ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-9
ಎಲ್ಲರ ತಾಳ್ಮೆಗೂ ಒಂದು ಮಿತಿ ಇದೆ. ಅಂತೆಯೇ ಪ್ರಕೃತಿಗೂ ಕೂಡಾ. ಮಳೆ ಕಡಿಮೆ ಆದಾಗ ಜನ 'ನಮಗೆಲ್ಲಾ ಗೊತ್ತು,ನಾವೇನೂ ಕಡಿಮೆ ಇಲ್ಲ' ಎನ್ನುವಂತೆ ಕಪ್ಪೆ, ಕತ್ತೆ, ಮಂಗನಿಗೆ ಮದುವೆ ಮಾಡಿದ್ದೇನು? ಮೋಡ ಬಿತ್ತನೆ ಮಾಡಿದ್ದೇನು! ಆದರೆ ಒಂದೂ ಫಲಿಸಲಿಲ್ಲ!
ತಾಯಿಯಾದವಳಿಗೆ ಖಂಡಿತಾ ಗೊತ್ತು, ತನ್ನ ಮಕ್ಕಳನ್ನು ಹೇಗೆ ಹತೋಟಿಗೆ ತರುವುದೆಂದು! ಇದಕ್ಕೆ ಭೂತಾಯ ಅಸ್ತ್ರಗಳು ಒಂದೇ,ಎರಡೇ? ತನ್ನಲ್ಲಿರುವ ಪಂಚ ಭೂತಗಳು ಅಥವಾ ಮನುಜ ಮಾಡಿದ ಕೆಲಸಗಳೇ! ಅಗ್ನಿ ತನ್ನ ಕೆನ್ನಾಲಿಗೆಗಳಿಂದ ಜಗತ್ತೆಲ್ಲ ಸುಡಬಲ್ಲುದು! ಗಾಳಿ ತನ್ನ ಬೀಸುವ ಶಕ್ತಿಯಿಂದ ಭೂತಾಯ ಮೇಲಿರುವ ಸಮಸ್ತ ವಸ್ತುಗಳನ್ನು ತನ್ನೊಡನೆ ಹೊತ್ತೊಯ್ಯಬಲ್ಲುದು! ನೀರು ತನ್ನೊಡನೆ ತೃಣವನ್ನೂ ಉಳಿಸದೆ ಎಳೆದುಕೊಂಡು ಹೋಗುವ ಶಕ್ತಿಯನ್ನು ಹೊಂದಿದೆ! ಆಕಾಶ ವಿಷದ ಮಳೆಯನ್ನೂ ಸುರಿಸಬಲ್ಲುದು , ಭೂಮಿ,ಸೂರ್ಯ-ಚಂದ್ರರನ್ನು ಆಚೀಚೆ ಮಾಡಬಲ್ಲುದು, ಉಲ್ಕೆಗಳ ದೂಡ ಬಲ್ಲದು, ಹಗಲಿರುಳ ಏರುಪೇರು ಮಾಡಬಲ್ಲುದು, ಮೋಡಗಳ ಡಿಕ್ಕಿ ಹೊಡೆಸಿ ಗುಡುಗು-ಸಿಡಿಲು ತರಿಸಿ ಹಾನಿಗೊಳಿಸಬಹುದು! ಭೂತಾಯಿ ಬಿರುಕು ಬಿಟ್ಟು ತನ್ನೊಳಗೆ ಎಲ್ಲವನ್ನೂ ಸೇರಿಸಿ ನುಂಗಬಹುದು! ಬೆಂಕಿಯುಂಡೆಗಳಾದ ಲಾವಾರಸ ಹರಿಸಿ ಸುಟ್ಟು ಬಿಡಬಹುದು!
ಇದೀಗ ಕೋಪಗೊಂಡ ಭೂತಾಯಿ ಮಳೆ ನೀರಿನಿಂದ ತನ್ನ ಶಕ್ತಿ ಪ್ರದರ್ಶಿಸಿ, 'ಹೇ ಮಾನವರೇ, ನೀವು ಕ್ಷಣಿಕರು, ಏನೂ ಮಾಡಲಾರಿರಿ, ನನ್ನ ಶಕ್ತಿಯೆದುರು'ಎಂಬಂತಿದೆ! ನಿಜ ಮಾತೆಯ ಮುಂದೆ ನಾವೇನೂ ಇಲ್ಲ, ಪ್ರಕೃತಿಗೆ ಜಾತಿ, ಮತ,ಪಂಗಡಗಳ ಬೇಧವೂ ಇಲ್ಲ! ಎಲ್ಲರೂ ಸಮಾನರು! ಕೊಡಗಿನ, ಕೇರಳದ ಪರಿಸ್ಥಿತಿ ನೋಡಿದರೆ 'ದೇವರಾಟ ಬಲ್ಲವರಾರು?' ಎನಿಸುವುದಂತೂ ಖರೆ!
ಕೊನೆಯಲ್ಲಿ ಎಲ್ಲಾ ಮಾನವರ ಬಾಯಲ್ಲೂ 'ಅಮ್ಮಾ, ದೇವಾ ರಕ್ಷಿಸು' ಎಂಬುದಷ್ಟೆ ಉದ್ಗಾರ! ಆ ಪ್ರಾರ್ಥನೆಯಲ್ಲಿ ರಾಜಕೀಯವಿಲ್ಲ, ಜಾತಿ ಬೇಧವಿಲ್ಲ! ಗಡಿನಾಡು, ರಾಜ್ಯ, ಜಿಲ್ಲೆಗಳ ಹೋರಾಟವಿಲ್ಲ! ಸ್ವಚ್ಛ ಹೃದಯದ ಮೊರೆಯದು! ಅದು ದೇವರಿಗೆ ಖಂಡಿತಾ ಕೇಳುತ್ತದೆ!
ಪ್ರಕೃತಿ ತನ್ನ ಮಕ್ಕಳಿಗೆ ಬುದ್ಧಿ ಕಲಿಸ ಹೊರಟರೆ ಅದಕ್ಯಾರೂ ಎದುರಿಲ್ಲ ಎಂಬುದನ್ನು ಸಾಧಿಸಿದೆ! ಹುಲು ಮಾನವ ಇನ್ನಾದರೂ ಜಾತಿ,ಮತ, ಧರ್ಮ ಎಂದು ಕಚ್ಚಾಡದೆ,ಗರಾಜಕೀಯ ಬಿಟ್ಟು, ದ್ವೇಷ, ಮತ್ಸರ ಅಸೂಯೆಗಳ ಬದಿಗಿಟ್ಟು ಸತ್ಯ, ನ್ಯಾಯಯುತವಾಗಿ ಬದುಕಲು ಕಲಿಯುತ್ತಾನೆಯೇ?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ