ಮರೆಯಲಾರದ ಕಥಾ ಕಮ್ಮಟದ ಮಹಾನುಭವ
ನಮ್ಮ ಬದುಕಿನ ಅಂದವಾದ ಗುರಿಯನ್ನು ಸರಿಯಾಗಿ ತಲುಪಬೇಕಾದರೆ ಬದುಕಿನಲ್ಲಿ ಬರುವ ಹಲವಾರು ತಿರುವುಗಳನ್ನು ನಾವು ಹೇಗಾದರೂ ದಾಟಲೇ ಬೇಕು.ಕೊಟ್ಟಿಗೆಹಾರದಿಂದ ಆಲೇಕಾನಿನ ತಿರುವುಗಳಲ್ಲಿ ಮೇಲೇರುತ್ತಾ ಚಲಿಸಿ, ಊಟಿಯನ್ನು ನೆನಪಿಸಿದ ಸೌಂದರ್ಯದ ಖನಿ ಆಲೇಕಾನನ್ನು ತಲುಪಿದಾಗ ನನಗನಿಸಿದ್ದು ಹೀಗೆ. ಸುತ್ತಲೂ ಹಬ್ಬಿರುವ ಹಸಿರ ಗಿರಿಯ ನಡುವಿನ ಸುಂದರ ಕಣಿವೆ ಆಲೆಕಾನ್. ವಾವ್!! ಅಲ್ಲಿನ ಜನರ ಹೃದಯ ಬಂಗಾರ! ಅದೆಷ್ಟು ದಿನಗಳಿಂದ ತಯಾರಿ ನಡೆಸಿದ್ದರೋ..ನಾ ಕಾಣೆ..ನೃತ್ಯ, ಹಾಡು,ಕೋಲಾಟಕ್ಕೆ ಅಣಿಯಾಗುತ್ತಾ, ಜತೆ ಜತೆಗೂ ಪ್ರತಿ ಮನೆಯಲ್ಲೂ ಇದ್ದ ಹಳೆ ಕಾಲದ ವಸ್ತುಗಳನ್ನೆಲ್ಲಾ ಜೋಡಿಸಿ, ಅಂದವಾಗಿ ಹೆಸರು ಬರೆದು ಅಲಂಕರಿಸಿ ಇಟ್ಟ ಅಂದದ ಕೆಲಸ! ಪ್ರತಿಯೊಂದರಲ್ಲೂ ಅಚ್ಚುಕಟ್ಟುತನ! ಮೆಚ್ಚಿ ಮನದುಂಬಿ ಬಂತು..
ಇಷ್ಟಕ್ಕೇ ಮುಗಿಯಲಿಲ್ಲ. ಆ ಊರಿನಲ್ಲಿ ಇರುವುದು ನಲವತ್ತೇ ಮನೆಗಳು. ಯಾವ ಮೊಬೈಲ್ ನೆಟ್ ವರ್ಕ್, 2ಜಿ,3ಜಿ, 4ಜಿಗಳ ಕಿರಿಕಿರಿ ಅವರಿಗಿಲ್ಲ. ಅಂದವಾದ ಮನೆಗಳಲ್ಲಿ ಅಚ್ಚುಕಟ್ಟುತನದೊಂದಿಗೆ ಬಂದ ಬಾಂಧವರನ್ನೆಲ್ಲ ತಮ್ಮ ಮನೆಗೆ ಬಂದ ನೆಂಟರೋಪಾದಿಯಲ್ಲಿ ಸತ್ಕರಿಸಿದ ಪರಿ ಹೇಳಸಾಧ್ಯ! ಹಲವಾರು ದಿನಗಳಿಂದ ತೋಟದೊಳಗಿನಿಂದ ಬೈನೆ ಮರದ ದಿಂಡನ್ನು ತಂದು ಅದನ್ನು ಕತ್ತರಿಸಿ ರುಚಿಕರವಾದ ಪಲ್ಯ ತಯಾರಿಸಿ, ಗದ್ದೆ ಬದಿಯ ಕೆಸುವಿನ ಎಲೆಗಳನ್ನೆಲ್ಲ ಪ್ರೀತಿಯಿಂದ ಕಿತ್ತು ಗಂಟು ಕಟ್ಟಿ, ರುಚಿ ರುಚಿಯಾದ ಗಸಿ ಮಾಡಿ ಬಡಿಸುವಲ್ಲಿನ ಅವರ ತಾಳ್ಮೆಗೆ ಅವರಿಗವರೇ ಸಾಟಿ. ಹಳ್ಳಿಯ ಮುಗ್ದ ಮನಸಿನ ಪ್ರೇಮದ ಕಾಣಿಕೆ ಅದುವೇ...
ಮತ್ತೊಂದೆಡೆ ನಮ್ಮ ಕತೆ ಬರೆಯುವ ಹಸಿವನ್ನು ತಣಿಸಲು ಅಡಿಯುಟ್ಟ ಶ್ರೀಪತಿ ಸರ್, ಅನಿತಾ ಮೇಡಂ, ಜೋಗಿ ಸರ್, ಶ್ಯಾಮ ಸುಂದರ್ ಸರ್ ..ವಾವ್..ಕತೆಯ ಬಗ್ಗೆ ಹಲವಾರು ಆಸೆ, ಕನಸನ್ನು ಹೊತ್ತು ಪಟ್ಟಣದಿಂದ ದೂರವಾದ ಆಲೆಕಾನಿಗೆ ಕಷ್ಟಪಟ್ಟು ಜೀಪಲ್ಲೋ, ಪಿಕಪ್ಪಲ್ಲೋ ಬಂದು ಸೇರಿಕೊಂಡ ಶಿಬಿರಾರ್ಥಿಗಳಿಗೆ ಕಥೆ ಬರಹದ ಒಂದೊಂದೇ ತುತ್ತನ್ನು ಸವಿಯಾಗಿ ತಾಳ್ಮೆಯಿಂದ ಉಣಬಡಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದ ಅತಿಥಿಗಳ ತಂಡ!
ಮಗದೊಂದೆಡೆ ಕರ್ನಾಟಕದಾದ್ಯಂತ ಇರವ ಯುವ ಕತೆಗಾರರನ್ನು ಹೆಕ್ಕಿ ಹೆಕ್ಕಿ, ತಮ್ಮ ಊರಿನ ಬಗ್ಗೆ ತಿಳಿಸಿ, ಆಲೆಕಾನಿನ ಬಗ್ಗೆ ತಿಳಿಸಿ, ಅಲ್ಲಿ ೧೭ ವರುಷಗಳ ನಂತರ ತೇಜಸ್ವಿಯವರ ಹೆಸರಿನಲ್ಲಿ ಊರವರ ಸಹಕಾರದೊಂದಿಗೆ ಕಥಾ ಕಮ್ಮಟದ ಹೊರೆ ಹೊತ್ತು ಏರ್ಪಡಿಸಿದ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಮೋಹನ್ ಶೆಟ್ಟಿ, ಗಣೇಶ ಮಗಲಮಕ್ಕಿ ನಂದೀಶ್ ಹಾಗೂ ಇತರರು, ಭಾಗವಹಿಸಿದ ಹಲವಾರು ಸ್ಥಳೀಯ ಪತ್ರಿಕೆಗಳ ಸಂಪಾದಕರು, ಆಗಾಗ ಮನರಂಜಿಸಿದ ಹಾಡುಗಾರರು, ಊರ ಜನರ ನೃತ್ಯ ವೈಭವ.. ಆಹಾ..ಹೇಳ ತೀರದ ಆನಂದ..
ಕತೆಗಾರನಿಗೆ ಅದೇನು ಬೇಕೋ ಮತ್ತೆ.. ಗುರಿ ತಲುಪಲು ಬದುಕಿನ ತಿರುವುಗಳನ್ನೆದುರಿಸಿ ಗುರಿಯೆಡೆಗೆ ಧಾವಿಸಿ ಅಂದದ ಗುರಿಯ ಸೇರುವ ಬದಲು!!
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ