ಭಾವ
ನೂರಾರು ಭಾವಗಳ ಹಂಚಲಿಕ್ಕಾಗಿ
ಮೂಟೆ ಕಟ್ಟಿ ಕಾಯ್ತಿದ್ದೆ ನಿನ್ನೊಡನೆ..
ನಿನ್ನ ಬರುವಿಕೆಗಾಗಿ ಮನ ಕಾಯ್ತಿತ್ತು
ನಿನ್ನಾಗಮನದ ಖುಷಿಯಲಿ ಹೇಳ ಹೊರಟೆ
ಮೊದಲ ಸಾಲಿನಲೆ ತುಂಡರಿಸಿದೆ ನೀ
ನಿನ್ನಾಲೋಚನಾ ಸರಣಿ ಬೇರೆಡೆ ಇತ್ತು.
ನನ್ನ ಭಾವದ ಸರಮಾಲೆ ತುಂಡಾಯ್ತು!
ಮುತ್ತಿನ ಮಣಿಗಳು ಚೆಲ್ಲಿ ಚೂರಾಯ್ತು!!
ಹೆಕ್ಕಿ ಮತ್ತೆ ಪೋಣಿಸಲು ಏಕೋ ಮನಸಾಗಲಿಲ್ಲ!
ನಿನಗದು ಹೇಗೂ ಬೇಕಾಗೂ ಇರಲಿಲ್ಲ..
ಮಾಲೆಯದು ನನ್ನದು, ಭಾವಗಳೂ ನನ್ನವೆ
ನನ್ನ ತನುಮನ ನನಗೇ ಸೇರಿದ್ದು..
ನೀನೇಕೆ ಅದರೊಳಗೆ ಆಗಾಗ ನುಸುಳಿರುವೆ
ಬಾಳೆಂಬ ಬಸ್ಸಿನಲಿ ನುಗ್ಗುತಲಿ ಆಟವಾಡುತಲಿರುವೆ..
ಒಂಟಿಯಾಗಿರಲು ಬಿಡು ನನ್ನ ನನ್ನೊಳಗೆ
ನನ್ನ ಭಾವಗಳು ನನ್ನ ಕವನವಾಗಬಲ್ಲವು..
ಇಲ್ಲದಿರೆ ನನ್ನ ಕನಸಾಗಬಲ್ಲವು
ಕೊನೆಗೆ ಧೈರ್ಯವಾಗಿ ನನ್ನ ಬದುಕ ಬತ್ತಳಿಕೆಯಲಿ
ನುಸುಳಿ ಕುಳಿತು ನನ್ನೊಂದಿಗೆ ಆಟವಾಡಬಲ್ಲವು..
ನೀನೇಕೆ ಬಂದೆ ಬರಿಯ ಸಿಹಿಯ ಹಂಚಿಕೊಳಲು
ಕಹಿಯ ನನಗೇ ಕುಡಿಸಿ ನನ್ನ ನೋಡಲು?
ನನ್ನ ದುಃಖ ನನಗಿರಲಿ,ನೀ ನೋಡದಿರು
ನಿನ್ನರಿವು ನಿನಗಿರಲಿ ನನಗೆ ಹಂಚದಿರು
ನೀ *ಮುಳ್ಳು* ನಾ ಬಟ್ಟೆ, ಹರಿತ ನನ್ನೆಡೆ
ನಿನ್ನೆಡೆಯಲಿ ಸಿಕ್ಕ ಗುಲಾಬಿ ನಾ
ಹರಿಯದಿರು ಪಕಳೆಗಳನು,
ನೆರವಾಗು ಬೆಳೆಯಲು ನೆಮ್ಮದಿಯಲಿ
ನೀಡುತ್ತ ನಿನ್ನ ಭದ್ರತೆಯ ನನಗೆ
ನಿನ್ನುಸಿರ ನನ್ನೆದೆಗೆ ಜೋಡಿಸುತ
ನೆರವಾಗು ನನ್ನ ಕಿರುನಗೆಯ ಅರಳಿಸಲು
ಬತ್ತಿಯಾಗು ನನ್ನ ಬತ್ತಿಹೋದ
ಬಾಳ ದೀಪ ಮತ್ತೆ ಹೊತ್ತಿಸಲು..
ಭಯದ ಮಾತು ಹಾರಲಿ ಭವದ
ನಿನ್ನಿರುವ ಅನುಕ್ಷಣದಲಿ ಕಣಕಣದಲಿ
ನನ್ನುಸಿರೆ ನೀ ನಿನ್ನುಸಿರು, ಅದು ನನ್ಹೆಸರು
ಉಳಿಸು ಅದ ನಿನಗಾಗಿ,ನಿನ್ನಿಂದಾಗಿ
ಬಯಸಿದ್ದು ಸಿಗದು ಬಾಳಲಿ
ಬಾಡದಿರಲಿ ಬದುಕ ಬಂಗಾರದ ಬಳುವಳಿ..
@ಪ್ರೇಮ್@
ಶನಿವಾರ, ಸೆಪ್ಟೆಂಬರ್ 1, 2018
442.ಭಾವ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ