ಗುರುವಾರ, ಸೆಪ್ಟೆಂಬರ್ 13, 2018

460..ಕಾದಂಬರಿ

ಬದುಕು ಬರಡಾಗದು

ಹಲವಾರು ಜನ ತಮ್ಮ ಪಾಡಿಗೆ ತಾನು ಬದುಕುತ್ತಿರುತ್ತಾರೆ. ಹಾಗೆಯೇ ತಮ್ಮಷ್ಟಕ್ಕೆ ತಾನಾಯಿತು ತನ್ನ ಕೆಲಸವಾಯಿತು ಅಂತ ಬದುಕುತ್ತಿದ್ದ ಟೀಚರ್ ಒಬ್ಬರನ್ನು ಹತ್ತಿರದಿಂದ ನೋಡುತ್ತಿದ್ದೆ. ಯಾರೊಡನೆಯೂ ಹೆಚ್ಚು ಮಾತಿಲ್ಲ, ಕತೆಯಿಲ್ಲ. ಶಿಕ್ಷಕರಿಗೆ ಮಾತೇ ಬಂಡವಾಳ, ಗಾಯಕರಿಗೆ ಗಂಟಲೇ ಬಂಡವಾಳ ಎಂಬ ಗಾದೆಯಿದ್ದರೂ ಈ ಶಿಕ್ಷಕಿ ವಾರಣ್ಯ ಳ ಬದುಕೇ ಬೇರೆ!
ತುಂಬಾ ಅರ್ಥ ಮಾಡಿಕೊಂಡ ಮೇಲೆ ವಾರುಣ್ಯಳ ಮೌನ ನಿಧಾನಕ್ಕೆ ಅರ್ಥವಾಗತೊಡಗಿತು.
   ಒಂದು ಹುಡುಗಿ ತಾಯಿ-ಮಗಳು, ಅಕ್ಕ-ತಂಗಿ, ಅಜ್ಜಿ-ಮೊಮ್ಮಗಳು,ಅತ್ತೆ-ಸೊಸೆ, ವಾರಗಿತ್ತಿ-ಅತ್ತಿಗೆ ಹೀಗೆ ಹಲವಾರು ಪಾತ್ರಗಳನ್ನು ಮಾಡುವುದರ ಜೊತೆಗೆ ಇತರರಿಗೆ ತಿಳಿಯದ, ತಿಳಿಸಲಾರದ ಹಲವಾರು ಪಾತ್ರಗಳನ್ನೂ ನಿಭಾಯಿಸಿ, ಹಲವರ ಜೀವನವನ್ನು ಬದಲಾಯಿಸಬಲ್ಲಳು! ಏನಿರಬಹುದು ಆ ಪಾತ್ರಗಳು? ಹೇಗಿರಬಹುದು ಅವು? ಯಾರಿಗಾಗಿ? ಬದಲಾದವರು ಯಾರೆಲ್ಲ? ಅದನ್ಯಾಕೆ ಯಾರಿಗೂ ಹೇಳಬಾರದು?ಏನಿದೆ ಗುಟ್ಟು ಅದರಲ್ಲಿ?
   ಇದೆಲ್ಲವನ್ನು ತಿಳಿಯಬೇಕೆ, ಓದಲು ಕಾತುರರಾಗಿರಿ, ಸತ್ಯ ಘಟನೆಯಾಧಾರಿತ ಸಾಮಾಜಿಕ ಕಾದಂಬರಿ 'ಬದುಕು ಬರಡಾಗದು' ಮಹಿಳೆಯರ ಜೀವನಗಾಥೆಯ ಘಟನೆಗಳ ಸುತ್ತ....
@ಪ್ರೇಮ್@

"ಹೆಣ್ಣು ಸಂಸಾರದ ಕಣ್ಣು, ಹೆಣ್ಣಿಲ್ಲದೆ ಬದುಕಿಲ್ಲ, ಎಲ್ಲಿ ಹೆಣ್ಣನ್ನು ಪೂಜಿಸುವರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ...ಆಹಾ... ಎಂಥ ಒಳ್ಳೆಯ ಗಾದೆ, ಉಕ್ತಿಗಳು ಹೆಣ್ಣಿನ ಬಗ್ಗೆ! ಆದರೆ ಒಂದು ಹೆಣ್ಣನ್ನು ಸಮಾಜ ಇಂದು ನೋಡುವ ದೃಷ್ಟಿಯೇ ಬೇರೆ! ಒಂಟಿಯಾಗಿದ್ದರಂತೂ ನಾನೂ ಒಮ್ಮೆ ಪ್ರಯತ್ನಿಸಲೇ ಎಂಬಂತೆ ಕುಕ್ಕಲೆತ್ನಿಸುವ ಹಸಿದ ಕಂಗಳೇ ಕಾಣಿಸುತ್ತವೆ ಎಲ್ಲೆಡೆ. ಯಾರಾದರೂ ಪಾಪ, ಒಂಟಿ ಮಹಿಳೆ ಎಂದು ಸಹಾಯ ಮಾಡಲು ಬಂದರೂ ಕೂಡ ಒಳಗೊಳಗೆ ಒಂದು ಸ್ವಾರ್ಥ ಆಲೋಚನೆ ಇದ್ದೇ ಇರುತ್ತದೆ. ಜಗವೇಕೆ ಹೀಗೆ..? ಹೆಣ್ಣು ಎಂದಾಗ ಆಕೆಯನ್ನು ಬಯಸುವುದೇಕೆ? ಸಮಾಜದ ಕಣ್ಣಿಗೆ ಹೆಣ್ಣೇಕೆ ಭೋಗದ ವಸ್ತು? ಹೆಣ್ಣು ಇತರರನ್ನು ತೃಪ್ತಿಗೊಳಿಸಲಿಕ್ಕೆ ಮಾತ್ರ ಹುಟ್ಟಿದವಳೇ.. ತನ್ನದೇ ಆಸೆ ಆದರ್ಶಗಳನ್ನೆಲ್ಲ ಈ ಸಮಾಜ ಚಿವುಟಿ ಹಾಕಿ, ತನ್ನ ಕೈಗಳಲ್ಲಿ ತನಗನಿಸಿದಂತೆ ಬೆಳೆಸುವ ಈ ಸಮಾಜದಲ್ಲಿ ನನ್ನಾಸೆಗಳನ್ನು ಕೊಂದುಕೊಂಡು, ಸಂಸಾರಕ್ಕಾಗಿ, ಗಂಡ-ಮಕ್ಕಳಿಗಾಗಿ, ಸಮಾಜಕ್ಕಾಗಿ, ಕುಟುಂಬಕ್ಕಾಗಿ ಬದುಕುತ್ತಿರುವ ಮಹಿಳೆಯರಲ್ಲಿ ನಾನೂ ಒಬ್ಬಳಿರಬಹುದು.ಮುಸ್ಲಿಮ್ ಮಹಿಳೆಯರ ಕನಸುಗಳು ಹೇಗೆ ಬುರ್ಕಾದೊಳಗೇ ಕರಗಿ ಹೋಗುವವೋ ನನ್ನ ಕನಸುಗಳೂ ಕಣ್ಣೀರಿನಲ್ಲೇ ಕರಗಿ ಹೋಗುತ್ತಿವೆ. ಈಗೇನಿದ್ದರೂ ಸಮಾಜ ಸೇವೆಗಾಗಿ, ವಿದ್ಯಾರ್ಥಿಗಳಿಗಾಗಿ, ಕುಟುಂಬಕ್ಕಾಗಿ ಬದುಕುತ್ತಿರುವ ನನ್ನ ಬದುಕು. ಅದಕ್ಕಾಗಿ ಈ ರಾಜ್ಯ ಪ್ರಶಸ್ತಿ, ಶಾಲು, ಪುಸ್ತಕ, ಸನ್ಮಾನ! ಅದೆಲ್ಲ ನನ್ನ ಜೀವನವನ್ನು ಯಾವ ರೀತಿಯಲ್ಲೂ ಬದಲಿಸಲಾರವು. ನನ್ನ ಜೀವನದಲ್ಲಿ ಬದಲ ಬೇಕಾದವರೇ ಬದಲಾಗಿಲ್ಲ ಎಂದ ಮೇಲೆ ಇವೆಲ್ಲ ಯಾವ ಪುರಷಾರ್ಥಕ್ಕಾಗಿ, ಗೊಂಬೆಯಂತೆ ಕುಳಿತು ಎದ್ದು ಬಂದೆ..."ಉಸ್ಸಪ್ಪಾ ಎಂದು ನಿಟ್ಟುಸಿರಿಟ್ಟರು ವಾರುಣಿ ಟೀಚರ್, ದೀರ್ಘಾಲೋಚನೆಯಿಂದ ಹೊರಬರುತ್ತಾ..
  ತನ್ನ ವೃತ್ತಿಯ ಬಗ್ಗೆ ಗೌರವವಿದ್ದರೂ ವ್ಯಕ್ತಿ ಬದುಕಿನ ಬಗ್ಗೆ ಬೇಸರವಿದೆ ಅವರಿಗೆ. ಹಾಗಂತ ಅದನ್ನು ಎಲ್ಲೂ ಯಾರಲ್ಲೂ ಹೇಳಿಕೊಳ್ಳಲಾರರು. ತಾನಾಯಿತು, ತನ್ನ ಬದುಕಾಯಿತು ಎಂದು ಶಾಲಾ ಮಕ್ಕಳಿಗೆ ಸಾಧ್ಯವಾದಷ್ಟು ಸಹಾಯ ಮಾಡಿ, ಉತ್ತಮ ಶಿಕ್ಷಕಿಯೆಂದು ಕರೆಸಿಕೊಳ್ಳುತ್ತಿದ್ದಾರೆ ಅವರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ