ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-11
ನನಗನಿಸುತ್ತದೆ ಯಾವುದೇ ಸಂಬಂಧ ಕೆಡಲು ಮೂಲ ದುರಾಸೆ. ತಂದೆ ತಾಯಿಯರನ್ನೆ ಕೊಲ್ಲುವವರೆಗೆ ದುರಾಸೆಗೆದಾಸರಾಗಿದ್ದಾರೆ. ಈ ಅತ್ಯಾಸೆ ಅಥವಾ ದುರಾಸೆ ಇದೆಯಲ್ಲಾ ಅದೇ ಜಗಳ, ಕದನ, ಸಂಬಂಧಗಳ ಬೇರ್ಪಡೆಗೆ ಮೂಲ. ದುರಾಸೆ ಇರದಿದ್ದರೆ ಯಾವ ಅಣ್ಣ -ತಮ್ಮಂದಿರು ತಾನೇ ದಾಯಾದಿಗಳಾಗುತ್ತಿದ್ದರು? ದುರಾಸೆಯೇ ದುಡ್ಡಿನ ಅತಿ ಗಳಿಕೆಗೆ ಕಾರಣ. ದುರಾಸೆ ಇರುವವ ಜೀವನವನ್ನೆಂದೂ ಖುಷಿಯಾಗಿ ಅನುಭವಿಸಲಾರ!
ನಾನೇನೇ ಮಾಡಿದರೂ ನಿಮಗಾಗಿಯೇ ಮಾಡುತ್ತಿದ್ದೇನೆ ಎಂದು ಹೆಂಡತಿಗೆ ಬೈದ ಗಂಡ ದುಡ್ಡಿಗಾಗಿ ಹೆಂಡತಿಯ ಕೊಲೆ ಮಾಡಿದ್ದೂ ಇದೆ. ದುರಾಸೆ ನಮ್ಮನ್ನು ಯಾವ ಖೆಡ್ಡಾದೊಳಗೆ ಬೀಳಿಸುತ್ತದೆ ಎಂಬುದಕ್ಕೆ ಮಹಾಭಾರತ, ರಾಮಾಯಣಗಳೇ ಸಾಕ್ಷಿ. ಅತಿಯಾದ ಆಮಿಷಕ್ಕೊಳಪಟ್ಟು ತನ್ನ ಹೆಂಡತಿಯನ್ನೆ ಅಡವಿಟ್ಟ ಧರ್ಮರಾಯ, ಮಗನಿಗೇ ಪಟ್ಟಾಭಿಷೇಕವಾಗಬೇಕೆಂಬ ದುರಾಸೆಯ ಕೈಕೆಯಿಂದಲೇ ಮಹಾನ್ ಕಥೆಗಳು ನಡೆದದ್ದು ದುರಾಸೆಯಿಂದಲೇ ಅಲ್ಲವೇ?
ನಮ್ಮನೆ ಬೆಕ್ಕಿಗೂ ಈಗೀಗ ದುರಾಸೆ ಪ್ರಾರಂಭವಾದಂತಿದೆ. ಇಲಿಯನ್ನು ಹಿಡಿದು, ಕೊಂದು ಒಂದೇ ದಿನ ಒಟ್ಟಾಗಿ ತಿನ್ನುವ ಎಂದು ಹಾಗೆಯೇ ಇಟ್ಟಿರುತ್ತದೆ!! ಬದುಕಲ್ಲಿ ಆಸೆಯೇನೋ ಇರಬೇಕು. ಬುದ್ಧ 'ಆಸೆಯೇ ದು:ಖಕ್ಕೆ ಮೂಲ' ಎಂದರೂ ಯಾರು ತಾನೇ ಆಸೆ ಬಿಟ್ಟಾರು? ಹುಟ್ಟುವಾಗಲೇ ಮಗುವಿಗೆ ತಾಯಿ ಬಳಿಯಲ್ಲೆ ಬೇಕೆಂಬ ಆಸೆ, ತಾಯಿಗೆ ಮಗುವಿನಾಸೆ, ರೈತನಿಗೆ ಬೆಳೆಯಾಸೆ, ಭೂಮಿಗೆ ಸೂರ್ಯ-ಚಂದ್ರರಾಸೆ, ಕೆಲಸಗಾರನಿಗೆ ಸಂಬಳದಾಸೆ, ದೇವರಿಗೆ ಪೂಜೆಯಾಸೆ, ಎಲ್ಲರಿಗೂ ಬದುಕುವಾಸೆ..ಹೀಗೆ ಆಸೆಗೆ ಮಿತಿಯಿಲ್ಲ, ಕೊನೆಯಿಲ್ಲ, ಸಾಯುವವರೆಗೂ. ಆದರೆ ಆಸೆ ದುರಾಸೆಯಾಗಬಾರದಷ್ಟೆ! ಅಧಿಕಾರದಾಸೆ, ಕುರ್ಚಿಯಾಸೆ,ಅನಂತ ಹಣದಾಸೆ, ಅನಿಯಮಿತ ಚಿನ್ನ-ಧನ-ಆಸ್ತಿಯಾಸೆ ಇವೆಲ್ಲ ದುರಾಸೆಯೆನಿಸುತ್ತವೆ. ನಮ್ಮೊಳಗಿನ ಆಸೆಗಳಿಗೊಂದು ಮಿತಿಯನ್ನು ನಾವೇ ಹಾಕಿಕೊಂಡರೆ ಬದುಕು ಸುಖವಾಗಿರುತ್ತದಲ್ಲವೇ? ದುರಾಸೆ ಬಿಟ್ಟು, ಉತ್ತಮರಾಗಿ ಬದುಕಿ, ಭೂಮಿಯಲ್ಲಿನ ಜನರೊಂದಿಗೆ ರಾಜಕೀಯ, ಜಾತಿ, ಮತಕ್ಕಾಗಿ ಬಡಿದಾಡತೆ ಈ ಪ್ರಕೃತಿಯ ಮೇಲೆ ದುರಾಸೆ ಬಿಟ್ಟು ಶಾಂತಿಯಿಂದ ಬಾಳೋಣ ಅಲ್ಲವೇ? ನೀವೇನಂತೀರಿ?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ