ಶುಕ್ರವಾರ, ಜುಲೈ 5, 2019

1093. ಗಝಲ್-84

ಗಝಲ್ -84

ನೀ ನನ್ನ ನೋಡಿದಾಗ ನಿನ್ನ ಪ್ರತಿಬಿಂಬವ ಕನ್ನಡಿಯಂತೆ ಕಂಡ ಸಂತಸವಿದೆ ಸಾಥಿ,
ಈಗೀಗ ಬೇಡದ ವಿಷ ವಸ್ತುಗಳ ನನ್ನೆಡೆಗೆ ತುರುಕಿ ಮುಖವೇ ಕಾಣದಾಗಿದೆ ಸಾಥಿ!

ಗಿಡ ಮರ ಬಳ್ಳಿಗಳು ನನ್ನೊಡಲಲಿ ಶೀರ್ಷಾಸನ ಮಾಡುತಲಿದ್ದವು,
ಇಂದು ದಡದಲಿಹ ಹಸಿರಿಗೂ ತಳೆದಿದೆ ಭಯಂಕರ ವಿಷ ರೋಗವಿದೆ ಸಾಥಿ!

ನನ್ನಯ ನೀರನು ತುಂಬಿಸಿ, ಬೊಗಸೆಯಲೆ ಕುಡಿದು ದಣಿವಾರಿಸಿಕೊಳುತಲಿದ್ದೆ,
ಇದೀಗ ನೀರಲಿ ಸಾವಿರ ರೋಗಾಣುಗಳು ಸಂತಾನ ಮಾಡಿ ಬದುಕುತಿದೆ ಸಾಥಿ!

ಮನೆಗೂ ಕೊಡದಲೆನ್ನ ಸಿಹಿ ನೀರನೆ ಹೊತ್ತೊಯ್ದು ಬಳಸುತಲಿದ್ದೆ,
ಸಾವಿರ ಅಡಿ ಕೊರೆದರೂ ಒಂದು ತೊಟ್ಟು ಶುದ್ಧ ನೀರು ಸಿಗದಾಗಿದೆ ಸಾಥಿ!!

ರಾಸಾಯನಿಕ ವಿಷವಸ್ತು, ಕೊಳೆತ ಶವಗಳೆನ್ನ ಉದರಕೆಸೆಯುತಿರುವೆ,
ಮುಂದೆ ನೀನೇನ ಕುಡಿವೆ, ಮಕ್ಕಳಿಗ್ಯಾವ ಶುದ್ಧ ಜಲ ಕುಡಿಸಲಿದೆ ಸಾಥಿ!?

ಕಾಲ ಕಾಲಕೆ ಸರಿಯಾಗಿ ಮಳೆ ಸುರಿಯದು ನಿನ್ನ ಜನ ಭಾರದಿಂದಾಗಿ,
ನೀರಿರದೆ ಇಳೆ ಬೆಳೆ ಬೆಳೆದು ನಿನಗೆ ನೀಡಲು ಸಾಧ್ಯವಾಗುವುದೆ ಸಾಥಿ?

ಹುಟ್ಟಿ ಬೆಳೆಸುತಲಿರುವ ಭೂಮಿಯೆಡೆ ಪ್ರೀತಿ ನಿನಗಿಲ್ಲ,
ಪ್ರೇಮದಿ ನಿನ್ನ ಸಾಕುವ ಪರಿಸರಕೆ ನೀ ವಿಷವುಣಿಸಿದೆ ಸಾಥಿ!
@ಪ್ರೇಮ್@
05.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ