ಶುಕ್ರವಾರ, ಮೇ 17, 2024

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -228

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ -228

   ನಮ್ಮ ಬಳಿ ಹಣ ಎಷ್ಟೇ ಇದ್ದರೂ ಜನ ಅದಕ್ಕೆ ಗೌರವ ಕೊಡುವುದು ನಮ್ಮ ಕಣ್ಣೆದುರು ಮಾತ್ರ. ಇನ್ನು ಕೆಲವರು ಹಣದ ಆಸೆಗಾಗಿ ಗೌರವ ಕೊಟ್ಟಂತೆ ಮೇಲೆ ನೋಟಕ್ಕೆ ನಟಿಸಬಹುದು. ಆದರೆ ನಿಜವಾದ ಗೌರವ ಸಿಗುವುದು ನಮ್ಮ ಗುಣಕ್ಕೆ. ವ್ಯಕ್ತಿ ಮತ್ತು ವ್ಯಕ್ತಿತ್ವಕ್ಕೆ ಭಿನ್ನತೆ ಇದೆ. ಅದು ಮಾನವ ಮತ್ತು ಮಾನವತೆಗೆ ಇದ್ದ ಹಾಗೆ. ಎಲ್ಲರೂ ಮಾನವರೇ. ಆದರೆ ಎಲ್ಲರ ಬಳಿ ಮಾನವತೆ ಇಲ್ಲ. ಮಾನವತೆ ಇರಲು ನೈತಿಕತೆಯೂ ಬೇಕಾಗುತ್ತದೆ. ಈ ಮಾನವತೆ ಮತ್ತು ನೈತಿಕತೆಗಳು ಮಾನವನ ವ್ಯಕ್ತಿತ್ವ ಅಂದರೆ ಗುಣವನ್ನು ನಿರ್ಧರಿಸುವ ಅಂಶಗಳಾಗಿವೆ. ಗುಣ ಒಳ್ಳೆಯದು ಕೆಟ್ಟದು ಎಂದು ನಿರ್ಧಾರ ಆಗುವುದು ಪ್ರತಿಯೊಬ್ಬರ ಆಲೋಚನೆಗಳ ಮೇಲೆ. ಈ ಪ್ರಪಂಚದಲ್ಲಿ ಇರುವ ಜನರ ದೇಹದ ಆಕಾರ, ಗಾತ್ರ, ಬಣ್ಣಗಳಲ್ಲಿ ಹೇಗೆ ಭಿನ್ನತೆ ಇದೆಯೋ ಅಷ್ಟೇ ಭಿನ್ನತೆ ಅಲೋಚನೆಗಳಲ್ಲೂ ಇದೆ.                 ಒಬ್ಬರ ಅಲೋಚನೆಯಂತೆ ಮತ್ತೊಬ್ಬರ ಆಲೋಚನೆ ಇಲ್ಲ. ತಕ್ಕ ಮಟ್ಟಿಗೆ ಒಂದೇ ರೀತಿಯ ದಿಕ್ಕಿನಲ್ಲಿ ಅಲೋಚಿಸುವವರು ಒಟ್ಟಿಗೆ ಸಿಕ್ಕಿದಾಗ ಗೆಳೆಯರಾಗಿ ಬಿಡುತ್ತಾರೆ. ಅವರ ಆಲೋಚನೆಗಳ ಮಟ್ಟದ ಐಕ್ಯತೆ ಹೆಚ್ಚಾದಷ್ಟೂ ಗೆಳೆತನ ಆಳವಾಗಿ ಬೇರೂರುತ್ತದೆ. ಇಲ್ಲಿ ರಕ್ತ ಸಂಬಂಧವೇ ಅಗಬೇಕೆಂದೇನೂ ಇಲ್ಲ. ಮೊನ್ನೆ ಮೊನ್ನೆ ವೈರಲ್ ಆದ ವಿಡಿಯೋ ಒಂದರಲ್ಲಿ ನಮ್ಮ ದೇಶದ ಪ್ರಧಾನಿಗಳನ್ನೇ ಹೋಲುವ ವ್ಯಕ್ತಿ ಒಬ್ಬರು ಉಡುಪಿ ದೇವಸ್ಥಾನದಲ್ಲಿ ಅಡುಗೆ ಭಟ್ಟರು. ಅವರ ಮುಖ ನೋಡುವಾಗ ಥೇಟ್ ನರೇಂದ್ರ ಮೋದಿಯವರನ್ನು ಹೋಲುತ್ತಾರೆ. ಹಾಗಂತ ಅವರಿಬ್ಬರ ಆಲೋಚನೆಗಳು, ಅಭಿಪ್ರಾಯಗಳು ಒಂದೇ ಆಗಿ ಇರಬೇಕೆಂದೇನೂ ಇಲ್ಲ ಅಲ್ಲವೇ?
     ಒಂದೇ ಮನೆಯಲ್ಲಿ ಇರುವಂತಹ ಒಂದೇ ಕುಟುಂಬದ ಸದಸ್ಯರ ಆಲೋಚನೆಗಳೂ, ಭಾವನೆಗಳೂ ಒಬ್ಬರಿಗಿಂತ ಒಬ್ಬರದ್ದು ಭಿನ್ನವಾಗಿಯೇ ಇರುತ್ತವೆ ಅಲ್ಲವೇ? ಇನ್ನು ಗಂಡ ಹೆಂಡತಿ? ಬಿಡಿ, ಬೇರೆ ಬೇರೆಯೇ ಕುಟುಂಬದ ಬೇರೆಯೇ ವಾತಾವರಣದಲ್ಲಿ ಬೆಳೆದವರು. ಅವರ ನಡುವೆ ಹೊಂದಾಣಿಕೆ ಇದೆ ಎಂದರೆ ಅದು ಅವರವರ ಉತ್ತಮ ಗುಣಗಳ ಹೊರತಾಗಿ ಮತ್ತೇನೂ ಅಲ್ಲ. ತಾಯಿ, ತಂದೆ,  ಮಕ್ಕಳ ನಡುವೆಯೂ  ಜಗಳ, ಹೊಡೆದಾಟ, ಬಡಿದಾಟ ನಡೆಯುವುದಿಲ್ಲವೆ?        

      Bಮನುಷ್ಯನ ಮನಸ್ಸು ಒಂದೇ ತರಹ ಇರುವುದಿಲ್ಲ. ಆಗಾಗ ಬದಲಾಗುತ್ತಾ ಇರುತ್ತದೆ. ಅಲ್ಲಿ ಆಸೆ, ಆಕಾಂಕ್ಷೆಗಳು ಕೂಡಾ ಬದಲಾಗುತ್ತವೆ. ಇಷ್ಟ ಪಡುವ ಎಲ್ಲಾ ವಸ್ತು, ವಿಶೇಷಗಳು ಸಮಯಕ್ಕೆ ತಕ್ಕ ಹಾಗೆ ಬದಲಾಗುತ್ತಾ ಹೋದ ಹಾಗೆ ಇಂದು ಇಷ್ಟ ಪಟ್ಟ ಜನ, ವಸ್ತು, ತಿಂಡಿ, ಬಟ್ಟೆ ಮುಂದೆ ಒಂದು ದಿನ ಬೇಡವಾಗಿ ಬಿಡುತ್ತದೆ. ಒಮ್ಮೆ ಬೇಡ ಎಂದಿದ್ದು ಮತ್ತೊಮ್ಮೆ ಬೇಕು ಅನ್ನಿಸಲೂ ಬಹುದು. ಹಾಗಾಗಿಯೇ ಡೈವೋರ್ಸ್ ಪಡೆದ ಅದೆಷ್ಟೋ ಮಂದಿ ಮತ್ತೆ ಒಂದಾಗುತ್ತಾರೆ. ಒಮ್ಮೆ ಬೆಲೆ ಬಾಳುವ ವಸ್ತು ಮತ್ತೊಮ್ಮೆ ವೇಸ್ಟ್ ಅನ್ನಿಸುವುದು ಕೂಡಾ ಹಾಗಾಗಿಯೇ. ಒಟ್ಟಿನಲ್ಲಿ ಮಾನವ ಮನಸ್ಸು ಮರ್ಕಟ. ಇದು ಹೀಗೆ ಬದಲಾಗದೆ ಸ್ಥಿಮಿತವಾಗಿ ಇಟ್ಟುಕೊಂಡವನೆ ನಿಜವಾದ ದೃಢ ನಿರ್ಧಾರದ ವ್ಯಕ್ತಿ. ಅವನ ವ್ಯಕ್ತಿತ್ವ ಎಲ್ಲರಿಗೂ ಇಷ್ಟ ಆಗುತ್ತದೆ. ಸಮಯಕ್ಕೆ ತಕ್ಕ ಹಾಗೆ ತಿರುಗುವ, ಬಣ್ಣ ಬದಲಾಯಿಸುವ ವ್ಯಕ್ತಿಗೆ ಗೋಸುಂಬೆ ಎನ್ನುತ್ತಾರೆ, ಮತ್ತೆ ಅಂಥವರನ್ನು ಯಾರೂ ಕೂಡಾ ನಂಬುವುದಿಲ್ಲ. ಮಾತನ್ನು ಕೂಡ ಸಮಯಕ್ಕೆ ತಕ್ಕ ಹಾಗೆ, ತಮಗೆ ಬೇಕಾದ ಹಾಗೆ ತಿರುಗಿಸುವ ಜನ ಬಹಳ ಇದ್ದಾರೆ. ನೇರವಾಗಿ, ನಿಷ್ಠುರವಾಗಿ ಮಾತನಾಡುವವರು ತುಂಬಾ ಕಡಿಮೆ. ಕೆಲವರು ಲಾಭ ನೋಡಿದರೆ, ಇನ್ನೂ ಕೆಲವರು ನೇರವಾಗಿ ಮಾತನಾಡಿ ಇತರರನ್ನು ನೋಯಿಸಲು ಇಷ್ಟ ಪಡುವುದಿಲ್ಲ. 
  ನಾವು ಯಾವ ಭಾಷೆಯಲ್ಲಿ ಶಿಕ್ಷಣ ಪಡೆದಿದ್ದೇವೆ ಎಂಬುದು ಮುಖ್ಯ ಅಲ್ಲ, ಎಷ್ಟು ಉತ್ತಮ ವಿಚಾರಗಳನ್ನು ಓದಿ, ಕೇಳಿ ತಿಳಿದುಕೊಂಡಿದ್ದೇವೆ, ಎಷ್ಟು ಉತ್ತಮ ಗುಣ, ನಡತೆಗಳನ್ನು ನಮ್ಮ ಬದುಕಲ್ಲಿ ಅಳವಡಿಸಿಕೊಂಡಿದ್ದೇವೆ, ಎಷ್ಟು ಮಾನವೀಯ ಮೌಲ್ಯಗಳನ್ನು ಬೆಳೆಸಿ, ಪೋಷಿಸುತ್ತಿದ್ದೇವೆ, ಎಷ್ಟು ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಾಯ ಮಾಡಿದ್ದೇವೆ, ಎಷ್ಟು ಮನಗಳಲ್ಲಿ ಮತ್ತು ತುಟಿಗಳಲ್ಲಿ ನಗು ತರಿಸಿದ್ದೇವೆ ಅದು ನಮ್ಮ ವ್ಯಕ್ತಿತ್ವಕ್ಕೆ ಏಣಿ ಇಟ್ಟು ಮೇಲೆ ಕರೆದುಕೊಂಡು ಹೋಗುತ್ತದೆ. 
   ವೇದಿಕೆಯ ಮೈಕ್ ಮುಂದೆ ಮಾತನಾಡುವವರು ಬಹಳ ಮಂದಿ ಇದ್ದಾರೆ. ಅದನ್ನು ನಿಜ ಜೀವನದಲ್ಲಿ ಬಳಸಿಕೊಂಡವ ಉತ್ತಮ, ದೊಡ್ಡ ವ್ಯಕ್ತಿ. ಕೇವಲ ಸಿನೆಮಾಗಳಲ್ಲಿ ನಟನೆ ಮಾಡಿ ಹಣ ಗಳಿಸಿದವ ಉತ್ತಮ ಹೀರೋ ಅಲ್ಲ, ನಿತ್ಯ ಜೀವನದಲ್ಲಿ ಅವನು ಹೇಗೆ ಬದುಕಿದ್ದ ಎನ್ನುವುದರಲ್ಲಿ ಅವನ ಹೀರೋಗಿರಿ ಅಡಗಿದೆ. ಊರಿಗೆ ಉಪಕಾರಿ ಮನೆಗೆ ಮಾರಿ ಆಗಲೂ ಬಾರದು. 
  ವ್ಯಕ್ತಿತ್ವದ ವ್ಯಾಖ್ಯಾನ ಕೂಡಾ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಆದರೆ ಯಾವುದೇ ವ್ಯಕ್ತಿಯ ಉದಾತ್ತ ಗುಣಗಳನ್ನು ಎಲ್ಲರೂ ಇಷ್ಟ ಪಡುತ್ತಾರೆ ಮತ್ತು ಆ ಗುಣಗಳಿಗೆ ಅವನನ್ನು ಹೊಗಳುತ್ತಾರೆ. ಇಲ್ಲಿ ಆ ವ್ಯಕ್ತಿ ಯಾವುದೇ ಕೆಲಸ ಮಾಡುವ ವ್ಯಕ್ತಿ ಆಗಿರಬಹುದು, ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠ, ಅಗಾಧ ಜ್ಞಾನ ಎಲ್ಲವನ್ನೂ ಪರಿಗಣಿಸಲಾಗುತ್ತದೆ. ಕೇವಲ ಪುಸ್ತಕದಲ್ಲಿ ಓದಿದ್ದು ಮಾತ್ರ ಅಲ್ಲ, ನಿಜ ಜೀವನದಲ್ಲಿ, ಬಳಿ ಇರುವ ಪ್ರತಿಯೊಬ್ಬ ವ್ಯಕ್ತಿಯಿಂದಲೂ ದಿನ ದಿನ ಪಾಠ ಕಲಿಯುತ್ತಿರುತ್ತೇವೆ. ಅದಕ್ಕೆ ವಯಸ್ಸಿನ ಮಿತಿ ಇಲ್ಲ. ಯಾವ ಪರಿಮಿತಿಯೂ ಕಲಿಕೆಗೆ ಇಲ್ಲ. ಪ್ರತಿ ಮಾನವ ಸಾಯುವ ಕೊನೆ ಉಸಿರು ತೆಗೆದುಕೊಳ್ಳುವವರೆಗೂ ವಿದ್ಯಾರ್ಥಿಯೇ ಅಲ್ಲವೇ?
ನಮ್ಮ ಗುಣ, ನಡತೆ, ವ್ಯಕ್ತಿತ್ವ ಚೆನ್ನಾಗಿರಲಿ, ನಾಲ್ಕು ಜನಕ್ಕಿಂತ ಮೊದಲು ನಾವೇ ಮೆಚ್ಚುವಂತೆ ಇರಲಿ ಅಲ್ಲವೇ? ನೀವೇನಂತೀರಿ? 
@ಹನಿಬಿಂದು@
30.03.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ