ಸೋಮವಾರ, ನವೆಂಬರ್ 12, 2018

589. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-21

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-21

ಪ್ರಿಯ ಓದುಗ ಮಿತ್ರರೇ...ನವೆಂಬರ್ ಬಂತು, ಚಳಿಗಾಲ. ಹೆಚ್ಚಿನವರ ಆರೋಗ್ಯ ಏರು ಪೇರಾಗುವ ತಿಂಗಳು. ಬಿ.ಪಿ, ಶುಗರ್ ಹೆಚ್ಚು ಕಡಿಮೆ ಆಗಿ, ವೀಕ್ ನೆಸ್ ಎದ್ದು ಬಂದು, ಹಳೆ ನೋವುಗಳೆಲ್ಲ 'ನಿನ್ನ ದೇಹದಲ್ಲಿ ನಾವೂ ಇದ್ದೇವೆ, ಎಲ್ಲೂ ಹೋಗಿಲ್ಲ ಬಿಟ್ಟು' ಎಂದು ತೋರಿಸುವ ಕಾಲ! ಕೈ ಕಾಲು ಗಂಟು, ಸೊಂಟ, ಬೆನ್ನಿನಲ್ಲಿ ಎದ್ದು ಕುಳಿತ ನೋವುಗಳೆಲ್ಲ ನೃತ್ಯ ಮಾಡಲಾರಂಭಿಸುವಾಗ ಏನೂ ಬೇಡ ಅನ್ನಿಸುವುದು ಸಹಜ. ಅಂತೆಯೇ ಜಾತ್ರೆ, ಪ್ರವಾಸ, ಕೋಲ, ನೇಮ, ನಾಟಕ , ಮದುವೆ ಎಲ್ಲವೂ ಪ್ರಾರಂಭವಾಗುವುದು, ಹೆಚ್ಚಾಗುವುದು ಈ ತಿಂಗಳಿನಿಂದಲೇ.. ಆಹಾರದ ವ್ಯತ್ಯಾಸವಾದರೂ ಹೊಟ್ಟೆಗೆ ತಡೆಯುವ ಶಕ್ತಿ ಇಲ್ಲ, ಈಗಿನ ರಾಸಾಯನಿಕ ಆಹಾರ ತಿಂದ ನಾವು ನಮ್ಮ ದೇಹದ  ರಕ್ಷಣಾ ಶಕ್ತಿಯನ್ನು ಪೂರ್ತಿಯಾಗಿ ಕಳೆದುಕೊಂಡಿದ್ದೇವೆ. ಉತ್ತಮವಾಗಿ, ಹಳ್ಳಿಯ ಜೈವಿಕ ಗೊಬ್ಬರ ಹಾಕಿ ಬೆಳೆಸಿದ ಉತ್ತಮ ಆಹಾರ ಪದಾರ್ಥಗಳನ್ನು ಹೆಚ್ಚು ಬೆಳೆಗೆ ಹೊರಗಿನ ದೇಶದವರಿಗೆ ಮಾರಿ, ರಾಸಾಯನಿಕಗಳ ಹಾಕಿ, ವೇಗವಾಗಿ ಬೆಳೆಸಿದ ಕಡಿಮೆ ಬೆಲೆಯ ಆಹಾರ ಪದಾರ್ಥಗಳನ್ನು ಖರೀದಿಸಲು ಮಾತ್ರ ಶಕ್ತರಿರುವ ಭಾರತದಂತಹ ಮುಂದುವರಿದ ದೇಶಕ್ಕೆ ಹಲವಾರು ಮಾರಕ ರೋಗಗಳು ಉಚಿತವಾಗಿ ಹೊಕ್ಕಿಕೊಳ್ಳುತ್ತವೆ.
   ತಿನ್ನುವ ಆಹಾರದೊಂದಿಗೆ  ಕುಡಿಯುವ ನೀರು, ಉಸಿರಾಡುವ ಗಾಳಿ, ಉಪಯೋಗಿಸುವ ಪಾತ್ರೆ ಯಂತಹ ವಸ್ತುಗಳು ಎಲ್ಲಾ ಸ್ವಚ್ಛತೆಯ ಪಾಲನೆ ಇಲ್ಲದಿರುವುದೂ ಸಹ ಒಂದು ಕಾರಣವಾಗಿದೆ. ಓದು ಬರಹ ಕಲಿಯದವರಿಗೆ ಗೊತ್ತಿಲ್ಲ, ಕಲಿತವರಿಗೆ ಹಲವಾರು ಕೆಲಸಗಳೊಂದಿಗೆ ವಾಟ್ಸಪ್, ಮುಖಪುಟ, ಗೆಳೆಯರು..ಹೀಗೆ ಸಮಯವಿಲ್ಲ! ಹೊರಗಿನ ಆಹಾರಕ್ಕೆ    ಹೆಚ್ಚಾಗಿ ಒಗ್ಗಿಕೊಂಡವರು ವಿದ್ಯಾವಂತ ಸಿಟಿಯ ಜನವೇ ಹೊರತು ಹಳ್ಳಿಗರಲ್ಲ! ಅದಕ್ಕೆಂದೇ ಹಲವಾರು ವರುಷಗಳ ಕಾಲ ಬಿ.ಪಿ. ಶುಗರ್ ಇವು ಪಟ್ಟಣದ ರೋಗಗಳಾಗಿದ್ದವು. ಯಾವಾಗ ಹಳ್ಳಿಗಳಲ್ಲಿ ಆಹಾರದ ಬೆಳೆಗಳು ಹೋಗಿ ವಾಣಿಜ್ಯ ಬೆಳೆಗಳು ಹೆಚ್ಚಾದವೋ ಆಗ ಹಳ್ಳಿಗರೂ ಅಂಗಡಿಯ ತರಕಾರಿಗಳಿಗೆ ಹೊಂದಿಕೊಂಡರು. ಕಷ್ಟ ಪಡದೆ ದುಡ್ಡು ಕೊಟ್ಟು ತರುವುದು ಸುಲಭವೆನಿಸಿರಬೇಕು. ಅದರ ಜೊತೆ ರೋಗಗಳೂ ಬಂದವು.
   ನಾವು ಈಗೇನು ಮಾಡಬೇಕು? ಟೇಸ್ಟ್ ಪೌಡರ್ ಹಾಕಿದ ಆಹಾರ ಬಳಕೆ ಮಾಡದಿದ್ದರೂ ಜನರಿಗೆ ದಿನಾಲೂ ಯೋಗ, ಧ್ಯಾನ ಮಾಡಿದರೂ ರೋಗಗಳು ಬಂದೇ ಬರುತ್ತಿವೆ. ಗಾಳಿ,ನೀರು, ಮಣ್ಣನ್ನು  ಹಾಳು ಮಾಡಿ ಭೂಮಿಯ ಆರೋಗ್ಯವನ್ನು ಕೆಡಿಸಿದ ನಾವು ಆರೋಗ್ಯವಂತರಾಗಿ ಬದುಕಲು ಹೇಗೆ ತಾನೇ ಸಾಧ್ಯ?
      ನಾವು ನಮ್ಮ ತಾಯಿಯನ್ನು ಮೊದಲು ರಕ್ಷಿಸುವ ಕಡೆಗೆ ನಾವು ಗಮನ ಹರಿಸೋಣ. ನಮ್ಮ ನಮ್ಮ ಮನೆಯ ಪರಿಸರವನ್ನು ರಾಸಾಯನಿಕ ಮುಕ್ತವಾಗಿ ಮಾಡಿದೊಡನೆ ನಮ್ಮ ಆರೋಗ್ಯವನ್ನು ಸುಧಾರಿಸಿದಂತೆ ಆಗುತ್ತದೆ ಅಲ್ಲವೇ...
  ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬ ಮಾತಿನಂತೆ ಉತ್ತಮ ಆರೋಗ್ಯ ಹೊಂದಲು ಉತ್ತಮ ಪರಿಸರವನ್ನು ಸೃಷ್ಠಿಸಿಕೊಳ್ಳೋಣ. ನೀವೇನಂತೀರಿ?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ