ಸೋಮವಾರ, ಏಪ್ರಿಲ್ 15, 2019

917. ಸಂತಸವಾಗಿರಲಿ

1. ಬದುಕು ಖುಷಿಯಾಗಿರಲಿ...

ಕಸಿವಿಸಿಯಿಲ್ಲವು ಖುಷಿಯ ಕ್ಷಣದಲಿ
ಕಸದಂತಿರದೆ ಖನಿಯಂತಿರಲಿ ಬಾಳಿನಲಿ..
ಕುಶಲವಿರುವ ಸವಿ ಹೃದಯದಲಿ
ಕೃತಕತೆಯ ನುಡಿಗಳು ನುಸುಳದಿರಲಿ..

ಕಿಸಕ್ಕನೆ ಕಿಸಿಯುತ ಪರರ ಮುಂದೆ
ಬೇಡಿ ಅಂಗಲಾಚುವ ಕ್ಷಣ ಬರದಿರಲಿ..
ಕೊಸರಲಿ ಬದುಕು ಕೆಸರಿನ ಕಮಲವರಳಿದಂತೆ
ಬಣ್ಣ ಬಣ್ಣದ ಕನಸುಗಳ ನನಸಾಗಿಸುತಲಿ..

ಕೆಸರಿನಲಿ ಬೆಳೆದ ಕೆಸುವಿನಂತೆ
ಹರವಾಗಿ ಹಬ್ಬಲಿ ಮಾಡಿದ ಸಮಾಜ ಸೇವೆ!
ಕೆಲಸವಿಲ್ಲದೆ ಕಳೆದ ಕ್ಷಣಗಳ ಲೆಕ್ಕವಿಟ್ಟು
ಮತ್ತೆ ಕಸುಬು ಮಾಡುವಂತಾಗಲಿ ಮನಕೆ...

ಕಸುವು ಇರುವವರೆಗೆ ದೇಹದಲಿ
ಖುಷಿಯ ದುಡಿತಕೆ ಬರ ಬಾರದಿರಲಿ..
ಕೆಸರಿನಲಿಹ ಹಂದಿಯಂತಾಗದಿರಲಿ
ಕೆಲಸವಿಲ್ಲದೆ ಬರಡಾದ ಬದುಕು...

ಕರಗಳ ಸವೆಸುತ ದುಡಿಯುವ ಮನಸಿಗೆ
ಕಿಸೆಗಳು ತುಂಬುವ ಹಾಗಿರಲಿ..
ಕೈ ಕೆಸರಾದರೆ ಬಾಯ್ ಮೊಸರೆನ್ನುವ
ಜ್ಞಾನ ಕೋಶದ ನುಡಿ ನೆನಪಿರಲಿ...

ಕೋಶವ ಓದುತ ದೇಶವ ತಿರುಗುತ
ಜ್ಞಾನವು ಹರಿಯುತ ಬರುತಿರಲಿ!
ಮೋಸವ ಮಾಡದೆ ಮಾಸಲು ಮೈಯಲು
ಕಾಸಿನ ಹಂಗಿಲ್ಲದೆ ಅವಕಾಶವ ಬಿಡದಿರಲಿ...

@ಪ್ರೇಮ್@
(ಪ್ರೇಮಾ ಉದಯ್ ಕುಮಾರ್
ಸ.ಪ.ಪೂ.ಕಾಲೇಜು
ಐವರ್ನಾಡು, ಸುಳ್ಯ, ದ.ಕ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ