ಶುಕ್ರವಾರ, ಡಿಸೆಂಬರ್ 14, 2018

645. ಎಲ್ರೂ ಒಂದೇ

ಎಲ್ರೂ ಒಂದೇ..

ಅವ್ವಾ..ನಿನ್ನ ಹೊಟ್ಯೊಳಗ ಕಳ್ದ
ದಿನಗಳೇ ಚಂದಾ...
ತೇಲಾಡ್ತಾ ಓಲಾಡ್ತಾ..
ಸಿಕ್ದಂಗೆಲ್ಲಾ ಒದೀತಾ...
ಅಂಧಕಾರದ್ ಕೂಪ್ವಾದ್ರೂ..
ಅಲ್ಲೇ ಚೆನ್ನಾಗಿತ್ತಾ..

ಒಂಭತ್ ತಿಂಗ್ಲು ಆರಾಮಾಗೇ
ಕಳ್ದೋಯ್ತು ಜೀವ್ನಾ...
ತೊಂಬತ್ ವರ್ಷ ಬದ್ಕಿದ್ರೂ
ಸಿಗ್ವಲ್ದು ಆ ಪಾವ್ನಾ..
ನಿನ್ ಊಟ ನಂಗಿಟ್ಟು
ಕೊಟ್ಟೆ ನಂಗ್ ಜನನ...

ಹೊರಗ್ಬಂದು ನಾ ಕಂಡೆ
ಜಾತಿ ಮತ ಕ್ವಾಟೆ..
ಅವ ಹಿಂದು ಇವ ಮುಸ್ಲಿಂ..
ಕ್ರೈಸ್ತ, ಜೈನ, ಬೌದ್ಧ..
ಸಾರಿಹರು ಎಲ್ರೂನು..
ಪ್ರೀತಿಯದೇ ಮಂತ್ರ...

ಜನಕ್ಯಾಕೋ ಗೊತ್ತಾಗೋಲ್ಲ
ಪ್ರೀತಿಯೇ ಬಾಳಿನ್ ಮಂತ್ರ..
ಹಣ ಆಸ್ತಿ ಧನಕಾಗೆ
ಕಿತ್ತಾಡ್ಕೊಂಡ್ ಕುಂತ್ರಾ?
ಬುವಿಯಾಗೆ ಬದ್ಕೋರು
ಹೋರಾಟಕ್ ನಿಂತ್ರಾ..?

ನಂದೇನು ನಿಂದೇನು?
ಎಲ್ಲಾ ಮೇಲ್ನವ್ನ್ಂದೇ..
ಸಾಯೋ ಕಾಲಕ್ ಬರ್ಲಾರ್ದೂ
ನಾವ್ ಕೂಡಿಟ್ಟ ಕಂತೇ..
ಬಿಸಿಲಾದ್ರೂ ಮಳಿಯಾದ್ರೂ
ಬದ್ಕ್ ಮಾತ್ರ ಒಂದೇ..

ಹೆಸ್ರಿರ್ಲಿ ನೆಲದಾಗೆ..
ಗಾಂಧಿ ಬಹದ್ದೂರಂಗೆ..
ಧನ ಕನಕ ಶೋಕಿಗೆ..
ಬಾಳು ಬರಡಾದಂಗೆ..
ನಾನ್ಹೆಚ್ಚೋ ನೀನ್ಹೆಚ್ಚೋ
ತಲುಪೋ ಗುರಿಯೊಂದೇ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ