*ನಾನು ನನ್ನ ಬದುಕು*
ಬದುಕೆಂದರೆ ಸದಾ ಕಲಿಕೆ
ನಾನು ಎಂದರೆ ಅದು ನಾನೇ, ನನ್ನಂತೆ ಇನ್ನೊಬ್ಬರು ಇರಲಾರರು ಅಂದುಕೊಳ್ಳುತ್ತೇನೆ. ಪ್ರತಿಯೊಬ್ಬರೂ ಈ ಪ್ರಪಂಚದಲ್ಲಿ ಯೂನಿಕ್. ಅವರಿಗವರೇ ಸಾಟಿ. ಪ್ರತಿಯೊಬ್ಬನ ಮೆದುಳಿನಲ್ಲೂ ಅಗಾಧ ಶಕ್ತಿಯಿದೆ. ಅವರವರ ಅವಶ್ಯಕತೆ, ಬದುಕಿನ ದಾರಿಗಳಿಗೆ ಅನುಗುಣವಾಗಿ ಅದು ಬಳಕೆಯಾಗುತ್ತದೆ.
ನನ್ನ ಜೀವನದ ಗುರಿ ಕಂಪ್ಯೂಟರ್ ಸಾಫ್ಟ್ ವೇರ್ ಇಂಜಿನಿಯರ್ ಆಗುವುದಾಗಿತ್ತು. ಪಿಯುಸಿಯ ನನ್ನ ಅಂಕಗಳು ನನ್ನ ಬದುಕನ್ನು ತಿರುಗಿಸಿ ನನ್ನನ್ನು ಟಿ.ಸಿ.ಹೆಚ್ ಮಾಡುವಂತೆ ಮಾಡಿತು. ನನ್ನಮ್ಮನ ಕನಸೂ ನಾನು ಟೀಚರ್ ಆಗುವುದಾಗಿತ್ತು. ಅಲ್ಲಿಂದ ಮುಂದೆ ಓದ ಬೇಕೆನಿಸಿ ಎಂ.ಎ ಮಾಡಿದೆ. ಸೈಕಾಲಜಿ,ಪತ್ರಿಕೋದ್ಯಮ ಓದಬೇಕೆಂಬ ಆಸೆಯಿದ್ದರೂ ಓದಲಾಗಲಿಲ್ಲ! ಗಣಿತ ಹಾಗೂ ವಿಜ್ಞಾನದ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಸೇರಿದೆ. ನನ್ನ ಕೆಲಸದಲ್ಲಿ ನನಗ್ಯಾಕೋ ನೆಮ್ಮದಿ ಇರಲಿಲ್ಲ, ಪುನಃ ಓದಿದೆ. ಬೇಂದ್ರೆಯವರ ಬಗ್ಗೆ, ಕನ್ನಡದ ಬಗ್ಗೆ ತಿಳಿದುಕೊಳ್ಳಬೇಕೆಂದು ಕನ್ನಡದಲ್ಲಿ ಎಂ.ಎ ಮಾಡಿದೆ. ನನ್ನ ಓದಿನ, ಪರಿಶ್ರಮದ ಫಲವಾಗಿ ಹಿರಿಯ ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಭಡ್ತಿ ದೊರಕಿತು, ಆಂಗ್ಲ ಭಾಷಾ ಶಿಕ್ಷಕಿಯಾದೆ. ಸಾಹಿತ್ಯದೆಡೆಗಿನ ಆಸಕ್ತಿ ಮತ್ತೆ ಹೆಚ್ಚಿತು.
ನನ್ನ ಆಸಕ್ತಿಯನ್ನು ಗಮನಿಸಿ "ನಮ್ಮ ಬಂಟ್ವಾಳ" ವಾರಪತ್ರಿಕೆಯ ಸಂಪಾದಕರು ಅಂಕಣ ಬರಹಕ್ಕೆ ಅನುಮತಿಯಿತ್ತರು. "ಬದುಕಿನಲ್ಲಿ ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ" ಎನ್ನುವ ಅಂಕಣ ಸತತವಾಗಿ ಮೂರು ವರ್ಷಗಳ ಕಾಲ ಮೂಡಿ ಬಂತು. ಆಗಾಗ ಕವನಗಳು, ಲಘು ಬರಹ ಬರೆಯುವುದು ಹವ್ಯಾಸವಾಗಿ ಮುಂದುವರೆಯಿತು. ಹನಿ ಹನಿ ಇಬ್ಬನಿ ಒಳ್ಳೆಯ ವೇದಿಕೆಯನ್ನು ಕಲ್ಪಿಸಿಕೊಟ್ಟು ಪ್ರತಿಭೆಗೆ ನೀರೆರೆಯಿತು. ಕವಿ ಬಳಗದ ಧನೂರ್ ಸರ್ ಕೂಡಾ ರಾಜ್ಯ ಮಟ್ಟದ ಕವಿಗೋಷ್ಠಿ ಹಾಸನದಲ್ಲಿ ನಡೆದಾಗ ಅದರಲ್ಲಿ ಕವನ ವಾಚನಕ್ಕೆ ಅವಕಾಶ ಸಿಕ್ಕಿತು. ನನ್ನ ಗೆಳತಿ ನಳಿನಾ ಡಿ ಯ ಸಹಾಯದಿಂದ ಕರ್ನಾಟಕ ಲೇಖಕಿಯರ ಸಂಘದ ಸದಸ್ಯತನ ಸಿಕ್ಕಿತು.
ಇವಿಷ್ಟು ನನ್ನ ಹವ್ಯಾಸದ ಬಗೆಗಾದರೆ ಕಲಿಕೆ ಮತ್ತು ಕಲಿಸುವುದು ನನ್ನ ಬದುಕಾಯಿತು. ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಜನೆ ನೀಡುವುದು ಮನಸ್ಸಿಗೆ ಮುದ ನೀಡುತ್ತದೆ. ಬದುಕೆಂದರೆ ಪ್ರತಿದಿನ ಕಲಿಕೆ. ನನ್ನ ವಿದ್ಯಾರ್ಥಿಗಳ ಕಲಿಕೆಗೆ ನಾನು ಕಲಿಯುವುದು ಅತಿ ಮುಖ್ಯ.
ಇದು ಕಲಿಯುಗ. ಏನಾದರೂ ಹೊಸತನ್ನು ಕಲಿಯುತ್ತಲೇ ಇರಬೇಕು. ಜಗತ್ತು ಕ್ಷಣಕ್ಷಣ ಬದಲಾಗುತ್ತಿದೆ. ಹೊಸ ಜಗತ್ತಿಗೆ ಅಣಿಯಾಗಲು ಮಕ್ಕಳನ್ನು ತಯಾರುಗೊಳಿಸಬೇಕು.
ಬದುಕೆಂದರೆ ಕಲಿಕೆ. ನಾವು ಪ್ರತಿಕ್ಷಣ ಕಲಿಯುವುದು ತುಂಬಾ ಇದೆ. ಕಲಿಕೆಯೆಂದರೆ ಓದು ಬರಹ ಮಾತ್ರವಲ್ಲ, ಬದುಕುವ ಶೈಲಿ, ಭಾಷೆಗಳು, ಹೊಂದಾಣಿಕೆ ಇತ್ಯಾದಿ.
ಬದುಕಲು ಕಲಿಯೋಣ. ಸದಾ ಉನ್ನತಿ ಹೊಂದೋಣ. ಉತ್ತಮರಾಗೋಣ. ನೀವೇನಂತೀರಿ?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ