*ಮಾಡರ್ನ್ ಕವನ*
*ಅಮ್ಮ ಮತ್ತು ನಾನು*
💐ಯತೀಶಣ್ಣನ ಮಾಡರ್ನ್ ಕವನಕ್ಕೆ ಅವರೇ ಸಾಟಿ. ಆಲೋಚನೆಗಳು ಮನದಲ್ಲಿ ನಾಟಿದಾಗಲೇ ವಿಡಂಬನಾತ್ಮಕವಾಗಿ ಇಷ್ಟು ಸರಳ ಪದಗಳಲ್ಲಿ ಮಹಾನ್ ವಿಷಯಗಳರುಹಲು ಸಾಧ್ಯ.
ಕವಿತೆ ನೀಟಾಗಿ ಓದಿಸಿಕೊಂಡು ಹೋಗುವ, ಯಾರಿಗಾದರೂ ಅರ್ಥವಾಗುವ ಸರಳತೆಯೇ ಮೈವೆತ್ತ ಸುಂದರ ಕವನ.
ಒಳಾರ್ಥದಲ್ಲಿ ಇಡೀ ಒಂದು ಜನರೇಶನ್ ನ ತಾಯಿಯರ ಗುಣಗಳನ್ನು ಹಿಂಡಿ ಹಿಪ್ಪೆ ಮಾಡಿದ ಧೈರ್ಯವಂತ ನಾಯಕ.💐
.
💐ಹಿಂದಿನ ತಾಯಂದಿರ ಕಷ್ಟ, ಹೇಗೆ, ಸಂಕಟ, ಕಾಳಜಿಯನ್ನು ಎತ್ತಿ ಹಿಡಿದರೆ, ಕವಿತೆ ಮತ್ತೊಂದೆಡೆ ಇಂದಿನ ಜನರ ಸಾಮಾನ್ಯ ಬದುಕನ್ನು ಬಿಂಬಿಸಿದೆ.💐
💐ಮಾಡರ್ನ್ ಮಹಿಳೆಗಿರದ ತಾಳ್ಮೆ, ತನ್ನಂದ ಕಾಪಾಡುವ ತವಕದಲಿ ಮಗುವಿಗೆ ಹಾಲುಣಿಸದೆ,ಬಾಟಲಿ ಹಾಲನ್ನು ಮಗುವಿನ ಬಾಯಿಗೆ ತುರುಕಿ, ತನ್ನಂದ ಕಾಪಾಡುವೆನೆಂದುಕೊಂಡ ತಾಯಂದಿರನೇಕರು ಸ್ತನ ಕ್ಯಾನ್ಸರ್ ಎಂಬ ಮಾರಿಗೆ ತುತ್ತಾದ ಉದಾಹರಣೆಗಳನೇಕವಿವೆ ನಮ್ಮೀ ಸಮಾಜದಲಿ. ಇದನ್ನೇ ಕವನ ಸಾರಿ ಹೇಳಿದಂತಿದೆ.💐
ಇದು ಮುಗಿದು ಹೋದ
ಎರಡು ಜನ್ಮದ ಕಥೆ
ಎರಡು ಜನ್ಮದಲ್ಲೂ
ಅವಳೇ ತಾಯಿ ನಾನೇ ಮಗ
💐ಇಲ್ಲಿ ಕವಿ ಎರಡು ಜನರೇಶನ್ ಗಳ ಬಗ್ಗೆ ತಾನು ಹೇಳ ಹೊರಟಿರುವ ಸಾಲುಗಳನು ಎರಡು ಜನ್ಮವೆಂದು ಸರಳವಾಗಿ ಹೇಳಲಾಗಿದೆ. ತಾಯಿ,ಮಗುವಿನ ಋಣ ಜನ್ಮಾಂತರದ್ದೆಂಬ ಸಂದೇಶವೂ ಇದೆ.💐
ಮೊದಲ ಜನ್ಮದಲ್ಲಿ
ಅವಳಿಗೆ ನನ್ನ ಬರುವಿಕೆಯ ಕಾತರ ಇತ್ತು
ಆಗಾಗ ಹೊಟ್ಟೆ ಮುಟ್ಟುತ್ತಿದ್ದಳು
ನಾ ಒದ್ದಾಗ ಅಪ್ಪನ ಕೈ ಎಳೆದು
ತನ್ನ ಹೊಟ್ಟೆಯ ಮುಟ್ಟಿಸಿ ಆನಂದ ಪಟ್ಟಿದ್ದಳು
💐ಎರಡನೆಯ ಚರಣದಲಿ ಕವಿಯಾಶಯ ಅಮ್ಮನೊಲವಿನ ಕಾತರದ ಕಡೆಗೆ ಸರಿದಿದೆ. ತಾಯಿಗೆ ಮಗು ಹೊಟ್ಟೆಯೊಳಗಿರುವಾಗ ಆಗುವ ಪುಳಕ, ಅದನ್ನು ಅವಳು ಗಂಡನೊಡನೆ ಹಂಚಿಕೊಳ್ಳುವ ಪರಿ ಅದ್ಭುತವಾಗಿ ಚಿತ್ರಿತವಾಗಿದೆ. ಲೇಖನ ಚಿಹ್ನೆಗಳನ್ನು ಬಳಸಿದ್ದಿದ್ದರೆ (, . !) ಇನ್ನಷ್ಟು ಎಫೆಕ್ಟಿವ್ ಆಗಿ ಇರುತ್ತಿತ್ತು ಅನ್ನಿಸಿತು ನನಗೆ.💐
ನಾ ಹೊರ ಬಂದಾಗ
ಆನಂದಭಾಷ್ಪ ಸುರಿಸಿದ್ದಳು
ನನ್ನ ಅಳುವನ್ನು ಇಷ್ಟಪಟ್ಟಿದ್ದಳು.
ನಗುವಿಗಾಗಿ ಕಾದಿದ್ದಳು
ಎತ್ತಿ ಮುದ್ದಾಡಿ ನನ್ನ ಹಸಿವನರಿತು
ಎದೆಹಾಲ ನೀಡಿದ್ದಳು
💐ಮುದ್ದಾದ ತನ್ನಮಗುವನ್ನು ನೋಡಿ ತಾಯಿಗಾಗುವ ಮಮತೆ, ಅಕ್ಕರೆಯ ಹೊಳೆ ಹರಿವ ಸೌಂದರ್ಯದ ವರ್ಣನೆಯಿದು. ಬೇಂದ್ರೆಯವರ "ಗಿಡ ಗಂಟಿಗಳಾ ಕೊರಳೊಳಗಿಂದ ಹಕ್ಕಿಗಳಾ ಹಾಡು ಹೊರಟಿತು..." ನೆನಪಾಯಿತು. ಆನಂದಪಡುವ ರೀತಿಯ ವರ್ಣನೆ!💐
ನಾ ಮೊದಲ ಹೆಜ್ಜೆ ಇಟ್ಟಾಗ
ಚಪ್ಪಾಳೆ ತಟ್ಟಿ ಕುಣಿದಿದ್ದಳು
ಕೈ ಹಿಡಿದು ನಡೆಸಿದಳು
ಅಪ್ಪ ದುಡಿದು ಆಯಾಸ ಗೊಂಡು
ಬಂದು ಕೂತಾಗಲೂ
ನನ್ನ ಆಟ ಊಟಗಳ ವರದಿ ಒಪ್ಪಿಸಿದಳು
ನನ್ನ ಗಲ್ಲ ಮುಟ್ಟಿ ಅವನು ಆಯಾಸ ಮರೆತ್ತಿದ್ದನು.
ಕೂಸುಮರಿ, ಆನೆಮರಿ ಆಟ ಆಡಿಸಿದ್ದನು
💐ತಂದೆ,ತಾಯಿಯರಿಬ್ಬರ ಪ್ರೀತಿಯೂ ತನಗೇ ದೊರಕಿದಾಗ ಮಗುವೆಷ್ಟು ಸುಖ ,ಸಂತಸ ಪಡುವುದು ಎಂಬ ಭಾವದ ವರ್ಣನೆಯೊಂದಿಗೆ, ಮಗುವಿನ ಆಟ ಪಾಠದಲಿ ತಂದೆ, ತಾಯಿಯರ ಭಾಗಗಳನೂ ತಿಳಿಸುತ್ತಾ, ನೈಜವಾಗಿ ಮಗುವಿನ ಆಟಗಳು, ತುಂಟತನ ಪೋಷಕರಿಗೆಷ್ಟು ಆನಂದ ತರುವುದೆಂಬ ರೀತಿಯನು ಕಣ್ಣಿಗೆ ಕಟ್ಟಿದಂತೆ ಎಳೆ ಎಳೆಯಾಗಿ ಬಿಡಿಸಿಡಲಾಗಿದೆ.ವಾವ್ ...ಕೃಷ್ಣನ ಬಾಲ ಲೀಲೆಯ ನೆನಪ ಹೊತ್ತು ತಂದವು ಸಾಲುಗಳು! ನನ್ನ ಮಗಳ ಬಾಲ್ಯದ ದಿನಗಳತ್ತ ನೆನಪಿನ ಹಕ್ಕಿ ಹಾರಿತು!💐
ತೀರಿಸಲಾಗದ ಋಣ
ಬಾಕಿ ಇತ್ತು
ಎರಡನೇ ಜನ್ಮದಲ್ಲಿ
ಅವಳಿಗೆ ನಾ ಹೊರಗೆ ಬಂದರೆ
ಸಾಕೆನ್ನುತ್ತಿದ್ದಳು.
ಬಂದಾಗ ನಿಟ್ಟುಸಿರು ಬಿಟ್ಟಳು
ಸೌಂದರ್ಯದ ಚಿಂತೆ ಕಾಡಿ
ಬಾಯಿಗೆ ಬಾಟಲಿ ತುರುಕಿದಳು
ಸೊಂಟದಲ್ಲಿ ಎತ್ತಿ ಕೂರಿಸಿದಕ್ಕಿಂತ
ಹೆಚ್ಚು ತಳ್ಳುಗಾಡಿಯಲ್ಲೇ ಇರಿಸಿದ್ದೇ ಹೆಚ್ಚು
💐ಕವಿ ಮಾಡರ್ನ್ ಜನರೇಶನ್ ಬಗ್ಗೆ ಹೇಳಲಡಿಯಿಟ್ಟಿದ್ದು ಇಲ್ಲಿಂದ! ಮಾಡರ್ನ್ ಮಮ್ಮಿಗಳ ನಿಜವಾದ ಪರಿಚಯ ಇಲ್ಲಾಗುತ್ತದೆ ನಮಗೆ. ಹೊಟ್ಟೆಯಲ್ಲಿ ಮಗುವಿರುವಾಗಲೇ ಫಿಗರ್ ಹಾಳಾಗುತ್ತದೆಯೆಂದು ಸರಿಯಾಗಿ ಊಟ ತಿನ್ನದ ಅಮ್ಮಂದಿರು, ತನ್ನ ಮಗುವನ್ನು ಗಮನಿಸದೆ ತನ್ನ ಫಿಗರ್ ಗಾಗಿ ಗಂಟೆಗಟ್ಟಲೆ ಜಿಮ್ ನಲ್ಲಿ ವರ್ಕ್ ಔಟ್ ಮಾಡುವ ಮಹಿಳೆಯರ ಮಕ್ಕಳಿಗೆ ಕೆಲಸದವರೇ ಆಧಾರ. ಅವರ ಪ್ರೀತಿ ಸಿಕ್ಕಿದರೆ ಪುಣ್ಯ. ಅವರು ದುಡ್ಡಿಗಾಗಿ ಮಾತ್ರ ದುಡಿಯುವವರಾದರೆ ಮಗುವಿನ ಬಾಯಿಗೊಂದಿಷ್ಟು ತುರುಕಿ, ಅದರಲ್ಲಿ ನಿದ್ರೆ ಮಾತ್ರೆಯನ್ನೋ, ಆಲ್ಕೋಹಾಲನ್ನೋ ಬೆರೆಸಿ ಕೊಟ್ಟು ಮಲಗಿಸಿ ಕಾಲ್ಕೀಳುವವರೂ ಇದ್ದಾರೆ ಇಂದಿನ ದಿನಗಳಲಿ! ಮಾತೆಯ ಪ್ರೀತಿ, ಜವಾಬ್ದಾರಿ ಕಡಿಮೆಯದೇನಲ್ಲ. 💐
ಆರು ತಿಂಗಳಾದಾಗ ಬೇಬಿಕೇರ್ ಗೆ ಬಿಟ್ಟು ಬಂದಳು
ಅಪ್ಪನೋ ದುಡಿದು ಬಂದು
ನನ್ನ ಮುಖ ನೋಡಿ ದೂರ ಕೂತು ಬಿಟ್ಟ
💐 ಈಗಿನ ಕಾಲದ ತಂದೆ ಯರಿಗೂ ತಾಯಿಯಂತೆ ಮಕ್ಕಳ ಮೇಲೆ ಅಲರ್ಜಿ! ಇದನ್ನೆ ಈ ಸಾಲುಗಳು ಹೇಳ ಹೊರಟಿವೆ. ತಾನಾಯಿತು ತನ್ನ ಮೊಬೈಲ್.. ತಾಯಿಗೆ ಅಂದದ ಚಿಂತೆ, ತಂದೆಗೆ ವರ್ಕ್ ಲೋಡ್ ಪರಿಹರಿಸಿ ಆರಾಮವಾಗಿರಲು ಬೇಕು. ಮಗುವಿನ ಕಿರಿಕಿರಿ ಬೇಡ!💐
ನಾ ಮೊದಲ ಹೆಜ್ಜೆ ಇಟ್ಟಾಗ
ಪೀಪಿ ಶಬ್ದಮಾಡೋ ಶೂ ಕೊಟ್ಟಳು.
ಹೆಜ್ಜೆ ಕಲಿಯಲು ಸೈಕಲ್ ತಂದಳು
ಅತ್ತಾಗ ಅವರಿಬ್ಬರ ಮಧ್ಯೆ ಜಗಳಗಳು.
ನೀ ಎತ್ತಿಕೋ ನೀನೆತ್ತಿಕೋ ಎಂದು
💐ಮಗು ನನ್ನದು ಮಾತ್ರವಲ್ಲ, ನಿನ್ನದೂ ಕೂಡ ಎಂಬ ಭಾವ. ಕೆಲಸವನ್ನು ಹಂಚಿಕೊಳ್ಳುವಂಥ ಮನಸ್ಸು, ಆ ಜಗಳದಲಿ ಮಗು ಬಡಪಾಯಿ! ಅದ್ಭುತ ಸಾಲುಗಳು! ಅದರೊಂದಿಗೆ ಮಗುವಿಗೆ ಮಾಡರ್ನ್ ವಸ್ತುಗಳ ಕೊಡುಗೆ. ತಾಯಿಯೇ ಮಗುವಿನ ನ್ಯಾಟುರಾಲಿಟಿಯನ್ನು ಕೊಲ್ಲುವ ಬಗಂ ಬಿಂಬಿತವಾಗಿದೆ.💐
ಈಗ ಋಣ ಬಾಕಿ ಇದೆ ಅನಿಸಲಿಲ್ಲ
ಆಶ್ರಮದಲ್ಲಿ ಬಿಡಲು
ಮುಜುಗರ ಎನಿಸಲಿಲ್ಲ.
💐ಮಗುವಿನ ಭಾವನೆ ಹೇಗಾಗುವುದೆಂಬ ಕಲ್ಪನೆ. ನಾವ್ಯಾಕೆ ಹೀಗೆ ಎಂಬ ಮಾತಿಗೆ ಉತ್ತರ. ಅದ್ಭುತ ರಚನೆ.
ವಾವ್...
💐@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ