ಬುಧವಾರ, ಅಕ್ಟೋಬರ್ 31, 2018

557. ಗಝಲ್-46

ಗಝಲ್

ಗೆಜ್ಜೆ ಕಟ್ಟಿ ನರ್ತಿಸಿ ಹೃದಯ ತಣಿಸುವ ಕಲೆಗಾರ ನಾನಲ್ಲ,
ತಬಲ, ವೀಣೆಯ ನುಡಿಸಿ ಜನಮನವ ಸೆಳೆವ ಕಲೆಗಾರ ನಾನಲ್ಲ!

ಹಣೆಗೆ ಬೈತಲೆಬೆಟ್ಟನಿಟ್ಟು, ಉದ್ದದ ಮಾಲೆ ಧರಿಸುವಂಥವನಲ್ಲ,
ಜರಿಜರಿ ಬಟ್ಟೆಯ ತೊಟ್ಟು, ಕಾಲಲಿ ಹೆಜ್ಜೆ ಹಾಕಿ ನರ್ತಿಸುವ ಕಲೆಗಾರ ನಾನಲ್ಲ..

ಸುಮಧುರ ಕಂಠದ ಗಾಯನ ಬರದೆನಗೆ,
ಬಣ್ಣಗಳ ಹದವಾಗಿ ಬಳಸಿ ಚಿತ್ರವ ಕುಂಚದಿ ಬಿಡಿಸುವ ಕಲೆಗಾರ ನಾನಲ್ಲ..

ಮಾತಿನಲ್ಲೆ ಸರ್ವರ ಹಿಡಿದಿಟ್ಟುಕೊಳ್ಳುವ ಶಕ್ತಿಯು ನನಗಿಲ್ಲ,
ಮೌನವೇ ಬಂಗಾರವೆನುತ,ಮನದಿ ಕನಸ ಕಾಣುವ ಕಲೆಗಾರ ನಾನಲ್ಲ..

ಪದಗಳಲಿ ಹಲವಾರು ಅರ್ಥ ಹುಡುಕಲಾರೆ ನಾನು,
ಭಾವನೆಗಳ ಭಾವದಿ ಬಿಂಬಿಸಿ ಹೊರಹೊಮ್ಮಿಸುವ ಕಲೆಗಾರ ನಾನಲ್ಲ..

ಹಾಡಲಾರೆ,ಕುಣಿಯಲಾರೆ, ನಟಿಸಿ ಜಗ ಮೆಚ್ಚಿಸಲಾರೆ.
ಅನೇಕ ಗುಣಗಳ ಮನುಜರ ನನ್ನೊಳಗೆ ಆಹ್ವಾನಿಸುವ ಕಲೆಗಾರ ನಾನಲ್ಲ...

ಪಕ್ವವಾಗಿಹ ಎದೆ ಗೂಡಿನಲಿ ಪಕ್ಷಿಯೊಂದನು ಬಚ್ಚಿಟ್ಟಂತೆ,
ಕಲೆಯು ಪ್ರೇಮದಿ ನನ್ನೊಡಲಲಿ ನಲೆಸಿದಂತಹ ಕಲೆಗಾರ ನಾನಲ್ಲ...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ