ಶುಕ್ರವಾರ, ಮೇ 17, 2024

ಬೇಕಾಗಿದೆ ಸಮಾನತೆ

ಬೇಕಾಗಿದೆ ಸಮಾನತೆ

ದೇವರು ದೈಹಿಕ ಶಕ್ತಿಯನ್ನೇನೋ ಕೊಟ್ಟುಬಿಟ್ಟ
ಆದರೆ ಕೇಳುವ ಮಾತನಾಡುವ ಶಕ್ತಿ ಬಿಟ್ಟುಬಿಟ್ಟ
ಯಾವ ಜನ್ಮದ ಕರ್ಮ ಫಲವೋ ತಿಳಿಯದು
ಜನ ಕಿವುಡ ಮೂಗ ಎಂದರೂ ನನಗೆ ಕೇಳದು 

ಅನುಕಂಪ ಬೇಕಿಲ್ಲ ನಮ್ಮ ಈ ಬಾಳಿಗೆ
ಅವಕಾಶ ಬೇಕು, ಇತರರಂತೆ ಸರಿ ಸಮಾನ
ಅಸಹಾಯಕರಲ್ಲ ನಾವು, ತುಟಿ ಓದಬಲ್ಲೆವು
ಆಂಗಿಕ ಚಲನೆಯಿಂದ ಹೇಳಬಲ್ಲೆವು ಭಾವಗಳ

ಕೈ ಕಾಲು ಕಣ್ಣು ಮೂಗು ಸರಿ ಇಲ್ಲವೇ!
ಭಾವಗಳ ಬಿತ್ತರಿಸಿ ಬಿಡಲು ಸಾಕಲ್ಲವೇ
ನಾವೂ ಪರರಂತೆ ಮನುಜ ಮಕ್ಕಳೇ
ಕೊಡಿ ನಮಗೆ ಕಾಯಕವ ಜನಗಳೇ

ಸರಿ ಸಮಾನ ನಾವುಗಳು ನೀಡಿ ಪ್ರೀತಿಯ
ಸಹವಾಸ ಬೆಳಗಿಸುವುದು ನಿಮ್ಮ ನೀತಿಯ
ಸಣ್ಣ ಚಲನೆಯ ಅರ್ಥವೂ ತಿಳಿವುದು
ಗ್ರಹಿಕೆ ಬಹಳ ನಮ್ಮೊಳಗೆ ಎಂದೆಂದೂ

ದೂಕದಿರಿ ನಮ್ಮ ಮನೆಯಿಂದ ಹೊರಕ್ಕೆ
ಅಟ್ಟದಿರಿ ದೇವಾಲಯಗಳ ಎದುರು ಭಿಕ್ಷೆಗೆ
ಓದು ಬರಹಕ್ಕೆ ಕಳಿಸಿ ನಮ್ಮವರ ಶಾಲೆಗೆ
ಸಾಧಿಸಿ ತೋರುವೆವು ಎಲ್ಲರ ಜೊತೆಗೆ
@ಹನಿಬಿಂದು@
15.05.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ