ಗುರುವಾರ, ಸೆಪ್ಟೆಂಬರ್ 20, 2018

470. ವಿಮರ್ಶೆ-ಕಂಟ್ಲಿಯವರ ಕವನ

*ಪಲ್ಲಟ*

ಕರುಣೆ ಕಡಲಲಿ
ಶಾಂತ ಅಲೆಯ
ಮೌನ
ಸಾಂತ್ವನದ ದಡವ
ನವಿರಾಗಿ ಸ್ಪರ್ಶಿಸುತಿಹುದು

ಮನದ ಕುಲುಮೆಯಲಿ
ಯೋಚನೆಯ ಶಾಖದಲಿ
ಮೌನ
ಸಂದರ್ಭಗಳ ಪೆಟ್ಟಿಗೆ
ಹರಿತ ಮಾತಾಗುವುದು
ಆಯುಧದ ತೆರದಿ

ಪದಗಳ ರೂಪದ
ಹೊತ್ತಿಗೆಯ
ಮೌನ
ಹಾಡಾಗಿ ಹೊರಡುವುದು
ಗಾಯಕರ ಮಧುರ ಕೊರಳಿನಲ್ಲಿ

ರೆಕ್ಕೆ ಬಲಿಯುವವರೆಗೆ
ಪರಪುಟ್ಟ ಕಂಠದಲಿ
ಹುದುಗಿದ್ದ
ಮೌನ
ಇಂಪಾಗಿ ಹೊರಡುವುದು
ಗೂಡಿಂದ ಹೊರಗೆ

ವರುಷವಿಡೀ ಮೋಡಗಳ
ಒಡಲಿನಲಿ ಅವಿತಿದ್ದ
ಮೌನ
ಗುಡುಗಾಗಿ ಗುಡುಗುವುದು
ವರ್ಷ ಕಂಬನಿಯೊಡನೆ

ನಿಶೆಯ ಮಡಿಲಿನಲಿ
ನಿದ್ದೆಯಲ್ಲಿದ್ದ
ಮೌನ
ದಿನಕರನ ಕರೆಗೆ
ಕಲಕಲ ರವವಾಯ್ತು
ಎಚ್ಚರದಲಿ

ಅವನಿಯೊಡಲಲಿ
ಸುಪ್ತವಾಗಿ ಕುದಿಯುವ
ಮೌನ
ಭೂಕಂಪವಾಗಿ
ಸ್ಫೋಟ ಗೊಳ್ಳುವುದು
ಕೋಪದಲ್ಲಿ

ಮೌನ
ಪಲ್ಲಟವಾಗುವ
ಪರಿಯು ಮೌನವಾಗಿಯೆ
ನಡೆದಿಹುದು ಮಹಾ ಮೌನಿ
ಪ್ರಕೃತಿ ಎದುರಿನಲ್ಲಿ.

*ಜೆ.ಕೆ.ಕಂಟ್ಲಿ*

ವಾರೆ ವಾ ಅನ್ನಬೇಕು ಕವಿ ಭಾವಕ್ಕೆ. ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿನಂತೆ ಮಾತಿಗೆ ವಿರುದ್ಧವಾದ ಮೌನವನು ಕವಿ ಎಲ್ಲಿ ಕಾಣಲಿಲ್ಲ!
ಕಂಟ್ಲಿಯವರ ಸಾಲುಗಳಿಲ್ಲಿ ರೂಪಕ ಮಿಶ್ರಿತವಾಗಿ ಅಂದಗೊಂಡಿರುವುದು ಒಂದೆಡೆಯಾದರೆ, ಇಡೀ ಕವನ ಪರ್ಸೋನಿಫೈಡಾಗಿ ಮಿಳಿತವಾಗಿರುವ ಹಬ್ಬ ಮತ್ತೊಂದೆಡೆ. ಕುವೆಂಪುರವರು ಹಾರುತಲಿರು ಪಕ್ಷಿ ಸಾಲುಗಳ ನೋಡಿ 'ದೇವರು ರುಜು ಮಾಡಿಹನು' ಎಂದಂತೆ, ಕವನದ ಪ್ರತಿ ಚರಣವೂ ಎಳೆಎಳೆಯಾಗಿ, ನವಿರಾಗಿ ಕವಿಮನವ ತೆರೆದಿಟ್ಟಿವೆ.

ಮೊದಲ ಸಾಲಿನಲ್ಲೆ ಆದಿಪ್ರಾಸ ಮೆರಗು ನೀಡಿರುವುದೇ ಅಲ್ಲದೆ ಕವಿಯ ಶಾಂತ-ಸಾಂತ್ವನ ಮುಂತಾದ ಮಧ್ಯಪ್ರಾಸದ ಬಳಕೆ ಸಾಹಿತ್ಯ ಪ್ರಿಯರಿಗೂ, ಹಾಡುಗಾರರಿಗೂ ಮೋಜು ನೀಡುತ್ತದೆ. ಇಲ್ಲಿ ಸಾಗರವನ್ನು ಪರ್ಸಾನಿಫೈ ಮಾಡಲಾಗಿದೆ.ಕರುಣೆ-ಕಡಲು, ಶಾಂತ-ಅಲೆ,ಸಾಂತ್ವನದ ದಡ ರೂಪಕಗಳಾಗಿ ಮನಸೆಳೆಯುತ್ತವೆ. ಸಾಗರದ ನವಿರು ಸ್ಪರ್ಶ ಇಮೇಜ್ ಅಥವಾ ಚಿತ್ರ ಕವಿತ್ವವ ಸೃಷ್ಠಿಸಿದೆ!!
   ಎರಡನೇ ಚರಣದಲ್ಲಿನ ಮನದ ಕುಲುಮೆ, ಯೋಚನೆಯ ಶಾಖ,ಸಂಧರ್ಭಗಳ ಪೆಟ್ಟಿಗೆ, ಹರಿತ ಮಾತು...ವಾವ್ ! ಪದಗಳು ಚಿತ್ರದಂದದಿ ಕಣ್ಣಿಗೆ ಕಟ್ಟಿದರೆ,ಹೃದಯವ ತಟ್ಟುತ್ತವೆ. ರೂಪಕ, ಚಿತ್ರಕವಿತ್ವ ಒಟ್ಟಾಗಿ ಬೆಸೆದು, ಆಯುಧದ ತೆರದಿ ಎಂಬಲ್ಲಿ ಉಪಮೆಯಾಗಿ, ಹರಿತ ಮಾತಾಗುವಲ್ಲಿ ಪರ್ಸಾನಿಫೈ ಆಗಿ ಅಲಂಕಾರಗಳನ್ನೆಲ್ಲ ಅರೆದು ಕುಡಿದು ಬಿಟ್ಟಿವೆ ಕವಿಯ ಸಾಲುಗಳು!!
  ಸಾಹಿತ್ಯಾಸಕ್ತರಿಗೆ ಇಂತಹ ಕಾವ್ಯದ ಮುಂದೆ ಎಂಥ ಹೋಳಿಗೆ-ಪಾಯಸವೂ ಸಪ್ಪೆಯಲ್ಲವೇ.. ಪಾರ್ಟಿ ಬೇಕೆನಿಸಿದ ಸಾಹಿತ್ಯ ಕಲಾ ವಲ್ಲಭನಿಗೆ ಇಂಥ ಸಾಲುಗಳು ಗ್ಲಾಸಿಗೆ ಬಗ್ಗಿಸಿ ಕೊಟ್ಟು ಮಟನ್ ಫ್ರೈ ಎದುರಿಗಿಟ್ಟಂತೆ ಭಾಸವಾಗುವುದಿಲ್ಲವೇ...
    ತೃತೀಯ ಚರಣ ಮತ್ತೊಂದು ಹಬ್ಬ! ಪದಗಳನ್ನೆ ಹೊತ್ತ ಪದಗಳ ರೂಪದ ಹೊತ್ತಿಗೆ! ರೂಪಕದೊಳಗೊಂದು ಉಪಮೆ! ವಾವ್ ಎನ್ನದೆ ಮತ್ತೇನೆನ್ನಲು ಸಾಧ್ಯ? ಮೌನವು ಗಾಯಕರ ಕೊರಳಿನಲಿ ಹಾಡಾಗಿ ಬರುವುದು, ಇದುವೇ ಕವಿಯ ಹೃದಯದಲಿ ಕವಿತೆಯಾಗಿ ಹೊಮ್ಮಿಹುದು... ಅಲ್ಲಿಟರೇಶನ್ ನ ಮಿಳಿತ ಕವನದ ಸಾಲುಗಳಿಗಿಲ್ಲಿ ಮೇಕಪ್ ಮಾಡಿದಂತಿದೆ.
      ಹಕ್ಕಿಯ ಗೂಡಿನಂದ ನಾಲ್ಕನೆ ಚರಣದ ಸಾಲು. ಪುಟಾಣಿ ಹಕ್ಕಿ ಮರಿಗಳ ಗಂಟಲೊಳಗೆ ಇದ್ದ ಮೌನವೆಲ್ಲ ಗೂಡಿನಿಂದ ಹೊರಗೆ ಇಂಪಾಗಿ ಕೋಗಿಲೆ ಹಾಡಿನಂತೆ ಬಂದರೆ ಕೇಳುವ ಕಿವಿಗೆ, ಅನುಭವಿಸುವ ಮನಕೆ ಹೇಗಾಗಬಹುದು!
    ವರುಷದ ನಾಲ್ಕು ತಿಂಗಳ ಮಳೆಗಾಲವನು ಒಂದೇ ಚರಣದಲಿ ಮುಂದೆ ಹೇಳಿದೆ ಕವಿಮನ! ಮೋಡಗಳ ಒಡಲಿನಲಿ ವರುಷ ಪೂರ್ತಿ ಅವಿತಿದ್ದ ಮೌನವು ಗುಡುಗಾಗಿ ಗುಡುಗುವುದು, ಅಷ್ಟೆ ಅಲ್ಲ, ಮಳೆಯು ಗುಡುಗಿನ ಕಂಬನಿಯಾಗಿ ಸುರಿಯುವುದು ಎಂಬ ಭಾವ! ಇಲ್ಲಿ ಮನೆಯೊಡತಿಯ ನೆನಪಾಗುತ್ತದೆ! ಗಂಡ 'ನೀ ಹೊರಟಿರು, ಪಾರ್ಟಿಗೆ ಹೋಗೋಣ' ಎಂದು ಹೇಳಿ ಮರೆತು ಲೇಟಾಗಿ ಬಂದಾಗ ಅವಳಲ್ಲಿನ ಸಿಟ್ಟು ಗುಡುಗಿ, ಬೈದು ಕೊನೆಗೆ ತಾನೇ ತನ್ನ ದುರದೃಷ್ಟವೆಂದು ಅಳುವ ಹೆಣ್ಣಿನಂತೆ ಕಾಣುತ್ತದೆ.
     ಕತ್ತಲೆಯ ಮತ್ತಿನಲಿ ಮೌನವೇ ನಿದ್ದೆ ಮಾಡುತ್ತಿರುವ ಭಾವವದು ಆಹಾ ಏನಂದ... ಆ ಮೌನದ ನಿದ್ದೆ ಬಿಡಿಸಿದವ ದಿನಕರ ತನ್ನ ಉದಯದಲಿ! ಸೂರ್ಯೋದಯದ ಹಕ್ಕಿ ಕಲರವದ ಪೂರ್ತಿ ವರ್ಣನೆಯನು ಈ ಸಾಲುಗಳಲಿ ಕಟ್ಟಿಡಲಿಲ್ಲವೇ ಕವಿ?
   ಅಷ್ಟೇ ಏಕೆ ಭೂ ತಾಯ ಗರ್ಭದಲು ಮೌನವಿದೆ. ಅದು ಭೂಮಿಯ ಒಡಲೊಡೆದು ಬರಲು ತವಕಿಸುತಿದೆ. ಅವಕಾಶವದು ಸಿಗಲು ಲಾವಾರಸವು ಸಿಡಿವುದು ಬುವಿಯೊಡಲಿನಿಂದ! ವಿಜ್ಞಾನದ ಮೇಡಂ ನೆನಪಾದರು ಈ ಸಾಲುಗಳನ್ನೋದುವಾಗ. ಕವಿಯು ವಿಜ್ಞಾನಿಯೂ ಆಗುವನು ಕೆಲವೊಮ್ಮೆ! ಇದುವೇ ನಿದರ್ಶನ!!
    ಅಲ್ಲಿಟರೇಶನ್ ನೊಡನೆಯೇ ಮುಗಿಯುವ ಕೊನೆಯ ಚರಣವದು ಬಲು ಸೊಗಸು. ಮೌನವೂ ಪಲ್ಲಟವಾಗುವುದು ಎಂಬ ಸತ್ಯ ಬಿಚ್ಚಿಟ್ಟ ಕವಿಯು ಪ್ರಕೃತಿಯನು ಮಹಾಮೌನಿಯಾಗಿಯಾಗಿ ಪರ್ಸಾನಿಫೈ ಮಾಡುವುದರೊಂದಿಗೆ ಮೌನದ ಸಾಲುಗಳು ಮೌನವಾಗಿಯೆ ಕೊನೆಗೊಂಡರೂ ಗುಡುಗಿನಬ್ಬರದಲಿ ಕವಿತೆಯ ಸರ್ವರಿಗೂ ಹರಿಸಿವೆ.
ಕವಿಭಾವವು ಬದಲಾಗಿಲ್ಲವೆಂದು ನಂಬಿರುವೆ. ಕವನದ ಸಾಲುಗಳನು ಸ್ವಲ್ಪ ಪಲ್ಲಟಗೊಳಿಸಿದರೆ ಅಂದವಾದ ಗಝಲ್ ಆಗುವುದು. ಅದ್ಭುತ ಕವಿತೆಗೆ ಅಭಿನಂದನೆಗಳು ಕಂಟ್ಲಿಯವರೇ.
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ