ಹನಿ ಸ್ನೇಹಿತರೆ,
ಹನಿಗವನ ರಚನೆ ಬಹಳ ಗಂಭೀರವಾದ ಮತ್ತು ಸೂಕ್ಷ್ಮವಾದ ಕೆಲಸ, *ಹನಿ* ಎಂದರೆ ಕನ್ನಡದ ತೊಟ್ಟು- ಬಿಂದುವೂ ಹೌದು, ಇಂಗ್ಲೀಷಿನ Honey ಯೂ ಹೌದು. ಅಂಗೈಯಲ್ಲಿ ಜೇನು ತುಂಬಿ ನೆಕ್ಕುವುದಕ್ಕಿಂತ, ಬೆರಳ ತುದಿಯಿಂದ ಮಟ್ಟಿ ಚೀಪುತ್ತೇವಲ್ಲ, ಅದರ ಸವಿ ಹೆಚ್ಚು. ಕಡಿಮೆ ಪದ ಬಳಸಿ ಹೇಳ ಬೇಕಾದದ್ದನ್ನು ಥಟ್ಟನೆ ಮನಮುಟ್ಟುವ, ಮುಟ್ಟಿಸುವ ಕೆಲಸ ಹನಿ ಮಾಡುತ್ತದೆ. ಹೀಗೆ ಮಾಡಲು ಕವಿ ಪ್ರಕೃತಿಯಲ್ಲಾಗುವ ಮತ್ತು ಬದುಕಿನಲ್ಲಾಗುವ ಕಾಲ ಕಾಲದ ವೈವಿಧ್ಯ ವಿಸ್ಮಯ ಗಳನ್ನು ಒಳಗೆ ಮತ್ತು ಹೊರಗೆ ಇದ್ದೂ ಇಲ್ಲದಂತೆ ಗಮನಿಸುತ್ತಾನೆ. ಹನಿಯ ವಸ್ತು ಹೀಗೆಯೇ ಇರಬೇಕೆಂದಿಲ್ಲ, ಆದರೆ ಹನಿ ಚುಟುಕಾಗಿರ ಬೇಕು, ಅನಗತ್ಯ ಶಬ್ದಗಳನ್ನು ಬಳಸ ಬಾರದು. ಸಮರ್ಥ ಭಾಷೆ ಮತ್ತು ಸ್ಪಷ್ಟ ನಿಲುವು ಇದ್ದಾಗ ಇಂತಹದ್ದೇ ಅರ್ಥವನ್ನು ಹೊರಡಿಸ ಬೇಕು ಎಂಬ ನಿಲುವು ಕವಿಗಿರುತ್ತದೆ. ಆಗ ಮಾತ್ರ ಕವಿ ಆ ಅರ್ಥದ ಸುತ್ತ ಶಬ್ದ ಸೇರಿಸಿ ಪ್ರತಿಭೆ ತೋರುತ್ತಾನೆ. ಹನಿಯ ಭಾಷೆ ಮತ್ತು ದೃಷ್ಟಿ ಮೊನಚಾಗಿಯೂ, ಅಚ್ಚರಿಯಾಗಿಯೂ, ಇರುತ್ತದೆ. ವ್ಯಂಗ್ಯ, ವಿಡಂಬನೆ, ನಗು, ದಿಟ್ಟತನ, ವೈಚಾರಿಕತೆ, ಕಳಕಳಿ ಮೊದಲಾದ ಕವಿ ಪ್ರಜ್ಞೆ ಹನಿಯಲ್ಲಿರುತ್ತದೆ.
ಹನಿ ರಚನೆಗೆ, ಪ್ರತಿಭೆ ಮತ್ತು ವ್ಯುತ್ಪತ್ತಿ ಬಹಳ ಮುಖ್ಯ. ವ್ಯುತ್ಪತ್ತಿ ಎಂದರೆ, ನಮ್ಮ ಸುತ್ತಮುತ್ತಲಿನ ವಸ್ತುಗಳ ಅಂತರಂಗ ಮತ್ತು ಬಹಿರಂಗದ ಆತ್ಮೀಯ ಪರಿಚಯ. ಖಗೋಳ ಭೂಗೋಳ ತತ್ವ ಶಾಸ್ತ್ರ ಗಣಿತ ವಿಜ್ಞಾನ- ಈ ಎಲ್ಲಾ ಕ್ಷೇತ್ರಗಳಲ್ಲೂ ಪರಿಣತರಿದ್ದಾರೆ. ಆದರೆ ಕವಿಯಾದವನು, ಈ ಎಲ್ಲವನ್ನೂ ತನ್ನದೇ ಮೂಸೆಯಲ್ಲಿ ಸೂಕ್ಷ್ಮವಾಗಿ ಗಮನಿಸುತ್ತಾನೆ. ವಸ್ತುಗಳ ಅರಿಯುವಿಕೆ ಮತ್ತು ಸಾಮಾಜಿಕ ಹಾಗೂ ವೈಚಾರಿಕ ಪ್ರಜ್ಞೆ ಹೆಚ್ಚಾದಂತೆಲ್ಲಾ, ವ್ಯುತ್ಪತ್ತಿಯ ಶಕ್ತಿ ಹೆಚ್ಚುತ್ತದೆ. ಅಪಾರವಾದ ಆ ಆಕರದೊಳಗೆ ಸಮಯೋಚಿತವಾಗಿ ಶಬ್ದ ಅರ್ಥ ಬಳಸಿ ಕಟ್ಟುವ ಹನಿಯೇ ಪ್ರತಿಭೆ.
ಕುವೆಂಪು ದೈತ್ಯ ಪ್ರತಿಭೆ, ಹಾಗಾಗಲು ಅವರಲ್ಲಿ ಜ್ಞಾನ ಸಮುದ್ರವೇ ಇತ್ತು. ಅವರವರ ಅರಿವಿನ ಎತ್ತರ, ಅವರವರನ್ನು ಅಷ್ಟಷ್ಟು ಮೇಲೆತ್ತುತ್ತದೆ. ಒಂದು ಲೌಕಿಕ ಉದಾಹರಣೆ ಕೊಡುತ್ತೇನೆ. ( ಕಾವ್ಯ ಅಲೌಕಿಕ ಆತ್ಮಾನಂದ) ನಮ್ಮ ಮುಂದೆ ಒಂದು ಮಾವಿನ ಮರ ಇದೆ. ಕಣ್ಣಿಗೆ ಕಾಣುವಂತೆ ಎತ್ತರದಲ್ಲಿ ಒಂದು ಮಾವಿನ ಕಾಯಿ ಇದೆ. ಹತ್ತು ಹಲವು ಬಾರಿ ಕಲ್ಲೆಸೆದರೂ ಕಾಯಿ ಬೀಳದು, ಎಲೆ ಉದುರುತ್ತವೆ. ಯಾರೋ ಒಬ್ಬ ನಿಖರವಾಗಿ ಗುರಿ ಇಡುತ್ತಾನೆ. ಗುರಿ ಇಡಲು ದೈಹಿಕ ಬಲ ಬೇಕಾಗಿಲ್ಲ, ಗುರಿ ಮುಟ್ಟುವ ಛಲ ಬೇಕು. ಎಸೆತಕ್ಕೆ ಕೌಶಲ ಬೇಕು. ಅನುಭವ ಅಧ್ಯಯನ ಭಾಷೆ ಒಳಗಿಂದ ಕೇಳುವ ದನಿ, ಹಿಡಿದಿಡುವ ಸಂಕಲ್ಪ ಬೇಕು.
ಕ್ಷಮಿಸಿ, ನಾನು ಏನೋ ಹೇಳಲು ಹೋಗಿ ಓದುಗರ ತಲೆ ಕೊರೆದಿದ್ದೇನೆ. ಎಷ್ಟೋ ಬಾರಿ ನಾನೂ ಸಹ ಬರಿಯ ಎಲೆ ಉದುರಿಸಿದ್ದೇನೆ. ಈಗಲೂ ಹಾಗೆಯೇ ಅಂದು ಕೊಂಡಿದ್ದೆ, ನೀವೆಲ್ಲ ವಿಮರ್ಶೆ ಮಾಡಿ ಕಾಯಿ ತೋರಿದ್ದೀರಿ. ನಿಮ್ಮ ಭಾವನೆಗಳಿಗೆ ನನ್ನ ಧನ್ಯವಾದಗಳು, ಶುಭ ರಾತ್ರಿ
- ತಾ.ಸಿ.ತಿಮ್ಮಯ್ಯ
ಬುಧವಾರ, ಏಪ್ರಿಲ್ 3, 2019
8. ಹನಿಯ ಬಗ್ಗೆ ಮಾಹಿತಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ