ಶುಕ್ರವಾರ, ಏಪ್ರಿಲ್ 27, 2018

271.ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ-15

ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ

ಬದುಕಬೇಕೆಂಬ ಹಠ, ತಾಳ್ಮೆ, ಸಹನೆ ಇರುವವರು ಎಲ್ಲೂ ಹೇಗೂ ಬದುಕಬಲ್ಲರು. 'ನನಗೆ ಯಾರಾದರೂ ಬೇಕು' ಎಂದು ಇತರರನ್ನೇ ಅವಲಂಬಿಸಿದವರು ಮುಂದೆ ಹೋಗಲಾರರು!
   ಮಹಿಳೆಯರಾಗಿ ನಮ್ಮ ಕನಸುಗಳೂ ಕೂಡ ನಮ್ಮನ್ನೇ ಹೊಂದಿಕೊಂಡಿರಬೇಕಲ್ಲದೆ ಇತರರ ಮೇಲೆ ಜವಾಬ್ದಾರಿ ಹೊರಿಸುವುದು ಆಗಬಾರದು! ಮದುವೆಯಾದ ಬಳಿಕ ಗಂಡ ಸಾಕಲಿ, ಮಕ್ಕಳನ್ನು ಗಂಡ ನೋಡಲಿ, ಬಟ್ಟೆ ಬರೆ ಅವನೇ ತರಲಿ, ನನ್ನ ಸಮಸ್ತ ಖರ್ಚನ್ನೆಲ್ಲ  ಅವನೇ ನೋಡಲಿ, ನಾನ್ಯಾಕೆ ಮನೆ ಹೊರಗೆ,ಒಳಗೆ ಎರಡೂ ಕಡೆ ದುಡಿಯಲಿ -ಈ ರೀತಿಯ ಮೆಂಟಾಲಿಟಿ ಇರುವ ಹುಡುಗಿಯರಿದ್ದಾರೆ. ಮನೆಯ ಆದಾಯ ಚೆನ್ನಾಗಿದ್ದರೆ ಸರಿ! ಆದರೆ ಕನಿಷ್ಟ ಕೂಲಿಯೋ, ಸಾಧಾರಣ ಸರಕಾರಿ ಕೆಲಸವೋ, ಸಣ್ಣ ಖಾಸಗಿ ಕಂಪನಿಯ ಕೆಲಸವೋ ಆಗಿದ್ದರೆ ಮನೆ ಖರ್ಚಿಗೆ ಕೈ ಜೋಡಿಸಲೇ ಬೇಕಲ್ಲವೇ? ತಾನೂ ಕೂಡ ದುಡಿದು ಸಂಸಾರ ಸಾಕುವ ಅಭ್ಯಾಸವಾಗಬೇಕಲ್ಲವೇ.. ಅದಕ್ಕಾಗಿ ಮಹಿಳೆ ದುಡಿಯಬೇಕು!
  ತನಗೆ ಸಿಗುವ ಗಂಡನಿಗೆ ಕಾರಿರಬೇಕು, ಬೈಕ್ ಮನೆ ಇರಬೇಕು ಮೊದಲಾದ ಕನಸುಗಳನ್ನು ಕಾಣುವುದು ಹಿಂದಿನ ಕಾಲದ ಮಾತಾಯ್ತು!
ಈಗಿನ ಕಾಲದ ಹುಡುಗಿಯರ ಕನಸುಗಳು ಹೀಗಿರಬೇಕು-ನನ್ನ ಗಂಡನನ್ನು ಕರೆದುಕೊಂಡು ಕರಿಶ್ಮಾ ಬೈಕಿನಲ್ಲಿ ಚಾಮುಂಡಿ ಬೆಟ್ಟ ಏರಬೇಕು, ನನ್ನ ಗಂಡನನ್ನು ತುಂತುರು ಮಳೆ ಬೀಳುವಾಗ ಹಿಮ ಮುಚ್ಚಿದ ಮಡಿಕೇರಿಗೆ ಲಾಂಗ್ ಡ್ರೈವ್ ಕರ್ಕೊಂಡ್ ಹೋಗ್ಬೇಕು.. ಡಬಲ್ ಬೆಡ್ ರೂಂ ಫ್ಲಾಟ್ ಇಲ್ಲವೇ ೨೦ ಸೆಂಟ್ಸ್ ಜಾಗ ಮನೆ ನನ್ನ ಹೆಸರಿನಲ್ಲಿರಬೇಕು.. ನನ್ನ  ಮನೆಯ ಸುತ್ತ ಅಮೃತಬಳ್ಳಿ ಹಬ್ಬಿಸಬೇಕು, ಹಿಮಾಲಯದ ಪರ್ವತವೊಂದಕ್ಕೆ ಟ್ರಕ್ಕಿಂಗ್ ಹೋಗಬೇಕು, ನನ್ನ ದುಡ್ಡಲ್ಲೇ ಅಪ್ಪ-ಅಮ್ಮನಿಗೊಂದು ಕಾರ್ ಕೊಡಿಸಬೇಕು ಇದು ಮಾಡ್ ಹುಡುಗಿಯರ ಕನಸಾಗಿರಬೇಕೇ ಹೊರತು, ಹತ್ತು-ಹತ್ತು ಸಾವಿರದ್ದು ಹತ್ತು ಸೀರೆ ಇರಬೇಕು, ಮದುವೆಗೆ ಅಮ್ಮ ವಜ್ರದ ನೆಕ್ಲೇಸ್ ತೆಗೆದುಕೊಡಬೇಕು ಇದಲ್ಲ! ನಮ್ಮ ಕನಸುಗಳಿಗೆ ನಾವೇ ಸರದಾರರೂ, ರಾಜರೂ ಆಗಿರಬೇಕೇ ಹೊರತು ನಮ್ಮ ಕನಸನ್ನು ಇನ್ನೊಬ್ಬನ ಕೈಗಿತ್ತು ಅವನನ್ನು ಆಳಲು ಬಿಡಬಾರದು!
   ಅಲ್ಲದೇ ನಮ್ಮ ಕುಟುಂಬಕ್ಕೆ ಬೇಕಾಗಿ ಅಲ್ಪ ಸ್ವಲ್ಪ ಬದಲಾಗಬೇಕು, ನಾನು ಹೀಗೆಯೇ ಬೇಕಾದರೆ ಗಂಡನ ಮನೆಯವರೇ ಬದಲಾಗಲಿ ಎನ್ನಬಾರದು! ಎಲ್ಲರೊಂದಿಗೆ ಆತ್ಮೀಯತೆ, ಗೌರವ, ವಿಶ್ವಾಸ ಇರಬೇಕು.
   ತನ್ನತನವ ಉಳಿಸಿಕೊಂಡು ಯಾರೂ ನಮ್ಮನ್ನು ನೋಡಿ "ನನ್ನ ಮಗಳೂ ಅವಳಂತೆ ಆಗಲಿ" ಎನ್ನುವಂತೆ ಬದುಕೋಣ. ನೀವೇನಂತೀರಿ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ