ಸೋಮವಾರ, ಏಪ್ರಿಲ್ 26, 2021

ವ್ಯಾಪಾರ - ಕವನ

ವ್ಯಾಪಾರ

ಬೇವ ಬೆಳೆದು ಮಾವು ಉಣ್ಣಲಾದೀತೇ?
ಹಾಗಲವ ಅಟ್ಟು ಸಿಹಿಯ ಹುಡುಕಲಾದೀತೆ?
ಕಲ್ಲ ಮೇಲೆ ಕುಳಿತು ಹತ್ತಿಯ ಮೃದುತನವ ಬಯಸಲಾದೀತೆ?
ಕಪ್ಪು ಶಾಯಿಯಲಿ ಬರೆದು ಬಣ್ಣದ ಚಿತ್ರ ಬೇಕೆನಲು ಸಿಕ್ಕೀತೇ?

ಕಳ್ಳಿಯ ಹೂವನು ಮಲ್ಲಿಗೆಯೆನಲಾದೀತೆ?
ಹಣವ ಕೊಡದೆ ಅಂಗಡಿಯಲಿ ಸಾಮಾನು ಖರೀದಿಸಲಾದೀತೆ?
ತುಂಡರಿಸಿದ ಹೂವಿನ ದಳಗಳ ಮತ್ತೆ ಒಟ್ಟುಗೂಡಿಸಲಾದೀತೆ?
ಕಣ್ಣೀರ ಸುರಿಸದೆ ಭವದಲಿ ಬದುಕಲು ಆದೀತೆ?

ತನ್ನಂತೆ ಪರರು ಇರಬೇಕೆಂಬ ಒತ್ತಡ ಹಾಕಲಾದೀತೆ?
ಕಹಿ ಕೊಟ್ಟು ಸಿಹಿಯ ಹಿಂಪಡೆಯಲಾದೀತೆ?
ಮನದ ಭಾವಗಳ ಬರಲೇ ಬೇಡಿರೆನುತ ತಡೆಹಿಡಿಯಲಾದೀತೆ?
ಕನಸಿನ ಅರಮನೆಯ ನನಸಲಿ ಹಿಡಿದು ನಿಲ್ಲಿಸಲಾದೀತೆ?

ಪಾಪ ಕೊಟ್ಟು ಪುಣ್ಯ ಪಡೆಯಲಾದೀತೆ?
ಕೆಟ್ಟ ಮಾತುಗಳ ಕೊಟ್ಟು ಸಿಹಿ ನುಡಿಗಳ ನಿರೀಕ್ಷೆ ಮಾಡಲಾದೀತೆ?
ಶಾಪ ಕೊಟ್ಟು ಕೋಪ ತಣಿಸಲಾದೀತೆ?
ನೋವು ನೀಡಿ ಪ್ರೀತಿ ಪಡೆಯಲಾದೀತೆ?

ಜಗದಿ ಕೊಡು ಕೊಳ್ಳುವುದೇ ಬದುಕು ಮಾನವ
ನೂರು ಕೊಟ್ಟರೆ ಒಂದು ಪಡೆಯುವೆ ಒಳಿತ
ಹತ್ತು ಕೊಟ್ಟೊಡೆ ಸಾವಿರ ಹಿಂಪಡೆಯುವೆ ಕೆಡುಕ
ಸಿಹಿಯ ಕೊಟ್ಟು ಸವಿಯ ಪಡೆಯೋ ಜೀವವೇ...
@ಪ್ರೇಮ್@
23.04.2021

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ