ಸಣ್ಣ ಕತೆ
ಚುನಾವಣೆ
ಚುನಾವಣಾ ಕರ್ತವ್ಯದ ಮೇಲೆ ತೀರಾ ಹಳ್ಳಿಯ ಶಾಲೆಯೊಂದಕ್ಕೆ ಬಸ್ ಎತ್ತೊಯ್ದು ಹಾಕಿ ಹೊರಟಿತು ಮೀನಾಳನ್ನು! ಊಟಕ್ಕೆ ಸರಿಯಾದ ಹೋಟೆಲ್ ಇಲ್ಲ, ಸ್ನಾನಕ್ಕೆ ಬಾತ್ ರೂಂ ಇಲ್ಲ. ಕಷ್ಟ ಸುಖ ಹಂಚಿಕೊಳ್ಳಲು ಬೇರೆ ಮಹಿಳೆಯರಿಲ್ಲ! ಮಲಗುವುದೂ ಕಷ್ಟ, ಕರೆಂಟಿಲ್ಲ,ಫ್ಯಾನಿಲ್ಲ! ಸಾವಿರಾರು ಸೊಳ್ಳೆ ಸಂಗಾತಿಗಳು! ಏನೂ ತೋಚದ ಸ್ಥಿತಿ!ತನ್ನನ್ನು ಮಹಿಳೆಯಾಗಿ ಸೃಷ್ಟಿ ಮಾಡಿದ ದೇವರಿಗೆ ಹಿಡಿ ಶಾಪ ಹಾಕುತ್ತಾ ಅಳುತ್ತಾ ನಗುತ್ತಾ ಕಣ್ಣೀರಲ್ಲೇ ಬೆಡ್ ಶೀಟ್ ಒದ್ದೆ ಮಾಡಿ ಕಣ್ರೆಪ್ಪೆ ಮುಚ್ಚದೆ ರಾತ್ರಿ ಕಳೆದು ಹೋಯ್ತು!
ಬೆಳಗ್ಗೆ ನಿರಂತರ ಕೆಲಸ, ಸುಸ್ತು! ಕೆಲಸವೆಲ್ಲ ಮುಗಿದಾಗ ರಾತ್ರಿ ಹತ್ತೂವರೆ! ಅಲ್ಲಿ ಸಿಕ್ಕಿದ ಏನೋ ತಿಂದು ಸಿಕ್ಕಿದ ಬಸ್ಸನ್ನು ಹತ್ತಿ ಕುಳಿತಾಯ್ತು! ಆ ಬಸ್ಸು ಮೈನ್ ರೋಡಲ್ಲಿ ಹನ್ನೊಂದೂವರೆಗೆ ಇಳಿಸಿ ಮಾಯವಾಯ್ತು!
ಬಸ್ಸಾಗಲಿ, ರಿಕ್ಷಾವಾಗಲಿ ತನ್ನ ರೂಂ ತಲುಪಲು ಇನ್ನೂ ಅರ್ಧ ಗಂಟೆ ಒಳದಾರಿಯಲ್ಲಿ ಸಾಗಬೇಕಿತ್ತು ಮೀನಾಗೆ! ಆ ದಾರಿಯಲ್ಲಿ ಯಾವುದೇ ಬಸ್ಸುಗಳು ಆ ಸಮಯಕ್ಕಿಲ್ಲ! ರಿಕ್ಷಾದವರು ಮನೆ ಸೇರಿ ಹೊದ್ದು ಮಲಗಿದ್ದರೇನೋ.. ಎರಡು-ಮೂರು ನಂಬರಿಗೆ ಫೋನ್ ಮಾಡಿದರೆ ಯಾರೂ ಪಿಕ್ ಮಾಡ್ಲಿಲ್ಲ!
ಏನು ಮಾಡುವುದೆಂದು ತೋಚದೆ ಅಳುತ್ತಾ ನಿಂತಳು! ಬೈಕೊಂದು ಪಾಸಾಯ್ತು!ದೊಡ್ಡ ಲಗೇಜ್ ಬ್ಯಾಗ್ ಹಿಡಿದು ನಿಂತಿದ್ದ ಅವಳನ್ನು ನೋಡಿ 'ಹಾಯ್ ಸ್ವೀಟಿ!'ಅಂದುಕೊಂಡು ಹೋದ! ಬೇಸರ, ಅಸಹ್ಯ, ಜಿಗುಪ್ಸೆ,ಅಳು,ನಿರಾಸೆ,ಹತಾಸೆ ಎಲ್ಲಾ ಒಟ್ಟಿಗೆ ನುಗ್ಗಿತು! ಇನ್ನೊಂದು ಬೈಕಲ್ಲಿ ಬಂದವ 'ಇಷ್ಟೊತ್ತಿಗೇ ಓಡಿ ಹೋಗೋ ಪ್ಲಾನಾ'ಅಂದ! ಅವನನ್ನು ಕೊಲ್ಲುವಷ್ಟು ಸಿಟ್ಟು ಬಂತು!
ತನ್ನ ದೇಹ,ಮನಸ್ಸು ಎರಡೂ ಅಸಾಹಯಕವಾಗಿದ್ದವು! ಏನೂ ತೋಚದೆ ಪಕ್ಕದ ಮನೆಯಲ್ಲಿದ್ದ ತನ್ನ ಗೆಳತಿಗೆ ಕಡೆಯ ಪ್ರಯತ್ನವೆಂಬಂತೆ ಫೋನಾಯಿಸಿದಳು! ಬ್ಯಾಟರಿ ಮುಗಿದು ಫೋನ್ ಕೂಡಾ ಸಾಯುವ ಸ್ಥಿತಿಯಲ್ಲಿತ್ತು! ಮಲಗಿದ್ದ ಗೆಳತಿ ರೂಪಾ ಅದು ಹೇಗೋ ನಿದ್ದೆಗಣ್ಣಲ್ಲೇ 'ಹಲೋ'ಎಂದಳು! ಏನೂ ಹೇಳಲಾಗದೆ ಗೊಳೋ ಅಂತ ಅತ್ತಳು ಮೀನಾ!ಸಾವರಿಸಿ ನಿಧಾನವಾಗಿ ತನ್ನ ಪರಿಸ್ಥಿತಿ ಹೇಳಿಕೊಂಡಳು!
ಗೆಳತಿ ರೂಪಾ ದೇವರಂತೆ ಕಂಡಳು ಆಗ ಮೀನಾಗೆ! "ಅದು ಯಾಕೆ ಬೇಸರ ಮಾಡಿಕೊಳ್ಳುತ್ತೀಯಾ? ನನ್ನ ಗಂಡನನ್ನು ಕಳುಹಿಸುವೆ,ಅವರ ಜೊತೆಗೆ ಬಾ"ಎಂದಳು!
ಅವಳು ನಿರಾಯಾಸವಾಗಿ ಹೇಳಿ ಫೋನಿಟ್ಟಳು! ಮೀನಾಗೆ ಬಿಸಿ ತುಪ್ಪ ಗಂಟಲಲ್ಲಿ ಇಟ್ಟ ಅನುಭವವಾಯ್ತು! ರಿಕ್ಷಾ ಬರಲು ಹೇಳು ಎನ್ನಲಾಗಲಿಲ್ಲ!
ಆಂದೋಲನ ಮನದಲ್ಲಿ! ಇನ್ನೂ ಮದುವೆಯಾಗಿರದ ತಾನು ಅರ್ಧ ರಾತ್ರಿಯಲ್ಲಿ ಅವರೊಂದಿಗೆ ಅನಿವಾರ್ಯವಾಗಿ ಹೋಗುತ್ತಿದ್ದರೂ ನೋಡಿದವರು ಏನಾದರೂ ಅಂದುಕೊಂಡು ಆ ಹಳ್ಳಿಯಲ್ಲಿ ತನ್ನ ವಿರುದ್ಧ ಅಪಪ್ರಚಾರ ಮಾಡಿದರೆ ಎಂಬ ಭಯ ಕಾಡತೊಡಗಿತು! ದೇವರನ್ನೆ ಮನದಲ್ಲಿ ನೆನೆಯುತ್ತಾ ಏನಾದರಾಗಲಿ 'ನಾಳೆ ಬರಲಿ' ಎಂಬ ದೃಢ ನಿಶ್ಚಯ ಮಾಡಿತ್ತಾ ಇನ್ನರ್ಧ ಗಂಟೆ ಆಚೀಚೆ ಹೋಗುವ ಒಂದೆರಡು ವಾಹನಗಳ ಸವಾರರ ಪ್ರಶ್ನಾರ್ಥಕ ನೋಟವನ್ನು ಲೆಕ್ಕಿಸದೆ ದೇವರನ್ನೇ ಮನದೊಳಿರಿಸಿ ಕಾದು ನಿಂತಳು! ಆ ರಾತ್ರಿ ಗೆಳತಿ ಮನೆಯಲ್ಲೆ ತಂಗಿ ನಿರಾಳಲಾದಳು!
ನಾಲ್ಕು ದಿನ ಬಿಟ್ಟು ಮತಗಳು ಹೆಚ್ಚು ದೊರೆತು ಗೆದ್ದ ಅಭ್ಯರ್ಥಿಯ ಪಕ್ಷದವರು ಪಟಾಕಿ ಸಿಡಿಸಿ, ಕುಡಿದು, ಕುಣಿದು,ಹಾಡುತ್ತಾ ಆನಂದಿಸುತ್ತಿರುವಾಗ 'ಪ್ರತಿಯೊಬ್ಬನ ಸಂತೋಷದ ಹಿಂದೆ ನನ್ನಂಥ ಹಲವಾರು ಹೃದಯಗಳ ಕಣ್ಣೀರಿನ ಬಿಂದುಗಳಿವೆ' ಅನ್ನಿಸಿತು ಮೀನಾಗೆ! ದೇವರು ತನ್ನ ಬಾಳಿಗೆ ಕೊಟ್ಟದ್ದು ಕಷ್ಟವೋ ಸುಖವೋ ತಾನೇ ಅರಿಯದಾದಳು! ಪಟ್ಟನೆ ಜಾರಿದ ಕಣ್ಣೀರ ಹನಿಯೊಂದನ್ನು ಒರೆಸುತ್ತಾ ತನ್ನ ಮುಂದಿನ ದೈನಂದಿನ ಕೆಲಸಕ್ಕೆ ಅಣಿಯಾದಳು! ಯೋಚಿಸುತ್ತಾ ಕುಳಿತುಕೊಳ್ಳುವಷ್ಟು ಸಮಯ ಅವಳಿಗಿರಲಿಲ್ಲ!
@ಪ್ರೇಮ್@
ಪ್ರೇಮಾ ಉದಯ್ ಕುಮಾರ್
ಸಹಶಿಕ್ಷಕರು
ಸ.ಪ.ಪೂ.ಕಾಲೇಜು, ಐವರ್ನಾಡು
ಸುಳ್ಯ ದ.ಕ 574239
premauday184@gmail.com
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ