ವಿಡಂಬನೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿಡಂಬನೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಆಗಸ್ಟ್ 4, 2019

1166. ಏಕೆ ಬಂತು ಸ್ವಾತಂತ್ರ್ಯ

ಏಕೆ ಬಂತು ಸ್ವಾತಂತ್ರ್ಯ?

ಹೊಸ ಹೊಸ ಪಕ್ಷಗಳ ಕಟ್ಟಲು,
ಮತದಾರನ ಚುನಾವಣೆ ಬಳಿಕ ಮೋಸಗೊಳಿಸಲು,
ಗೆದ್ದ ಮೇಲೆ ದುಡ್ಡು ಗಳಿಸಲು,
ಪ್ರತಿ ಮತಗಳಿಗಾಗಿ ನೋಟು ಹಂಚಲು,
ಬಂತು ನಮಗೆ ಸ್ವಾತಂತ್ರ್ಯ!!!

ಕಳಪೆ ಕಾಮಗಾರಿಯಿಂದ ಕಟ್ಟಡ ಕಟ್ಟಲು,
ವರ್ಷದಿ ಕೊರೆಯುವ ರಸ್ತೆಯ ನಿರ್ಮಿಸಲು,
ಬೇಗನೆ ತುಂಡಾಗೋ ಸೇತುವೆ ಜೋಡಿಸಲು!
ನೀರು ಬರದಿರೋ ಬೋರ್ವೆಲ್, ಬಾವಿಯ ತೋಡಲು,
ಬಂತು ನಮಗೆ ಸ್ವಾತಂತ್ರ್ಯ!!!

ಬಡವರ ಅಕ್ಕಿಯ ಗುಳುಂ ಮಾಡಲು,
ಮಕ್ಕಳ ಸೈಕಲ್ ನಲ್ಲೂ ಒಳ ಹಾಕಲು!
ಊಟದ ಪಾತ್ರೆಗೆ ವಿಷವನು ಬೆರೆಸಲು,
ಸಿಕ್ಕಿಹ ಸಮಯವ ಮೊಬೈಲಲಿ ಕಳೆಯಲು,
ನಮಗೆ ಬಂತು ಸ್ವಾತಂತ್ರ್ಯ!!!

ಮನಗಳ ನಡುವಿನ ಪ್ರೀತಿಯ ತುಂಡರಿಸಲು,
ಜಾತಿಯ ತಾಯಿಬೇರನು ಆಳಕೆ ಊರಲು!
ಮತಗಳ ಹೆಸರಲಿ ಸಂಘವ ಬೆಳೆಸಲು!
ದೇಶದ ಐಕ್ಯತೆ ಒಡೆದು ಚೂರಾಗಿಸಲು,
ನಮಗೆ ಬಂತು ಸ್ವಾತಂತ್ರ್ಯ!!!
@ಪ್ರೇಮ್@
04.08.2019

ಮಂಗಳವಾರ, ಜುಲೈ 9, 2019

1108. ನೆನೆಯದಿರು

ನೆನೆಯದಿರು(ವಿಡಂಬನೆ)

ದಿನಮನದ ಗೆಳೆತನವ ನೆನೆಯದಿರು ತಮ್ಮಾ..
ಮನೆಮನದ ಕೊಡುಕೊಳ್ಳು  ಮರೆಯಬೇಕು ತಮ್ಮ..

ಇಂದಿನದು ಇಂದಿಗೆ ನಾಳಿನದು ನಾಳೆಗೆ,
ಪರರ ಚಿಂತೆಯದು ನಮಗೇತಕೆ ತಮ್ಮಾ..

ದಿನದಿನವು ಕತ್ತೆಯಂತೆ ನಾವೇ ದುಡಿಯುವುದೇಕೆ,
ಪರರೂ ದುುಡಿಯಲಿ ಎಂದು ಮನೆಯಲೆ ಕೂಡು ತಮ್ಮಾ..

ನಾನೇ ಮುಂದ್ಹೋಗಬೇಕು ಇಂದು,ನಾಳೆ,
ಬದಿಯವನ ದೂಡಿ, ಜಾಡಿಸುತ ಮುಂದೆ ನಡೆಯುತಿರು ತಮ್ಮಾ..

ಬಿದ್ದೋದವ ಹೋಗಲಿ, ಹುಟ್ಟುವನು ಇನ್ನೊಬ್ಬ,
ನನಗ್ಯಾಕೆ ಯೋಚನೆಯು ಎನುತ ಸಾಗು ತಮ್ಮಾ..

ಕಷ್ಟವನು ಮೆಟ್ಟುತಾ, ಸುಖಬರಲಿ ಎನ್ನುತಾ,
ಸಮಯವನು ಒದ್ದು ಮುನ್ನಡೆಯೋ ತಮ್ಮಾ..

ನಾನು ನಾನೇ ಎಲ್ಲ, ನನಗೆ ಯಾರೂ ಇಲ್ಲ,
ಎನುತೆನುತ ಜಗದಲಿ ಮುನ್ನಡೆಯೋ ತಮ್ಮಾ..

ದಿನದಿನವೂ ಹಿಂದೋಡದೆ ಮುಂದೆಯೇ ನೋಡುತಲಿ,
ಕ್ಷಣಕ್ಷಣವು ಬದುಕಿನೊಡನೋಡುತಿರು ತಮ್ಮಾ..
@ಪ್ರೇಮ್@
04.07.2019

ಶುಕ್ರವಾರ, ಜೂನ್ 21, 2019

1074. ಹೀಗಿರಬೇಕಿತ್ತು ಕಾಲ

ಕಾಲ

ಕಾಲವೊಂದು ಹೀಗಿರಬೇಕಿತ್ತು!
ಪ್ರತಿ ಗಳಿಗೆಯೂ ವಸಂತಕಾಲ!
ಹಚ್ಚ ಹಸಿರಾದ ಚಿಗುರು ಮರಗಳ ಸಾಲು!
ಕೋಗಿಲೆಗಳ ಕೂಗು ಕಲರವದ ಬಾಳು!

ಕನಸ ಲೋಕದಲಿ ಮೊಲ ಜಿಂಕೆ ಓಡಾಟ!
ಕಾಡಲಿ ಹುಲಿ, ಕರಡಿ, ಸಿಂಹಗಳಾರ್ಭಟ!
ಮನುಜನಿಗೆ ಪ್ಲಾಸ್ಟಿಕ್, ಫೈಬರ್ಗಳ ಬಗೆಗೆ ತಿಳಿಯದು!
ಜೈವಿಕ ಬೇಸಾಯದ ಸುಖದ ಬಾಳು!

ಕೀಟನಾಶಕ ಕಳೆನಾಶಕಗಳೆಂದರೇನೋ ತಿಳಿಯದು!
ಒಂದು ಕೀಟವ ತಿನ್ನಲು ಮತ್ತೊಂದು ಜೀವಿ!

ನಿತ್ಯ ಅಲ್ಲಲ್ಲಿ ಹಾವು, ಹಲ್ಲಿ,ಓತಿಕೇತಗಳ ಓಡಾಟ!
ನಮ್ಮಷ್ಟಕ್ಕೆ ನಾವು, ಅವುಗಳ ಬದುಕು ಅವುಗಳಿಗೆ!

ಮರದ ಮೇಲೆಲ್ಲ ವಿವಿಧ ಪಕ್ಷಿ ಕೀಟ ಸಂಕುಲ!
ಹಣ್ಣುಗಳಿಗೆ ಅಳಿಲು, ಕಾಗೆ, ಗಿಳಿ, ಮಕ್ಕಳ ಸ್ಪರ್ಧೆ!
ಆಗಸದಲಿ ಬಣ್ಣ ಬಣ್ಣದ ಮೋಡಗಳಾಟ!
ಸಾಗರದಿ ಧುಮ್ಮಿಕ್ಕುವ ಜಲಧಾರೆಯ ನೋಟ!

ಎಲ್ಲೂ ಮಾಲಿನ್ಯವಿರದ ಭೂಲೋಕ ಸ್ವರ್ಗ!
ಹಸಿರ ಭೂಮಿ, ಶುದ್ಧ ನೀರು! ಮಲಿನವಿರದ ಗಾಳಿ!
ಫಸಲಿಗೆ ಬೇಕಾದ ಕಪ್ಪು, ಕೆಂಪು, ಮೆಕ್ಕಲು ಮಣ್ಣು!
ಅದೂ ವಿಷರಹಿತ, ಕೃತಕ ರಾಸಾಯನಿಕಗಳಿಲ್ಲದ್ದು!

ಆರೋಗ್ಯವಂತ ಮಕ್ಕಳ ಆಟ, ನಗು, ಕೇಕೆ!
ಹಿರಿ ಕಿರಿಯರ ಮಾತುಕತೆ, ನಗು, ಹರಟೆ!
ಆಚೀಚೆ ಮನೆಯವರ ಕೊಡು-ಕೊಳ್ಳುವಿಕೆಯಂದ!
ಸ್ವಲ್ಪ ಜಗಳ, ಕೆಲದಿನದ ಹುಸಿಮುನಿಸು!

ಸ್ವಾರ್ಥರಹಿತ ದಿನಗಳು, ಬಡವನಿಗೆ ಸಿರಿವಂತನ ಸಹಾಯ!
ಮನೆ ಮನಗಳೆರಡೂ ಹಿತವಾದವುಗಳು!
ಸಿಮೆಂಟಿಗೂ, ಮಣ್ಣಿಗೂ ಸ್ನೇಹ!
ಈದ್ ಗೆ ಸಿಹಿಹಂಚಿ, ಜೊತೆಯಲಿ ದೀಪಾವಳಿಗೆ ಪಟಾಕಿ ಒಡೆದು ಹಬ್ಬ!
ಕ್ರಿಸ್ ಮಸ್ ಗೆ ಚರ್ಚ್ ಗೆ ಹೋಗಿ ಮೊಂಬತ್ತಿ ಉರಿಸಿ,
ಗಣಪತಿ ಬಿಡುವಾಗ ಮೆರವಣಿಗೆಯಲಿ ಊರಿಗೂರೇ ಭಾಗಿ!

ಜಾತಿ ಮತಗಳ ಹಂಗಿಲ್ಲ,
ಪಕ್ಷಗಳಲ್ಲಿ ನುಸುಳಿಲ್ಲ!
ನ್ಯಾಯ ಕೊಡುವವನೇ ಊರ ನಾಯಕ!
ನ್ಯಾಯಯುತ ಬಾಳ್ವೆ ಜನರ ಕಾಯಕ!
@ಪ್ರೇಮ್@
07.06.2019

1068. ನಂಟು

ನಂಟು

ನನ್ಗೂ ನನ್ ಮೊಬೈಲ್ಗೂ ಬಿಡಲಾರದ್ ನಂಟಾ..
ಅಯ್ಯೋ ಅದ್ ಬಿಡ್ರೀ.. ನಮ್ಮಿಬ್ರದ್  ಏಳ್ ಜನ್ಮದ್ ನಂಟಾ...

ಈಗ್ ತೋರ್ತದ ಏಳಲ್ಲ, ಎಂಟನೇ ಜನ್ಮದ್ದಿದಂತ!
ಊಟ ತಿಂಡಿ ಶೌಚದಾಗೂ ಬಿಡಲೊಲ್ಲೆ ಇದ್ನ!
ಓದ್ತಾ ಬರೀತಾ ವೀಡ್ಯೋ ನೋಡ್ತಾ
ನಾನೊಬ್ನೇ ನಗ್ತಾ, ಬೇಜಾರಾಯ್ತೋ ಮಾರಿ ಸೊಟ್ಟಗ್ ಮಾಡಿ ಗೆಳೆಯಂಗ್ ಬೈತಾ!

ಮನಿಯೊಳಗೂ, ಮನಿ ಹೊರ್ಗೂ ನನ್ಗದರಾ ಬೆಸುಗೆ!
ಇಲ್ದಿದ್ರೇ ನಾ ಮೂಕ, ಜೋಡಿ ಅದೇ ನನಗ!
ನೀವಾರ ಹೇಳ್ರಯ್ಯ ಅಪ್ಪಗೆ ಇದ ಏನಂತ?
ನಿನಗ್ಯಾಕೋ ಮೊಬೈಲಂತ ಅವ ದೂರ ಮಾಡ್ದ!

ಮೊಬೈಲಿಲ್ದೆ ನಾನಿಲ್ಲ, ತಿಳಿದಿವ್ನಿ ಅದ ಹೆಣ್ತಿ ಅಂತ!
ಗಣ್ ಮಾಮನ ಇಲಿಯಂತೆ ಅದ್ ನನಗ ಬೇಕಂತ!
ಊಟ ತಿಂಡಿ ಒಂದ್ಹೊತ್ತು ಇಲ್ದಿದ್ರೂ ನಡೀತದ!
ಮೊಬೈಲ್ ಮಾತ್ರ ಮೂರ್ಹೊತ್ತೂ ಕೈನಾಗೇ ಬಂದ್  ಕುಂತಿರ್ತದ!

ಮಕ್ಳಾದ್ರೂ ಬದಿಗಿರ್ಲಿ! ಮೊಬೈಲ್  ಕಾಸಿನ ಹಾಂಗ!!
ಕಣ್ ಮೂಗು ಬಾಯೆಲ್ಲ ಮೊಬೈಲ್ ನ  ಕೈನಾಗ!
ಮನಿ ಮನವ ಕೆಡಿಸ್ತಲ್ಲೋ ಈ ಎಳೆ ಕಂಪ್ಯೂಟರ್ರು!
ಎಲ್ಲಾ ಐತೆ ಅದರೊಳಗ ಜಗದ ತಿರುಳೆಲ್ಲಾ..

ಜ್ವಾಪಾನ ಮಾಡ್ಬೇಕು ನನ್ ಮೊಬೈಲನ್ನ!
ಹೆಣ್ತಿ  ಏನಾರ ನೋಡ್ಬಿಟ್ರೆ, ಮರ್ಯಾದೆನೇ ಓಟ!
ಏನ್ ಬೇಕೋ ಏನ್ ಬೇಡ್ವೋ ಮೆಾಬೈಲ್ ಕೈಲಿ ಬೇಕ...
@ಪ್ರೇಮ್@
15.06.2019

ಸೋಮವಾರ, ಮೇ 13, 2019

1010. ಕವನ-ಜೀವನ

ಜೀವನ

ನೀನು ಸಿರಿವಂತನಾಗಿ ಬದುಕುವುದ ನಾ ನೋಡಲಾರೆ!
ನೀನು ಕಾರಿನಲ್ಲಿ ಕುಟುಂಬದೊಂದಿಗೆ ರಜಾ ದಿನಗಳಲಿ ಸುತ್ತುವುದ ನಾ ಸೈರಿಸಲಾರೆ!

ನೀನೇ ದುಡಿದ ಹಣದಿ ನಿನ್ಮ ಹೆಂಡತಿ ಮಕ್ಕಳಿಗೆ ಉಡುಗೊರೆ ಕೊಡುವುದ ನಾ ತಾಳಲಾರೆ!
ನಿನ್ನ ಸಂಬಳದ ಉಳಿತಾಯದಿ ನೀ ಕಟ್ಟಿಸಿದ ಬಹು ಮಹಡಿಯ ಮನೆಯ ನಾ ನೋಡಿ ಸುಮ್ಮನಿರಲಾರೆ!

ನೀ ವೃತ್ತಿಯಲಿ ಪದೋನ್ನತಿ ಪಡೆಯುವುದನು ನಾ ಅರಗಿಸಿಕೊಳ್ಳಲಾರೆ!
ನಿನ್ನ ಮನೆಗೆ ತಂಪಿನ ಪೆಟ್ಟಿಗೆ, ಸ್ಮಾರ್ಟ್ ಟಿವಿ, ಸ್ಪೀಕರ್, ಬಂದರೆ ನಾ ಅದು ಹೇಗೆ ಸುಮ್ಮನಿರುವೆ?

ನೀನೆನಗೆ ಸಂಬಂಧಿಯಲ್ಲ,
ಆದರೂ ಹೊಟ್ಟೆಕಿಚ್ಚು ಬಿಡಬೇಕಲ್ಲ!
ನಿನ್ನ ನಗೆ ಕೊಲ್ಲುವುದೆನ್ನ ಹೃದಯ!
ನೀ ನನಗಿಂತ ಮೇಲೇರಬಾರದು!

ನಿನ್ನ ಏಳಿಗೆಯ ಸಹಿಸದವನು ನಾನು!
ನಿನ್ನ ಎತ್ತರವ ಕಂಡು ಮೇಲೆ ಸಂತಸಪಟ್ಟು ಹರಸಿದರೂ ಮನದಲ್ಲೆ ಮರುಗುವವ ನಾನು!
ನೀ ನನ್ನ ಕಣ್ಣೆದುರಲ್ಲಿ ಬೆಳೆಯಬಾರದು!
ನೀ ನನಗಿಂತ ಮೇಲೇರಬಾರದು!

@ಪ್ರೇಮ್@
13.05.2019

ಗುರುವಾರ, ಏಪ್ರಿಲ್ 18, 2019

931. ಯಮನಿಗೆ ಸಲಹೆ

ಬರಬೇಡ...

ಯಮ ಧರ್ಮನೇ ನನಗೆ ತಿಳಿದಿದೆ
ಒಂದಲ್ಲ ಒಂದು ದಿನ ಬರುವೆ ನೀ
ಆಲಂಗಿಸಿಕೊಳ್ಳಲು ಜೀವನದಿ ನನ್ನ  !!
ಅಂದಿಗೇ ನಿಲ್ಲಿಸುವೆ ನನ್ನ ಉಸಿರನ್ನ!

ಯಾರೂ ನೋಡಿಲ್ಲ ನೀನು ಬಾಣಲಿಯಲಿ ಹಾಕಿ
ಪಾಪಿಗಳ ದೇಹವ ಕುದಿಸುವುದನ್ನ!
ನಾವೇನು ಮೂರ್ಖರೇ ನಂಬಲು
ಈ ಎಲ್ಲಾ ಕಟ್ಟು ಕತೆಗಳನ್ನ!!

ಬಳ್ಳಾರಿ ಸೆಕೆಗೆ, ರಾಸಾಯನಿಕಗಳ ಊಟಕ್ಕೆ
ನನ್ನ ದೇಹವ ಸದೃಡಗೊಳಿಸಿಕೊಂಡಿರುವೆ!
ಮಲಿನ ನೀರಾದರೂ ಕುಡಿದು!
ರೋಗಗಳು ಬರದಂತೆ ಆಂಟಿಬಯಾಟಿಕ್ ತಿಂದು!!

ನಿನಗೇನು ಮಹಾ ಗೊತ್ತು, ಇಂದಿನ ಭೂಲೋಕದ ಜನರ ಬಗ್ಗೆ?
ನಿನ್ನ ಕಾಲನ್ನೇ ಕಟ್ಟಿ ಬಾಣಲೆಯ
ಒಳಗೆ ಹಾಕಿ ಬಿಟ್ಟಾರು ಜೋಕೆ!!!

ಮಹಾನ್ ಕಳ್ಳ ಕದೀಮರು ಎನಿಸಿಕೊಂಡವರು
ಪೊಲೀಸ್, ಸಿಬಿಐ ಕೋರ್ಟ್ ಬಿಡು,
ನಿನಗೂ ದುಡ್ಡು ಕೊಟ್ಟು ಮರುಳು ಮಾಡಿಬಿಟ್ಟಾರು!

ನೀನಿನ್ನು ಭೂಮಿಗೆ ಬರುವಾಗ
ಬಹಳ ಜಾಗೃತನಾಗಿ ಬರಬೇಕು!
ಬೇಕೆಂದರ ಕೋಣವಲ್ಲ, ಬುಲೆಟ್ ಪ್ರೂಫ್
ಕಾರು, ಜಾಕೆಟ್, ಕನ್ನಡಕವೂ ತರಬೇಕು!

ಜನ ನಿನ್ನೇ ಸಾಯಿಸದೆ ಬಿಟ್ಟರೆ
ಅದುವೇ ನಿನ್ನ ದೊಡ್ಡ ಪುಣ್ಯ!
ವಿದ್ಯುತಲ್ಲೆ ಸುಟ್ಟು ಮಾಡಿಯಾರು ಬೂದಿ
ನಿನ್ನ ಬೃಹತ್ ಗಾತ್ರದ ದೇಹವನ್ನ!

ಬರಬೇಡ ನೀನೊಬ್ಬನೇ ಜತೆಯಿಲ್ಲದೆ,
ಈ ಧರೆಯೊಡಲಿಗೆ ನೀನೀಗ!
ಜನ ಸಾಯುವರು ತಮ್ಮಷ್ಟಕೆ  ತಂತಾನೇ
ಪರಿಸರವ ಎಲ್ಲೆಡೆ ಎಡೆಬಿಡದೆ ಕೆಡಿಸೀಗ!

@ಪ್ರೇಮ್@
16.04.2019

ಶುಕ್ರವಾರ, ಮಾರ್ಚ್ 29, 2019

887. ಅಪ್ಪನ ಮುಖಗಳು

ಅಪ್ಪ

ಹಲವಾರು ದೇವರು ನಮಗೆ
ಅವರಿಹುದು ಕೈಲಾಸ, ವೈಕುಂಠದಲಿ
ಕಣ್ಣಿಗೆ ಕಾಣುವ ದೇವರಲಿ
ಅಮ್ಮನ ಬಳಿಕ ಅಪ್ಪನಿಲ್ಲಿ..

ಅಮ್ಮ ಪ್ರೀತಿಗೆ, ತಂದೆ ಜವಾಬ್ದಾರಿಗೆ..
ಅಮ್ಮ ಪಾತಾಳದ ಬೇರಿನೆಡೆಗೆ
ಪಿತನು ಅಂಬರದ ಕಡೆಗೆ!!
ತಾಯಿ ಅಕ್ಕರೆಗೆ, ಪಪ್ಪ ಶಿಸ್ತಿಗೆ!!
ಆಯಿ ಆಟಕ್ಕೆ, ಅಪ್ಪಾಜಿ ಊಟಕ್ಕೆ!!

ಯಾರನ್ನಾದರೂ ತಾಯಿಯೆಂದರಾಗುವುದು,
ಜಗದಿ ತಂದೆಯೆಂದು ಇತರರ ಕರೆಯಲಾಗದು!
ತಾಯುಂದಿರು ನೂರಾರಿರಬಹುದು!
ತಂದೆಯ ಸ್ಥಾನ ತುಂಬುವುದು ಅವನೊಬ್ಬನೇ...

ದುಡಿಮೆಯೇ ದುಡ್ಡಿನ ದೇವರೆನುವ
ಹಗಲಿರುಳು ಕಷ್ಟಪಟ್ಟು ಕಾರ್ಯಗೈಯ್ಯುವ,
ಮಕ್ಕಳಿಗಾಗಿ ಪರರ ಕಾಟ ಸಹಿಸುವ!
ಮಕ್ಕಳ ಬಗ್ಗೆ ಕನಸು ಕಾಣುವ ಜೀವಿ!

ಕೊನೆಯಲೊಂದು ಮಾತು!
ಹೀಗೂ ಇದ್ದಾರೆ ಅಪ್ಪ, ಮಕ್ಕಳ ಬಾಳಲಿ!
ಜವಾಬದಾರಿಯನ್ನೇ ತೆಗೆದುಕೊಳ್ಳದವ!
ಹೆಂಡತಿ, ಮಕ್ಕಳ ಬಗೆಗೆ ಯೋಚಿಸದವ!
ತಾನು, ತನ್ನ ಬದುಕು,ಕುಡಿತವೆ
ತನಗೆ ದೇವರು, ತನ್ನ ಜೀವನವೆನುವ!
ಕುಡುಕ, ಬೇಜವಾಬ್ದಾರ ತಂದೆ!
ಹೆಂಡತಿ ಮಕ್ಕಳಿಗೆ ಹೊಡೆದು ಬಡಿವ ಭಡವ!
ಹೆದರಿಸುವ ಬಂಢ, ಮಾಡಿದ್ದ ಉಂಡು ಮಲಗುವವ!
ಮೂಢನಂತೆ ಇತರರ ಮೇಲೆ ಎರಗುವವ!
ಮಕ್ಕಳ ಬಾಳಲಿ ನೈಜ ಖಳನಾಯಕನಾದವ!!
ಹೆದರಿಸಿ ಬೆದರಿಸಿ ಧೈರ್ಯ ಕಿತ್ತುಕೊಂಡವ!
ಕೈ ಹಿಡಿದವಳ ಬಾಳಿಗೆ ಕೊಳ್ಳಿ ಇಟ್ಟವ!
@ಪ್ರೇಮ್@
29.03.2019

ಸೋಮವಾರ, ಫೆಬ್ರವರಿ 18, 2019

785. ಕಲಿಯುಗದಲಿ ಕಲಿ

ಕಲಿ

ದಿಕ್ಕು ದೆಸೆಯಿಲ್ಲದ ಅದೆಷ್ಟೋ ಜೀವಿಗಳು!
ಧರೆಗೆ ಬಂದಿವೆ ತೆರಳುವವರೆಗೆ ಬದುಕಲಿವೆ!
ಹಸಿವಾದಾಗ ಸಿಕ್ಕಿದ್ದ ತಿನ್ನುವುದು, ನೀರು ಕುಡಿಯುವುದು!
ಉಸಿರಾಟದ ಗಾಳಿ ಹೇಗೂ ಪ್ರಕೃತಿ ಕೊಡುವುದು!

ನಿದ್ದೆ ಮಾಡಿ ಎದ್ದು ಕುಳಿತು ದಣಿವಾರಿಸುತ್ತಾ,
ಊರೂರು ಅಲೆದು ನೋಡಿಕೊಂಡು ಸಂಭ್ರಮಿಸುತ್ತಾ..
ವಿದ್ಯೆ, ವಿನಯದಾಲೋಚನೆಗಳ ಮರೆತು ಬಿಡುತ್ತಾ..
ಮೌನದಲ್ಲೆ ಬದುಕನೆಲ್ಲ ತೇದು ಬಿಡುತ್ತಾ...

ಯಾವ ದಿಶೆಯು ಆದರೇನು ಗುರಿಯು ಇಲ್ಲದವಗೆ?
ಯಾವ ಅನ್ನವಾದರೇನು ಹಸಿವೆ ಇಲ್ಲದವಗೆ!
ಯಾವ ಜನರೆ ಆದರೇನು ಭಾವಗಳಿಲ್ಲದವಗೆ?
ಯಾವ ಮಂತ್ರವಾದರೇನು ಭಕ್ತಿ ಇಲ್ಲದವಗೆ?

ಗುರಿಯು ಮುಖ್ಯ ಬಾಳಿನಲ್ಲಿ ಆಕಾಶದೆತ್ತರವದು!
ಗೂಡ ಸೇರಿ ಕುಳಿತರಲ್ಲ,ಹಾರಾಟ ಕಲಿಯುವುದು!
ಮೇಲೆ ಕೆಳಗೆ ಹಾರಬೇಕು, ನಿತ್ಯ ಕಲಿಯಬೇಕು!
ಜೀವಿಗಳಿಗೂ ಸಮಾನವಾಗದು ಕಲಿಕೆ ಇಲ್ಲದ ಬದುಕು!!!
@ಪ್ರೇಮ್@
19.02.2019