ಸೋಮವಾರ, ಅಕ್ಟೋಬರ್ 14, 2024

ಸಣ್ಣಕತೆ ಮದುವೆ

ಮದುವೆ

ಆ.  ಹುಡುಗಿಗೆ ಮದುವೆಯೇ ಆಗಲಿಲ್ಲ ಕಾರಣ ಬಡತನ. ಬಡತನವನ್ನೇ ಮೈ ಹೊದ್ದುಕೊಂಡು ಹುಟ್ಟಿ, ಬಡತನದಲ್ಲೇ ಬೆಳೆದು, ಬಡತನದಲ್ಲೇ ಶಾಲೆಗೆ ಸೇರಿ ಓದಿದ ಹುಡುಗಿ ಬಡತನದಲ್ಲೇ ಜೀವನ ಕಳೆಯುವ ಸ್ಥಿತಿ ಇತ್ತು.
  ಆದರೆ ಆಕೆ ಓದಿನಲ್ಲಿ ಸಿರಿವಂತಲಾಗಿದ್ದಳು. ಹೆಸರು ಕಲಾವತಿ. ಹೆಸರಿನ ಹಾಗೆ ಹಲವು ಕಲೆಗಳ ಒಡತಿ. ಹಾಡು, ನಾಟಕ, ಭಾಷಣ, ಕಲಿಕೆ ಎಲ್ಲದರಲ್ಲೂ ಆಕೆ ಮುಂದು. ಪೋಷಕರಿಗೆ ಅವಳ ಮೇಲೆ ಬಹಳ ಧೈರ್ಯ. ನಮ್ಮನ್ನು ಸಾಕುವಳು ಎಂಬ ನಂಬಿಕೆ. ಅವಳಿಗೊಬ್ಬ ಅಣ್ಣನಿದ್ದ. ಕಲಾ ರಾಮ್. ಆದರೆ ಕಲಾರಾಮ್ ಓದುವುದರಲ್ಲಿ ಅಷ್ಟಕ್ಕಷ್ಟೇ. ಮನೆಯ ಕಷ್ಟಕ್ಕೆ ಹೊರ ಹೋಗಿ ದಿನ ಕಳೆಯ ತೊಡಗಿದ. ಬೇಡದ ಅವನ ಹಾಗೆಯೇ ಇರುವ ಕೊಳಕು ಸ್ನೇಹಿತರು ಸಿಕ್ಕಿದರು. ಅವರ ಜೊತೆ ಜೂಜು, ಕುಡಿತ, ಹೊಗೆಸೊಪ್ಪು ಸೇವನೆ, ಧೂಮಪಾನ ಎಲ್ಲವನ್ನೂ ಕಲಿತ. ಇದರಿಂದ ಮನೆ ತೊರೆದ. ಅದೆಲ್ಲೋ ಬಾರಿನಲ್ಲಿ ಕೆಲಸಕ್ಕೆ ಸೇರಿದ. ಅದೊಂದು ಕಾಲದಲ್ಲಿ ತಾನು ಮಾಡಿದ್ದೆಲ್ಲ ಕೆಟ್ಟದು ಎಂಬ ಬುದ್ಧಿ ಬಂದು ಸರಿ ಆಗಲು ಹೊರಟ. ಆಗ ಕಾಲ ಮಿಂಚಿ ಹೋಗಿತ್ತು. ಅದು ಯಾರೋ ಒಬ್ಬಳು ತಮಿಳು ಹುಡುಗಿಯನ್ನು ಮದುವೆ ಆದ. ಅವಳಿಗೆ ಮೊದಲೇ ಒಂದು ಮದುವೆ ಆಗಿತ್ತು. ಅವಳು ಇವನನ್ನು ಕ್ಯಾರೆ ಮಾಡದೆ ಕೆಲಸಕ್ಕೆ ಹೋಗಿ ಸಂಪಾದಿಸಿ ಚೆನ್ನಾಗಿ ಬದುಕುತ್ತಿದ್ದಳು. ಗಂಡ ಎಂಬ ಹೆಸರಿಗಾಗಿ ನೋಡಲು ಚೆನ್ನಾಗಿದ್ದ ಇವನನ್ನು ಕಟ್ಟಿಕೊಂಡಿದ್ದಳು ಅಷ್ಟೇ.
   ಇತ್ತ ಕಲಾವತಿ ಚೆನ್ನಾಗಿ ಓದಿ ಬಿ ಎಸ್ಸಿ ನರ್ಸಿಂಗ್ ಮಾಡಿ ಒಂದು ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದಳು. ಒಳ್ಳೆಯ ಸಂಬಳ ಸಿಗುತ್ತಿತ್ತು. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಂಡಳು. ಆದರೆ ಎದುರು ನಿಂತು ಅವಳ ಮದುವೆ ಮಾಡಿ ಕೊಡುವವರು ಯಾರೂ ಇರಲಿಲ್ಲ. ತಂದೆ ರೋಗಿಯಾಗಿದ್ದರು. ತಾಯಿ ಏನೂ ತಿಳಿಯದವರಾಗಿದ್ದರು. ಬಡತನ ಬಂಧುಗಳನ್ನು ದೂರಕ್ಕೆ ಅಟ್ಟಿ ಬಿಟ್ಟಿತ್ತು.
     ಮನೆಯ ಪರಿಸ್ಥಿತಿ, ಪೋಷಕರ ಬಗ್ಗೆ ತಿಳಿದಿದ್ದ ಕಲಾವತಿ ಮದುವೆಯ ಬಗ್ಗೆ ಯೋಚನೆ ಮಾಡಲಿಲ್ಲ. ಪೋಷಕರಿಗೂ ಅದೇ ಬೇಕಿತ್ತು. ಮದುವೆಯಾಗಲು ಭಯಂಕರ ವರದಕ್ಷಿಣೆ ಕೂಡಾ ಅಡ್ಡಿ ಬಂದಿತ್ತು. ಹುಡುಗನ ಕಡೆಯವರು ಹುಡುಗಿ ನೋಡುವ ಮೊದಲೇ ಲಕ್ಷಗಟ್ಟಲೆ ರೇಟ್ ಫಿಕ್ಸ್ ಮಾಡಿ ಕೇಳುತ್ತಿದ್ದರು. ಹಾಗಾಗಿ ಅವಳು ಆಹ್ ಬಗ್ಗೆ ಯೋಚನೆ ಮಾಡಲು ಹೋಗಲಿಲ್ಲ. ಬಂಧುಗಳು ಎರಡನೇ ಸಂಬಂಧದ ವರ ಹುಡುಕಲು ಆರಂಭಿಸಿದಾಗ ಕೋಪ ಅವಳಿಗೆ ನೆತ್ತಿಗೇರಿತು. ಆದರೂ ಅವಳು ಅಸಹಾಯಕ ಪರಿಸ್ಥಿತಿಯಲ್ಲಿ ಇದ್ದಳು.ಗೆಳೆಯರೆಲ್ಲ ಸೇರಿ  ಪಕ್ಕದ ಊರಿನ ನವೀನ ಎಂಬ ಹುಡುಗನನ್ನು ಹೇಳಿ ಅವನು ಅವಳನ್ನು ಚೆನ್ನಾಗಿ ನೋಡಿಕೊಳ್ಳುವೆ ಎಂದು ಹೇಳಿ ಕಡಿಮೆ ವರದಕ್ಷಿಣೆ ಕೇಳಿ ಇವಳ ಹಣದಲ್ಲೇ ಮದುವೆಯಾದ.
        ಮದುವೆಯ ಬಳಿಕ ನವೀನ  ದುಡಿಯದಾದ. ಕಾರಣ ಸೋಮಾರಿತನ. ಮಡದಿ ದುಡಿಯುವಳು ಎಂಬ ತಾತ್ಸಾರ. ಮನೆಯಲ್ಲೇ ಕುಳಿತು ಗೆಳೆಯರ ಕರೆದು ಅವರೊಂದಿಗೆ ಲಲ್ಲೆ ಹೊಡೆಯುವುದು ಅಭ್ಯಾಸವಾಯಿತು. ಊರಿನಲ್ಲೇ ಇದ್ದುದರಿಂದ ಹಲವಾರು ಬಾಲ್ಯ ಸ್ನೇಹಿತರಿದ್ದರು. ಕಲಾವತಿ ತನ್ನ ತಂದೆ ತಾಯಿಗಳನ್ನು ನೋಡಿಕೊಳ್ಳುವ ಒಪ್ಪಿಗೆ ಮೊದಲೇ ಪಡೆದಿದ್ದ ಕಾರಣ ಅವರ ಮನೆಯಲ್ಲೇ ಉಳಿದಳು. ನವೀನನಿಗೆ  ಪರರ ಜೊತೆ ಸೇರಿ ಸಮಾಜ ಸೇವೆ ಮಾಡುವುದು ಹವ್ಯಾಸ ಆಗಿ ಬಿಟ್ಟಿತು. ಹಾಗಾಗಿ ಊರಿಗೆ ಉಪಕಾರಿ ಮನೆಗೆ ಮಾರಿ ಎಂಬಂತೆ ಆದ. ಹೊರಗೆ ಹಾರ, ತುರಾಯಿ ಹಾಕಿ ಜನ ಸನ್ಮಾನಿಸುತ್ತಿದ್ದರು. ಅದರಿಂದ ಅವನ ಮದ ಇನ್ನಷ್ಟು ಹೆಚ್ಚಾಯಿತು. ತಾನು ಗಣ್ಯ ವ್ಯಕ್ತಿ ಅಂದುಕೊಂಡ.
ಕಲಾವತಿಯ ತಂದೆ ತಾಯಿ ಹಾಸಿಗೆ ಹಿಡಿದರು. ಅವರನ್ನು ನೋಡಿಕೊಳ್ಳಲು ನವೀನ ಹೋಗಲಿಲ್ಲ. ತಂದೆ ತಾಯಿ ಮಗಳ ಬದುಕು ನೋಡಿ ಮರುಗಿದರು. ಎಷ್ಟು ದುಡಿದರೂ ಪೋಷಕರ ಔಷಧಿಗೆ ಸರಿ ಹೋಗುತ್ತಿತ್ತು. ಬಡತನದಲ್ಲೇ ಹುಟ್ಟಿ ಬಡತನದಲ್ಲೇ ಬೆಳೆದು, ಮದುವೆ ಎಂಬುದೂ ಬಡತನದಲ್ಲೇ ಅಂತ್ಯಗೊಂಡು, ಬಡತನವೇ ಮೈವೆತ್ತು ತಂದೆ ತಾಯಿ ಸತ್ತ ಬಳಿಕ ತನಗೆ  ಯಾರೂ ಇಲ್ಲ ಎಂದು ತಾನೂ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಳು.
@ಹನಿಬಿಂದು@
05.10.2024


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ