ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-14
ಹೀಗೇ ಹೋಗುತ್ತಾ ಕಂಡೆ ಕೆಲವರ ಜೀವನ ಅದೆಷ್ಟು ನಿರಾಳ. ಒಂದೇ ಗುರಿ, ಅದನ್ನೇ ಸುಲಭವಾಗಿ ದಡ ಸೇರಿ ಬಿಡುತ್ತಾರೆ. ಆದರೆ ಇನ್ನು ಕೆಲವರ ಬದುಕು ಅದೇಕೆ ಕಷ್ಟ? ಇತ್ತ ದರಿ, ಅತ್ತ ಪುಲಿ ಎಂಬಂತಾಗಿರುತ್ತದೆ. ಪ್ರತಿಯೊಂದು ಮಾರ್ಗದಲ್ಲು ಅಡೆತಡೆ, ಪ್ರತಿ ಹಾದಿಯಲ್ಲು ಕಲ್ಲು ಮುಳ್ಳುಗಳನ್ನು ದಾಟಿಯೇ ಸಾಗಬೇಕು. ಅಲ್ಲೂ ಗೋಡೆಗಳು, ಅವುಗಳನ್ನು ಸೀಳಿಕೊಂಡೆ ಮುಂದುವರೆಯಬೇಕು, ಸ್ಪಷ್ಟವಾದ ಯಾವುದೇ ತೀರ್ಮಾನ ಮಾಡಲು ಸಾಧ್ಯವಿಲ್ಲ. ಮನವು ತಳಮಳದಲ್ಲೇ ಇರುವುದು. ಜೀವನದ ಘಟನೆಗಳೂ ವಿಚಿತ್ರ. ಯಾರೂ ಸಹಾಯಕರಾಗಲಾರರು, ದೇವರನ್ನು ಹೊರತುಪಡಿಸಿ!
ಒಂದೇ ತಾಯಿಗೆ ಒಡಹುಟ್ಟಿದ ಅಕ್ಕ ತಂಗಿ, ಅಣ್ಣ ತಮ್ಮಂದಿರಲ್ಲೂ ಹೀಗಾಗುವುದಿದೆ. ಗೆಳೆಯ ಗೆಳತಿಯರೂ ಮರುಗುವುದಿದೆ. ಆದರೆ ಕಷ್ಟ ಪಟ್ಟವರು ಪಡುತ್ತಲೇ ಇರುತ್ತಾರೆ, ಗಾಣದೆತ್ತುವಿನ ತರಹ!
ಮನಕೆ ಸುಖ ಶಾಂತಿ ಇರುವುದು ಎಲ್ಲಾ ಕಾರ್ಯಗಳೂ ಅನಾಯಸವಾಗಿ ನಡೆದಾಗ. ಅದೇ ಎನಿಸಿದ್ದೊಂದು, ನಡೆದದ್ದೊಂದು ಆದಾಗ ಬದುಕು ಬರ್ಭರವೆನಿಸುತ್ತವೆ, ಸಂಬಂಧಗಳು ನಲುಗಿ ಹೋಗುತ್ತವೆ. ಪ್ರೇಮ ಬತ್ತಿ ಹೋಗುತ್ತದೆ. ಮನದುಂಬಿ, ಎದೆಯುಬ್ಬಿ ಬದುಕೇ ಭಾರವೆನಿಸಿ ಬಿಡುತ್ತದೆ.
ಬದುಕಲ್ಲಿ ಕಷ್ಟಗಳನ್ನೇ ಎದುರಿಸಿಕೊಂಡು ಬಾಳುವವನಿಗೆ ದೇವರು ಕಷ್ಟ ಕೊಡುವುದೂ ಜಾಸ್ತಿಯೇನೋ. ಪರೀಕ್ಷೆಯಲಿ ಪಾಸಾದವಗೆ ಮತ್ತೊಂದು ಪರೀಕ್ಷೆ. ಅದು ಮುಗಿದ ಕೂಡಲೇ ಇನ್ನೊಂದು. ದೇವರೂ ಕೂಡ ಒಬ್ಬ ಗಣಿತ ಶಿಕ್ಷಕನೇ. ಒಂದಾದ ಮೇಲೊಂದು ಸಮಸ್ಯೆಗಳ ಕೊಡುತ್ತಲೇ ಇರುತ್ತಾನೆ. ಅದನ್ನು ಬಿಡಿಸಿದಷ್ಟು ಮತ್ತಷ್ಟು ಸಮಸ್ಯೆಗಳ ತಂದು ರಾಶಿ ಸುರುವಿ ಬಿಡುತ್ತಾನೆ. ಜೀವನವೇ ಬೇಡವೆನುವಾಗ ಮುಂಗೈಗೆ ಚೂರು ತುಪ್ಪ ಸವರಿ ಬಿಡುತ್ತಾನೆ.
ಬದುಕಿನಲಿ ಏನೇ ಆದರೂ ಉತ್ಸಾಹ ಕ್ಷಯಿಸ ಬಾರದು. ಕಷ್ಟಗಳ ಮೆಟ್ಟಿ ನಿಲ್ಲಬೇಕು. ನನಗೆ ದೇವರು ಏಕೆ ಶಿಕ್ಷೆ ಕೊಟ್ಟ ಎನ್ನುವ ಬದಲು ದೇವರು ಪರೀಕ್ಷೆಗೆ ಇತರರ ಬಿಟ್ಟು ನನ್ನನ್ನೆ ಸೆಲೆಕ್ಟ್ ಮಾಡಿಹನೆಂದರೆ ನನ್ನಲೇನೋ ಹೊಸತನವಿರಲೇ ಬೇಕು. ನನ್ನನ್ನು ದೇವರು ಹೆಚ್ಚು ಪ್ರೀತಿಸುತ್ತಿರಬೇಕು, ಹೆಚ್ಚು ಪ್ರೀತಿಸುವವರೇ ಅಲ್ಲವೇ ಹೆಚ್ಚು ಪರೀಕ್ಷಿಸುವುದು! ಪ್ರೀತಿ ಹೆಚ್ಚಾದಷ್ಟು ಕೇರ್ ಹೆಚ್ಚು. ಹಾಗೆ ದೇವರಿಗೂ ಕೂಡಾ. ನನ್ನ ಮೇಲೆ ಪ್ರೀತಿಯಿದೆ, ನನ್ನ ಪರೀಕ್ಷಿಸಿ ನೋಡಿ ತೂಗುತ್ತಿರುತ್ತಾರೆ ಅಂದುಕೊಳ್ಳ ಬೇಕು. ದೇವರಿಲ್ಲದೆ ಜಗವುವುಂಟೇ? ದೇವರಿಲ್ಲದೆ ನೀವು ನಾವುಂಟೇ? ದೇವರ ತೀರ್ಪು ಅಂತಿಮವಾದದ್ದು. ಅವ ನಡೆಸಿದಂತೆ ನಡೆಯೋಣ.ನೀವೇನಂತೀರಿ?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ