ಭಾನುವಾರ, ಏಪ್ರಿಲ್ 15, 2018

245. ಕಿರುಗಥೆ-ರಜೆಯ ಮಜಾ-2

ಕಿರುಗಥೆ ಸ್ಪರ್ಧೆಗೆ

ರಜೆಯ ಮಜಾ

ಹರೀಶ ಮತ್ತು ಗಣೇಶ ದೂರದ ರಂಗೇನಹಳ್ಳಿಯಲ್ಲೆ ಹುಟ್ಟಿ ಬೆಳೆದು ಅಲ್ಲೆ ಶಾಲೆ ಕಲಿಯುತ್ತಿರುವವರು. ರಜೆ ಬಂದಾಗ ತನ್ನತ್ತೆಯ ಮನೆಗೆ ಬೆಂಗಳೂರಿಗೆ ಬರುವರು. ಬೆಂಗಳೂರಿನ ಅತ್ತೆಯ ಮಕ್ಕಳೇ ಸಾನ್ವಿ ಮತ್ತು ಸಾತ್ವಿಕ್. ಹೆಚ್ಚು ಕಡಿಮೆ ಒಂದೆರಡು ವರುಷಗಳ ಅಮತರ ಅವರಲ್ಲಿ. ಉತ್ತಮ ಗೆಳೆಯರು.
  ಆದರೆ ಹರೀಶ, ಗಣೇಶನನ್ನು ತಮ್ಮ ಗೆಳೆಯರಿಗಿಂತ ಹೆಚ್ಚಾಗಿ ತಮ್ಮ ಮಕ್ಕಳು ಇಷ್ಟಪಟ್ಟರೂ ಅವರ ಪೋಷಕರಿಗೇನೋ ಅವರ ಮೇಲೆ ಅಸಹ್ಯ ಭಾವನೆ, ಕೀಳೆಂಬ ಭಾವ! ಆ ಮಕ್ಕಳು ಈ ಸಣ್ಣ ಭಾವನೆಯನ್ನು ಗುರುತಿಸದೆ ಇರಲಿಲ್ಲ!ಆದರೆ ಪರೀಕ್ಷೆ, ಶಾಲೆ ಅಂತ ಒಂದು ವರ್ಷ ಮುಗಿದು ರಜೆ ಬರುವಾಗ ಸಾನ್ವಿ , ಸಾತ್ವಿಕ್ ರ ಮುಗ್ದ ಗೆಳೆತನ ಮಾತ್ರ ನೆನಪಾಗುತ್ತಿತ್ತು!ಓಡಿ ಬಂದುಬಿಡುತ್ತಿದ್ದರು.
    ರಜೆಯಲ್ಲೆರಡು ದಿನ ಪಾರ್ಕು, ಫಿಲ್ಮು ಅಂತ ಸುತ್ತಿ ಟಿವಿಯಲ್ಲಿ ನೋಡಿ ಏನೋ ಅಂದುಕೊಂಡಿದ್ದನ್ನು, 'ಇಷ್ಟೆನಾ?' ಅಂದುಕೊಂಡು ಹೋಗುತ್ತಿದ್ದರು!ಅತ್ತೆ ಮಾವನಿಗೆ ಸಿಟ್ಟು!  'ಇವಕ್ಕೆ ಎಷ್ಟು ಮಾಡಿದರೂ ಅಷ್ಟೆ!' ಎಂದು ಗುಣುಗುತ್ತಿದ್ದರು. ತಮ್ಮ ಮಕ್ಕಳನ್ನು ಬೇಸರದ ಮನಸ್ಸಿನಿಂದ ಹಳ್ಳಿಗೆ ಆ ಮಕ್ಕಳ ಒತ್ತಾಯದ ಮೇರೆಗೆ ಕಳುಹಿಸಿ ಕೊಡುತ್ತಿದ್ದರು!
  ಆದರೆ ಆ ಮಕ್ಕಳು ಹಳ್ಳಿಗೆ ಬಂದಾಗ ಅವರ ಖುಷಿಯೇ ಬೇರೆ, ಆಟವೇ ಬೇರೆ! ಅವರ ಸ್ವಾತಂತ್ರ್ಯಕ್ಕೆ, ಸಂತಸಕ್ಕೆ, ಪಡೆಯುವ ಅನುಭವಗಳಿಗೆ ಬೆಲೆ ಕಟ್ಟಲಾಗದು!
ಇರುವೆ ಗೂಡು, ದನದ ಕರು, ಆಡು-ಕುರಿಗಳ ಮರಿಗಳು ಅವರ ಆಸಕ್ತಿಯ ಬಿಂದುಗಳು. ಹೊಲದಲ್ಲೆ ಆಟ! ಒಟ್ಟಾರೆ ಬಾಲ್ಯ ಹೀಗಿರಬೇಕೆನ್ನುವ ಆಸೆ! ಆ ನೆನಪುಗಳ ಮೂಟೆ ಹೊತ್ತು 'ಶಾಲೆ ಶುರುವಾಯ್ತಲ್ಲಾ ಮತ್ತೆ ' ಎಂಬ ಕ್ಯಾತೆ ತೆಗೆಯುತ್ತಾ ಬೇಸರದ ಮುಖ ಮಾಡಿ ಬೆಂಗಳೂರು ಸೇರುತ್ತಿದ್ದರು!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ