ಸೋಮವಾರ, ಅಕ್ಟೋಬರ್ 14, 2024

ಲೇಖನ

ಪರಿಸರ ಉಳಿಸುವಲ್ಲಿ ನಮ್ಮ ನಂಬಿಕೆಗಳ ಮಹತ್ವ

      ನಮ್ಮ ಪರಿಸರದ ಉಳಿವು ನಮ್ಮ ಕೈಲೇ ಇದೆ ಎಂಬುದನ್ನು ನಾವು ತಲೆ ತಲಾಂತರಗಳಿಂದ ಅರಿತು, ನಮ್ಮ ಹಿರಿಯರು ಆಚರಣೆಗೆ ತಂದ ಹಲವಾರು ಆಚರಣೆಗಳು, ಪೂಜೆಗಳು, ಹಬ್ಬ ಹರಿದಿನಗಳು ಎಲ್ಲವೂ ಕೂಡ ಪರಿಸರದ ಉಳಿಸುವಿಕೆಗೆ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗವೇ ಆಗಿದೆ. ಪುರಾಣ ಕಾಲದಿಂದಲೂ ಪಂಚ ಭೂತಗಳೇ ನಮ್ಮ ಆರಾಧ್ಯ ದೇವರು. ನೆಲ, ಜಲ, ವಾಯು, ಅಗ್ನಿ. ಆಕಾಶ ಇವುಗಳನ್ನು ನಂಬಿದವರ ಬದುಕು ಹಾಳಾಗದು ಎಂಬ ನಂಬಿಕೆ ನಮ್ಮ ಪೂರ್ವಜರದ್ದು. ಅವುಗಳು ನಮ್ಮ ಆರೋಗ್ಯಕ್ಕೂ, ಬದುಕಿನ ಉದ್ಧಾರಕ್ಕೂ ಹೇಗೆ ಸಹಕಾರಿ ಎಂಬುದನ್ನು ನಮ್ಮ ತಿಳುವಳಿಕೆಗೆ ಅನುಗುಣವಾಗಿ ಸ್ವಲ್ಪ ನೋಡೋಣ. 
  ಬೆಳಗ್ಗೆದ್ದು ದೇವರಿಗೆ ಅರ್ಪಿಸಲು ಎಂದು ಹೂ ಕೊಯ್ಯುವ ಮತ್ತು ಅದನ್ನು ದೇವರಿಗೆ (ದೇವರ ಫೋಟೋ ಅಥವಾ ಮೂರ್ತಿಗೆ) ಒಪ್ಪ ಓರಣವಾಗಿ ಜೋಡಿಸಿ ಇಡುವ ಅಥವಾ ಮಾಲೆ ಕಟ್ಟಿ ಮೂಡಿಸುವ ಪದ್ಧತಿ ನಮ್ಮಲ್ಲಿ ಇದೆ. ಕರೋನ ಸಮಯದಲ್ಲಿ ನಿತ್ಯ ಹೂ, ಹಸಿರಿನ ಮಧ್ಯೆ ಕಳೆದ ಹಲವಾರು ಜನರ ಆರೋಗ್ಯ, ಕಣ್ಣಿನ ದೃಷ್ಟಿ ಉತ್ತಮವಾದ ಹಲವಾರು ಉದಾಹರಣೆಗಳು ನಮ್ಮ ಮುಂದೆಯೇ ಇವೆ. ಹೂವನ್ನು ಕೊಯ್ದು ದೇವರ ಎದುರು ಮುಡಿಸಬೇಕಾದರೆ ಮನೆಯ ಎದುರು ಬಣ್ಣ ಬಣ್ಣದ ಹೂವಿನ ಗಿಡಗಳನ್ನು ನೆಟ್ಟು. ಅವುಗಳನ್ನು ತಾಳ್ಮೆಯಿಂದ ಬೆಳೆಸಿ, ನೀರು ಗೊಬ್ಬರ ಹಾಕಿ ಉತ್ತಮ ಆರೈಕೆ ಮಾಡಿ ನೋಡಿಕೊಂಡರೆ ಮಾತ್ರ ಸಾಧ್ಯ. ಇಲ್ಲಿ ನಮ್ಮ ತಾಳ್ಮೆ, ಆರೋಗ್ಯ, ನೆಮ್ಮದಿ. ಸಂತಸ ಹೆಚ್ಚುತ್ತದೆ. ಧನಾತ್ಮಕ ಚಿಂತನೆ ಅರಳುತ್ತದೆ. ರೋಗಗಳು ಕಡಿಮೆ ಆಗುತ್ತವೆ ಅಲ್ಲವೇ? ಹಾಗೆಯೇ ನಾವೇ ನೆಟ್ಟ ನಮ್ಮ ಮನೆ ಎದುರಿನ ಗಿಡದಲ್ಲಿ ಬಣ್ಣ ಬಣ್ಣದ ಹೂವುಗಳು ಅರಳುವಾಗ ನಮಗೆ ಆಗುವ ಖುಷಿ ಅನುಭವಿಸಿದವರಿಗೆ ಮಾತ್ರ ಗೊತ್ತು. ಅಲ್ಲವೇ? ಇನ್ನು ನಿತ್ಯ ಹೂವನ್ನು ಕೊಯ್ಯಲು ಗಿಡದ ಬಳಿಗೆ ಹೋದಾಗ ಗಿಡಕ್ಕೆ ಏನಾದ್ರೂ ತೊಂದರೆ ಆದರೆ ತಿಳಿಯುತ್ತದೆ, ಹಸಿರು ನೋಡಿ ಕಣ್ಣು, ಹೃದಯ ಅರಳುತ್ತವೆ. ನಮ್ಮ ದೇಹ ಪ್ರಫುಲ್ಲವಾಗುತ್ತದೆ. ಆರೋಗ್ಯ ತಂತಾನೇ ವೃದ್ಧಿ ಆಗುತ್ತದೆ. ಅದನ್ನು ಕೊಯ್ದು ತಂದು ದೇವರಿಗೆ ಅಂದವಾಗಿ ಕಟ್ಟುವಾಗ 
  ಹಾಗೆಯೇ ಬೆಳಗ್ಗೆದ್ದು ಮನೆಯ ಮುಂದೆ ಇರುವ ತುಳಸಿ ಗಿಡಕ್ಕೆ ನೀರು ಹಾಕಿದರೆ ಸಂಜೆ ಅಲ್ಲಿ ದೀಪವಿಟ್ಟು ನಮಸ್ಕಾರ ಮಾಡುವ ಪರಿಪಾಠ ನಮ್ಮಲ್ಲಿದೆ. ತುಳಸಿ ಗಿಡ ಎಲ್ಲಾ ಗಿಡಗಳಿಗಿಂತ ಹೆಚ್ಚು ಆಮ್ಲಜನಕ ಹೊರಬಿಟ್ಟು ವಾತಾವರಣವನ್ನು ಶುದ್ಧಿಗೊಳಿಸುತ್ತದೆ ಅಲ್ಲದೆ ಅದರ ಎಲೆಯಲ್ಲಿ ರೋಗ ನಿವಾರಕ ಗುಣಗಳಿವೆ. ಅದರ ಸುತ್ತ ಸುತ್ತುವುದರಿಂದ ಒಳ್ಳೆಯ ಗಾಳಿ ನಮಗೆ ಸಿಕ್ಕಿ, ಆರೋಗ್ಯದ ಪರಿಸ್ಥಿತಿಯೂ ಉತ್ತಮವಾಗುತ್ತದೆ. ಸಂಜೆ ದೀಪ ಬೆಳಗುವುದು ಕತ್ತಲು ಕವಿಯುವ ಸಮಯದಲ್ಲಿ ದಾರಿ ಹೋಕರಿಗೆ ರಸ್ತೆ ಕಾಣಲಿ ಎಂಬುದು ಹಿಂದಿನವರ ಕಲ್ಪನೆ ಆಗಿತ್ತು. ಆಗಿನ ಕಾಲದಲ್ಲಿ ಬೀದಿ ದೀಪಗಳು ಇಲ್ಲದೆ ಇದ್ದಾಗ ತುಳಸಿ ದೀಪ ನೋಡಿ ಅಲ್ಲೊಂದು ಮನೆ ಇದೆ ಎಂದು ರಾತ್ರಿ ಬಂದ ಜನಕ್ಕೆ ತಿಳಿಯುತ್ತಿತ್ತು. ಇದು ಹಲವರಿಗೆ ಉಪಯೋಗ ಆಗುತ್ತಿತ್ತು. ಅಲ್ಲದೆ ಎಳ್ಳೆಣ್ಣೆ ದೀಪ ಉರಿಸಿದರೆ ಉಪಯುಕ್ತ ಎಂದು ಹಿರಿಯರು ಹೇಳುತ್ತಾರೆ. 
  ಇನ್ನು ನಾಗಬನಗಳೂ ಇಲ್ಲಿ ಸೇರಿವೆ. ಒಂದಷ್ಟು ಮರಗಳ ರಾಶಿ ಒಂದೆಡೆ ಸೇರಿ ನಾಗಬನ ನಿರ್ಮಾಣ ಆಗುತ್ತದೆ. ಅವುಗಳ ಬುಡದಲ್ಲಿ ನಾಗನ ಕಲ್ಲು. ಅಲ್ಲಿಗೆ ಯಾರೂ ಹೋಗುವ ಹಾಗಿಲ್ಲ. ಮಡಿ ಮೈಲಿಗೆ ಸಲ್ಲದು. ಅಲ್ಲಿ  ಹೆಂಗಸರು, ಮಕ್ಕಳು ಹೋಗಬಾರದು, ಉಗಿಯುವುದು, ಮಲ ಮೂತ್ರ ವಿಸರ್ನೆಗೆ ಅವಕಾಶ ಇಲ್ಲ. ಸುತ್ತ ನೆರಳು ಇರುವಷ್ಟು ದಟ್ಟ ಕಾಡು ಇರಬೇಕು. ಇದೆಲ್ಲವೂ ಪರಿಸರದ ಉಳಿವಿಗಾಗಿ. ಅಲ್ಲಿ ಬದುಕುವ ವಿಷ ಜಂತುಗಳ ಬದುಕಿನ ರಕ್ಷಣೆಗಾಗಿ. ಪರಿಸರದ ಸರಪಣಿಯಲ್ಲಿ ಅವುಗಳೂ ಕೂಡಾ ಉನ್ನತ ಪಾತ್ರ ವಹಿಸುವ ಕಾರಣ ಅದಕ್ಕಾಗಿ ಒಂದಷ್ಟು ಸ್ಥಳದ ಮೀಸಲು. ಜನ ದೇವರ ಹೆಸರು ಹೇಳಿದರೆ ಮಾತ್ರ ಹೆದರುತ್ತಾರೆ. ಅದಕ್ಕಾಗಿ ನಾಗನ ಹೆಸರು ಕೊಟ್ಟರು. ಕೆಲವೆಡೆ ಕಲೆ ಕಾರ್ಣಿಕ ಕಂಡದ್ದು ಕೂಡಾ ಇದೆ. ಹಾಗಾಗಿ ಜನ ಈಗಲೂ ನಂಬುತ್ತಾರೆ. ಪರಿಸರ ಉಳಿಸುವ ಹಿರಿಯರ ಈ ಕಾರ್ಯ ಶ್ಲಾಘನೀಯ ಅಲ್ಲವೇ?
  ಇನ್ನು ದ್ವಾರ ಪೂಜೆ. ಬಾಗಿಲಿನ ದ್ವಾರಕ್ಕೆ ಅರಶಿನ ಕುಂಕುಮ ಇಡುವುದು ಯಾವುದೇ ಕ್ರಿಮಿಗಳು ಹಾಗೂ ವಿಷ ಜಂತುಗಳು ಮನೆಯ ಒಳಗೆ ಬಾರದೆ ಇರಲಿ ಎಂಬ ಕಾರಣಕ್ಕೆ. ಅರಶಿನ ಕುಂಕುಮ ಅದನ್ನು ತಡೆಯುತ್ತದೆ. ಹೂವು ತಂಪು ಹಾಗೂ ಅಂದ. ನೀರು ಹಾಕಿ ಶುದ್ಧೀಕರಿಸಿ, ರಂಗೋಲಿ ಬಿಡಿಸುವುದು ಹೆಣ್ಣಿನ ಕಲಾ ಪ್ರತಿಭೆಗೆ ಹಿಡಿದ ಕೈಗನ್ನಡಿ. ಕಲೆಯ ಅನಾವರಣ. ಅದನ್ನು ಭಕ್ತಿಪೂರ್ವಕವಾಗಿ ಮಾಡುವುದು ಧನಾತ್ಮಕ ಶಕ್ತಿಯ, ಆಲೋಚನೆಗಳ ಸಂಚಲನ. 
ಇವೆಲ್ಲಾ ಉದಾತ್ತ ವೈಜ್ಞಾನಿಕ ಕಾರಣಗಳು ಇಲ್ಲಿ ಪ್ರತಿ ಆಚರಣೆಯಲ್ಲೂ ಕಂಡು ಬರುತ್ತವೆ. ಜನ ತಮ್ಮ ವಿವಿಧ ಪೂಜೆ, ಆಚರಣೆಗಳು, ಅದರ ಜೊತೆಗಿನ ಹಲವಾರು ದೈವಿಕ ನಂಬಿಕೆಗಳ ನೆಲೆಗಟ್ಟು ಪ್ರಕೃತಿಯ ಉಳಿವಿನ ಸಂಕೇತವೂ ಆಗಿತ್ತು. ಜನ ಆ ರೀತಿಯಾಗಿ ನೇಸರ ಉಳಿಸುತ್ತಾ ಪರರಿಗೂ, ಪರ ಜೀವ ಜಂತುಗಳಿಗೂ ಸರ್ವೇ ಜನಾಃ ಸುಖಿನೋ ಭವಂತು ಎಂಬ ಮಾತಿನಂತೆ ತಾವು ಬದುಕಿ ಇತರ ಜೀವಿಗಳಿಗೂ ಬದುಕಲು ಬಿಡುತ್ತಿದ್ದರು. ಹಸಿರನ್ನು ಉಳಿಸಿ ಆಹಾರ ಸರಪಣಿ, ಜಲಚಕ್ರ, ಪರಿಸರ ಸರಪಣಿಯನ್ನು ಕೂಡಾ ಉಳಿಸಿ ಬೆಳೆಸುತ್ತಿದ್ದರು. ಇಂದು ನಾವು ರಾಸಾಯನಿಕ ಅರಶಿನ, ಕುಂಕುಮ, ಬಣ್ಣದ ಪುಡಿಗಳನ್ನು ಬಳಸದೆ ಇವುಗಳನ್ನೆಲ್ಲ ಉಳಿಸುವ ಕೆಲಸ ಮಾಡಬೇಕಿದೆ ಅಲ್ಲವೇ? ನೀವೇನಂತೀರಿ?
@ಹನಿಬಿಂದು@
11.10.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ