ಸೋಮವಾರ, ಮಾರ್ಚ್ 17, 2025

ನಮಿಸೋಣ

ನಮಿಸೋಣ

ನಮಿಸೋಣ ದೇವರಂಥ ಮಾತಪಿತರ ಚರಣಗಳಿಗೆ
ಬಾಗೋಣ ತಾನುರಿದು ಬೆಳಕ ಕೊಡುವ ದೀಪಗಳಿಗೆ//

ಗೌರವವ ಕೊಟ್ಟು ಕಲಿಯಬೇಕು  ಹಿರಿಯರಿಂದ
ಸೌರಭವ ಬೀರುವ ಶಕ್ತಿ ಪಡೆದ ಗೆಲುವಿನಿಂದ
ಪೌರತ್ವ ಪಡೆದು ಬಾಳಿ ಬದುಕೋ ನಲಿವಿನಿಂದ 
ಹೌಹಾರಿ ಬೀಳದೆ, ತಾಳ್ಮೆ ಎಂಬ ಮಂತ್ರದಿಂದ//

ಕಪ್ಪು ಬಿಳುಪು ಎನ್ನದೆ, ಮೇಲು ಕೀಳು ತೊಡೆದು ಹಾಕಿ
ಸೊಪ್ಪು ಕಾಳು ತಿನ್ನುತ ಆರೋಗ್ಯದ ರಕ್ಷೆ ಮಾಡಿ
ಅಪ್ಪುಗೆಯೇ ಬದುಕಲ್ಲ, ಪ್ರೀತಿ ಸ್ನೇಹ ಮೊಳೆಯಲಿ 
ದಪ್ಪ ಸಣ್ಣ ಬಣ್ಣಕ್ಕಿಂತ ಜ್ಞಾನ ಹೆಚ್ಚು ಬೆಳೆಯಲಿ!//

ಸಂಸ್ಕೃತಿಯ ಉಳಿಸುತ ಗೆಳೆತನವ ಬೆಳೆಸುತ 
ಮಾತೃಭಾಷೆ ನಿತ್ಯವೂ  ಬಳಕೆಯನ್ನು ಮಾಡುತ
ನಾನು ನನ್ನ ನನ್ನದೇ ನನಗೆ ಎಂದು ಮೆರೆಯದೆ
ಸಹಾಯ ಮಾಡೊ ಮನುಜರ ಎಂದೂ ನಾವು ಮರೆಯದೆ//

ಬಾಗಿ ಬಳುಕಿ ಬಳ್ಳಿಯಂತೆ ಭಾವ ಬೀಜ ಬಿತ್ತುತ
ಬಾನವರೆಗೆ ಕೈಯ ಚಾಚೊ ಗುರಿಯ ಇರಿಸಿಕೊಳ್ಳುತ
ಭಾವ ಬೇಧ ಎಲ್ಲಾ ಮರೆತು, ಒಂದೇ ಎಂದು  ಸಾರುತ
ಬಾಕಿ ಉಳಿದ ದಿನಗಳನ್ನು ಭಯವ ಮರೆತು ಕಳೆಯುತ//

ದೈವೀ ಶಕ್ತಿ ಎಂಬ ಬಲದ ಪರಿಸರಕೆ ಬಾಗುತ
ಕೈಲಿ ಇರುವ ಸಮಯವನ್ನು  ಬುದ್ಧಿಯರಿತು ಬಳಸುತ 
ವೈದ್ಯ ಗುರು ಹಿರಿಯರಿಗೆ ನಮಸ್ಕಾರ ತಿಳಿಸುತ
ರೈಲಿನಂತ ಜೀವನದಿ ನೆಮ್ಮದಿಯ ಹುಡುಕುತ//
@ಹನಿಬಿಂದು@
07.10.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ