ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-22
ನಮ್ಮ ಬದುಕಿನಲ್ಲಿ ನಮ್ಮ ಜೀವನದ ಪ್ರತಿ ಕ್ಷಣದಲ್ಲಿ ಮುಂದುವರೆಯಬೇಕಾದರೆ ನಮಗೆ ಯಾರದಾದರೂ ಪ್ರೇರಣೆ ಅಗತ್ಯ...ತಂದೆ- ತಾಯಿ, ಶಿಕ್ಷಕರು, ಹತ್ತಿರದ ಮನೆಯವರು, ನೆಂಟರು, ಮನೆಗೆ ಬಂದ ಅತಿಥಿಗಳು, ಬಂಧುಗಳು, ಊರಿನ ಮಹನೀಯರು, ಎಲ್ಲೋ ಎಂದೋ ನೋಡಿದ ವ್ಯಕ್ತಿ, ಮದುವೆಯಲ್ಲೆಲ್ಲೋ ಸಿಕ್ಕ ಗೆಳತಿ, ತರಗತಿಯಲ್ಲಿ ನಮ್ಮೊಡನೆ ಕಲಿಯುತ್ತಿದ್ದ ಹುಡುಗ, ಪಕ್ಕದ್ಮನೆ ಅಂಕಲ್ ಹೀಗೆ ಯಾರಾದರೂ ಆಗಬಹುದು, ನಮಗೆ ಪ್ರೇರಣೆ ಬೇಕು ಅಷ್ಟೆ! ನಾನೂ ಅವರಂತೆ ಆಗಬೇಕೆಂಬ ಕನಸು ಮೊಳಕೆಯೊಡೆಯಲು ಪ್ರಾರಂಭವಾಗಿರುತ್ತದೆ!
ಅವರೂ ನಮ್ಮಂತೆಯೇ ಮನುಜರಾಗಿರುತ್ತಾರಾದರೂ ನಮ್ಮ ಕನಸಿನ ವ್ಯಕ್ತಿಯ ಗುಣಗಳು ಅವರಲ್ಲಿ ಇರುತ್ತವೆ. ಚಲನಚಿತ್ರದಲ್ಲಿ ನಾಯಕನ ಪಾತ್ರವನ್ನು ಎಲ್ಲರೂ ಇಷ್ಟಪಡುವಂತೆ ಮಾಡಿರುತ್ತಾರಲ್ಲಾ ನಿರ್ದೇಶಕರ ಹಾಗೆ ನಿಜ ಜೀವನದಲ್ಲಿ ಅವರು ನಮ್ಮ ನಾಯಕರಾಗಿರುತ್ತಾರೆ. ನಮ್ಮಲ್ಲಿ ನಾನು ಅವರ ಹಾಗೆಯೇ ಆಗಬೇಕು, ಅವರ ನಾನಿಷ್ಟಪಟ್ಟ ಗುಣದ ಹಾಗೆ ನಾನೂ ಬೆಳೆಸಿಕೊಳ್ಳಬೇಕು. ಅವರ ಹಾಗೇ ನಾನೂ ಜೋರಾಗಿ ಬೈಕ್ ಓಡಿಸಬೇಕು, ಮಾಡರ್ನ್ ಲಕ್ಸುರಿ ಕಾರ್ ತೆಗೆದುಕೊಳ್ಳಬೇಕು, ಹೆಚ್ಚು ಓದಬೇಕು, ಪಟಪಟನೆ ಇಂಗ್ಲಿಷ್ ಮಾತನಾಡಬೇಕು... ಎಂದೆಲ್ಲ ಅಂದುಕೊಂಡು ಬಿಡುತ್ತೇವೆ. ಆಗ ನಮ್ಮ ನೈಜ ಕನಸುಗಳು ಚಿಗುರಲು ಪ್ರಾರಂಭಿಸುತ್ತವೆ. ಎಲ್ಲೋ ಅವಿತು ಕುಳಿತಿದ್ದ ಕತೆಯೊಂದು ನನಸಾದಂತೆ ಅನಿಸುತ್ತದೆ. ನಾನೇ ಹೀರೋ ಎಂದೆನಿಸಿ ಕಟ್ಟುವ ಕನಸಿಗೆ ರಾಣಿ ಬಂದು ಕೆಲಸ ಮಾಡುವಂತೆ ಪ್ರೇರೇಪಿಸುತ್ತಾಳೆ.
ಕನಸಿನ ರಾಣಿಗಾಗಿ, ನೋಡಿದ ನಾಯಕನ ಪ್ರೇರೇಪಣೆಯಿಂದ ಜೀವನದ ಬದಲಾವಣೆ, ಕಲಿಕೆ ಆರಂಭವಾಗುತ್ತದೆ. ನಮ್ಮ ಕನಸುಗಳಿಗೆ ರೆಕ್ಕೆ ಮೂಡಿ ಅವು ಗುರಿಗಳಾಗಿ ಮಾರ್ಪಡುತ್ತವೆ! ಆ ಗುರಿಯೇ ನಮ್ಮ ಏಳಿಗೆಗಾಗಿ ಶ್ರಮಿಸುತ್ತಾ, ತನ್ನ ಜೀವನವನ್ನು ಎತ್ತರಕ್ಕೇರಿಸುತ್ತಾ ಹೋಗುತ್ತದೆ. ನಮ್ಮ ಕಠಿಣ ಪರಿಶ್ರಮ ಅದಕೆಕೆ ಮೆಟ್ಟಿಲಾಗಿ ಕಾರ್ಯ ನಿರ್ವಹಿಸುತ್ತದೆ! ಇದು ಪ್ರೇರಣೆ!
ತಾನು ಪ್ರೀತಿಸಿದ ಹುಡುಗಿ ಕೇಳಿದರೆ ಕಷ್ಟಪಟ್ಟು ಏನು ಬೇಕಾದರೂ ತಂದು ಕೊಡುತ್ತಾನೆ ಹುಡುಗ. ಹುಡುಗಿ ಬುದ್ಧಿವಂತಳಾದರೆ ಅವಳು ಉತ್ತಮವಾದುದನ್ನೇ ಆಯ್ಕೆ ಮಾಡುವಳು. ಆಗ ಜೀವನವೂ ಉತ್ಕೃಷ್ಟಕ್ಕೇರುವುದು.
ಒಟ್ಟಿನಲ್ಲಿ ಬದುಕನ್ನು ಬದಲಾಯಿಸ ಬೇಕೆಂದಿದ್ದರೆ ನಿಮ್ಮ ಹವ್ಯಾಸಗಳನ್ನು ಬದಲಾಯಿಸಿಕೊಳ್ಳೋಣ, ನಿಮ್ಮ ಅಭಿರುಚಿಗಳನ್ನು ಬದಲಾಯಿಸಿಕೊಳ್ಳೋಣ, ಆಗ ಬದುಕು ನಮಗೆ ಶರಣಾಗಿ ನಮ್ಮ ಕಾಲ ಕೆಳಗೆ ಬಿದ್ದಿರುತ್ತದೆ! ಸುಖ, ಸಂಪತ್ತು ನಮ್ಮನ್ನರಸಿಕೊಂಡು ಬರುತ್ತವೆ, ಉತ್ತಮ ಮಾದರಿ, ಉತ್ತಮ ಪ್ರೇರಣೆ ಖಂಡಿತಾ ನಮ್ಮನ್ನು ಎತ್ತರಕ್ಕೇರಿಸಬಲ್ಲುದು. ನೀವೇನಂತೀರಿ?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ