ಸಣ್ಣಕತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಣ್ಣಕತೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಅಕ್ಟೋಬರ್ 4, 2024

ಮದುವೆ

ಮದುವೆ

ಆ.  ಹುಡುಗಿಗೆ ಮದುವೆಯೇ ಆಗಲಿಲ್ಲ ಕಾರಣ ಬಡತನ. ಬಡತನವನ್ನೇ ಮೈ ಹೊದ್ದುಕೊಂಡು ಹುಟ್ಟಿ, ಬಡತನದಲ್ಲೇ ಬೆಳೆದು, ಬಡತನದಲ್ಲೇ ಶಾಲೆಗೆ ಸೇರಿ ಓದಿದ ಹುಡುಗಿ ಬಡತನದಲ್ಲೇ ಜೀವನ ಕಳೆಯುವ ಸ್ಥಿತಿ ಇತ್ತು.
  ಆದರೆ ಆಕೆ ಓದಿನಲ್ಲಿ ಸಿರಿವಂತಲಾಗಿದ್ದಳು. ಹೆಸರು ಕಲಾವತಿ. ಹೆಸರಿನ ಹಾಗೆ ಹಲವು ಕಲೆಗಳ ಒಡತಿ. ಹಾಡು, ನಾಟಕ, ಭಾಷಣ, ಕಲಿಕೆ ಎಲ್ಲದರಲ್ಲೂ ಆಕೆ ಮುಂದು. ಪೋಷಕರಿಗೆ ಅವಳ ಮೇಲೆ ಬಹಳ ಧೈರ್ಯ. ನಮ್ಮನ್ನು ಸಾಕುವಳು ಎಂಬ ನಂಬಿಕೆ. ಅವಳಿಗೊಬ್ಬ ಅಣ್ಣನಿದ್ದ. ಕಲಾ ರಾಮ್. ಆದರೆ ಕಲಾರಾಮ್ ಓದುವುದರಲ್ಲಿ ಅಷ್ಟಕ್ಕಷ್ಟೇ. ಮನೆಯ ಕಷ್ಟಕ್ಕೆ ಹೊರ ಹೋಗಿ ದಿನ ಕಳೆಯ ತೊಡಗಿದ. ಬೇಡದ ಅವನ ಹಾಗೆಯೇ ಇರುವ ಕೊಳಕು ಸ್ನೇಹಿತರು ಸಿಕ್ಕಿದರು. ಅವರ ಜೊತೆ ಜೂಜು, ಕುಡಿತ, ಹೊಗೆಸೊಪ್ಪು ಸೇವನೆ, ಧೂಮಪಾನ ಎಲ್ಲವನ್ನೂ ಕಲಿತ. ಇದರಿಂದ ಮನೆ ತೊರೆದ. ಅದೆಲ್ಲೋ ಬಾರಿನಲ್ಲಿ ಕೆಲಸಕ್ಕೆ ಸೇರಿದ. ಅದೊಂದು ಕಾಲದಲ್ಲಿ ತಾನು ಮಾಡಿದ್ದೆಲ್ಲ ಕೆಟ್ಟದು ಎಂಬ ಬುದ್ಧಿ ಬಂದು ಸರಿ ಆಗಲು ಹೊರಟ. ಆಗ ಕಾಲ ಮಿಂಚಿ ಹೋಗಿತ್ತು. ಅದು ಯಾರೋ ಒಬ್ಬಳು ತಮಿಳು ಹುಡುಗಿಯನ್ನು ಮದುವೆ ಆದ. ಅವಳಿಗೆ ಮೊದಲೇ ಒಂದು ಮದುವೆ ಆಗಿತ್ತು. ಅವಳು ಇವನನ್ನು ಕ್ಯಾರೆ ಮಾಡದೆ ಕೆಲಸಕ್ಕೆ ಹೋಗಿ ಸಂಪಾದಿಸಿ ಚೆನ್ನಾಗಿ ಬದುಕುತ್ತಿದ್ದಳು. ಗಂಡ ಎಂಬ ಹೆಸರಿಗಾಗಿ ನೋಡಲು ಚೆನ್ನಾಗಿದ್ದ ಇವನನ್ನು ಕಟ್ಟಿಕೊಂಡಿದ್ದಳು ಅಷ್ಟೇ.
   ಇತ್ತ ಕಲಾವತಿ ಚೆನ್ನಾಗಿ ಓದಿ ಬಿ ಎಸ್ಸಿ ನರ್ಸಿಂಗ್ ಮಾಡಿ ಒಂದು ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದಳು. ಒಳ್ಳೆಯ ಸಂಬಳ ಸಿಗುತ್ತಿತ್ತು. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಂಡಳು. ಆದರೆ ಎದುರು ನಿಂತು ಅವಳ ಮದುವೆ ಮಾಡಿ ಕೊಡುವವರು ಯಾರೂ ಇರಲಿಲ್ಲ. ತಂದೆ ರೋಗಿಯಾಗಿದ್ದರು. ತಾಯಿ ಏನೂ ತಿಳಿಯದವರಾಗಿದ್ದರು. ಬಡತನ ಬಂಧುಗಳನ್ನು ದೂರಕ್ಕೆ ಅಟ್ಟಿ ಬಿಟ್ಟಿತ್ತು.
     ಮನೆಯ ಪರಿಸ್ಥಿತಿ, ಪೋಷಕರ ಬಗ್ಗೆ ತಿಳಿದಿದ್ದ ಕಲಾವತಿ ಮದುವೆಯ ಬಗ್ಗೆ ಯೋಚನೆ ಮಾಡಲಿಲ್ಲ. ಪೋಷಕರಿಗೂ ಅದೇ ಬೇಕಿತ್ತು. ಮದುವೆಯಾಗಲು ಭಯಂಕರ ವರದಕ್ಷಿಣೆ ಕೂಡಾ ಅಡ್ಡಿ ಬಂದಿತ್ತು. ಹುಡುಗನ ಕಡೆಯವರು ಹುಡುಗಿ ನೋಡುವ ಮೊದಲೇ ಲಕ್ಷಗಟ್ಟಲೆ ರೇಟ್ ಫಿಕ್ಸ್ ಮಾಡಿ ಕೇಳುತ್ತಿದ್ದರು. ಹಾಗಾಗಿ ಅವಳು ಆಹ್ ಬಗ್ಗೆ ಯೋಚನೆ ಮಾಡಲು ಹೋಗಲಿಲ್ಲ. ಬಂಧುಗಳು ಎರಡನೇ ಸಂಬಂಧದ ವರ ಹುಡುಕಲು ಆರಂಭಿಸಿದಾಗ ಕೋಪ ಅವಳಿಗೆ ನೆತ್ತಿಗೇರಿತು. ಆದರೂ ಅವಳು ಅಸಹಾಯಕ ಪರಿಸ್ಥಿತಿಯಲ್ಲಿ ಇದ್ದಳು.ಗೆಳೆಯರೆಲ್ಲ ಸೇರಿ  ಪಕ್ಕದ ಊರಿನ ನವೀನ ಎಂಬ ಹುಡುಗನನ್ನು ಹೇಳಿ ಅವನು ಅವಳನ್ನು ಚೆನ್ನಾಗಿ ನೋಡಿಕೊಳ್ಳುವೆ ಎಂದು ಹೇಳಿ ಕಡಿಮೆ ವರದಕ್ಷಿಣೆ ಕೇಳಿ ಇವಳ ಹಣದಲ್ಲೇ ಮದುವೆಯಾದ.
        ಮದುವೆಯ ಬಳಿಕ ನವೀನ  ದುಡಿಯದಾದ. ಕಾರಣ ಸೋಮಾರಿತನ. ಮಡದಿ ದುಡಿಯುವಳು ಎಂಬ ತಾತ್ಸಾರ. ಮನೆಯಲ್ಲೇ ಕುಳಿತು ಗೆಳೆಯರ ಕರೆದು ಅವರೊಂದಿಗೆ ಲಲ್ಲೆ ಹೊಡೆಯುವುದು ಅಭ್ಯಾಸವಾಯಿತು. ಊರಿನಲ್ಲೇ ಇದ್ದುದರಿಂದ ಹಲವಾರು ಬಾಲ್ಯ ಸ್ನೇಹಿತರಿದ್ದರು. ಕಲಾವತಿ ತನ್ನ ತಂದೆ ತಾಯಿಗಳನ್ನು ನೋಡಿಕೊಳ್ಳುವ ಒಪ್ಪಿಗೆ ಮೊದಲೇ ಪಡೆದಿದ್ದ ಕಾರಣ ಅವರ ಮನೆಯಲ್ಲೇ ಉಳಿದಳು. ನವೀನನಿಗೆ  ಪರರ ಜೊತೆ ಸೇರಿ ಸಮಾಜ ಸೇವೆ ಮಾಡುವುದು ಹವ್ಯಾಸ ಆಗಿ ಬಿಟ್ಟಿತು. ಹಾಗಾಗಿ ಊರಿಗೆ ಉಪಕಾರಿ ಮನೆಗೆ ಮಾರಿ ಎಂಬಂತೆ ಆದ. ಹೊರಗೆ ಹಾರ, ತುರಾಯಿ ಹಾಕಿ ಜನ ಸನ್ಮಾನಿಸುತ್ತಿದ್ದರು. ಅದರಿಂದ ಅವನ ಮದ ಇನ್ನಷ್ಟು ಹೆಚ್ಚಾಯಿತು. ತಾನು ಗಣ್ಯ ವ್ಯಕ್ತಿ ಅಂದುಕೊಂಡ.
ಕಲಾವತಿಯ ತಂದೆ ತಾಯಿ ಹಾಸಿಗೆ ಹಿಡಿದರು. ಅವರನ್ನು ನೋಡಿಕೊಳ್ಳಲು ನವೀನ ಹೋಗಲಿಲ್ಲ. ತಂದೆ ತಾಯಿ ಮಗಳ ಬದುಕು ನೋಡಿ ಮರುಗಿದರು. ಎಷ್ಟು ದುಡಿದರೂ ಪೋಷಕರ ಔಷಧಿಗೆ ಸರಿ ಹೋಗುತ್ತಿತ್ತು. ಬಡತನದಲ್ಲೇ ಹುಟ್ಟಿ ಬಡತನದಲ್ಲೇ ಬೆಳೆದು, ಮದುವೆ ಎಂಬುದೂ ಬಡತನದಲ್ಲೇ ಅಂತ್ಯಗೊಂಡು, ಬಡತನವೇ ಮೈವೆತ್ತು ತಂದೆ ತಾಯಿ ಸತ್ತ ಬಳಿಕ ತನಗೆ  ಯಾರೂ ಇಲ್ಲ ಎಂದು ತಾನೂ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಳು.
@ಹನಿಬಿಂದು@
05.10.2024


ಬುಧವಾರ, ಮಾರ್ಚ್ 6, 2019

832. ದೇವರು ದೊಡ್ಡವನು!

ಮನದಾಸೆ ಫಲಿಸಿತು!

"ಮಧುರ! ಆಹಾ ಪೋಷಕರು ನನಗಿಟ್ಟ ಹೆಸರು ಅದೆಷ್ಟು ಸುಮಧುರ! ಆದರೆ ಆ ಮಧುರ ಬಾಳುವೆ ನನಗೆ ದಕ್ಕಲೇ ಇಲ್ಲ..." ಎನ್ನುತ್ತಾ ಕುಳಿತ ಮಧುರಳ ನೆನಪು ಹಿಂದಕ್ಕೆ ಜಾರಿತು.
"ಹೌದು, ಬಾಲ್ಯದಿಂದಲೂ ನನ್ನ ಕನಸು ನನ್ನ ಹುಟ್ಟುಹಬ್ಬವನ್ನು ಫಿಲ್ಮ್ ನಲ್ಲಿ ತೋರಿಸುವಂತೆ ಕೇಕ್ ಕಟ್ ಮಾಡ್ತಾ ಆಚರಿಸಬೇಕು, ನನಗದು ಸಾಧ್ಯವಾಗಲೇ ಇಲ್ಲ, ಇಪ್ಪತ್ತೇಳು ವರುಷಗಳ ಕನಸು! ಅಮ್ಮನ ಮನೇಲಿ ಹೇಗೂ ಅದು ಈಡೇರಲಿಲ್ಲ, ಗಂಡನ ಮನೇಲಿ ಆದ್ರೂ ಈಡೇರಬಹುದೆಂಬ ನಂಬಿಕೆಯಿಂದ ಬಲಗಾಲಿಟ್ಟು ಈ ಮನೆಗೆ ಬಂದೆ, ಗಂಡನೋ ತನ್ನ ವ್ಯಾಪಾರದಲ್ಲಿ ಮಗ್ನ. ಅತ್ತೆ , ಅವರಿಗೇನೂ ತಿಳಿಯದು! ಮೈದುನ, ಕುಡುಕ! ತನ್ನ ಕುಟುಂಬವನ್ನು ಚೆನ್ನಾಗಿ ನೋಡಿದರೆ ಸಾಕು!
   ನಾದಿನಿ? ತನ್ನ ಫೋನಾಯಿತು, ಸಾಮಾಜಿಕ ಜಾಲ ತಾಣಗಳಾಯ್ತು, ತಾನಾಯ್ತು! ಇನ್ನು ಯಾರಲ್ಲಿ ಕೇಳುವುದು? ಯಾರನ್ನು ಕಾಯುವುದು? ನಿರಾಸೆಯಿಂದ ನನ್ನ ಮಗನ ಜನನವಾದ ಬಳಿಕ ನನ್ನ ಕನಸನ್ನು ಅವನ ಮೂಲಕ ಮರೆತೆ.
ಹೌದು, ಮಾರ್ಚ್ ಹತ್ತು! ಮತ್ತೆ ಬಂತು! ಅದೇನೋ ಪುಳಕ! ಆದರೂ ಆಚರಿಸುವವರಾರು? ಬೇಸರದ ಕಿರಣವೊಂದು ನುಸುಳಿದೆ!
ಈಗೇನೋ ಮುಖಪುಟದ ಮುಖಪರಿಚಯವೇ ಇಲ್ಲದ ಸ್ನೇಹಿತರು ಕಳಿಸುವ ಶುಭಾಶಯಕ್ಕೇ ಖುಷಿಪಟ್ಟು ಸಂತಸಪಡುವುದಾಗಿದೆ!
  
"ಮಧುರ" ಯಾರೋ ಕರೆದಂತಾಯ್ತು. ತಿರುಗಿ ನೋಡಿದರೆ ಯಾರೂ ಇರಲಿಲ್ಲ! ನನ್ನ ಮನವೇ ಕರೆಯಿತೇನೋ..ಯಾರೋ ಮಿಸ್ಡ್ ಕಾಲ್ ಕೊಟ್ಟಿದ್ದರು.!!

"ಮಧುರ ಪಿಸು ಮಾತಿಗೆ..."ಸಿನೆಮಾ ಹಾಡನ್ನು ಹಾಡಿ ನನ್ನ ಮೊಬೈಲ್ ನನ್ನನ್ನು ಮತ್ತೆ  ಕರೆಯಿತು. ಪ್ರೀತಿಯನ್ನೆ ತನ್ನಲ್ಲಿ ತುಂಬಿಕೊಂಡ ಗೆಳತಿ ಪ್ರೀತಿ ಕರೆ ಮಾಡಿದ್ದಳು! 'ಓಹೋ, ನನಗೆ ಶುಭಾಶಯ ಕೋರುವಳೇನೋ, ಇವಳಾದರೂ ನೆನಪಿಟ್ಟು ಕರೆ ಮಾಡಿದಳಲ್ಲಾ" ಎಂಬ ಖುಷಿಯಿಂದ ಫೋನೆತ್ತಿ ಹಲೋ ಅಂದರೆ ಅತ್ತ ಕಡೆಯಿಂದ ಭಾರೀ ಟೆನ್ಶನ್ ನಲ್ಲಿದ್ದ ಪ್ರೀತಿ ಸಂಜೆ ಮನೆಗೊಮ್ಮೆ ಬಾ, ಅರ್ಜೆಂಟ್ ಫಾರ್ಮ್ ಒಂದಕ್ಕೆ ನಿನ್ನ ಸಹಿ ಬೇಕಿದೆ, ಇಂದೇ ಕೊನೆ ದಿನಾಂಕ, ತಪ್ಪಿಸಬೇಡ' ಎಂದು ಫೋನಿಟ್ಟಾಗ ನಗಬೇಕೋ, ಅಳಬೇಕೋ ತಿಳಿಯಲಿಲ್ಲ ನನಗೆ.
  
    ಬೇಸರದಿ ಪ್ರೀತಿಯ ಮನೆ ಕಡೆ ಸಂಜೆ ಕಾಲಿಟ್ಟೆ. ಮನೆಯೇನೋ ತೆರೆದಿತ್ತು. ಕತ್ತಲಾದರೂ ದೀಪ ಉರಿಸಿಲ್ಲ ಯಾಕೋ ಅಂದುಕೊಂಡೆ. ನಿಧಾನವಾಗಿ ಒಳಗಡಿಯಿಟ್ಟೆ. ಗೆಳತಿಯೊಂದಿಗೆ ಸಲುಗೆಯಿತ್ತು! ಒಳಗೆ ನಾನು ಹೆಜ್ಜೆ ಇಟ್ಟಿದ್ದೇ ಸಾವಿರ ವೋಲ್ಟ್ ಗಳ ಬಲ್ಬ್ ಒಮ್ಮೆಲೆ ಉರಿದಷ್ಟು ಬೆಳಕು ಬಂತು. ಆ ಕತ್ತಲೆಯಲ್ಲೆ ಎಲ್ಲರೂ ಕುಳಿತು ನನ್ನಾಗಮನಕ್ಕಾಗಿ ಕಾದಂತಿತ್ತು! ನನಗೆ ಅತ್ಯಾಶ್ಚರ್ಯ! ಪ್ರೀತಿ ಬಂದು ನನ್ನ ಕೈ ಹಿಡಿದು "ನಿನಗೆ ಸರ್ಪ್ರೈಸಾಗಿ ನಿನ್ನ ಬರ್ತ್ಡೇ ಪಾರ್ಟಿ ನಾವು ಅರೇಂಜ್ ಮಾಡಿದ್ದೇವೆ. ಕೇಕ್ ರೆಡಿಯಾಗಿ ಟೇಬಲ್ ಮೇಲೆ ಕುಳಿತು ನಿನಗಾಗಿ ಕಾಯ್ತಿದೆ ಲೇಟಾಯ್ತು, ಎಲ್ರೂ ಕಾಯ್ತಿದ್ದಾರೆ ಬಾ" ಎಂದು ನನ್ನ ಕೈ ಹಿಡಿದು ಕರೆದೊಯ್ದು ನನ್ನ ಕೈಲಿ ಕೇಕ್ ಕತ್ತರಿಸಿ, ಫೋಟೋ ತೆಗೆದು ಸಂಭ್ರಮದಿಂದ ಆಚರಿಸಿದಾಗ ಕನಸು ನನಸಾದ ಖುಷಿಯ ಜೊತೆ ಗೆಳತಿಯ ಸರ್ಪ್ರೈಸ್ ಗಿಫ್ಟ್ ಬಂದಾಗ ಸಂತಸ ಇಮ್ಮಡಿಸಿ, 'ದೇವರು ದೊಡ್ಡವನು' ಅನ್ನಿಸಿತು.!
@ಪ್ರೇಮ್@
07.03.2019

ಬುಧವಾರ, ಜನವರಿ 10, 2018

52. ಸಣ್ಣಕತೆ - ನಾ ಬದುಕಿದೆ

ಮೊಬೈಲ್ ಗೀಳು ಬಿಟ್ಟು ನಾ ಬದುಕಿದೆ

ನಾನಂದೂ ಗೆಳೆಯರೊಡನೆ ಬೆರೆತವನಲ್ಲ, ನನ್ನ ಗೆಳೆಯರ ಬಳಗವಿಲ್ಲ, ಟಿ.ವಿ ಯಲ್ಲಿ ಯಾವಾಗಲೋ ಒಮ್ಮೆ ವುಾರ್ತೆ, ಕ್ರಿಕೆಟ್ ಬಿಟ್ಟರೆ ಈ ಅದೃಷ್ಟ(?)ದ ಮೊಬೈಲ್ ನನ್ನ ಕೈ ಹಿಡಿಯುವವರೆಗೆ ನಾನು ಚಲನಚಿತ್ರಗಳನ್ನು ನೋಡುತ್ತಿದ್ದೆ. ಮೊಬೈಲ್ ಬಂದ ಮೇಲೆ ಅದೇ ನನ್ನ ಗೆಳೆಯನಾಗಿ ಬಿಟ್ಟಿತು. ಎಲ್ಲರೂ ಕರೆ,ಸಂದೇಶ,ಸಾಮಾಜಿಕ ತಾಣಗಳ ಜಾಲದಲ್ಲಿದ್ದರೆ ನನ್ನ ಲೋಕ ಬೇರೆಯೇ ಆಗಿತ್ತು. ಆಟಗಳ ಅದ್ಭುತ ಲೋಕ. ಮಕ್ಕಳು ಮಾತನಾಡಿದರೂ ಸಿಟ್ಟು ಬರುತ್ತಿತ್ತು. ನನ್ನನ್ನು ನನ್ನಷ್ಟಕ್ಕೇ ಬಿಡಿ ಎನ್ನುತ್ತಿದ್ದೆ. ಪ್ರತಿದಿನ ಹೊಸ ಆಟಗಳೂ ಸಿಗುತ್ತಿದ್ದವು. ನಾನೇ ಆನಂದಿಸುತ್ತಾ ಕಾಲ ಕಳೆಯುತ್ತಿದ್ದೆ. ಹಗಲು ರಾತ್ರಿ, ಊಟ-ತಿಂಡಿಗಳ ಪರಿವೆ ಇರಲಿಲ್ಲ.
  'ಕಣ್ಣು ಏಕೋ ಉರಿ' ಎಂದು ಡಾಕ್ಟರ್ ಬಳಿ ಹೋದಾಗ ಆ ಬೆಳಕನ್ನೇ ಎವೆಯಿಕ್ಕದೆ ನೋಡುವ ಕಂಪ್ಯೂಟರ್, ಮೊಬೈಲ್ ಕೆಲಸಗಳಾದರೆ ಬಿಟ್ಟುಬಿಡಿ' ಎಂದಿದ್ದರು. ಕುತ್ತಿಗೆ ನರ ಸೆಳೆತ ಕಾಣಿಸಿಕೊಂಡಾಗ 'ಮನೆಗೆ ಸಾಮಾನು ಹೊತ್ತು ತಂದು' ಅಂದುಕೊಳ್ಳುತ್ತಿದ್ದೆ.
ಚಾಲೆಂಜಿಂಗ್ ಆಟ 'ಬ್ಲೂ ವೇಲ್' ಸಿಕ್ಕ ದಿನ ಅದು. ಅದರ ಯಾವ ಚಾಲಂಜನ್ನೂ ಬಿಡಲಿಲ್ಲ ನಾನು! ಕೊನೆಯಲ್ಲಿ ಹಾರುವ ಚಾಲೆಂಜ್!
ಐದು ಮಹಡಿ ಕಟ್ಟಡದ ತುದಿಯಲ್ಲಿದ್ದೆ! ಇನ್ನೇನು ಹಾರಬೇಕು ಕೆಳಗೆ! ಅಷ್ಟರಲ್ಲಿ ನನ್ನಿಡೀ ಕುಟುಂಬ,ಪೊಲೀಸ್,ನೆರೆ-ಕರೆಯವರು ಬಂದು ನನ್ನ ತಡೆಯದಿದ್ದಿದ್ದರೆ ನಾನೀ ಕತೆ ಬರೆಯಲು ಇರುತ್ತಿರಲಿಲ್ಲವೇನೋ.. ಮೊಬೈಲ್ ಮಾರಿ, ಅದರ ಗೀಳು ಬೇಡವೆಂದು ಮನೆ-ಮಕ್ಕಳ ಕಡೆ ಹರಿಸಿರುವೆ ಗಮನ!

@ಪ್ರೇಮ್@