ಬದುಕು-ಸಾವು
ಕೋಳಿಯೊಂದು ಬಂತು
ಗೂಡಿನಿಂದ ಹೊರಗೆ
ಹಾಕಿದ ಕಾಳು ತಿಂದಿತು
ಮತ್ತೆ ಹೊರಟಿತು ಸಂಚಾರಕೆ
ಭಯವಿರಲಿಲ್ಲ ಅದಕೆ
ಅದರ ಸಾವಿನ ಬಗ್ಗೆ
ಮನೆಯೊಳಗೆ ಸೇರಿತ್ತು
ನೆಂಟರೊಳಗಿನ ಸಭೆ!!
ಇಂದು ಕೊಡಬೇಕು
ಸತ್ತವರಿಗೆ ಕೋಳಿಯೂಟ
ಯಾವ ಕೋಳಿಯಾದೀತು
ಎಷ್ಟು ಜನರಿಗೆ ಊಟ..
ಕೋಳಿಯ ಕೇಳಲುಂಟೆ
ಕೊಯ್ದು ತುಂಡರಿಸಿ ತಿನ್ನಲು
ಕೋಳಿ ಸಾಕಿದ್ದು ನಾವಲ್ಲವೆ..
ಜೀವ ಅದರದು, ಒಡೆಯ ನಾನು
ಕೋಳಿ ಅಳುಕಲಿಲ್ಲ, ಭಯಪಡಲಿಲ್ಲ
ಅದರಷ್ಟಕೆ ಅದು ತಿಂದು ತೇಗುತಲಿತ್ತು
ಸತ್ತವರು ತಿಂದರೋ ಬಿಟ್ಟರೋ
ತಿಳಿಯದಾದರೂ, ಇದ್ದವರು
ಕೇಳಿ ಕೇಳಿ ತಿಂದು ತೇಗಿದರು!!
ತನ್ನ ಓರಗೆಯವ ಸತ್ತನೆಂದು
ಉಳಿದ ಕೋಳಿಗಳು ಕಣ್ಣೀರು ಸುರಿಸಲಿಲ್ಲ
ಸರಕಾರವ ದೂರಲಿಲ್ಲ
ಅನುಕಂಪದ ಆಧಾರಕ್ಕೆ
ಹಣವ ಬೇಡಲಿಲ್ಲ!
ಸತ್ತ ಕೋಳಿಗೆ ತಿಥಿ ಮಾಡಲಿಲ್ಲ
ಆತ್ಮವ ಹಿರಿಯರೊಡನೆ ಸೇರಿಸಲೂ ಇಲ್ಲ
ವರುಷಕೊಮ್ಮೆ ಅದಕುಂಟೆ
ಊಟ, ಕಾಳು ಕೊಡುವ ಪದ್ಧತಿ?
ಕೋಳಿಗಳನೆ ಕೇಳಬೇಕು!!!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ