ದೇಶಭಕ್ತಿಗೀತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ದೇಶಭಕ್ತಿಗೀತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಆಗಸ್ಟ್ 15, 2019

1177. ಐಕ್ಯತೆ

ಐಕ್ಯತೆ

ಹಿಂದೂ ಬೌದ್ಧ ಮುಸಲ್ಮಾನನು ನಾನು
ಕ್ರೈಸ್ತ ಪಾರ್ಸಿ ಜೈನನು ನಾನು
ಸರ್ವರಿಗೊಂದೇ ಕೆಂಪನೆ ರಕುತವು
ಸರ್ವರ ನೋವಿಗೂ ಪ್ರೀತಿಯೇ ಮದ್ದು..

ಮುದ್ದಿಗೆ ಇಲ್ಲವು ಯಾವುದೇ ಧರ್ಮ,
ಪಂಚ ಭೂತಗಳಿಗ್ಯಾವುದು ಧರ್ಮ?
ಗಾಳಿ ನೀರು ಅಗ್ನಿ ಆಕಾಶ ಭೂಮಿಯಲಿ
ಮಾನವರೆಲ್ಲ ಒಂದೇ ಅಲ್ಲವೇ..

ಸುಡಬೇಕು ಅಂತರಂಗದ ದ್ವೇಷ
ಸುರಿದು ಹೋಗಲಿ ರೋಷದ ಮಳೆಯು
ಉಸಿರಾಡಲಿ ಭಾರತ ಮಾತೆಯ ಗಾಳಿ!
ದೇಹಕೆ ಹೋಗಲಿ ರೈತನ ಬೆಳೆಯು..

ಯೋಧಗೆ ಗುರುವಿಗೆ ಜಾತಿಯು ಇಹುದೇ
ಡಾಕ್ಟರ್ ಲಾಯರ್ ಧರ್ಮವ ನೋಡುವುದೇ
ದ್ವೇಷದ ಕಿಡಿಯನು ಆರಿಸಿ ಬಿಡುತಲಿ
ಶಾಂತಿ ನೆಮ್ಮದಿಯು ಎಲ್ಲೆಡೆ ಹರಿಯಲಿ..
@ಪ್ರೇಮ್@
15.08.2019

1168. ನಾನು ಭಾರತೀಯ

*ನಾವು ಭಾರತೀಯರು...*

ಕೇಳಿರಿ ಮಕ್ಕಳೇ ಕೇಳಿರಿ ಜನರೆ,
ಹೆಮ್ಮೆಯಿರಲಿ ನಾವು ಭಾರತೀಯರೆಂದು..
ಸ್ವಾಭಿಮಾನದ ದೇಶ ಕಟ್ಟೋಣ..
ಭಾರತ ಮಾತೆಯು ನಮ್ಮವಳೆಂದೂ..//೧//

ಸಕಲ ಸೌಭಾಗ್ಯ ಪಡೆವೆವು ನಾವು,
ಮಾತೆ ಭಾರತಿಯ ಒಡಲಿಂದ..
ಕುಣಿದು ಕುಪ್ಪಳಿಸಿ ಸಂತಸ ಪಡುವೆವು..
ಭಾರತ ಮಾತೆಯ ಮಡಿಲಿಂದ..//೨//

ತನುಮನ ಅರ್ಪಿಸಿ ದುಡಿಯುತಲಿಹರು
ವೀರ ಯೋಧರು ಗಡಿಯಲ್ಲಿ..
ಪ್ರಾಣವನೆ ಒತ್ತೆಯ ಇಡುತ
ನಡುಗುತ ಬಾಳುವೆ ಮಂಜಿನಲಿ..//೩//

ಶೌರ್ಯ ಸಾಹಸ ಶಕ್ತಿ ಪ್ರದರ್ಶನ
ಬೇಡವು ತಾಯಿಯ ಹೃದಯದಲಿ..
ಪ್ರೀತಿ ಸ್ನೇಹ ಸಹಬಾಳ್ವೆಯು ಇರಲಿ
ಭಾರತಾಂಬೆಯ ಪುಣ್ಯ ನೆಲದಲಿ..//೪//

@ಪ್ರೇಮ್@
06.08.2019

1187. ಪುಣ್ಯವಂತ ನಾನು!

ಪುಣ್ಯವಂತ ನಾನು!

ಭಾರತದ ಒಡಲಲಿ ಹುಟ್ಟಿ ಬಂದೆ ನಾನು,
ಭಾರತಿಯ ಪ್ರೀತಿಸುವ ಭಾಗ್ಯ ಪಡೆದೆ ತಾನು!!

ಭಾರತಿಯ ಕೈತುತ್ತು ತಿನ್ನುತಲಿ ಬೆಳೆದೆ!
ಭಾರತಾಂಬೆಗೆ ಜೈಯೆನುವ ಭಾವವನೆ ಮೆರೆದೆ!
ಮನದಲೆಂದು ಭಾರತೀಯನೆಂಬ ಹೆಮ್ಮೆ ನನಗೆ,
ಬದುಕನೆಂದು ಇಲ್ಲೆ ಬೆಳಗೊ ಸಾಧನೆಯ ಕಡೆಗೆ//೧//

ಬಯಸಿದಂಥ ಸ್ವತಂತ್ರ ಸುಖವ ತಾಯಿಯೆನಗಿತ್ತು,
ನೀಡಿದಳು ಪ್ರೀತಿಯಿಂದ ನನಗೆ ಕೈ ತುತ್ತು,
ಸಲಹಿದಳು ಹಣ್ಣು ,ನೀರು ,ಊಟವನು ಇತ್ತು,
ಬಾಳುವೆಯೇ ಭಾರತದಿ ನನಗೆ ಸಂಪತ್ತು..//೨//

ಜಾತಿ ಧರ್ಮ ಬೇರೆಯಾದ್ರೂ ರಕ್ತವು ಎಲ್ಲರದೊಂದೆ!
ಭಾರತಿಯು ಸಲಹುವಳು ಹೀಗೆಯೇ ಮುಂದೆ!!
ಹಲವು ಭಾಷೆ, ಲಿಪಿಯಿದ್ದರೂ ಭಾರತೀಯರೊಂದೇ,
ಸಂಸ್ಕೃತಿಯ ತವರೂರು ಸರಿಯದೆಂದೂ ಹಿಂದೆ//೩//

ಭಯವಿರದ ಬದುಕಿಹುದು ಭಾರತಿ ಮಡಿಲಲ್ಲಿ,
ಕೈ ತೊಳೆಯಲು ಸಾಗರವು ಕಾಯುತಲಿಹುದಲ್ಲಿ!
ಹಿಮಾಲಯದ ಎತ್ತರಕೆ ಏರಬಲ್ಲೆಯೇನು?
ಏನಿದ್ದರೂ ಮನುಜನೊಂದು ಜೀವಿಯೇ ಪರಿಸರದಿ ತಾನು!//೪//
@ಪ್ರೇಮ್@
15.08.2019

ಬುಧವಾರ, ಮಾರ್ಚ್ 27, 2019

886. ನಮನ

ನಮನ

ಭಾರತ ಮಾತೆಯೆ ಮಕ್ಕಳು ನಿನ್ನಯ
ಬಾಗುವೆವು ತಲೆ ಆಶೀರ್ವದಿಸು!
ನಾಲ್ಕನೆ ಸ್ಥಾನಕೆ ಏರಿಸಿ ಬಿಟ್ಟೆವು
ತಂತ್ರಜ್ಞಾನದ ಹಾದಿಯಲಿಂದು!!

ಅಮೇರಿಕ,ಚೀನಾ,ರಷ್ಯದ ಬಳಿಕ
ಹೊಡೆದುರುಳಿಸಬಲ್ಲೆವು ಸುತ್ತುವ ಉಪಗ್ರಹಗಳನು!
ಪಾಲಿಸು ನಿತ್ಯವು ಶಕ್ತಿಯ ಯುಕ್ತಿಯ
ಕಾಯುತ ನಿನ್ನಯ ಪ್ರೀತಿಯ ಮಕ್ಕಳನು...

ಆಕಾಶಕೆ ಹಾರಿ, ವಿಮಾನವ ಹಿಡಿದು,
ನಿನ್ನಯ ಕಳ್ಳರ ಸಂಹರಿಸಿಹೆವು.
ಗೋಡೆಯ ದಾಟುವ ಜನರನು ಹಿಡಿದು,
ಸದೆಬಡಿಯುತ ಶೌರ್ಯವ ಮೆರೆದಿಹೆವು!!

ಯೋಧರ ಕಾವಲು ನಿನಗಿದೆ ನಿರತವು..
ಉತ್ತರದಲಿ ಕಾಂಚನ ಜುಂಗ ಅನವರತವು..
ದಕ್ಷಿಣದಿ ಹಿಂದೂ ಸಾಗರ ಕಾಳ್ತೊಳೆಯಲು..
ಮನದಲಿ ದೃಢ ಭಕ್ತಿಯು ಇರಲು...

ಮಂಜಿನ ಸಾಲಲಿ ನಿನ್ನಯ ಪಯಣ..
ಪಶ್ಚಿಮ ಘಟ್ಟದ ಸಾಲಿನ ಕವನ..
ಎಲೆತುದಿ ಹಿಮದಲಿ ನದಿಗಳ ಜನನ..
ದ್ವಾದಶ ಮಾಸವು ಹರಿವುವು ಗಂಗಾ-ಯಮುನ..

ಈಶಾನ್ಯದಿಂದ ಚಹ,ಕಾಫಿಯ ಘಮಘಮ..
ಅರಬ್ಬಿ, ಕೊಲ್ಲಿಗಳಲ್ಲಿ ತೆರೆಗಳ ಸಮಾಗಮ!!
ಬೆಟ್ಟ ಗುಡ್ಡಗಳ ಆರಾವಳಿ ಸಾಲು!
ತುಂಬಿದೆ ನಿನ್ನಲಿ ನಮ್ಮಯ ಬಾಳು!!

ನಿನ್ನಲಿ ಹುಟ್ಟು ನಮಗಭಿಮಾನ
ಭಾರತಿ ನಿನಗೆ ಮಾಡುವೆ ಸನ್ಮಾನ!
ಪಡೆದಿಹೆನಿಲ್ಲಿ ಬಿಸಿ ಉಸಿರಿನ ಸ್ಥಾನ!
ತಾಯಿ ಭಾರತಿಯೆ ನಿನಗೆ ಪ್ರೀತಿಯ ನಮನ!!
@ಪ್ರೇಮ್@
28.03.2019

ಗುರುವಾರ, ಆಗಸ್ಟ್ 2, 2018

402. ನಮ್ಮ ಕರ್ನಾಟಕ

ನಮ್ಮ ನಾಡು

ನಮ್ಮೊಲುಮೆಯ ನಾಡು ಕರ್ನಾಟಕ
ಶ್ರೀಗಂಧ ಬೆಳೆವ ಬೀಡು ಕೊನೆತನಕ...

ನನ್ನ ತಾಯ್ನುಡಿಯದು ಕನ್ನಡ
ನನ್ನೊಳಗೇ ಬರುವುದು ನನ್ನ ಸಂಗಡ
ಹಚ್ಚ ಹಸಿರ ಪಚ್ಚೆ ನಾಡು ನೋಡ
ಸಾಯುವವರೆಗೂ ಬಾಯಲೆಂದು ಕನ್ನಡ..

ಮನೆ ಮನದಲಿ  ಪರಿಶುದ್ಧ ಇಲ್ಲಿಯ ಜನ
ಕಷ್ಟದಲಿ ಸಹಾಯಕ್ಕೆ ಲೆಕ್ಕ ಹಾಕರು ಹಣ
ಕನ್ನಡ ತಾಯ ಕೈತ್ತಲಿ ಬೆಳೆದ ಹೃನ್ಮನ
ತಾವು ಮಾಡುವ ಕಾರ್ಯ ಎಂದಿಗೂ ಘನ...

ಕನ್ನಡ ನುಡಿ ಯಾವಾಗಲೂ ಸವಿಸವಿ
ಕನ್ನಡ ಮನ ಅನುಗಾಲವು ಸಿಹಿಸಿಹಿ
ಕಥನ ಕವನ ಕತೆ ಎಲ್ಲವು ಕನ್ನಡದಲೆ ಅಂದ
ಏನಿದ್ದರು ಕರುನಾಡ ವಾಸವು ಅದು ಚಂದ..

@ಪ್ರೇಮ್@