ಬೆಳೆಯುವ ಸಿರಿಗೆ ನೀರೆರೆದವರು
ನಾನಿದ್ದದ್ದು ನಕ್ಸಲರ ಅಟ್ಟಹಾಸಕ್ಕೆ ಹೆಸರಾದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮೂಲೆಯ ಕುಗ್ರಾಮ ಎಂದೆ ಹೆಸರಾಗಿದ್ದ 'ಈದು'ವಿನಲ್ಲಿ. ಅಲ್ಲಿದ್ದದ್ದು ಒಂದೇ ಶಾಲೆ. ಅದು ಊರಿನ ಹಿರಿಯರೊಬ್ಬರ ಮಹದಾಲೋಚನೆಯಿಂದ ಊರಿನ ಮಕ್ಕಳು ವಿದ್ಯಾವಂತರಾಗಲೆಂಬ ಆಶಯದೊಂದಿಗೆ ಅವರದೇ ಜಾಗದಲ್ಲಿ ಊರಿನವರೆಲ್ಲ ಸೇರಿ ಕಟ್ಟಿ, ತೆಂಗಿನ ಗಿಡ, ಬಾಳೆ ಗಿಡವೆಲ್ಲ ನೆಟ್ಟು ಬೆಳೆಸಿದ ಪರಿಸರ ಸ್ನೇಹಿ 'ಶ್ರೀ ಮುಜಿಲ್ನಾಯ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ.' ಈಗದು ಸರಕಾರದ ಅನುದಾನದಲ್ಲಿದೆ. ಆಗ ಊರಿನಲ್ಲಿದ್ದ ವಿದ್ಯಾವಂತರು ಅಲ್ಲಿನ ಶಿಕ್ಷಕರು. ಅವರ ಮಾರ್ಗದರ್ಶನ ನಮಗೆ. ಅವರು ಈಗಿನಂತೆ ಹಲವಾರು ತರಬೇತಿಗಳನ್ನು ಪಡೆದು ಬಂದವರಲ್ಲ! ಆದರೂ ಕಲಿಕೆಗೇನೂ ಕಡಿಮೆ ಇರಲಿಲ್ಲ! ನಾನೀಗ ಇಂಗ್ಲಿಷ್ ಶಿಕ್ಷಕಿಯಾಗಿದ್ದೇನೆಂದರೆ ಅದಕ್ಕೆ ಕಾರಣ ಅಲ್ಲಿ ನನಗೆ ಇಂಗ್ಲಿಷ್ ಕಲಿಸಿದ ಶ್ರೀ ಕೃಷ್ಣ ಮೂರ್ತಿ ರಾವ್ ಸರ್. ಅವರು ನನ್ನಲ್ಲಿರುವ ಪ್ರತಿಭೆಯನ್ನು ಮೊದಲು ಗುರುತಿಸಿ ನನ್ನನ್ನು ಪ್ರಬಂಧ ಬರೆಯಲು, ಭಾಷಣ ಮಾಡಲು, ಸ್ಪೋಕನ್ ಇಂಗ್ಲಿಷ್ ಮೊದಲು ಕಲಿಸಿದವರು. ನನ್ನ ಬದುಕಿಗೆ ಭದ್ರವಾದ ಬುನಾದಿ ಆ ಶಾಲೆಯಲ್ಲೆ ಸಿಕ್ಕಿತು.
ನನಗೆ ಒಂದನೆ ತರಗತಿಯಲ್ಲಿ ಅಕ್ಷರ ಬರೆಸಿ ಕಲಿಸಿದ ಮೇಷ್ಟ್ರ ಹೆಸರು ಧರ್ಮಪಾಲ ಕಡಂಬ. ದುರದೃಷ್ಟವಶಾತ್ ವಯಸ್ಸಾದ ಕಾರಣ ಅವರು ಈಗ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಮುಖಚೆಹರೆ ಕಣ್ಣಿನ ಕ್ಯಾಮರಾದಲ್ಲಿ ಅಚ್ಚಳಿಯದಂತೆ ಅಚ್ಚೊತ್ತಿದೆ!
ನಾನು ಆರನೇ ತರಗತಿಯಲ್ಲಿ ಇದ್ದಾಗ ಆ ಶಾಲೆಗೆ ಹೊಸದಾದ ಕನ್ನಡ ಶಿಕ್ಷಕರ ಆಗಮನವಾಯ್ತು.ಆಗ ಉತ್ಸಾಹಿ ತರುಣ. ಹೆಸರು ಜ್ಞಾನ ಸರ್. ಹೆಸರಿಗೆ ತಕ್ಕಂತೆ ಜ್ಞಾನಿ! ಆಗಲೇ ನಮಗೆ ತಿಳಿದದ್ದು ಕನ್ನಡದ ಸಂಧಿ ಸಮಾಸಗಳು!!ನಮಗದನ್ನು ಕಲಿಸಲು ಅದೆಷ್ಟು ಕಷ್ಟಪಟ್ಟಿದ್ದರೋ!ನಾನಿಂದು ಕನ್ನಡ ಸಾಹಿತ್ಯ ಸಾಗರಕ್ಕೆ ಸಾಸಿವೆ ಕಾಳಿನಷ್ಟಾದರೂ ಸೇರಿಸಿದ್ದರೆ ಅದು ಈ ಶಿಕ್ಷಕರ ಕೃಪಾಶೀರ್ವಾದ. ಅಲ್ಲಿದ್ದ ಪಾರ್ಶ್ವನಾಥ ಸರ್ , ರತ್ನವರ್ಮ ಇಂದ್ರ ಸರ್, ಭಾರತಿ ಟೀಚರ್ ರವರು ಸಮಾಜ, ವಿಜ್ಞಾನ, ಹಿಂದಿಯನ್ನೂ ಅರೆದು ಕುಡಿಸಿದವರು!
ನಾನೊಬ್ಬ ಶಿಕ್ಷಕಿಯಾಗಿ,ಲೇಖಕಿಯಾಗಿ ನನ್ನ ಜೀವನದಲ್ಲಿ ಬಂದ ಒಬ್ಬ ಗುರುವಿನ ಬಗ್ಗೆ ಬರೆಯೆಂದರೆ ಕಷ್ಟ. ಪ್ರತಿಯೊಬ್ಬ ಗುರುಗಳೂ ಗ್ರೇಟ್!ಅವರದೇ ಆದ ಸ್ಟೈಲ್, ಸಹನೆ, ಗುಣ ಹೀಗೆ. ಹೈಸ್ಕೂಲಲ್ಲೂ ನನಗೆ ಕನ್ನಡ ಕಲಿಸಿದ ಮಹೇಶ್ವರಪ್ಪ ಸರ್ ಹಾಗೂ ಇಂಗ್ಲಿಷ್ ಹೇಳಿಕೊಟ್ಟ ಅಮೃತ ಮೇಡಂ ಹಾಗೂ ಮುರಳಿ ಸರ್ ಹಾಗೂ ಇತರ ಶಿಕ್ಷಕರ ಮರೆಯಲಾರೆ!
ಈ ಮೂಲಕ ಸಿಂಹಾವಲೋಕನಕ್ಕೆ ಅವಕಾಶ ಕೊಟ್ಟ ಹನಿ ಹನಿ ಬಳಗಕ್ಕೂ ನಾ ಕೃತಜ್ಞತೆ ಸಲ್ಲಿಸುವೆ.
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ