ಬುಧವಾರ, ಅಕ್ಟೋಬರ್ 2, 2019

1244. ಗಾಂಧಿಗಿರಿ

ಗಾಂಧಿಗಿರಿ

ಗಾಂಧೀಜಿಯ ಮಾತ ನಾವು ಪಾಲಿಸುತ್ತಿಲ್ಲವೇ?
ಖಂಡಿತ, ಅವರ ಅನುಕರಣೆ ಇಂದೂ ಬಿಟ್ಟಿಲ್ಲ ನಾವು!

ಸ್ವಚ್ಛತೆಗೆ ಕರೆಯಿತ್ತರು ಗಾಂಧಿತಾತ!
ಇಂದು, ಮುಂದೂ ನಾವೂ ಕರೆ ಕೊಡುತ್ತಲೇ ಇದ್ದೇವೆ!
ಸ್ವಚ್ಛ ಭಾರತ ಅಭಿಯಾನಕ್ಕಾಗಿ ಸೆಸ್ ತೆರುತ್ತಾ!
ನಾವೇ ಕಸ ಹಾಕಿ ಗಾಂಧಿಜಯಂತಿಯಂದು ಅದನ್ನೆತ್ತಿ ರಾಶಿ ಹಾಕುತ್ತಾ..

ರಾಮರಾಜ್ಯದ ಕನಸು ಕಂಡರು ಬಾಪೂಜಿ!
ನಾವೂ ಕನಸು ಕಾಣುತ್ತಲೇ ಇದ್ದೇವೆ,
ಕರೆ ಕೊಡುತ್ತಲಿದ್ದೇವೆ ಜನರಿಗೆ ರಾಮರಾಜ್ಯ ಕಟ್ಟಲು
ಮಹಿಳೆಯರಿಗೆ ರಾತ್ರಿ ಚಲಿಸುವ ಸ್ವಾತಂತ್ರ್ಯ ನೀಡಲು!

ಮದಿರೆ ಮಾಂಸ ತೊರೆಯಿರೆಂದರು ಮಹಾತ್ಮ!
ನಾವೂ ಬಾರಿಗೆ ಬೀಗ ಹಾಕಿದ್ದೇವೆಅಕ್ಟೋಬರ ಎರಡರಂದು!
ಕಿಟಕಿಯಲಿ ಮಾತ್ರ ಸಹಕರಿಸುತ್ತಿರುವೆವು ಕದ್ದು!
ತಡೆಯಲಾಗದೆ ಪಡೆವೆವು ಬೇಲಿ ಹಾರಿ ನೆಗೆದು!

ಹಿಂಸೆಯ ಮಾಡದಿರಿ, ಅಹಿಂಸೆಯ ಪಾಲಿಸೆಂದರು!
ನಾವೂ ಹಿಂಸಿಸಲಾರೆವು ಸತ್ತಂತಿಹ  ಮನಗಳ!
ಸುಮ್ಮನೆ ಜತೆಯಲೊಂದು ಸೆಲ್ಫಿ ತೆಗೆದು ಹಾಕುವುದಷ್ಟೇ!
ಕೊಡುವುದಿಲ್ಲವೇ ಕರೆ ಗಾಂಧಿಯಂತೆ ಅಹಿಂಸೆಗೆ!

ತಮ್ಮ ಕೆಲಸವ ತಾವೇ ಮಾಡಿಕೊಳ್ಳಿರೆಂದರು ರಾಷ್ಟ್ರಪಿತ!
ನಮ್ಮ ಮುಖಪುಟ, ಜಾಲತಾಣಗಳ ಒಡೆಯರು ನಾವೇ!
ಅಲ್ಲಿ ನಾವ್ಯಾರನ್ನೂ ಕೆಲಸ ಮಾಡಲು ಬಿಡೆವು!
ಹಗಲು ರಾತ್ರಿ ಪರರಿಗಾಗೇ ದುಡಿಯುತಲಿಹೆವು!

ಜಾತಿ ಧರ್ಮಗಳೊಳಗೆ ಜಗಳ ಬೇಡ ಎಲ್ಲರೊಂದೆ ದೇವರ ಮಕ್ಕಳೆಂದರು ಬಾಪು!
ಸಕಲ ಜಾತಿಯ ಜನರೂ ಬಳಸುವ ನೋಟಿಗೊತ್ತಿರುವೆವು ನಿಮ್ಮ ಛಾಪು!
ಸರ್ವ ಜನರ ಬದುಕಿಗೂ ಬೇಕಾದುದು ಹಣವೊಂದೇ!
ಸರ್ವ ಜನ ಓಡಾಡುವ ರಸ್ತೆಯಲೊಂದು ಪ್ರತಿಮೆಯ ಇಡಲಿಲ್ಲವೇ ಬರೆದು "ಎಲ್ಲರೊಂದೇ"?

ಸತ್ಯವನ್ನೇ ನುಡಿಯಿರೆಂದು ಕರೆಯಿತ್ತರು ಮೋಹನದಾಸರು
ನಾವದನ್ನೆಂದೂ ಬಿಟ್ಟಿಲ್ಲ ಎಂದೂ,
ಸತ್ಯವನ್ನೇ ಮಾತನಾಡಿರೆಂದು ಬರೆಯುವೆವು, ಭಾಷಣವ ಮಾಡುವೆನು, ಬೋಧಿಸುತ್ತಲೇ ಇರುವೆವು!
@ಪ್ರೇಮ್@
02.10.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ