೀಚರ್ ಗಳೇ ಪ್ಲಂಬರ್ಗಳು, ಎಲೆಕ್ಟ್ರಿಷಿಯನ್ ಗಳು, ಪಿಓನುಗಳು,ಸಪ್ಲಾಯರ್ ಗಳು,ಆಯಾಗಳು! ಕೆಲವು ಕಡೆ ಅಡಿಗೆಯವರು ಕೂಡಾ!
ಅದರಿಂದ ಸರಕಾರಿ ಶಾಲೆಗಳಲ್ಲಿ ಕಲಿಕೆಯೊಂದಿಗೆ ಜೀವನ ಮೌಲ್ಯಗಳನ್ನೂ ಅರಿವಿಲ್ಲದೆ ಕಲಿಯುವರು. ಬಡತನ ಜೀವನದಲ್ಲಿ ಎಲ್ಲವನ್ನೂ ಕಲಿಸುವುದಂತೆ. ಅಂತೆಯೇ ಕೂಡಿ ಬಾಳುವುದು, ಪರಸ್ಪರ ಸಹಾಯ, ಒಗ್ಗಟ್ಟು ಕಲಿಯಲು ಶಾಲೆಯೇ ದೇವಾಲಯ! ಮೇಲು-ಕೀಳು, ಜಾತಿ ಪದ್ಧತಿಯ ಕೋಟೆ ಮಕ್ಕಳಲ್ಲಿಲ್ಲ, ಅದನ್ನು ಸರಕಾರದ ಸವಲತ್ತು, ಲೆಕ್ಕ, ಫೀಜುಗಳಲ್ಲಿ ತೋರಿಸಲಾಗುತ್ತದೆಯೇ ಹೊರತು ತರಗತಿಯೊಳಗೆ ಮೈಮುನ, ಜಾರ್ಜ್, ಗಣೇಶ ಎಲ್ಲರೂ ಒಂದೇ.
ಕಲಿಕೆ ಎಂದರೆ ಓದು ಬರಹ ಮಾತ್ರವಲ್ಲ. ಜೀವನ ಪಾಠ. ಮುಂದಿನ ಜೀವನಕ್ಕೆ ಅಡಿಗಲ್ಲು. ಭಾರತದ ಮುಂದಿನ ಬಲಿಷ್ಠ ರಾಷ್ಟ್ರ ಕಟ್ಟುವ ಪ್ರಜೆಯ ನಿರ್ಮಾಣ. ಆ ದಿಸೆಯಲ್ಲಿ ಕಲೋತ್ಸವ, ಆಟೋಟ ಸ್ಪರ್ಧೆಗಳು, ಪ್ರತಿಭಾ ಕಾರಂಜಿ, ದಿನಾಚರಣೆಗಳು, ಪ್ರವಾಸ, ಶಾಲಾ ಕ್ರೀಡೋತ್ಸವ, ವಾರ್ಷಿಕೋತ್ಸವ, ಬೀಳ್ಕೊಡುಗೆ ಸಮಾರಂಭಗಳು ಮಕ್ಕಳ ಮುಂದಿನ ಜೀವನ ರಂಗದಲ್ಲಿ ತಮ್ಮದೇ ಆದ ರೀತಿಯಲ್ಲಿ ಪ್ರಭಾವ ಬೀರುತ್ತವೆ. ಶಾಲೆಯಲ್ಲಿ ನಡೆಯುವ ನೃತ್ಯ, ಪ್ರಬಂಧ, ಗಾಯನ, ಲೇಖನ ಸ್ಪರ್ಧೆಗಳು, ಗುಂಪು, ನಾಯಕತ್ವ, ಸಂಸತ್, ಶಾಲಾ ನಾಯಕನ ಚುನಾವಣಾ ಆಯ್ಕೆ, ಚರಚೆಗಳು, ರಸಪ್ರಶ್ನೆ, ಜಾಣತನದ ಆಟಗಳು, ಕಾರ್ಯಕ್ರಮ ನಿರ್ವಹಣೆ, ಸ್ವಯಂ ಸೇವಕರು, ಜೀವನಕ್ಕೆ ಸರಿಯಾದ ಅಡಿಗಲ್ಲನ್ನು ಹಾಕುವಲ್ಲಿ ಯಶಸ್ವಿಯಾಗಿವೆ. ಗೆದ್ದಾಗ ಚಪ್ಪಾಳೆ ಹೊಡೆದು ಪ್ರೋತ್ಸಾಹಿಸುವ ಪುಟ್ಟ ಕೈಗಳೇ ಬಿದ್ದಾಗ ಹಿಡಿದೆತ್ತಲು ಬರುತ್ತವೆ. ಅವುಗಳೇ ನಿಜವಾದ ಮೌಲ್ಯಗಳು. ಇವುಗಳನ್ನೆಲ್ಲ ಶಿಕ್ಷಣ ಕಲಿಸುತ್ತದೆ.
ಇದ್ದುದರಲ್ಲಿ ಹಂಚಿ ಬದುಕುವ ಗುಣ, ಸ್ಕೌಟ್, ಗೈಡ್ಸ್ ನಲ್ಲಿ ಸಾಹಸಗಳು, ಕಾರ್ಯಕ್ರಮ, ತರಗತಿಗಳಲ್ಲಿ ತೊಡಗಿಸಿಕೊಳ್ಳುವಿಕೆ, ರಾತ್ರಿ ತರಗತಿಯಲ್ಲಿ ಪರಿಶ್ರಮದ ಮಹತ್ವ, ವಿಶೇಷ ತರಗತಿಗಳಲ್ಲಿ ಸಮಯದ ಮಹತ್ವ, ಕಾರ್ಯಕ್ರಮಗಳ ಕೊನೆಯಲ್ಲಿ ಉಳಿದ ವಸ್ತುಗಳ ಜವಾಬ್ದಾರಿ, ಪೋಲಾಗದಂತೆ ವಿಲೇವಾರಿ ಇವೆಲ್ಲ ನಿತ್ಯ ಜೀವನಕ್ಕೆ ಬೇಕಾದ ಕಲಿಕೆಗಳೇ ಅಲ್ಲವೇ?
ಕಷ್ಟ ಪಟ್ಟು ಕಲಿತ ಯಾವುದೇ ಕೆಲಸವೂ ವ್ಯರ್ಥ ಅನ್ನಿಸದು. ಅಂತೆಯೇ ಈ ಗುಣಗಳು ಕೂಡಾ. ಖಾಸಗಿ ಶಾಲೆಯಲ್ಲಿ ಈ ಎಲ್ಲಾ ಜವಾಬ್ದಾರಿಯನ್ನು ಪೋಷಕ ವೃಂದ, ಶಾಲಾಡಳಿತ ಮಂಡಳಿ, ಹಳೆ ವಿದ್ಯಾರ್ಥಿ ಹಾಗೂ ಶಿಕ್ಷಕ ಬಳಗ ಹೊತ್ತರೆ, ಸರಕಾರಿ ಶಾಲೆಗಳಲ್ಲಿ ಮಕ್ಕಳು ಮತ್ತು ಶಿಕ್ಷಕರೇ ಕೇಂದ್ರ ಬಿಂದುಗಳು. ವಿದ್ಯಾರ್ಥಿಗಳಿಗೆ ಅವರೇ ಮಾರ್ಗದರ್ಶಿಗಳು. ಅವರಂತಾಗಬೇಕೆಂಬುದೇ ಮೊದಲ ಗುರಿ.
ಈ ನಿಟ್ಟಿನಲ್ಲಿ ಸರಕಾರಿ ಶಾಲಾ ಶಿಕ್ಷಣದ ಗುಣಮಟ್ಟ ಹೆಚ್ಚು ಮೌಲ್ಯಯುತವಾಗಿದೆ ಹಾಗೂ ಜವಾಬ್ದಾರಿಯುತವೂ ಆಗಿದೆ ಎಂಬುದು ನನ್ನ ಅನಿಸಿಕೆ. ನೀವೇನಂತೀರಿ?
@ಪ್ರೇಮ್@