ಬುಧವಾರ, ಡಿಸೆಂಬರ್ 26, 2018

665. ಗಝಲ್-62

ಗಝಲ್-62

ಕೋತಿಯಂತೆ ಆಡುತಿಹೆವು ಕ್ಷಮಿಸು ನಮ್ಮ ಮಾತೆಯೇ
ಕಸವ ನಿನಗೆ ಚೆಲ್ಲುತಿಹೆವು, ಕ್ಷಮಿಸು ನಮ್ಮ ಮಾತೆಯೇ//

ವಿಷವ ಮಣ್ಣಿಗೆ, ಗಾಳಿಗೆ,ನೀರಿಗೆ, ಸುರಿಯುತಿಹೆವು
ರಾಸಾಯನಿಕವ ಬಳಸುತಿಹೆವು, ಕ್ಷಮಿಸು ನಮ್ಮ ಮಾತೆಯೇ//

ಚಿಕ್ಕ ಪುಟ್ಟ ಪ್ರಾಣಿ, ಪಕ್ಷಿ, ಕೀಟಗಳ ಕೊಲ್ಲುತಿಹೆವು
ಮರಗಳನು ಕಡಿಯುತಿಹೆವು ಕ್ಷಮಿಸು ನಮ್ಮ ಮಾತೆಯೇ//

ನರ ನಾಡಿಗಳಲಿ ರೋಗಗಳನು ತುಂಬಿಕೊಳುತಲಿಹೆವು,
ಹೊಸ ಆವಿಷ್ಕಾರ ಮಾಡುತಲಿಹೆವು, ಕ್ಷಮಿಸು ನಮ್ಮ ಮಾತೆಯೇ//

ಗದ್ದೆಗೆ ಬಂದ ಒಳ್ಳೆ-ಕೆಟ್ಟ ಹುಳಗಳನೆಲ್ಲ ಸಾಯಿಸುತಿಹೆವು
ಕಪ್ಪೆ, ಎರೆಹುಳವನೂ ಸೇರಿಸಿಹೆವು, ಕ್ಷಮಿಸು ನಮ್ಮ ಮಾತೆಯೇ//

ಪ್ಲಾಸ್ಟಿಕ್, ಫೈಬರ್, ಸಿಎಫ್ ಸಿ ಕಂಡುಹಿಡಿದು ಬಳಸುತಿಹೆವು
ನಿನ್ನ ಮೇಲೆ ಎಸೆಯುತಿಹೆವು, ಕ್ಷಮಿಸು ನಮ್ಮ ಮಾತೆಯೇ//

ಪ್ರೀತಿಯಿಂದ ವಿದ್ಯೆ, ಊಟ, ಆಸರೆ ಕೊಟ್ಟು ಕಾಯುತಿರುವೆ
ದೇಶ ಪ್ರೇಮದಲೆ ಕೊಳ್ಳೆ ಹೊಡೆಯುತಿಹೆವು, ಕ್ಷಮಿಸು ನಮ್ಮ ಮಾತೆಯೇ//

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ