ಹೀಗೇನಾ
ಜಾಗವ ಹುಡುಕಿತು ಬುಲ್ ಬುಲ್
ಕಡ್ಡಿಯ ಹುಡುಕುತು ಅಲ್ಲಲ್ಲಿ
ನೇಯುತ ಕಟ್ಟಿತು ಗೂಡನ್ನು
ಶಕ್ತಿಯ ಹಾಕಿತು ತನ್ನೆಲ್ಲವನು..
ಶತ್ರುವ ದೂರ ಇಡಬೇಕಿತ್ತು
ಮನುಷ್ಯರ ಸಹಾಯ ಬೇಕಿತ್ತು
ಮನೆಯಂಗಳದ ಗಿಡವ ಹುಡುಕಿತ್ತು
ಗೂಡಿನ ಕಾರ್ಯವು ನಡೆದಿತ್ತು.
ಹೆಣ್ಣು ಮನದಿ ಆಸೆಯ ಹೊಂದಿತ್ತು
ಸಂಭ್ರಮದಿ ಮೊಟ್ಟೆಗಳನಿಟ್ಟಿತ್ತು
ಗೂಡಲಿ ಮೊಟ್ಟೆಯು ತುಂಬಿತ್ತು
ಯಜಮಾನನ ಮಗನ ಕಣ್ಣಿಗೆ ಬಿದ್ದಿತ್ತು.
ಬಂದನು ಹುಡುಗ ಕರೆದನು ಗೆಳೆಯರ
ತೆಗೆದರು ಮೊಟ್ಟೆಗಳ ಗೂಡಿನಿಂದ
ಇಟ್ಟರ ಕಲ್ಗಳ ಅಷ್ಟೆ ಆಕಾರದ
ಒಡೆದರು ಮೊಟ್ಟೆಯ ಆಟವನಾಡಲು
ಬುಲ್ ಬುಲ್ ಕಾವನು ಕೊಡಲೆಂದು
ಗೂಡಿನ ಬಳಿಗೆ ಓಡುತ ಬಂದು
ಕಲ್ಲನು ನೋಡಲು ಮನನೊಂದು
ಕೂಗಿತು ನೋವಲಿ ತಾ ಬಂದು
ಬೇಲಿಯೆ ಎದ್ದು ಹೊಲ ಮೇದಿತ್ತು
ಮನುಜನ ದುರ್ಗುಣ ತೋರಿತ್ತು
ಪಶು-ಪಕ್ಷಿಯದೋ ಎಂದೂ ಮೇಲು
ಮನುಜನಾದನು ಅದರ ಮುಂದೆ ಕೀಳು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ