ನನ್ನ ಸಾಲು
ಭಾವ-ಪದ
ನನ್ನ ಮನದಿ ಭಾವನೆಗಳ ತೋಟವೊಂದು ಮೂಡಿದೆ
ಚಿಕ್ಕ-ಪುಟ್ಟ ಪದಗಳೆಲ್ಲ ಸನಿಹ ಬಂದು ನಾಟ್ಯವಾಡಿದೆ...
ಮೌನದೊರತೆ ಉಕ್ಕಿ ಬಂದು ಭಾವ ಸ್ತಬ್ದವಾದೊಡೆ
ಕನಸ ರಾಜ ಎದ್ದು ಬಂದು ಪದದ ಗುಂಡಿ ಅಮುಕುವ...
ರಾಜ ರಾಣಿ ಆಟವಾಡೆ ಭಾವ ಪದವ ಕರೆವುದು
ನಾಚಿಕೆಯ ಪದವು ಮುದುಡಿ ದೂರ ಸರಿವುದು..
ಬಿಡದ ಭಾವ ಮರಳಿ ಕರೆದು ಹೂಮುತ್ತನಿಡುವುದು
ಮತ್ತು ಬಂದ ಶಬ್ದವೀಗ ಕುಣಿಯುತಲಿ ಬರುವುದು...
ವನದ ಹಸಿರ ದೇವಿಯಂತೆ ಭಾವ ನಲಿಯುತಿರುವುದು
ಪದವು ನಾನೇ ನಾಯಕನೆಂದು ಮುಂದೆ ಹಿಂದೆ ಮೆರೆವುದು
ನನ್ನ ಭಾವ ನನ್ನ ಬದುಕು ಒಂದೆ ನದಿಯ ಕವಲದು..
ಭಾವ ಪದವು ಜೊತೆಗೆ ಸೇರೆ ಒಂದು ಬಾಳ ಕವನವು...
ಭಾವದಲ್ಲಿ ಲೀನವಾಗೆ ಪದವು ಹಾರಿ ಬರುವುದು
ತಲೆಯಲಿರುವ ಭಾವಕ್ಕೆಲ್ಲ ಅಂಗಿ ಹಾಕಿ ನಲಿವುದು
ಹೊರಗೆ ಬಂದ ಪದದ ಕಾವ್ಯ ಜಾಗ ಹುಡುಕುತಿರುವುದು
ಹಾಡುಗಾರ ಎಲ್ಲಿಹನು ಎಂದು ಕರೆಯುತಿರುವುದು....
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ